ಟ್ವೆಂಟಿ೨೦
ಟ್ವೆಂಟಿ೨೦ ಒಂದು ರೀತಿಯ ಕ್ರಿಕೆಟ್, ಇದನ್ನು ಮೂಲತಃ ಇಂಗ್ಲೆಂಡ್‌ನಲ್ಲಿ ೨೦೦೩ರಲ್ಲಿ ವೃತ್ತಿಪರ ಅಂತರ್-ದೇಶೀಯ ಸ್ಪರ್ಧೆಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು (ECB) ಆರಂಭಿಸಿತು. ಟ್ವೆಂಟಿ೨೦ ಆಟವು ಎರಡು ತಂಡಗಳನ್ನು ಒಳಗೊಳ್ಳುತ್ತದೆ, ಪ್ರತಿಯೊಂದು ತಂಡವು ಒಂದು ಇನ್ನಿಂಗ್ಸ್‌ಅನ್ನು ಹೊಂದಿರುತ್ತದೆ ಮತ್ತು ಗರಿಷ್ಠ ೨೦ ಓವರ್‌ಗಳಿಗೆ ಬ್ಯಾಟಿಂಗ್ ಮಾಡುತ್ತದೆ. ಟ್ವೆಂಟಿ೨೦ ಕ್ರಿಕೆಟ್ಅನ್ನು T೨೦ ಕ್ರಿಕೆಟ್ ಎಂದೂ ಕರೆಯುತ್ತಾರೆ.
ಟ್ವೆಂಟಿ೨೦ ಆಟವು ಸುಮಾರು ಮೂರುವರೆ ಗಂಟೆಗಳಲ್ಲಿ ಪೂರ್ಣಗೊಳ್ಳುತ್ತದೆ, ಪ್ರತಿಯೊಂದು ಇನ್ನಿಂಗ್ಸ್ ಸುಮಾರು ೭೫ ನಿಮಿಷಗಳಲ್ಲಿ ಕೊನೆಗೊಳ್ಳುತ್ತದೆ. ಆ ಮೂಲಕ ಇದು ಇತರ ಜನಪ್ರಿಯ ತಂಡ-ಕ್ರೀಡೆಗಳ ಸಮಯಕ್ಕೆ ಹತ್ತಿರವಾಗಿದೆ. ಇದನ್ನು ಚುರುಕು ರೂಪದ ಆಟವನ್ನು ರೂಪಿಸುವುದಕ್ಕಾಗಿ ಆರಂಭಿಸಲಾಯಿತು, ಅಂತಹ ಆಟವು ಮೈದಾನದಲ್ಲಿ ನೋಡುವವರಿಗೆ ಮತ್ತು ದೂರದರ್ಶನದಲ್ಲಿ ವೀಕ್ಷಿಸುವವರಿಗೆ ಆಕರ್ಷಕವಾಗಿ ಕಾಣುತ್ತದೆ. ಹಾಗಾಗಿ ಇದು ಹೆಚ್ಚು ಯಶಸ್ವಿಯಾಯಿತು. ಟ್ವೆಂಟಿ೨೦ ಕ್ರಿಕೆಟ್‌ನ ಇತರ ಪ್ರಕಾರಗಳನ್ನು ಬದಲಿಸಬೇಕೆಂಬ ಉದ್ದೇಶವನ್ನು ECB ಹೊಂದಿರಲಿಲ್ಲ ಮತ್ತು ಅವು ಅದರೊಂದಿಗೆ ಬೇರೆಯದಾಗಿ ಮುಂದುವರಿದವು.
ಆರಂಭವಾದ ನಂತರ ಈ ಆಟವು ಕ್ರಿಕೆಟ್ ಜಗತ್ತಿನಾದ್ಯಂತ ಹರಡಿಕೊಂಡಿತು. ಹೆಚ್ಚಿನ ಅಂತಾರಾಷ್ಟ್ರೀಯ ಪ್ರವಾಸಗಳಲ್ಲಿ ಕನಿಷ್ಠ ಒಂದು ಟ್ವೆಂಟಿ೨೦ ಪಂದ್ಯವಿರುತ್ತದೆ ಮತ್ತು ಎಲ್ಲಾ ಟೆಸ್ಟ್-ಆಡುವ ರಾಷ್ಟ್ರಗಳು ಒಂದು ದೇಶೀಯ ಬಹುಮಾನ-ಸ್ಪರ್ಧೆಯನ್ನು ಹೊಂದಿರುತ್ತವೆ. ಆರಂಭದ ICC ವರ್ಲ್ಡ್ ಟ್ವೆಂಟಿ೨೦ಯನ್ನು ೨೦೦೭ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಆಡಲಾಯಿತು, ಇದರಲ್ಲಿ ಅಂತಿಮ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಐದು ರನ್‌ಗಳಲ್ಲಿ ಜಯಗಳಿಸಿತು.[೧] ೨೦೦೯ರ ICC ವರ್ಲ್ಡ್ ಟ್ವೆಂಟಿ೨೦ಯಲ್ಲಿ ಪಾಕಿಸ್ತಾನವು ಶ್ರೀಲಂಕಾವನ್ನು ಎಂಟು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಜಯಗಳಿಸಿತು.[೨] ೨೦೧೦ರ ICC ವರ್ಲ್ಡ್ ಟ್ವೆಂಟಿ೨೦ಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ೭ ವಿಕೆಟ್‌ಗಳಿಂದ ಸೋಲಿಸಿ ಇಂಗ್ಲೆಂಡ್ ಗೆದ್ದಿತು.
ಇತಿಹಾಸ
[ಬದಲಾಯಿಸಿ]ಮೂಲಗಳು
[ಬದಲಾಯಿಸಿ]' ವೃತ್ತಿಪರ ಮಟ್ಟದಲ್ಲಿ ಸಂಕ್ಷಿಪ್ತ ರೂಪದ ಆಟದ ಕಲ್ಪನೆಯನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು (ECB) ೧೯೯೮ ಮತ್ತು ೨೦೦೧ರಲ್ಲಿ ಚರ್ಚಿಸಿತು.[೩]
ಬೆನ್ಸನ್ ಆಂಡ್ ಹೆಡ್ಗೆಸ್ ಕಪ್ ೨೦೦೨ರಲ್ಲಿ ಕೊನೆಗೊಂಡಾಗ, ECBಗೆ ಅದರ ಸ್ಥಾನವನ್ನು ತುಂಬಿಸಲು ಮತ್ತೆ ಒಂದು ದಿನ ಸ್ಪರ್ಧೆಯ ಅವಶ್ಯಕತೆ ಇತ್ತು. ಕ್ರಿಕೆಟ್ ನಡೆಸುವ ಮಂಡಳಿಗಳು ವೀಕ್ಷಕರ ಗುಂಪಿನ ಕ್ಷೀಣಿಸುವಿಕೆ ಮತ್ತು ಪ್ರಾಯೋಜಕತ್ವದ ಕೊರತೆಗೆ ಪ್ರತಿಯಾಗಿ ಕಿರಿಯ ವರ್ಗದವರಿಂದ ಆಟದ ಜನಪ್ರಿಯತೆಯನ್ನು ಹೆಚ್ಚಿಸಲು ಆಶಿಸಿದವು. ಬಹುಹಿಂದಿನ ಪ್ರಕಾರದ ಆಟದಿಂದ ಬೇಸತ್ತ ಸಾವಿರಾರು ಅಭಿಮಾನಿಗಳಿಗಾಗಿ ವೇಗವಾದ, ಉತ್ತೇಜಕ ಕ್ರಿಕೆಟ್ಅನ್ನು ಆರಂಭಿಸಲು ನಿರ್ಧರಿಸಲಾಯಿತು. ECBಯ ಮಾರುಕಟ್ಟೆ ನಿರ್ವಾಹಕರಾದ ಸ್ಟ್ವಾರ್ಟ್ ರಾಬರ್ಟ್ಸನ್ ೨೦೦೧ರಲ್ಲಿ ಪ್ರತಿ ಇನ್ನಿಂಗ್ಸ್‌ಗೆ ೨೦ ಓವರ್‌ನ ಆಟದ ಬಗ್ಗೆ ಕೌಂಟಿ ಅಧ್ಯಕ್ಷರಲ್ಲಿ ಪ್ರಸ್ತಾಪಿಸಿದರು ಹಾಗೂ ಅವರು ಹೊಸ ಸ್ವರೂಪದ ಆಟವನ್ನು ಅಳವಡಿಸುವ ಪರವಾಗಿ ೧೧-೭ರ ಅನುಮೋದನೆಯನ್ನು ನೀಡಿದರು.[೪] ಈ ಹೊಸ ಆಟಕ್ಕೆ ಹೆಸರಿಡಲು ಒಂದು ಮಾಧ್ಯಮ ಗುಂಪನ್ನು ಕರೆಯಿಸಲಾಯಿತು. ಅದರ ಫಲವಾಗಿ ಟ್ವೆಂಟಿ೨೦ ಎಂಬ ಹೆಸರನ್ನು ಆರಿಸಲಾಯಿತು. ಟ್ವೆಂಟಿ೨೦ ಕ್ರಿಕೆಟ್ಅನ್ನು T೨೦ ಕ್ರಿಕೆಟ್ ಎಂದೂ ಕರೆಯಲಾಗುತ್ತದೆ. ಪಶ್ಚಿಮ ಆಸ್ಟ್ರೇಲಿಯಾದ ಪರ್ತ್‌ನ ಒಬ್ಬ ಗಣಿತಶಾಸ್ತ್ರಜ್ಞ ಡಾ. ಜಾರ್ಜ್ ಕ್ರಿಸ್ಟೋಸ್ ೧೯೯೭ರಲ್ಲಿ ತಾನೂ ICC ಮತ್ತು ECBಗೆ ಅಂತಹುದೇ ಸ್ವರೂಪವೊಂದನ್ನು ಪ್ರಸ್ತಾಪಿಸಿದುದಾಗಿ ವಾದಿಸುತ್ತಾರೆ. ಆದರೆ ಅಂತಿಮ ನಿರ್ಣಯದಲ್ಲಿ ಅವರ ಭಾಗವಹಿಸುವಿಕೆಯನ್ನು ICC ನಿರಾಕರಿಸಿದೆ.[೫]
ECB ಟ್ವೆಂಟಿ೨೦ ಕಪ್ಅನ್ನು ಪ್ರಾರಂಭಿಸಿದಾಗ ೨೦೦೩ರಲ್ಲಿ ಟ್ವೆಂಟಿ೨೦ ಕ್ರಿಕೆಟ್ಅನ್ನು ವಿಧ್ಯುಕ್ತವಾಗಿ ಆರಂಭಿಸಲಾಯಿತು. ಅದನ್ನು ೧೦cc ಹಾಡು "ಡ್ರೆಡ್‌ಲಾಕ್ ಹಾಲಿಡೇ"ಯಿಂದ ಪಡೆದುಕೊಂಡ “ಐ ಡೋಂಟ್ ಲೈಕ್ ಕ್ರಿಕೆಟ್, ಐ ಲವ್ ಇಟ್” ಎಂಬ ಸೂಕ್ತಿಯೊಂದಿಗೆ ಪ್ರಚಾರ ಮಾಡಲಾಯಿತು.[೩]
ಟ್ವೆಂಟಿ೨೦ ಕಪ್
[ಬದಲಾಯಿಸಿ]ಮೊದಲ ಅಧಿಕೃತ ಟ್ವೆಂಟಿ೨೦ ಪಂದ್ಯಗಳನ್ನು ೨೦೦೩ರ ಜೂನ್ ೧೩ರಂದು ಟ್ವೆಂಟಿ೨೦ ಕಪ್‌ನಲ್ಲಿ ಇಂಗ್ಲಿಷ್ ಕೌಂಟಿಗಳ ಮಧ್ಯೆ ಆಡಲಾಯಿತು.[೬] ಇಂಗ್ಲೆಂಡ್‌ನಲ್ಲಿನ ಟ್ವೆಂಟಿ೨೦ಯ ಮೊದಲ ಸರಣಿಯು ಹೆಚ್ಚುಕಡಿಮೆ ಯಶಸ್ಸು ಕಂಡಿತು. ಇದರಲ್ಲಿ ಅಂತಿಮ ಪಂದ್ಯದಲ್ಲಿ ಸುರ್ರೆ ಲಯನ್ಸ್ ವಾರ್‌ವಿಕ್‌ಶೈರ್ ಬಿಯರ್ಸ್‌ರನ್ನು ೯ ವಿಕೆಟ್‌ಗಳಿಂದ ಸೋಲಿಸಿ ಟ್ವೆಂಟಿ೨೦ ಕಪ್ಅನ್ನು ಪಡೆದುಕೊಂಡರು.[೭]
೨೦೦೪ರ ಜುಲೈ ೧೫ರಂದು ಮಿಡ್ಲ್‌ಸೆಕ್ಸ್ ವರ್ಸಸ್ ಸುರ್ರೆ ಆಟವು (ಲಾರ್ಡ್ಸ್‌ನಲ್ಲಿ ನಡೆಸಲಾದ ಮೊದಲ ಟ್ವೆಂಟಿ೨೦ ಆಟ) ಸುಮಾರು ೨೬,೫೦೦ ಮಂದಿ ಪ್ರೇಕ್ಷಕರನ್ನು ಆಕರ್ಷಿಸಿತು, ಇದು ೧೯೫೩ರ ಏಕ-ದಿನದ ಅಂತಿಮ ಪಂದ್ಯದ ನಂತರ ಕೌಂಟಿ ಕ್ರಿಕೆಟ್ ಆಟದಲ್ಲಿ ಸೇರಿದ ಅತಿ ಹೆಚ್ಚಿನ ಪ್ರೇಕ್ಷಕ ಸಂಖ್ಯೆಯಾಗಿದೆ.
ಟ್ವೆಂಟಿ೨೦ ಪ್ರಪಂಚದಾದ್ಯಂತ
[ಬದಲಾಯಿಸಿ]೨೦೦೫ರ ಜನವರಿ ೧೦ರಂದು ಆಸ್ಟ್ರೇಲಿಯಾದ ಮೊದಲ ಟ್ವೆಂಟಿ೨೦ ಆಟವನ್ನು WACA ಗ್ರೌಂಡ್‌ನಲ್ಲಿ ವೆಸ್ಟರ್ನ್ ವಾರಿಯರ್ಸ್ ಮತ್ತು ವಿಕ್ಟೋರಿಯನ್ ಬುಶ್‌ರೇಂಜರ್ಸ್ ಮಧ್ಯೆ ಆಡಲಾಯಿತು. ಈ ಆಟದ ಸಂದರ್ಭದಲ್ಲಿ ಸುಮಾರು ೨೦,೭೦೦ ಮಂದಿ ಪ್ರೇಕ್ಷಕರು ಸೇರಿದರು.[೮]
೨೦೦೬ರ ಜುಲೈ ೧೧ರಂದು ೧೯ ವೆಸ್ಟ್ ಇಂಡೀಸ್ ಪ್ರಾದೇಶಿಕ ತಂಡಗಳು ಸ್ಟ್ಯಾನ್‌ಫರ್ಡ್ ೨೦/೨೦ ಪಂದ್ಯದಲ್ಲಿ ಸ್ಪರ್ಧಿಸಿದವು. ಈ ಪಂದ್ಯಕ್ಕೆ ಕೋಟ್ಯಾಧೀಶ್ವರ ಅಲ್ಲೆನ್ ಸ್ಟ್ಯಾನ್‌ಫರ್ಡ್ ಸುಮಾರು US$೨೮,೦೦೦,೦೦೦ ಮೊತ್ತವನ್ನು ನೀಡಿ ಆರ್ಥಿಕ ಸಹಾಯವನ್ನು ಮಾಡಿದರು. ವೆಸ್ಟ್ ಇಂಡೀಸ್‌ನ ಪ್ರಮುಖ ವ್ಯಕ್ತಿಗಳೂ ಇದಕ್ಕೆ ನೆರವು ನೀಡಿದರು ಮತ್ತು ಆಂಟಿಗ್ವಾದ ಮೈದಾನದಲ್ಲಿರುವಾಗ ಮತ್ತು ಅದರ ಹತ್ತಿರದಲ್ಲಿ ನೆಲೆಸಿರುವಾಗ ತಂಡಗಳ ಬಗ್ಗೆ ಹಲವರು ಕಾಳಜಿ ವಹಿಸಿದರು. ಈ ಪಂದ್ಯವನ್ನು ವಾರ್ಷಿಕ ಪಂದ್ಯವಾಗಿ ಮಾಡುವ ಉದ್ದೇಶವನ್ನು ಹೊಂದಲಾಗಿತ್ತು. ಟ್ರಿನಿಡ್ಯಾಡ್ ಮತ್ತು ಟೊಬಾಗೊವನ್ನು ೫ ವಿಕೆಟ್‌ಗಳಿಂದ ಸೋಲಿಸಿ ಗುಯಾನ ಆರಂಭದ ಪಂದ್ಯವನ್ನು ಗೆದ್ದುಕೊಂಡಿತು.[೯] ಗೆದ್ದ ತಂಡಕ್ಕೆ US$೧,೦೦೦,೦೦೦ ಮೊತ್ತವು ಮುಖ್ಯ ಬಹುಮಾನವಾಗಿ ಲಭಿಸಿತು. ಆದರೆ ಪ್ಲೇ ಆಫ್ ದಿ ಮ್ಯಾಚ್ (US$೧೦,೦೦೦) ಮತ್ತು ಪಂದ್ಯ ಪುರುಷ (US$೨೫,೦೦೦) ಮೊದಲಾದ ಇತರ ಬಹುಮಾನಗಳನ್ನು ಪಂದ್ಯದಾದ್ಯಂತ ನೀಡಲಾಯಿತು.[೧೦]
೨೦೦೮ರ ನವೆಂಬರ್ ೧ರಂದು ಸೂಪರ್‌ಸ್ಟಾರ್ಸ್ ವೆಸ್ಟ್ ಇಂಡೀಸ್ ತಂಡವು (೧೦೧-೦/೧೨.೫ ಓವರ್‌ಗಳು) ೧೦ ವಿಕೆಟ್‌ಗಳಿಂದ ಇಂಗ್ಲೆಂಡ್ (೯೯/ಆಲ್ ಔಟ್) ತಂಡವನ್ನು ಸೋಲಿಸಿತು. ಇಂಗ್ಲೆಂಡ್ ಆರಂಭದಲ್ಲೇ ಅತಿ ಕಡಿಮೆ ೩೩-೪ ಸ್ಕೋರ್ ಮಾಡಿತು, ಅದು ಹಾಗೆಯೇ ಮುಂದುವರಿದು ೧೫ ಓವರ್‌ಗಳಲ್ಲಿ ೬೫-೮ ಆಯಿತು. ಅನಂತರ ಸಮಿತ್ ಪಟೇಲ್ ೨೨ ರನ್‌ಗಳನ್ನು ಹೊಡೆದು ೧೯.೫ ಓವರ್‌ಗಳಲ್ಲಿ ೯೯ ರನ್ ಆಗುವಂತೆ ಮಾಡಿದನು, ಆದರೂ ಇದು ಟ್ವೆಂಟಿ೨೦ ಪಂದ್ಯದಲ್ಲಿ ತಂಡವೊಂದರ ಅತ್ಯಂತ ಕಡಿಮೆ ಒಟ್ಟು ರನ್ ಆಗಿದೆ. ಕ್ರಿಸ್ ಗ್ಯಾಲೆ ಪರಿಣಾಮಕಾರಿ ೬೫ ರನ್‌ಗಳನ್ನು ಹೊಡೆದು ಔಟ್ ಆಗದೆ ಉಳಿದನು.
೨೦೦೭ರ ಜನವರಿ ೫ರಂದು ಕ್ವೀನ್ಸ್‌ಲ್ಯಾಂಡ್ ಬುಲ್ಸ್ ಬ್ರಿಸ್ಬೇನ್‌ನ ದಿ ಗಬ್ಬದಲ್ಲಿ ನ್ಯೂ ಸೌತ್ ವೇಲ್ಸ್ ಬ್ಲೂಸ್ ಜೊತೆಗೆ ಆಡಿತು. ಹಿಂದಿನ ಪಂದ್ಯದಲ್ಲಿ ಮಾರಾಟವಾದ ಟಿಕೆಟ್‌ಗಳ ಆಧಾರದಲ್ಲಿ ಈ ಪಂದ್ಯವನ್ನು ವೀಕ್ಷಿಸಲು ಸುಮಾರು ೧೧,೦೦೦ ಮಂದಿ ಪ್ರೇಕ್ಷಕರು ಸೇರಬಹುದೆಂಬ ನಿರೀಕ್ಷೆಯಿತ್ತು. ಆದರೆ ಅಂದು ಅನಿರೀಕ್ಷಿತವಾಗಿ ೧೬,೦೦೦ ಮಂದಿ ಟಿಕೆಟ್‌ಗಳನ್ನು ಕೊಳ್ಳಲು ಜಮಾಯಿಸಿದುದರಿಂದ ಆಶ್ಚರ್ಯಚಕಿತರಾದ ಮತ್ತು ಗೊಂದಲಕ್ಕೊಳಗಾದ ಗಬ್ಬ ಸಿಬ್ಬಂದಿಗಳು ಗೇಟ್‌ಗಳನ್ನು ತೆರೆದು ಕೆಲವು ಅಭಿಮಾನಿಗಳಿಗೆ ಉಚಿತ ಪ್ರವೇಶವನ್ನು ನೀಡಬೇಕಾಯಿತು. ಈ ಪಂದ್ಯವನ್ನು ವೀಕ್ಷಿಸಲು ಸುಮಾರು ೨೭,೬೫೩ ಮಂದಿ ಸೇರಿದರು.[೧೧]
ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ೨೦೦೮ರ ಫೆಬ್ರವರಿ ೧ರ ಟ್ವೆಂಟಿ೨೦ ಪಂದ್ಯದಲ್ಲಿ ೮೪,೦೪೧[೧೨] ಮಂದಿ ಜಮಾಯಿಸಿದರು. ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟ್ವೆಂಟಿ೨೦ ವಿಶ್ವ ಚಾಂಪಿಯನ್ ಮತ್ತು ODI ವಿಶ್ವ ಚಾಂಪಿಯನ್ ಪರಸ್ಪರ ಸೆಣಸಾಡಿದವು. ಟ್ವೆಂಟಿ೨೦ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೂಲಕ ಹಲವಾರು ಅಭಿಮಾನಿಗಳನ್ನು ಆಕರ್ಷಿಸಿತು.೨೦೦೮ರಲ್ಲಿ ಭಾರತದಲ್ಲಿ ಆಡಲಾದ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ ಈ ಆಟದ ಲಕ್ಷಣವನ್ನೇ ಬದಲಾಯಿಸಿತು.ಈ ಲೀಗ್‌ನಲ್ಲಿ ನೂರಾರು ಆಟಗಾರರು ಒಪ್ಪಂದಗಳನ್ನು ಮಾಡಿಕೊಂಡಿದ್ದರು ಮತ್ತು ಇದು ಸುಮಾರು ಶತಕೋಟಿ ಡಾಲರ್‌ಗಳ ಹೂಡಿಕೆಯನ್ನು ಒಳಗೊಂಡಿತ್ತು.ಇದರಲ್ಲಿ ರಾಜಸ್ತಾನ್ ರಾಯಲ್ಸ್ ಜಯಗಳಿಸಿದರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನಗಳಿಸಿದರು.ಎರಡನೇ ಲೀಗ್ಅನ್ನು ದಕ್ಷಿಣ ಆಫ್ರಿಕಾದಲ್ಲಿ ಆಡಲಾಯಿತು. ಇದರಲ್ಲಿ ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ರನ್ನು ಸೋಲಿಸಿ ಡೆಕ್ಕನ್ ಚಾರ್ಜರ್ಸ್ ಜಯಗಳಿಸಿದರು.ಮೂರನೇ ಲೀಗ್ಅನ್ನು ಭಾರತದಲ್ಲಿ ಆಡಲಾಯಿತು, ಇದರಲ್ಲಿ ಅನೇಕ ಸವಾಲುಗಳು ಮತ್ತು ವಿವಾದಗಳು ಕಂಡುಬಂದವು.ಈ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು, ಮುಂಬಯಿ ಇಂಡಿಯನ್ಸ್ ಎರಡನೇ ಸ್ಥಾನ ಗಳಿಸಿದರು.
ಟ್ವೆಂಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳು
[ಬದಲಾಯಿಸಿ]೨೦೦೫ರ ಫೆಬ್ರವರಿ ೧೭ರಂದು ಆಕ್‌ಲ್ಯಾಂಡ್‌ನ ಎಡೆನ್ ಪಾರ್ಕ್‌ನಲ್ಲಿ ಆಡಲಾದ ಮೊದಲ ಪುರುಷರ ಸಂಪೂರ್ಣ ಅಂತಾರಾಷ್ಟ್ರೀಯ ಟ್ವೆಂಟಿ೨೦ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್‌ಅನ್ನು ಸೋಲಿಸಿತು. ಈ ಆಟವನ್ನು ಯಾವುದೇ ದುಗುಡವಿಲ್ಲದೆ ಖುಷಿಯಿಂದ ಆಡಲಾಯಿತು - ಎರಡೂ ತಂಡದವರು ೧೯೮೦ರ ದಶಕದಲ್ಲಿ ಧರಿಸುತ್ತಿದ್ದ ಉಡುಪುಗಳನ್ನು ಉಟ್ಟಿದ್ದರು, ಅದು ನ್ಯೂಜಿಲೆಂಡ್ ತಂಡದವರನ್ನು ಅನುಕರಿಸಿ ಬೈಗ್ ಬ್ರಿಗೇಡ್ ಧರಿಸುತ್ತಿದ್ದ ಉಡುಪಾಗಿತ್ತು. ಬೈಗ್ ಬ್ರಿಗೇಡ್‌ರ ವಿನಂತಿಯ ಮೇರೆಗೆ ಕೆಲವು ಆಟಗಾರರು ಉತ್ತಮ ರೆಟ್ರೊ ಭಂಗಿ ಗಾಗಿ ೧೯೮೦ರ ದಶಕದಲ್ಲಿ ಜನಪ್ರಿಯವಾಗಿದ್ದ ಗಡ್ಡ/ಮೀಸೆ ಮತ್ತು ಕೂದಲ ಶೈಲಿಗಳನ್ನು ಹೊಂದಿದ್ದರು. ಈ ಆಟವನ್ನು ಸಮಗ್ರವಾಗಿ ಆಸ್ಟ್ರೇಲಿಯಾ ಗೆದ್ದುಕೊಂಡಿತು ಮತ್ತು ಫಲಿತಾಂಶವು NZ ಇನ್ನಿಂಗ್ಸ್‌ನ ಅಂತ್ಯವನ್ನು ಸ್ಪಷ್ಟವಾಗಿ ಸೂಚಿಸಿದಂತೆ ಆಟಗಾರರು ಮತ್ತು ಅಂಪೈರ್‌ಗಳು ಆಟದಲ್ಲಿ ಹೆಚ್ಚು ಗಂಭೀರತೆಯನ್ನು ತೋರಲಿಲ್ಲ - ಗ್ಲೆನ್ ಮ್ಯಾಕ್‌ಗ್ರಾತ್ ೧೯೮೧ರ ODIಯಲ್ಲಿ ನಡೆದ ಟ್ರೆವರ್ ಚಾಪೆಲ್‌ನ ಅಂಡರ್‌ಆರ್ಮ್(ಭುಜದ ಕೆಳಗೆ ತೋಳು ತಂದು ಚೆಂಡು ಎಸೆದ) ಘಟನೆಯನ್ನು ತಮಾಷೆಯಾಗಿ ಪುನಃ ಆಡಿದರು. ಇದಕ್ಕೆ ಪ್ರತಿಯಾಗಿ ಬಿಲ್ಲಿ ಬೌಡನ್ ಅವರಿಗೆ ಅಣಕ ಕೆಂಪು ಕಾರ್ಡ್ಅನ್ನು (ಕ್ರಿಕೆಟ್‌ನಲ್ಲಿ ಕೆಂಪು ಕಾರ್ಡ್‌ಗಳನ್ನು ಸಾಮಾನ್ಯವಾಗಿ ಬಳಸಲಾಗುವುದಿಲ್ಲ) ತೋರಿಸಿದರು.
ಇಂಗ್ಲೆಂಡ್‌ನ ಮೊದಲ ಟ್ವೆಂಟಿ೨೦ ಅಂತಾರಾಷ್ಟ್ರೀಯ ಪಂದ್ಯವನ್ನು ಹ್ಯಾಂಪ್‌ಶೈರ್‌ನ ರೋಸ್ ಬೌಲ್‌ನಲ್ಲಿ ೨೦೦೫ರ ಜೂನ್ ೧೩ರಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಧ್ಯೆ ಆಡಲಾಯಿತು. ಇದರಲ್ಲಿ ಇಂಗ್ಲೆಂಡ್ ೧೦೦ ರನ್‌ಗಳಿಂದ ಜಯಗಳಿಸಿ, ದಾಖಲೆ ಸಾಧಿಸಿತು.
೨೦೦೬ರ ಜನವರಿ ೯ರಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಆಸ್ಟ್ರೇಲಿಯಾದ ಮೊದಲ ಅಂತಾರಾಷ್ಟ್ರೀಯ ಟ್ವೆಂಟಿ೨೦ ಆಟದಲ್ಲಿ ಆಡಿದವು. ಈ ಆಟದಲ್ಲಿ ಮೊದಲ ಬಾರಿಗೆ ಪ್ರತಿಯೊಬ್ಬ ಆಟಗಾರನ ಕುಲನಾಮದ ಬದಲಿಗೆ ಆತನ ಅಡ್ಡಹೆಸರು ಆತನ ಸಮವಸ್ತ್ರದ ಹಿಂದುಗಡೆ ಕಂಡುಬಂದಿತು. ಈ ಅಂತಾರಾಷ್ಟ್ರೀಯ ಪಂದ್ಯವು ದಿ ಗಬ್ಬದಲ್ಲಿ ಸುಮಾರು ೩೮,೮೯೪ ಮಂದಿ ಪ್ರೇಕ್ಷಕರನ್ನು ಆಕರ್ಷಿಸಿತು. ಈ ಆಟದಲ್ಲಿ ಆಸ್ಟ್ರೇಲಿಯಾ ಜಯಗಳಿಸಿತು ಮತ್ತು ಡ್ಯಾಮಿಯನ್ ಮಾರ್ಟಿನ್ ೯೬ ರನ್‌ಗಳನ್ನು ಗಳಿಸಿ ಪಂದ್ಯ ಪುರುಷ ಪ್ರಶಸ್ತಿಯನ್ನು ಗೆದ್ದರು.
೨೦೦೬ರ ಫೆಬ್ರವರಿ ೧೬ರಂದು ನ್ಯೂಜಿಲೆಂಡ್ ಟೈ-ಬ್ರೇಕಿಂಗ್ ಬೌಲ್-ಔಟ್ ೩-೦ರಿಂದ ವೆಸ್ಟ್ ಇಂಡೀಸ್‌ಅನ್ನು ಸೋಲಿಸಿತು; ಈ ಆಟದಲ್ಲಿ ಪ್ರತಿಯೊಂದು ತಂಡವು ೧೨೬ ರನ್‌ಗಳನ್ನು ಮಾಡಿದ್ದವು. ಈ ಆಟವು ಕ್ರಿಸ್ ಕೈರ್ನ್ಸ್ ಆಡಿದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು - NZC ಆತನ ಮುಖದ ಗಾತ್ರದ ರಟ್ಟಿನ ಮುಖವಾಡಗಳನ್ನು ಮೈದಾನಕ್ಕೆ ಬಂದ ಅಭಿಮಾನಿಗಳಿಗೆ ನೀಡಿತು.
ಟೀಕೆಗಳು
[ಬದಲಾಯಿಸಿ]ಟ್ವೆಂಟಿ೨೦ ಕ್ರಿಕೆಟ್ ಶೈಲಿಯು ಯಶಸ್ವಿಯಾದರೂ, ಅದರ ಬಗ್ಗೆ ಹಲವಾರು ಟೀಕೆಗಳಿದ್ದವು, ಟ್ವೆಂಟಿ೨೦ ಶಾಸ್ತ್ರೀಯ-ಕ್ರಿಕೆಟ್‌ನಿಂದ ಬಹುದೂರವಿರುವ ಕ್ರಿಕೆಟ್ಅನ್ನು ಪ್ರೋತ್ಸಾಹಿಸುತ್ತದೆ ಮತ್ತು ಕಿರಿಯರು ಆರಿಸಲು ಬಯಸುವ ಈ ಆಟವು ಅವರಿಗೆ ಆಡುವುದು ಹೇಗೆ ಎಂಬ ಬಗ್ಗೆ ಗಮನ ನೀಡದೆ ಸಿಕ್ಸ್ ಮತ್ತು ಫೋರ್ ಗಳನ್ನು ಹೊಡೆಯುವುದೇ ಕ್ರಿಕೆಟ್ ಎಂದು ನಂಬುವಂತೆ ತಪ್ಪು ದಾರಿ ಹಿಡಿಸುತ್ತದೆ.[೮]
ಆಟದ ಮೇಲಿನ ಪರಿಣಾಮ
[ಬದಲಾಯಿಸಿ]ಟ್ವೆಂಟಿ೨೦ ಕ್ರಿಕೆಟ್ಅನ್ನು ಕ್ರಿಕೆಟ್‌ನ ಹೆಚ್ಚು ವ್ಯಾಯಾಮದ ಮತ್ತು "ಸ್ಫೋಟಕ" ರೂಪವೆಂದು ಹೇಳಲಾಗುತ್ತದೆ. ಭಾರತದ ದೈಹಿಕ-ದಾರ್ಢ್ಯ ತರಬೇತಿದಾರ ರಾಮ್ಜಿ ಶ್ರೀನಿವಾಸನ್ ಭಾರತದ ದೈಹಿಕ-ದಾರ್ಢ್ಯ ವೆಬ್‌ಸೈಟ್ Takath.com ಒಂದಿಗಿನ ಸಂದರ್ಶನವೊಂದರಲ್ಲಿ ಹೀಗೆಂದು ಹೇಳಿದ್ದಾರೆ - ಟ್ವೆಂಟಿ೨೦ ಎಲ್ಲಾ ಆಟಗಾರರ ದೈಹಿಕ-ದಾರ್ಢ್ಯದ ವಿಷಯದಲ್ಲಿ "ನಿರೀಕ್ಷಿತ ಮಟ್ಟವನ್ನು ತಲುಪಿದೆ", ಇದಕ್ಕೆ ತಂಡದಲ್ಲಿನ ಪಾತ್ರವನ್ನು ಲೆಕ್ಕಿಸದೆ ಎಲ್ಲಾ ಆಟಗಾರರು ಉತ್ತಮ ಮಟ್ಟದ ಸಾಮರ್ಥ್ಯ, ವೇಗ, ಕುಶಾಗ್ರತೆ ಮತ್ತು ಪ್ರತಿಕ್ರಿಯಿಸುವ ಸಮಯವನ್ನು ಹೊಂದಿರುವುದು ಅಗತ್ಯವಿರುತ್ತದೆ.[೧೩] ಈ ಅಭಿಪ್ರಾಯಕ್ಕೆ ಎಲ್ಲರೂ ಸರಿಹೊಂದುವುದಿಲ್ಲ, ಇದಕ್ಕೆ ಒಂದು ಉದಾಹರಣೆಯೆಂದರೆ ಈಗ ನಿವೃತ್ತಿ ಹೊಂದಿರುವ ಆಟಗಾರ ಶೇನ್ ವಾರ್ನ್, ಇವರು IPLನಂತಹ ಟ್ವೆಂಟಿ೨೦ ಪಂದ್ಯಗಳಲ್ಲಿ ಯಶಸ್ಸು ಕಂಡವರಾಗಿದ್ದಾರೆ.
ಶೇನ್ ವಾರ್ನ್ ಅವರು ದೈಹಿಕ ಸಾಮರ್ಥ್ಯವನ್ನು ಹೊಂದಿರಲಿಲ್ಲ. ಆದರೆ ಆಡಮ್ ಗಿಲ್‌ಕ್ರಿಸ್ಟ್ ಮತ್ತು ಮ್ಯಾಥಿವ್ ಹೇಡನ್ ಮೊದಲಾದ ಇತರ ಯಶಸ್ವಿ ನಿವೃತ್ತಿ-ಹೊಂದಿದ ಆಟಗಾರರು ದೈಹಿಕ ದಾರ್ಢ್ಯತೆಯನ್ನು ಹೊಂದಿದ್ದರು. ನಿಜವಾಗಿ IPLನಲ್ಲಿ ಉತ್ತಮ ಸಾಮರ್ಥ್ಯದೊಂದಿಗೆ ಆಡುವುದಕ್ಕಾಗಿ ಹೇಡನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದರು.[೧೪]
೨೦೦೯ರ ಜೂನ್‌ನಲ್ಲಿ ಲಾರ್ಡ್ಸ್‌ನ ವಾರ್ಷಿಕ ಕೌಡ್ರಿ ಲೆಕ್ಚರ್‌ನಲ್ಲಿ ಮಾತನಾಡುತ್ತಾ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ಟ್ವೆಂಟಿ೨೦ಯನ್ನು ಒಲಿಂಪಿಕ್ ಕ್ರೀಡೆಯಲ್ಲಿ ಸೇರಿಸಬೇಕೆಂದು ಒತ್ತಾಯಪಡಿಸಿದರು. ಅವರು ಮತ್ತೆ ಹೀಗೆಂದು ಹೇಳಿದ್ದಾರೆ- "ಪ್ರಪಂಚದಾದ್ಯಂತ ಈ ಆಟವನ್ನು ಹರಡುವ ಉತ್ತಮ, ವೇಗದ ಅಥವಾ ಅಗ್ಗದ ಮಾರ್ಗವನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ."[೧೫]
ಪಂದ್ಯ ಸ್ವರೂಪ ಮತ್ತು ನಿಯಮಗಳು
[ಬದಲಾಯಿಸಿ]ಸ್ವರೂಪ
[ಬದಲಾಯಿಸಿ]ಟ್ವೆಂಟಿ೨೦ ಪಂದ್ಯದ ಸ್ವರೂಪವು ಸೀಮಿತ ಓವರ್‌ಗಳ ಕ್ರಿಕೆಟ್‌ನಂತೆ ಇರುತ್ತದೆ. ಇದು ಎರಡು ತಂಡಗಳನ್ನು ಒಳಗೊಂಡಿರುತ್ತದೆ, ಪ್ರತಿಯೊಂದು ತಂಡವೂ ಒಂದು ಇನ್ನಿಂಗ್ಸ್‌ಅನ್ನು ಹೊಂದಿರುತ್ತವೆ, ಇದರ ಮುಖ್ಯ ವ್ಯತ್ಯಾಸವೆಂದರೆ ಪ್ರತಿಯೊಂದು ತಂಡವು ಗರಿಷ್ಠ ೨೦ ಓವರ್‌ಗಳಿಗೆ ಆಡುತ್ತವೆ. ಗೋಚರ ಸ್ವರೂಪದ ಆಧಾರದಲ್ಲಿ, ಬ್ಯಾಟಿಂಗ್ ಮಾಡುವ ತಂಡದ ಸದಸ್ಯರು ಸಾಂಪ್ರದಾಯಿಕ ಉಡುಪು-ಧರಿಸುವ ಕೋಣೆಗೆ ಹೋಗುವಂತಿಲ್ಲ. ಆದರೆ ಅವರು ಅಸೋಸಿಯೇಶನ್ ಫುಟ್ಬಾಲ್‌ನ "ಟೆಕ್ನಿಕಲ್ ಏರಿಯಾ" ಅಥವಾ ಬೇಸ್‌ಬಾಲ್ "ಡಗ್‌ಔಟ್"ಅನ್ನು ಹೋಲುವ ಆಡುವ ಮೈದಾನದಲ್ಲಿ ಕಾಣುವ "ಬೆಂಚ್"ಗೆ (ವಿಶೇಷವಾಗಿ ಕುರ್ಚಿಗಳ ಒಂದು ಸಾಲು) ಹೋಗಬಹುದು.
ಸಾಮಾನ್ಯ ನಿಯಮಗಳು
[ಬದಲಾಯಿಸಿ]ಕ್ರಿಕೆಟ್‌ನ ನಿಯಮಗಳು ಕೆಲವು ಹೊರತುಪಡಿಸುವಿಕೆಯೊಂದಿಗೆ ಟ್ವೆಂಟಿ೨೦ಗೆ ಅನ್ವಯಿಸುತ್ತವೆ:
- ಪ್ರತಿಯೊಬ್ಬ ಬೌಲರ್ ಪ್ರತಿ ಇನ್ನಿಂಗ್ಸ್‌ಗೆ ಒಟ್ಟು ಓವರ್‌ಗಳ ಕೇವಲ ಐದನೇ ಒಂದರಷ್ಟು ಓವರ್‌ಗಳಿಗೆ ಮಾತ್ರ ಬಾಲಿಂಗ್ ಮಾಡಬಹುದು. ಸಂಪೂರ್ಣ ಅಡೆತಡೆಯಿಲ್ಲದ ಪಂದ್ಯದಲ್ಲಿ ಇದು ನಾಲ್ಕು ಓವರ್‌ಗಳಾಗಿರುತ್ತದೆ.
- ಬೌಲರ್ ಪಾಪಿಂಗ್ ಕ್ರೀಸ್‌ಅನ್ನು ದಾಟಿ ಬೌಲಿಂಗ್ ಮಾಡಿದರೆ ನೊ ಬಾಲ್ ಆಗುತ್ತದೆ, ಇದರಿಂದ ಎದುರಾಳಿ ತಂಡಕ್ಕೆ ಒಂದು ರನ್ ಸಿಗುತ್ತದೆ ಮತ್ತು ನಂತರದ ಬೌಲಿಂಗ್ಅನ್ನು "ಫ್ರೀ ಹಿಟ್" ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡುವವನು ರನ್ ಔಟ್, ಚೆಂಡನ್ನು ಎರಡು ಬಾರಿ ಹೊಡೆಯುವುದರಿಂದ, ಫೀಲ್ಡಿಂಗ್ ಮಾಡುವವರಿಗೆ ಅಡ್ಡಿಪಡಿಸುವುದರಿಂದ ಅಥವಾ ಚೆಂಡನ್ನು ಕೈಯಲ್ಲಿ ಹಿಡಿಯುವುದರಿಂದ ಔಟ್ ಆಗುತ್ತಾನೆ.
- ಈ ಕೆಳಗಿನ ಫೀಲ್ಡಿಂಗ್ ನಿರ್ಬಂಧಗಳು ಅನ್ವಯಿಸುತ್ತವೆ:
- ಯಾವುದೇ ಸಂದರ್ಭದಲ್ಲಿ ಐದಕ್ಕಿಂತ ಹೆಚ್ಚು ಫೀಲ್ಡರ್‌ಗಳು ಲೆಗ್ ಸೈಡ್‍ನಲ್ಲಿರಬಾರದು.
- ಮೊದಲು ಆರು ಓವರ್‌ಗಳ ಸಂದರ್ಭದಲ್ಲಿ, ಗರಿಷ್ಠ ಇಬ್ಬರು ಫೀಲ್ಡರ್‌ಗಳು ೩೦-ಗಜ ವೃತ್ತಕ್ಕಿಂತ ಹೊರಗಿರಬಹುದು (ಇದನ್ನು ಕೆಲವೊಮ್ಮೆ ಪವರ್‌ಪ್ಲೇ ಎಂದು ಹೇಳಲಾಗುತ್ತದೆ).
- ಮೊದಲ ಆರು ಓವರ್‌ಗಳ ನಂತರ, ಗರಿಷ್ಠ ಐದು ಫೀಲ್ಡರ್‌ಗಳು ಫೀಲ್ಡಿಂಗ್ ವೃತ್ತಕ್ಕಿಂತ ಹೊರಗಿರಬಹುದು.
- ಫೀಲ್ಡಿಂಗ್ ತಂಡವು ಅವರ ೨೦ನೇ ಓವರ್ ಅನ್ನು ೭೫ ನಿಮಿಷಗಳೊಳಗಾಗಿ ಬೌಲಿಂಗ್ ಮಾಡಲು ಆರಂಭಿಸದಿದ್ದರೆ, ಬ್ಯಾಟಿಂಗ್ ಮಾಡುವ ತಂಡವು ೭೫ ನಿಮಿಷಗಳ ನಂತರ ಬೌಲ್ ಮಾಡುವ ಪ್ರತಿಯೊಂದು ಓವರ್‌ಗೂ ಹೆಚ್ಚುವರಿ ಆರು ರನ್‌ಗಳನ್ನು ಪಡೆಯುತ್ತದೆ; ಬ್ಯಾಟಿಂಗ್ ಮಾಡುವ ತಂಡವು ಸಮಯವನ್ನು ವ್ಯರ್ಥ ಮಾಡುತ್ತದೆಂದು ಭಾವಿಸಿದರೆ ಅಂಪೈರ್ ಇದಕ್ಕೆ ಹೆಚ್ಚಿನ ಸಮಯವನ್ನು ಸೇರಿಸಬಹುದು.
ಟೈ ನಿರ್ಣಾಯಕರು
[ಬದಲಾಯಿಸಿ]ಪ್ರಸ್ತುತ ಪಂದ್ಯವು ಸಮ ಸ್ಕೋರುಗಳೊಂದಿಗೆ ಕೊನೆಗೊಂಡರೆ(ಟೈ ಆದರೆ), ಜಯಶಾಲಿಯನ್ನು ಆರಿಸುವುದಕ್ಕಾಗಿ ಈ ಟೈಯನ್ನು ಪ್ರತಿ ತಂಡಕ್ಕೆ ಒಂದು ಓವರ್ "ಎಲಿಮಿನೇಟರ್"[೧೬] ಅಥವಾ "ಸೂಪರ್ ಓವರ್"[೧೭][೧೮] ನಿಂದ ಭೇದಿಸಲಾಗುತ್ತದೆ. ಪ್ರತಿಯೊಂದು ತಂಡವು ಮೂರು ಮಂದಿ ಬ್ಯಾಟಿಂಗ್ ಮಾಡುವವರನ್ನು ಮತ್ತು ಒಬ್ಬ ಬೌಲರ್‌ನನ್ನು ಪ್ರತಿ ತಂಡಕ್ಕೆ ಒಂದು ಓವರ್‌ನ "ಮಿನಿ-ಪಂದ್ಯ"ವನ್ನು ಆಡಲು ನೇಮಿಸುತ್ತದೆ, ಇದನ್ನು ಕೆಲವೊಮ್ಮೆ "ಒನ್೧" ಎಂದೂ ಕರೆಯಲಾಗುತ್ತದೆ.[೧೯][೨೦] ಪ್ರತಿಯೊಂದು ತಂಡವು ವಿರೋಧ ತಂಡ ನೇಮಿಸಿದ ಬೌಲರ್‌ನ ಒಂದು ಓವರ್‌ಗೆ ಆಡುತ್ತದೆ. ಓವರ್ ಪೂರ್ಣಗೊಳ್ಳುವುದಕ್ಕಿಂತ ಮೊದಲು ಅವರು ಎರಡು ವಿಕೆಟ್‌ಗಳನ್ನು ಕಳೆದುಕೊಂಡರೆ ಅವರ ಇನ್ನಿಂಗ್ಸ್ ಕೊನೆಗೊಳ್ಳುತ್ತದೆ. ಅವರ ಸೂಪರ್ ಓವರ್‌ನಿಂದ ಹೆಚ್ಚಿನ ಸ್ಕೋರ್ ಪಡೆದ ತಂಡವು ಜಯಶಾಲಿಯಾಗುತ್ತದೆ.
ಹಿಂದೆ ಸಮವಾದ(ಟೈ ಆದ) ಟ್ವೆಂಟಿ೨೦ ಪಂದ್ಯಗಳ ಜಯಶಾಲಿಗಳನ್ನು "ಬೌಲ್-ಔಟ್"ನ ಮೂಲಕ ನಿರ್ಣಯಿಸಲಾಗುತ್ತಿತ್ತು.
ಅಂತಾರಾಷ್ಟ್ರೀಯ
[ಬದಲಾಯಿಸಿ]ಟ್ವೆಂಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳನ್ನು ೨೦೦೫ರಿಂದ ಆಡಲಾಗುತ್ತಿದೆ. ಇಂದಿನವರೆಗೆ ಎಲ್ಲಾ ಟೆಸ್ಟ್ ಆಡುವ ದೇಶಗಳನ್ನೂ ಒಳಗೊಂಡಂತೆ ೨೦ ದೇಶಗಳು ಇದನ್ನು ಆಡಿವೆ.
ರಾಷ್ಟ್ರ | ಟ್ವೆಂಟಿ೨೦ ಅಂತಾರಾಷ್ಟ್ರೀಯ ಪಂದ್ಯ |
---|---|
ಆಸ್ಟ್ರೇಲಿಯಾ | ೧೭ ಫೆಬ್ರವರಿ ೨೦೦೫ |
ನ್ಯೂಜಿಲೆಂಡ್ | ೧೭ ಫೆಬ್ರವರಿ ೨೦೦೫ |
ಇಂಗ್ಲೆಂಡ್ | ೧೩ ಜೂನ್ ೨೦೦೫ |
ದಕ್ಷಿಣ ಆಫ್ರಿಕಾ | ೨೧ ಅಕ್ಟೋಬರ‍್ ೨೦೦೫ |
ವೆಸ್ಟ್ ಇಂಡೀಸ್ | ೧೬ ಫೆಬ್ರವರಿ ೨೦೦೬ |
ಶ್ರೀಲಂಕಾ | ೧೫ ಜೂನ್ ೨೦೦೬ |
ಪಾಕಿಸ್ತಾನ | ೨೮ ಆಗಸ್ಟ್ ೨೦೦೬ |
ಬಾಂಗ್ಲಾದೇಶ | ೨೮ ನವೆಂಬರ್ ೨೦೦೬ |
ಜಿಂಬಾಬ್ವೆ | ೨೮ ನವೆಂಬರ್ ೨೦೦೬ |
ಭಾರತ | ೧ ಡಿಸೆಂಬರ್ ೨೦೦೬ |
ಕೀನ್ಯಾ | ೧ ಸೆಪ್ಟೆಂಬರ್ ೨೦೦೭ |
ಸ್ಕಾಟ್‌ಲ್ಯಾಂಡ್ | ೧೨ ಸೆಪ್ಟೆಂಬರ್ ೨೦೦೭ |
ನೆದರ್ಲ್ಯಾಂಡ್ಸ್ | ೨ ಆಗಸ್ಟ್ ೨೦೦೮ |
ಐರ್ಲೆಂಡ್ | ೨ ಆಗಸ್ಟ್ ೨೦೦೮ |
ಕೆನಡಾ | ೨ ಆಗಸ್ಟ್ ೨೦೦೮ |
ಬರ್ಮುಡ | ೩ ಆಗಸ್ಟ್ ೨೦೦೮ |
ಉಗಾಂಡಾ | ೩೦ ಜನವರಿ ೨೦೧೦ |
ಆಫ್ಘಾನಿಸ್ಥಾನ | ೨ ಫೆಬ್ರವರಿ ೨೦೧೦ |
UAE | ೯ ಫೆಬ್ರವರಿ ೨೦೧೦ |
USA | ೯ ಫೆಬ್ರವರಿ ೨೦೧೦ |
ICC ವಿಶ್ವ ಟ್ವೆಂಟಿ೨೦ ಪಂದ್ಯ
[ಬದಲಾಯಿಸಿ]ಪ್ರತಿ ಎರಡು ವರ್ಷಕ್ಕೊಮ್ಮೆ ICC ವಿಶ್ವ ಟ್ವೆಂಟಿ೨೦ ಪಂದ್ಯವನ್ನು ನಡೆಸಲಾಗುತ್ತದೆ. ಅದೇ ವರ್ಷದಲ್ಲಿ ICC ಕ್ರಿಕೆಟ್ ವಿಶ್ವ ಕಪ್ ಇದ್ದರೆ ಮಾತ್ರ ಇದು ಬದಲಾಗುತ್ತದೆ, ಅಂತಹ ಸಂದರ್ಭದಲ್ಲಿ ಇದನ್ನು ಒಂದು ವರ್ಷ ಮುಂಚೆಯೇ ನಡೆಸಲಾಗುತ್ತದೆ. ಮೊದಲ ಪಂದ್ಯವನ್ನು ೨೦೦೭ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಯಿತು, ಇದರಲ್ಲಿ ಅಂತಿಮ ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿತು. ೨೦೦೯ರ ಜೂನ್ ೨೧ರಂದು ಇಂಗ್ಲೆಂಡ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಶ್ರೀಲಂಕಾವನ್ನು ೮ ವಿಕೆಟ್‌ಗಳಿಂದ ಸೋಲಿಸಿ ಪಾಕಿಸ್ತಾನವು ಜಯಶಾಲಿಯಾಯಿತು. ೨೦೧೦ರ ICC ವಿಶ್ವ ಟ್ವೆಂಟಿ೨೦ ಪಂದ್ಯವನ್ನು ವೆಸ್ಟ್ ಇಂಡೀಸ್‌ನಲ್ಲಿ ೨೦೧೦ರ ಮೇಯಲ್ಲಿ ನಡೆಸಲಾಯಿತು, ಇದರಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ೭ ವಿಕೆಟ್‌ಗಳಿಂದ ಸೋಲಿಸಿತು.
ದೇಶೀಯ
[ಬದಲಾಯಿಸಿ]ಇದು ಕ್ರಿಕೆಟ್ ಆಡುವ ಪ್ರತಿಯೊಂದು ರಾಷ್ಟ್ರಗಳ ಮುಖ್ಯ ಟ್ವೆಂಟಿ೨೦ ದೇಶೀಯ ಪಂದ್ಯಗಳ ಪಟ್ಟಿಯಾಗಿದೆ.
ರಾಷ್ಟ್ರ | ದೇಶೀಯ ಪಂದ್ಯಗಳು |
---|---|
ಆಸ್ಟ್ರೇಲಿಯಾ | KFC ಟ್ವೆಂಟಿ20 ಬಿಗ್ ಬಾಶ್ |
ಬಾಂಗ್ಲಾದೇಶ | ಬಾಂಗ್ಲಾದೇಶ್ ಟ್ವೆಂಟಿ20 ಲೀಗ್ |
ಕೆನಡಾ | ಸ್ಕಾಟಿಯಾಬ್ಯಾಂಕ್ ನ್ಯಾಷನಲ್ T20 ಚಾಂಪಿಯನ್‌ಶಿಪ್ |
ಇಂಗ್ಲೆಂಡ್ | ಫ್ರೆಂಡ್ಸ್ ಪ್ರಾವಿಡೆಂಟ್ t20 |
ಭಾರತ | DLF ಇಂಡಿಯನ್ ಪ್ರೀಮಿಯರ್ ಲೀಗ್, ಇಂಡಿಯನ್ ಇಂಟರ್-ಸ್ಟೇಟ್ T20 ಚಾಂಪಿಯನ್‌ಶಿಪ್ |
ಕೀನ್ಯಾ | ನ್ಯಾಷನಲ್ ಇಲೈಟ್ ಲೀಗ್ ಟ್ವೆಂಟಿ20 |
ನ್ಯೂಜಿಲೆಂಡ್ | HRV ಕಪ್ |
ಪಾಕಿಸ್ತಾನ | ಪಾಕಿಸ್ತಾನ್ ಸೂಪರ್ ಲೀಗ್ ಮತ್ತು RBS Twenty-20 ಕಪ್ |
ಸ್ಕಾಟ್‌ಲ್ಯಾಂಡ್ | ಮುರ್ಗಿಟ್ರಾಯ್ಡ್ ಟ್ವೆಂಟಿ20 |
ದಕ್ಷಿಣ ಆಫ್ರಿಕಾ | ಸ್ಟ್ಯಾಂಡರ್ಡ್ ಬ್ಯಾಂಕ್ ಪ್ರೊ 20 ಸೀರೀಸ್ |
ಶ್ರೀಲಂಕಾ | ಇಂಟರ್-ಪ್ರೊವಿನ್ಷಿಯಲ್ ಟ್ವೆಂಟಿ20 |
U.S.A. | ಅಮೆರಿಕನ್ ಪ್ರೀಮಿಯರ್ ಲೀಗ್ ಮತ್ತು NYPD ಕ್ರಿಕೆಟ್ ಲೀಗ್ |
ವೆಸ್ಟ್ ಇಂಡೀಸ್ | ಸ್ಟ್ಯಾನ್‌ಫರ್ಡ್ 20/20 |
ಜಿಂಬಾಬ್ವೆ | ಮೆಟ್ರೊಪೊಲಿಟನ್ ಬ್ಯಾಂಕ್ೇ ಟ್ವೆಂಟಿ20 |
ಚಾಂಪಿಯನ್ಸ್ ಟ್ವೆಂಟಿ೨೦ ಲೀಗ್
[ಬದಲಾಯಿಸಿ]ಹೆಚ್ಚಾಗಿ CLT೨೦ ಎಂದು ಕರೆಯಲಾಗುವ ಚಾಂಪಿಯನ್ಸ್ ಲೀಗ್ ಟ್ವೆಂಟಿ೨೦ ಒಂದು ಟ್ವೆಂಟಿ೨೦-ಆಧಾರಿತ ಕ್ರಿಕೆಟ್ ಪಂದ್ಯವಾಗಿದೆ, ಇದು ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಮೊದಲಾದ ರಾಷ್ಟ್ರಗಳ ತಂಡಗಳನ್ನು ಒಳಗೊಂಡಿರುತ್ತದೆ. ಆದರೆ ಈ ಪಂದ್ಯವು ಪ್ರತಿಯೊಂದು ರಾಷ್ಟ್ರದಿಂದ ಸಮ ಸಂಖ್ಯೆಯ ತಂಡಗಳನ್ನು ಹೊಂದಿರುವುದಿಲ್ಲ. ಪಾಕಿಸ್ತಾನ, ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ದೇಶೀಯ ಲೀಗ್‌ಗಳ ಜಯಶಾಲಿ ಮತ್ತು ಎರಡನೇ ಸ್ಥಾನ ಗಳಿಸಿದ ತಂಡಗಳು ಹಾಗೂ ಇತರ ೪ ರಾಷ್ಟ್ರಗಳ ಚಾಂಪಿಯನ್‌ಗಳೂ ಸಹ ಈ ಪಂದ್ಯದಲ್ಲಿ ಭಾಗವಹಿಸುತ್ತವೆ.
೨೦೦೮ರ ಸರಣಿ ಪಂದ್ಯ
[ಬದಲಾಯಿಸಿ]ಸರಣಿ ಪಂದ್ಯವನ್ನು ಮೊದಲ ಬಾರಿಗೆ ಭಾರತದಲ್ಲಿ ೮ ತಂಡಗಳು ಆಡಿದವು.ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳ ತಂಡಗಳಿಗೆ ಮಾತ್ರ ಇದರಲ್ಲಿ ಆಡಲು ಅವಕಾಶವಿದ್ದರೂ, ಪಾಕಿಸ್ತಾನದ ಸಿಯಲ್ಕಾಟ್ ಸ್ಟ್ಯಾಲಿಯನ್ಸ್ ಪ್ರವೇಶಾವಕಾಶವನ್ನು ಪಡೆದರು ಎಂಬ ಬಗ್ಗೆ ವದಂತಿಗಳಿವೆ. ಆದರೆ ಈ ಪಂದ್ಯವು ಮುಂದಕ್ಕೆ ಹಾಕಲ್ಪಟ್ಟಿತು. ನಂತರ ೨೦೦೮ರ ಮುಂಬಯಿ ದಾಳಿಯಿಂದಾಗಿ ರದ್ದಾಯಿತು.
೨೦೦೯ರ ಸರಣಿ ಪಂದ್ಯ
[ಬದಲಾಯಿಸಿ]ಆರಂಭಿಕ ಸರಣಿ-ಪಂದ್ಯವು ರದ್ದಾದ ನಂತರ, ಅಭಿಮಾನಿಗಳ ಬೆಂಬಲವನ್ನು ಹೆಚ್ಚಿಸುವುದಕ್ಕಾಗಿ ಪಂದ್ಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಈ ಲೀಗ್ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಿಂದ ತಲಾ ಎರಡು ತಂಡಗಳನ್ನು ಹಾಗೂ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನದಿಂದ ತಲಾ ಒಂದು ತಂಡವನ್ನು ಹೊಂದಿತ್ತು. ಆಟದ ಸ್ವರೂಪವನ್ನೂ ಟ್ವೆಂಟಿ೨೦ ವಿಶ್ವ ಕಪ್‌ಗೆ ತದ್ವಿರುದ್ಧವಾಗಿ ಬದಲಾಯಿಸಲಾಯಿತು. ಆದರೆ ಪಾಕಿಸ್ತಾನದ ಸಿಯಲ್ಕಾಟ್ ಸ್ಟ್ಯಾಲಿಯನ್ಸ್ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಗೊಂದಲಗಳಿಂದಾಗಿ ಪ್ರವೇಶಾವಕಾಶವನ್ನು ನಿರಾಕರಿಸಿದರು. ಅವರ ಬದಲಿಗೆ IPLನ ಲೀಗ್-ಅಗ್ರಸ್ಥಾನದ ದೆಹಲಿ ಡೇರ್‌ಡೆವಿಲ್ಸ್‌ರನ್ನು ಆರಿಸಿಕೊಳ್ಳಲಾಯಿತು. ಟ್ರಿನಿಡ್ಯಾಡ್ ಆಂಡ್ ಟೊಬಾಗೊಅನ್ನು ಸೋಲಿಸಿ NSW ಬ್ಲೂಸ್ ಟ್ರೋಫಿಯನ್ನು ಗೆದ್ದುಕೊಂಡರು.
೨೦೧೦ರ ಸರಣಿ ಪಂದ್ಯ
[ಬದಲಾಯಿಸಿ]೨೦೧೦ರ ಚಾಂಪಿಯನ್ಸ್ ಲೀಗ್ ಟ್ವೆಂಟಿ೨೦ಯನ್ನು ದಕ್ಷಿಣ ಆಫ್ರಿಕಾದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಾಯಿತು. ಪ್ರಮುಖ ೨ ಇಂಗ್ಲಿಷ್ ಕೌಂಟಿಗಳು ಭಾಗವಹಿಸದಿದ್ದುದರಿಂದ ಈ ಪಂದ್ಯದಲ್ಲಿ ೧೨ರ ಬದಲಿಗೆ ೧೦ ತಂಡಗಳು ಮಾತ್ರ ಇದ್ದವು. ಈ ೧೦ ತಂಡಗಳನ್ನು ಎರಡು ಗುಂಪುಗಳಾಗಿ ಮಾಡಲಾಯಿತು. ಅಂತಿಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ದಕ್ಷಿಣ ಆಫ್ರಿಕಾದ ಚೆವ್ರೊಲೆಟ್ ವಾರಿಯರ್ಸ್‌ರನ್ನು ಸೋಲಿಸಿತು.
೨೦೧೧ರ ಸರಣಿ ಪಂದ್ಯ
[ಬದಲಾಯಿಸಿ]೨೦೧೧ರ ಚಾಂಪಿಯನ್ಸ್ ಲೀಗ್ಅನ್ನು ಸೆಪ್ಟೆಂಬರ್‌ನಲ್ಲಿ ನಡೆಸಲಾಗುತ್ತದೆ.ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸಂಭಾವ್ಯ ಆತಿಥೇಯ ರಾಷ್ಟ್ರಗಳಾಗಿವೆ.
ದಾಖಲೆಗಳು
[ಬದಲಾಯಿಸಿ]೨೦೧೦ರ ಅಕ್ಟೋಬರ್ ೧೪ರ ದಾಖಲೆಯ ಪ್ರಕಾರ ಈ ಕೆಳಗಿನ ಅಂಕಿಅಂಶಗಳು ನಿಜವಾಗಿವೆ ಮತ್ತು ಎಲ್ಲಾ ಪ್ರಮುಖ ಕ್ರಿಕೆಟ್ ಮಟ್ಟದ ಟ್ವೆಂಟಿ೨೦ ಪಂದ್ಯಗಳನ್ನು ಒಳಗೊಂಡಿವೆ.
ಅತ್ಯಂತ ಹೆಚ್ಚಿನ ಟ್ವೆಂಟಿ೨೦ ರನ್‌ಗಳು
ಆಟಗಾರ | ಪಂದ್ಯಗಳು | ರನ್‌ಗಳು | HS | ವೃತ್ತಿಜೀವನದ ಅವಧಿ |
---|---|---|---|---|
ಡೇವಿಡ್ ಹುಸ್ಸೆ | ೧೩೧ | ೩,೩೬೪ | ೧೦೦* | ೨೦೦೪–೨೦೧೦ |
ಬ್ರ್ಯಾಡ್ ಹಾಡ್ಗೆ | ೧೦೨ | ೩,೧೦೭ | ೧೦೬ | ೨೦೦೩–೨೦೧೦ |
ಬ್ರೆಂಡನ್ ಮ್ಯಾಕ್‌ಕುಲ್ಲಮ್ | ೯೮ | ೨,೬೯೫ | ೧೫೮* | ೨೦೦೫–೨೦೧೦ |
ರೋಸ್ ಟೈಲರ್ | ೯೭ | ೨,೪೫೯ | ೧೧೧* | ೨೦೦೬–೨೦೧೦ |
ಹರ್ಸ್ಚೆಲ್ಲೆ ಗಿಬ್ಸ್ | ೧೦೧ | ೨,೩೮೦ | ೧೦೫ | ೨೦೦೪–೨೦೧೦ |
(*) = ನಾಟ್ ಔಟ್
ಅತಿ ಹೆಚ್ಚಿನ ಟ್ವೆಂಟಿ೨೦ ವಿಕೆಟ್‌ಗಳು
ಇತರ ದಾಖಲೆಗಳು:
[ಬದಲಾಯಿಸಿ]- ಅತಿ ಹೆಚ್ಚಿನ ವೈಯಕ್ತಿಕ ಸ್ಕೋರ್ - ಬ್ರೆಂಡನ್ ಮ್ಯಾಕ್‌ಕುಲ್ಲಮ್ (ಕೋಲ್ಕತ್ತಾ) ೧೫೮* (೭೩) (೨೦೦೮ IPL)
- ಅತಿ ಹೆಚ್ಚಿನ ತಂಡದ ಒಟ್ಟು ಸ್ಕೋರ್ - ಶ್ರೀಲಂಕಾ ೨೬೦/೬ (೨೦ ಓವರ್‌ಗಳು) ವರ್ಸಸ್ ಕೀನ್ಯಾ ೮೮/೧೦ (೧೯.೩ ಓವರ್‌ಗಳು) (೨೦೦೭ ICC ವಿಶ್ವ ಟ್ವೆಂಟಿ೨೦)
- ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚಿನ ಸಿಕ್ಸ್‌ಗಳು - ಗ್ರಹಮ್ ನೇಪಿಯರ್ (ಎಸ್ಸೆಕ್ಸ್) ೧೬ (೨೦೦೮ ಟ್ವೆಂಟಿ೨೦ ಕಪ್)
- ವೃತ್ತಿಜೀವನದಲ್ಲಿ ಅತ್ಯಂತ ಹೆಚ್ಚಿನ ಸಿಕ್ಸ್‌ಗಳು - ರೋಸ್ ಟೈಲರ್ ೧೧೨
- ಅತ್ಯಂತ ವೇಗವಾಗಿ ಶತಕ ಬಾರಿಸಿದವರು - ಆಂಡ್ರಿವ್ ಸೈಮಂಡ್ಸ್ (ಕೆಂಟ್) ೩೪ ಬಾಲ್‌ಗಳು (೨೦೦೪ ಟ್ವೆಂಟಿ೨೦ ಕಪ್)
- ಅತ್ಯಂತ ವೇಗವಾಗಿ ಐವತ್ತು ರನ್ ಮಾಡಿದವರು - ಯುವರಾಜ್ ಸಿಂಗ್ ೧೨ ಬಾಲ್‌ಗಳು (೨೦ಟ್ವೆಂಟಿ ಕಪ್ ೨೦೦೭)
- ಅತಿ ಹೆಚ್ಚಿನ ಶತಕ - ಬ್ರೆಂಡನ್ ಮ್ಯಾಕ್‌ಕುಲ್ಲಮ್ (ಒಟಾಗೊ ವೋಲ್ಟ್ಸ್ , ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ನ್ಯೂಜಿಲೆಂಡ್) ೩
- ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ವ್ಯಕ್ತಿ (ಅಂತಾರಾಷ್ಟ್ರೀಯ) - ಉಮರ್ ಗುಲ್ (ಪಾಕಿಸ್ತಾನ) ೫/೬ (೨೦೦೯ T೨೦)
- ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ವ್ಯಕ್ತಿ (ದೇಶೀಯ) - ಸೋಹೆಲ್ ತನ್ವಿರ್ (ರಾಜಸ್ತಾನ್ ರಾಯಲ್ಸ್) ೬/೧೪ (೨೦೦೮ IPL)
- ಒಂದು ಓವರ್‍ನಲ್ಲಿ ಅತ್ಯಂತ ಹೆಚ್ಚು ರನ್ ಮಾಡಿದವರು - ಯುವರಾಜ್ ಸಿಂಗ್ ೩೬, ೬ ಬಾಲ್‌ಗಳಿಗೆ ೬ ಸಿಕ್ಸ್‌ಗಳು (೨೦೦೭ ICC ವಿಶ್ವ ಟ್ವೆಂಟಿ೨೦) ಇಂಗ್ಲೆಂಡ್‌ನ ಸ್ಟ್ವಾರ್ಟ್ ಬ್ರಾಡ್‌ನ ವಿರುದ್ಧ
ಇವನ್ನೂ ಗಮನಿಸಿ
[ಬದಲಾಯಿಸಿ]- ಟ್ವೆಂಟಿ೨೦ ಅಂತಾರಾಷ್ಟ್ರೀಯ ದಾಖಲೆಗಳ ಪಟ್ಟಿ
- ಟ್ವೆಂಟಿ೨೦ ಅಂತಾರಾಷ್ಟ್ರೀಯ ಪಂದ್ಯಗಳ ಪಟ್ಟಿ
ಉಲ್ಲೇಖಗಳು
[ಬದಲಾಯಿಸಿ]- ↑ "India hold their nerve to win thriller". Cricinfo.com. September 24, 2007.
- ↑ "Afridi fifty seals title for Pakistan". Cricinfo.com. June 21, 2009.
- ↑ ೩.೦ ೩.೧ ಹಿಸ್ಟರಿ ಆಫ್ ಟ್ವೆಂಟಿ20 ಕ್ರಿಕೆಟ್ Archived 2010-09-09 ವೇಬ್ಯಾಕ್ ಮೆಷಿನ್ ನಲ್ಲಿ. ಆಲ್ ಔಟ್ ಫಾರ್ ನತಿಂಗ್ ೨೦೦೮ರ ಜೂನ್ ೯ರಂದು ಮರುಸಂಪಾದಿಸಲಾಯಿತು.
- ↑ ನ್ಯೂಮ್ಯಾನ್, ಪಾಲ್; ಮೀಟ್ ದಿ ಮ್ಯಾನ್ ಹು ಇನ್ವೆಂಟೆಡ್ ಟ್ವೆಂಟಿ20 ಕ್ರಿಕೆಟ್ - ದಿ ಮ್ಯಾನ್ ಮಿಸ್ಸಿಂಗ್ ಔಟ್ ಆನ್ ಮಿಲಿಯನ್ಸ್; ಡೈಲಿ ಮೇಲ್; ೧೧ ಜೂನ್ ೨೦೦೮. ೨೦೦೯ರ ಜನವರಿ ೬ರಂದು ಪುನಃಸಂಪಾದಿಸಲಾಯಿತು.
- ↑ ಪರ್ತ್ ಮ್ಯಾನ್ ಸೀಕ್ಸ್ ಕ್ರೆಡಿಟ್ ಫಾರ್ ಟ್ವೆಂಟಿ20; ದಿ ವೆಸ್ಟ್ ಆಸ್ಟ್ರೇಲಿಯನ್; ೬ ಜನವರಿ ೨೦೦೯. ೨೦೦೯ರ ಜನವರಿ ೬ರಂದು ಮರುಸಂಪಾದಿಸಲಾಯಿತು.
- ↑ ಮ್ಯಾಚಸ್ ಪ್ಲೇಯ್ಡ್ 13 ಜೂನ್ 2003 ಕ್ರಿಕ್‌ಇನ್ಫೊ. ೨೦೦೮ರ ಜೂನ್ ೯ರಂದು ಮರುಸಂಪಾದಿಸಲಾಯಿತು.
- ↑ ಟ್ವೆಂಟಿ20 ಕಪ್, 2003, ಫೈನಲ್ - ಸರ್ವೆ ವಿ ವಾರ್‌ವಿಕ್‌ಶೈರ್ ಕ್ರಿಕ್ಇನ್ಫೊ. ೨೦೦೮ರ ಜೂನ್ ೯ರಂದು ಮರುಸಂಪಾದಿಸಲಾಯಿತು.
- ↑ ೮.೦ ೮.೧ "Twenty20: Past, Present and Future". India Twenty20. Archived from the original on 2010-07-27. Retrieved 2011-02-03.
- ↑ "Guyana crowned Stanford 20/20 champions". Cricinfo.com. August 14, 2006.
- ↑ "Dates for Stanford Twenty20 announced". The Jamaica Observer. February 9, 2006. Archived from the original on September 26, 2007.
- ↑ "Gabba fans let in for free". Cricket20.com. Archived from the original on 2008-10-08. Retrieved 2011-02-03.
- ↑ "India crash to nine-wicket defeat". Cricinfo.com. February 1, 2008.
- ↑ "An interview with Ramji Srinivasan". Takath.com. June 19, 2009. Archived from the original on ಅಕ್ಟೋಬರ್ 8, 2011. Retrieved ಫೆಬ್ರವರಿ 3, 2011..
- ↑ "Hayden heroics shining light of IPL". Canberra Times. May 13, 2009. Archived from the original on ಸೆಪ್ಟೆಂಬರ್ 18, 2009. Retrieved ಫೆಬ್ರವರಿ 3, 2011.
- ↑ ಕೋಟೆಡ್ ಇನ್ ಬೂತ್, ಲಾರೆನ್ಸ್. "ಮಿತ್ಸ್; ಅಂಡ್ ಸ್ಟಿರಿಯೋಟೈಪ್ಸ್." ದಿ ಸ್ಪಿನ್ , ೩೦ ಜೂನ್ ೨೦೦೯.
- ↑ "One-over eliminator could replace bowl-out". cricinfo.com cricinfo.com. 2008-06-27. Retrieved 2008-12-26.
- ↑ "Windies edge NZ in Twenty20 thriller". www.abc.net.au Australian Broadcasting Corporation. 2008-12-26. Retrieved 2008-12-26.
- ↑ "Benn stars in thrilling tie". cricinfo.com cricinfo.com. 2008-12-26. Retrieved 2008-12-26.
- ↑ "Vettori opposes Super Over". www.cricinfo.com cricinfo.com. 2008-12-26. Retrieved 2009-02-05.
- ↑ The Explainer (2009-01-13). "One1". www.cricinfo.com cricinfo.com. Retrieved 2009-02-05.