ಪುಷ್ಯ ಮಾಸ
ಪುಷ್ಯ ಮಾಸವು ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹತ್ತನೇ ಮಾಸ. ಇದನ್ನು ಪೌಷಮಾಸ, ತೈಷಮಾಸ ಎಂದೂ ಕರೆಯುತ್ತಾರೆ. ಹೇಮಂತ ಋತುವಿನ ಎರಡು ಮಾಸಗಳಲ್ಲಿ ಇದು ಎರಡನೆಯದು. ಧನುರ್ಮಾಸದ ಅಮಾವಾಸ್ಯೆಯ ಮಾರನೆಯ ದಿನ ಪ್ರಾರಂಭವಾಗಿ ಮಕರ ಮಾಸದ ಅಮಾವಾಸ್ಯೆಯ ದಿನ ಮುಗಿಯುತ್ತದೆ. ಪುಷ್ಯ ಮಾಸವು ಚಳಿಗಾಲದ (ಹೇಮಂತ ಮತ್ತು ಶಿಶಿರ ಋತುಗಳು) ಒಂದು ಮಾಸ.[೧][೨] ಚಾಂದ್ರಮಾಸವಾದ ಪುಷ್ಯಮಾಸವು ಸೌರಮಾಸವಾದ ಧನುರ್ಮಾಸದೊಂದಿಗೆ ವ್ಯಾಪಿಸುತ್ತದೆ.[೩][೪] ಭಾರತ ಸರ್ಕಾರದ ಸಾಯನ ಸೌರಮಾಸ ಗಣನೆಯಂತೆ ಡಿಸೆಂಬರ್ 16 ನೆಯ ತಾರೀಕು ಪ್ರಾರಂಭವಾಗಿ ಜನವರಿ 14 ನೆಯ ತಾರೀಕಿಗೆ ಮುಗಿಯುತ್ತದೆ.
ಪುಷ್ಯಯುಕ್ತಾ ಪೌರ್ಣಮಾಸೀ ಪೌಷೀಮಾಸೇತು ಯತಸಾ 1 ನಾಮ್ನಾಸ ಪೌಷ್ಯಃ
ಎಂದು ಅಮರಸಿಂಹ ತಿಳಿಸಿರುವಂತೆ ಈ ಮಾಸದ ಹುಣ್ಣಿಮೆಯ ದಿನ ಸಾಮಾನ್ಯವಾಗಿ ಪುಷ್ಯ ನಕ್ಷತ್ರ ಸೇರುವುದರಿಂದ ಈ ತಿಂಗಳಿಗೆ ಈ ಹೆಸರುಗಳು. ಪುಷ್ಯ ನಕ್ಷತ್ರವೇ ಈ ಹುಣ್ಣಿಮೆಯ ದಿವಸ ಇರಬೇಕೆಂಬ ನಿಯಮವಿಲ್ಲ. ಕಾಲವ್ಯತ್ಯಾಸದಿಂದ ಇದರ ಹಿಂದಿನ ಮತ್ತು ಮುಂದಿನ ನಕ್ಷತ್ರಗಳೂ ಇರಬಹುದು. ಈ ತಿಂಗಳಿಗೆ ತಪೋಮಾಸ ಎಂಬ ಹೆಸರೂ ಇದೆ. ಇತರ ಚೈತ್ರಾದಿ ಮಾಸಗಳು ಅಧಿಕವಾಗುವಂತೆ ಈ ತಿಂಗಳು ಯಾವಾಗಲೂ ಅಧಿಕ ಮಾಸ ಆಗುವುದಿಲ್ಲ. ಆದರೆ, ಬಹುವರ್ಷಗಳಿಗೊಮ್ಮೆ ಈ ತಿಂಗಳು ಕ್ಷಯಮಾಸ ಆಗುವ ಸಂಭವ ಇದೆ. ಉತ್ತರಾಯಣ ಪ್ರಾರಂಭವಾಗುವುದು ಈ ತಿಂಗಳಿನಲ್ಲೆ. ಧನುರ್ಮಾಸದೊಡನೆ ಸೇರಿರುವ ಇದು ಶೂನ್ಯಮಾಸವಾದ್ದರಿಂದ ಈ ಮಾಸದಲ್ಲಿ ಯಾವ ಮಂಗಳ ಕಾರ್ಯಗಳನ್ನೂ ಮಾಡುವುದಿಲ್ಲ. ಮಕರ ಮಾಸದೊಡನೆ ಇರುವ ಪುಷ್ಯಮಾಸ ಶೂನ್ಯಮಾಸವಲ್ಲದಿದ್ದರೂ ಕೆಲವರು ಈ ಮಾಸದಲ್ಲಿ ಮದುವೆಯನ್ನು ಮಾಡುವುದಿಲ್ಲ.
ಈ ತಿಂಗಳಿನ ಕೃಷ್ಣಾಷ್ಟಮಿಯಂದು ಅಷ್ಟಕಾಶ್ರಾದ್ಧವನ್ನು ಮಾಡುತ್ತಾರೆ. ತುಳುಷಷ್ಠಿ, ಶಾಕಂಭರಿವ್ರತ, ಬನಶಂಕರಿವ್ರತ, ಗರುಡಜಯಂತಿ, ಪುರಂದರದಾಸರ ಪುಣ್ಯದಿನ, ತ್ಯಾಗರಾಜಸ್ವಾಮಿಗಳ ಆರಾಧನೆ, ಸ್ವಾಮಿ ವಿವೇಕಾನಂದರ ಜನ್ಮದಿವಸ ಇವುಗಳ ಆಚರಣೆ ಈ ತಿಂಗಳಿನಲ್ಲಿಯೇ. ಈ ತಿಂಗಳಿನಲ್ಲಿ ಹಿಂದೂಗಳ ದೇವಸ್ಥಾನಗಳಲ್ಲಿ ಬೆಳಗಿನ ಜಾವದ ವಿಶೇಷ ಪೂಜೆ ಅಭಿಷೇಕಗಳು ನಡೆಯುತ್ತವೆ. ಪುಷ್ಯಮಾಸದ ಅಮಾವಾಸ್ಯೆಯಂದು ಭಾನುವಾರ ಆಗಿದ್ದು ಆ ದಿವಸ ಸೂರ್ಯೋದಯ ಕಾಲದಲ್ಲಿ ಶ್ರವಣ ನಕ್ಷತ್ರ ಮತ್ತು ವ್ಯತಿಪಾತಯೋಗ ಸೇರಿದರೆ ಅರ್ಧೋದಯ ಎಂಬ ಪುಣ್ಯಕಾಲ ಆಗುತ್ತದೆ.
ಈ ಮಾಸದ ಪ್ರಮುಖ ಹಬ್ಬಗಳು
[ಬದಲಾಯಿಸಿ]- ಪುತ್ರದಾ ಏಕಾದಶಿ; ವೈಕುಂಠ ಏಕಾದಶಿ (ಶುಕ್ಲ ಏಕಾದಶಿ)
- ಮುಕ್ಕೋಟಿ ದ್ವಾದಶಿ (ಶುಕ್ಲ ದ್ವಾದಶಿ)
- ಮಾಘಸ್ನಾನಾರಂಭ (ಹುಣ್ಣಿಮೆ)
- ತ್ಯಾಗರಾಜ ಆರಾಧನ (ಕೃಷ್ಣ ಪಂಚಮಿ)
- ಷಟ್ತಿಲಾ ಏಕಾದಶಿ (ಕೃಷ್ಣ ಏಕಾದಶಿ)
- ಉತ್ತರಾಯಣ ಪರ್ವಕಾಲ
- ಧನುರ್ಮಾಸ ಸಮಾಪ್ತಿ
ಉಲ್ಲೇಖಗಳು
[ಬದಲಾಯಿಸಿ]- ↑ James G. Lochtefeld (2002). The Illustrated Encyclopedia of Hinduism: A-M, N-Z (Vol 1 & 2). The Rosen Publishing Group. pp. 508. ISBN 978-0-8239-3179-8.
- ↑ Robert Sewell; Śaṅkara Bālakr̥shṇa Dīkshita (1896). The Indian Calendar. S. Sonnenschein & Company. pp. 5–11, 23–29.
- ↑ Christopher John Fuller (2004). The Camphor Flame: Popular Hinduism and Society in India. Princeton University Press. pp. 291–293. ISBN 978-0-69112-04-85.
- ↑ Robert Sewell; Śaṅkara Bālakr̥shṇa Dīkshita (1896). The Indian Calendar. S. Sonnenschein & Company. pp. 10–11.
ಚಾಂದ್ರಮಾನ ಮಾಸಗಳು |
---|
ಚೈತ್ರ • ವೈಶಾಖ • ಜ್ಯೇಷ್ಠ • ಆಷಾಢ • ಶ್ರಾವಣ • ಭಾದ್ರಪದ • ಆಶ್ವಯುಜ • ಕಾರ್ತಿಕ • ಮಾರ್ಗಶಿರ • ಪುಷ್ಯ • ಮಾಘ • ಫಾಲ್ಗುಣ |