ವಿಷಯಕ್ಕೆ ಹೋಗು

ನೃತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭರತನಾಟ್ಯದ ಒಂದು ಭಂಗಿ.

ಪೀಠಿಕೆ

[ಬದಲಾಯಿಸಿ]

ನೃತ್ಯ ಲಯಬದ್ದವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ. ಇದು ನಾಟ್ಯಕಲೆಗಳಲ್ಲಿ ಒಂದು. ನೃತ್ಯ ದಲ್ಲಿ ಹಲವು ಪ್ರಾಕಾರಗಳನ್ನು ನೋಡಬಹುದು.ಭಾರತೀಯ ನೃತ್ಯಕಲೆಗಳ ಅವಿಚ್ಛಿನ್ನ, ಅವಿನಾಶಿ ಪರಂಪರೆ ಜಗತ್ತಿನ ಉಳಿದೆಲ್ಲಾ ನೃತ್ಯಕಲೆಗಳಿಗೊಂದು ಆದರ್ಶ. ಅದು ಶಾಸ್ತ್ರೀಯವಾಗಿರಲಿ, ಅಥವಾ ಜಾನಪದವಾಗಿರಲಿ; ಜೀವನದ ಭಾರತೀಯ ಮುಖಗಳನ್ನು ಸುಂದರವಾಗಿ ನಿರೂಪಿಸುವುದರೊಂದಿಗೆ ಭಾವಪ್ರಚೋದಿಸುವ ಈ ನೃತ್ಯ ಮಾಧ್ಯಮ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗಷ್ಟೆ ಅಲ್ಲ, ಬದುಕಿನ ಹಲವು ಆಯಾಮಗಳಿಗೆ ತನ್ನನ್ನು ವಿಸ್ತರಿಸಿಕೊಂಡಿದೆ. ಭಾರತೀಯ ಶಾಸ್ತ್ರೀಯ ನೃತ್ಯದ ಪ್ರಸ್ತಾಪ ಋಗ್ವೇದದಲ್ಲಿ ಗುರುತಿಸಲಾಗಿದ್ದರೂ, ಋಗ್ವೇದಕ್ಕಿಂತಲೂ ಬಹಳಷ್ಟು ಪ್ರಾಚೀನವಾದುದು ಎಂಬುದನ್ನು ಕಂಡುಕೊಳ್ಳಬಹುದು. ಋಗ್ವೇದದಿಂದ ಪಠ್ಯವನ್ನು, ಯರ್ಜುವೇದದಿಂದ ಅಭಿನಯವನ್ನು, ಸಾಮವೇದದಿಂದ ಸಂಗೀತವನ್ನು, ಅಥರ್ವಣ ವೇದದಿಂದ ರಸವನ್ನು ತೆಗೆದು ಐದನೇಯ ವೇದವನ್ನಾಗಿ ನಾಟ್ಯವೇದವನ್ನು ರಚಿಸಲಾಯಿತು ಎಂದು ಪ್ರಾಚೀನ ಗ್ರಂಥಗಳು ಹೇಳಲ್ಪಟ್ಟಿವೆಯಾದರೂ, ಇಂತಹ ದೈವಿಕ ಸ್ಪರ್ಶ ಕೇವಲ ಪೂಜ್ಯತಾಭಾವನೆಗೆ ಮಾತ್ರ ಮೀಸಲಾಗಿರದೆ, ರಕ್ಷಣಾತ್ಮಕ ಚೌಕಟ್ಟನ್ನು, ಶಾಸ್ತ್ರೀಯ ಪರಂಪರೆಯನ್ನು ಕಾಯ್ದುಕೊಳ್ಳಲು ಮೂಡಿರಬಹುದೆಂದು ಇತಿಹಾಸತಜ್ಞರ ಅಭಿಪ್ರಾಯ. ಏನೇ ಇರಲಿ, ಭಾರತೀಯ ನೃತ್ಯಕಲೆಯು ಚಿತ್ರಕಲೆಯ ರೇಖಾವಿನ್ಯಾಸ, ವರ್ಣವೈಭವ, ಶಿಲ್ಪಕಲೆಯ ರೂಪ-ಲಾವಣ್ಯ, ನಟನ ದೇವನಾನುಕರಣ, ಸಂಗೀತ-ರಾಗ-ಲಯ-ಪದವಿನ್ಯಾಸ, ಕವಿಯ ಭಾವನಾವಿಲಾಸದ ಸಂಗಮವಷ್ಟೆ ಆಗಿರದೆ ಜೀವನದ ಜೊತೆಗಿನ ಅನುಸಂಧಾನವೂ ಹೌದು ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ. ಈ ಎಲ್ಲಾ ಭಾರತೀಯ ನೃತ್ಯಕಲೆಗಳಿಗೆ ಭರತಮುನಿಯ ಶಾಸ್ತ್ರವೇ ಆಧಾರವೆಂದೇ ನಂಬಲಾಗಿದ್ದರೂ, ಅದಕ್ಕೂ ಹಿಂದೆ ಶಿಲಾಲಿ, ಕೃಶಾಸ್ವರು ನಟಸೂತ್ರ ಗಳನ್ನೇ ರಚಿಸಿದ್ದರು ಎಂದು ಪಾಣಿನಿಯ ವ್ಯಾಕರಣ ತಿಳಿಸುತ್ತದೆ.

ಆದರೆ ಲಭ್ಯವಿರುವ ಗ್ರಂಥಗಳ ಪೈಕಿ ಭರತನ ನಾಟ್ಯಶಾಸ್ತ್ರ ಅತೀ ಪ್ರಾಚೀನ ಮತ್ತು ಎಲ್ಲಾ ರಂಗ ಕಲೆಗಳಿಗೆ ಮಾತೃ ಗ್ರಂಥ ಎಂದೇ ನಿರ್ಧರಿಸಲ್ಪಟ್ಟಿದೆ. ಭರತ ಎನ್ನುವ ಐತಿಹಾಸಿಕ ವ್ಯಕ್ತಿ ಇದ್ದನೇ? ಇದ್ದರೆ ಯಾರು? ಎಂಬ ಜಿಜ್ಞಾಸೆ ಇಂದಿಗೂ ಸಿದ್ಧಾಂತಕ್ಕೆ ಸಿಲುಕಿಲ್ಲ. ಆದರೆ ಭರತಮುನಿಯ ಶಾಸ್ತ್ರವನ್ನು ಅವಲಂಬಿಸಿ ಬೆಳೆದು ಬಂದ ನಾಟ್ಯಸಂಪ್ರದಾಯಗಳೆಲ್ಲವೂ ಭರತನಾಟ್ಯವೇ ಆಗಿದೆ. ಹಾಗಾದರೆ ಕೇವಲ ಇಂದಿನ ಪ್ರಚಲಿತ, ಭರತನಾಟ್ಯ ಪದ್ಧತಿಯೊಂದೇ ಭರತನ ಕೊಡುಗೆ ಎನ್ನಲಾಗದು. (ಸಾದಿರ್, ದಾಸಿಆಟ್ಟಂ, ಕೇಲಿ, ನಿಲಂಬು, ದಾಸೀಕುಣಿತ ಎಂದು ಕರೆಯಲಾಗುತ್ತಿದ್ದ ನೃತ್ಯ ಪದ್ಧತಿ ಪುನರುಜ್ಜೀವನಗೊಂಡು ಭರತನಾಟ್ಯ ಎಂದು ಕರೆಸಿಕೊಂಡಿತಷ್ಟೆ ವಿನಃ; ಇಂದಿಗೂ ವಿಮರ್ಶಕರು ಭರತನೃತ್ಯ ಸಾದಿರ್ ಎಂದೇ ಕರೆಯಲು ಒತ್ತಾಯಿಸುತ್ತಿದ್ದಾರೆ, ಭರತನಾಟ್ಯವೆಂಬುದು ಶಾಸ್ತ್ರೀಯ ನೃತ್ಯದ ಒಂದು ಬಗೆ. ಅಷ್ಟೆ!)ಆದರೆ, ಇಂದಿನ ಹಲವು ಯುವ ಮನಸ್ಸುಗಳು, ಆಧುನಿಕ ಪ್ರೇರೇಪಿತ ನಿಲುವುಗಳು ಶಾಸ್ತ್ರೀಯ ನೃತ್ಯವನ್ನು ಅಸಡ್ಡೆಯಿಂದ ಕಾಣುವುದು, ಅದರಲ್ಲಿ ನವೀನವೆನಿಸುವ ಅತಿರೇಕದ ಬದಲಾವಣೆಗಳನ್ನು, ಪ್ರಯೋಗಗಳನ್ನು ಕಲ್ಪಿಸುವುದು ಶಾಸ್ತ್ರೀಯ ಲಕ್ಷಣಗಳಿಗೆ ಕೊಡಲಿ ಪೆಟ್ಟು ಕೊಡುತ್ತಿದೆ. ಈ ನಿಟ್ಟಿನಿಂದ ನಾವು ಅರ್ಥ ಮಾಡಿಕೊಳ್ಳಬೇಕಾದುದು ಒಂದೇ!... ಶಾಸ್ತ್ರೀಯವಾಗಿರುವುದರಿಂದಲೇ ಅದು ಶಾಸ್ತ್ರೀಯ ನೃತ್ಯ. ಆದರೆ ಅಷ್ಟು ಮಾತ್ರಕ್ಕೆ ಅದರ ವೈಭವೀಕರಣವೂ ಸಲ್ಲದು. ಹಾಗೆ ನೋಡಿದರೆ ಭಾರತೀಯ ನೃತ್ಯ ಪರಂಪರೆಗಳಲ್ಲಿ ಇಂದಿಗೂ ೧೫೦೦ರಷ್ಟು ಜಾನಪದ ನೃತ್ಯದ ಸಂಪತ್ತು ಇದೆ. ಅದರಲ್ಲಿನ ಧಾರ್ಮಿಕ ಅಂಶ ಕಡಿಮೆಯಾಗುತ್ತಿದ್ದರೂ, ಜಾನಪದದ ವರ್ಣವೈವಿಧ್ಯ, ಸರಳತೆ, ಸ್ಫೂರ್ತಿ, ಲಯ-ಗತಿ, ಸಾತ್ವಿಕ ಆನಂದದಿಂದಾಗಿ ತೇಜಸ್ಸು ಕಡಿಮೆಯಾಗಿಲ್ಲ. ಜನಜೀವನದ ಪ್ರಮುಖ ಅಂಗವಾಗಿ ಸಂಸ್ಕೃತಿಯ ಅವಿಭಾಜ್ಯ ಅಂಶವಾಗಿ, ಆಕರ್ಷಣೀಯವಾಗಿರುವ ಇಂತಹ ನೃತ್ಯಗಳು ವೈವಿಧ್ಯತೆ, ಭಿನ್ನತೆ, ವ್ಯತ್ಯಾಸಗಳನ್ನು ತನ್ನೊಡಲಲ್ಲಿ ಕಾಯ್ದುಕೊಂಡು ರಂಜನೀಯವಾಗಿದೆ. ಇಂತಹ ಭಿನ್ನತೆಗಳು ಭಾರತೀಯ ಸಂಸ್ಕೃತಿಯ ಏಕತೆಯ ಮೂಲರೂಪ. ಅಂತೆಯೇ ಒಂದೊಂದು ಪ್ರಾಂತ್ಯದ ಜನಜೀವನ, ಲಕ್ಷಣ, ಸ್ಥಳೀಯ ಸ್ಥಿತಿಗತಿ, ಅವಶ್ಯಕತೆಗಳ ಫಲವಾಗಿ ಆಯಾಯ ಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯಗಳು ಮೈಗೂಡಿದವು. ಕೂಚಿಪುಡಿ, ಕಥಕ್ಕಳಿ, ಮೋಹಿನಿ ಆಟ್ಟಂ, ಮಣಿಪುರಿ, ಕಥಕ್, ಅಷ್ಟೇಕೆ ನಾಟ್ಯಶಾಸ್ತ್ರವನ್ನೇ ಅವಲಂಬಿಸಿರುವ ಕರ್ನಾಟಕದ ಯಕ್ಷಗಾನ, ಅಸ್ಸಾಮಿನ ಚೌ, ಸತ್ರಿಯಾ, ಕೊರವಂಜಿ, ಭಾಗವತಮೇಳ ನೃತ್ಯಗಳು ಶಾಸ್ತ್ರೀಯ ನೃತ್ಯಗಳೇ ಸರಿ! ಜೊತೆಗೆ ಸಾಮಾಜಿಕ, ಸಮಕಾಲೀನ ವಸ್ತು ನಿರೂಪಕಗಳು ನೃತ್ಯರೂಪಕವೆಂಬ ಆಕರ್ಷಕ ವಿಧಾನದ ಮೂಲಕ ಅಸ್ತಿತ್ವ ಪಡೆದುಕೊಂಡು ಶಾಸ್ತ್ರೀಯ ಶೈಲಿಯೆನಿಸಿದವು. ಹಾಗೆ ನೋಡಿದರೆ ಉತ್ತರ ಭಾರತಕ್ಕೆ ಪರರ ಆಕ್ರಮಣದ ಫಲವಾಗಿ ಅಲ್ಲಿನ ನೃತ್ಯಕಲೆಗಳು ಹೆಚ್ಚಾಗಿ ಪರಕೀಯರ ಪ್ರಭಾವ ಪಡೆದುಕೊಂಡಿವೆ. ದಕ್ಷಿಣ ಭಾರತದ ನೃತ್ಯಸಂಪ್ರದಾಯಗಳು ಸಾಕಷ್ಟು ಮೂಲ ಸಂಪ್ರದಾಯ ಪರಿಶುದ್ಧತೆಯನ್ನು ಉಳಿಸಿಕೊಂಡಿದೆ.ಮೋಕ್ಷಕ್ಕೆ ಸಾಧನ, ಪ್ರಾರ್ಥನಾ ಸ್ವರೂಪ ಎಂದೆನಿಸಿಕೊಂಡಿರುವ ಇಂತಹ ಶಾಸ್ತ್ರೀಯ, ಸಾಂಪ್ರದಾಯಿಕ ನೃತ್ಯಗಳು ಜೀವನ ಮೌಲ್ಯಗಳನ್ನು ಪುನರ್‌ವಿಮರ್ಶಿಸುವಂತವು. ಇಂದಿನ ಆಧುನಿಕ ಯುಗದಲ್ಲೂ ಎಲ್ಲಾ ದೃಷ್ಟಿಯಿಂದಲೂ ಜನಜೀವನಕ್ಕೆ ಅಗತ್ಯವೆನಿಸುವಂತವು, ಕೆಲವೊಂದು ನೃತ್ಯಗಳು ಆಯಾಕಾಲದ ಪ್ರಗತಿಗೆ ಸಾಕ್ಷಿಯಾಗಿ, ತನ್ನ ಬದುಕಿನ ಯುಗವನ್ನು ಬಿಂಬಿಸುತ್ತವೆ. ಉದಾ: ಏಕವ್ಯಕ್ತಿ ಯಕ್ಷಗಾನದ ಪ್ರಸ್ತುತತೆ. ಅಂತವು ಆಯಾಕಾಲದ ಅವಶ್ಯಕತೆ, ವೈವಿಧ್ಯತೆಗಳಿಗೆ ಅಗತ್ಯವೂ ಕೂಡಾ!..ಅಷ್ಟಕ್ಕೂ ಭಾರತೀಯ ಸಂಪ್ರದಾಯವೆಂಬುದು ಶಿಸ್ತಿನ ಕಟ್ಟುಪಾಡುಗಳಿಂದ ಕೂಡಿದ್ದಲ್ಲ ಸ್ವತಃ ಭರತಮುನಿಯೇ ತನ್ನ ಗ್ರಂಥದಲ್ಲಿ ಪಾಂಡಿತ್ಯ, ಅನುಭವ, ಲೋಕಜ್ಞಾನದಿಂದ ನೃತ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬಹುದು ಎಂದಿದ್ದಾನೆ. ಹಾಗಾಗಿ ಸ್ವಾತಂತ್ರ್ಯದ ಅಭಿವ್ಯಕ್ತಿ ಭಾರತೀಯ ಕಲೆಗಳ ಮೂಲಸ್ರೋತವೂ ಹೌದು. ಜೊತೆಗೆ ಪರಂಪರೆಯ ರಕ್ಷಣೆ, ಪ್ರಗತಿಯ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕಾದ್ದು ನಮ್ಮ ಕರ್ತವ್ಯವೂ ಕೂಡಾ. ಅಷ್ಟಕ್ಕೂ ಸ್ವಾತಂತ್ರ್ಯವೆಂದರೆ ಸ್ವ‌ೇಚ್ಛೆಯಲ್ಲವಲ್ಲ!ಭಾರತೀಯ ನೃತ್ಯಗಳೂ ಹಲವು ಸ್ಥಿತ್ಯಂತರಕ್ಕೆ ಒಳಪಟ್ಟಿವೆ. ಸ್ವಾತಂತ್ರ್ಯಾ ನಂತರವಂತೂ ಅಂಟಿದ್ದ ಕಳಂಕಗಳ ಬೇಡಿಯನ್ನು ಸ್ವಲ್ಪ ಸ್ವಲ್ಪವಾಗಿಯೇ ಬಿಡಿಸಿಕೊಳ್ಳುತ್ತಾ ಜನಾದರಣೆ, ಪ್ರೆತ್ಸಾಹವನ್ನು ಪಡೆದುಕೊಂಡಿವೆ. ಆದರೆ ನಾಗರೀಕತೆಯ, ಪರಕೀಯತೆಯ ಗಾಳಿಗೆ ಕಲುಷಿತಗೊಳ್ಳದಂತೆ ಪರಿಶುದ್ಧವಾಗಿ ಉಳಿಸಿಕೊಳ್ಳುವುದೂ ಸಂಸ್ಕೃತಿಯ ಬಗೆಗೆ ನಾವು ನಿರ್ವಹಿಸಬೇಕಾದ ಕರ್ತವ್ಯ.ಪ್ರಸ್ತುತ ಕಾಲದಲ್ಲಿ ನೃತ್ಯಶೈಲಿಯನ್ನು ಕರಗತ ಮಾಡಿಕೊಳ್ಳಲು ಬೇಕಾದ ಸಂಯಮ, ಶ್ರದ್ಧೆ, ನಿಷ್ಟೆ, ಏಕಾಗ್ರತೆ, ಅರ್ಪಣಾಭಾವಗಳು ಮರೆಯಾಗಿ ಅವಕಾಶವಾದಿಗಳು, ಅಪ್ರಬುದ್ಧರು ಅಟ್ಟಣಿಗೆ ಏರುತ್ತಾ ನೃತ್ಯಸಂಪ್ರದಾಯಕ್ಕೆ ಹೊಸತೆನಿಸುವ ಕಳಂಕವನ್ನು ಅಂಟಿಸುತ್ತಿದ್ದಾರೆ. ಎಲ್ಲಾ ನೃತ್ಯಶೈಲಿಗಳಲ್ಲೂ ನಿಪುಣರೆಂದು ತೋರಿಸಿಕೊಳ್ಳುವ ಆಶೆಯಲ್ಲಿ ಪರಂಪರೆಯನ್ನು ಮರೆಯುತ್ತಿರುವುದಲ್ಲದೆ, ಪೌರಾತ್ಯದ ಬೆರಕೆ, ವ್ಯಾಪಾರೀಕರಣ ನೃತ್ಯಶೈಲಿಯ ಪ್ರಮುಖ ಸಮಸ್ಯೆ ಮತ್ತು ಸವಾಲು.ಆದರೆ ಇಂತಹ ತಾಳ್ಮೆ ಎಲ್ಲದರಂತೆ ನೃತ್ಯರಂಗದಲ್ಲೂ, ಮುಂದುವರಿದರೆ ಶಾಸ್ತ್ರೀಯ-ಸಂಪ್ರದಾಯ-ಜನಪದಗಳ ಅಸ್ತಿತ್ವವಷ್ಟೆ ಅಲ್ಲ. ನಮ್ಮ ಅಸ್ತಿತ್ವವನ್ನು ಅದರೊಂದಿಗೆ ಕಳೆದುಕೊಳ್ಳಬೇಕಾದೀತು.

ನೃತ್ಯಕಲೆ ಮತ್ತು ಶಿಕ್ಷಣ

[ಬದಲಾಯಿಸಿ]

ಸಂಗೀತಾದ ಲಲಿತ ಕಲೆಗಳಲ್ಲಿ ಆಸಕ್ತಿ ಇಲ್ಲದವರು ಪಶುವಿಗೆ ಸಮಾನರು ಎಂಬ ಮೇಲಿನ ಮಾತಿನಂತೆ “ವಿದ್ಯಾ ವಿಹೀನ ಪಶು” ಎಂಬ ಮಾತನ್ನೂ ಕೇಳಿದ್ದೇವೆ. ಸಾಮಾನ್ಯವಾಗಿ ಹುಟ್ಟಿನಿಂದ ಪಶುತ್ವದಲ್ಲಿಯೇ ಇರುವ ಜೀವಿಯನ್ನು ಮನುಷ್ಯತ್ವಕ್ಕೆ ತರಬಲ್ಲ ಸಾಧನವೇ ಶಿಕ್ಷಣ ಅಥವಾ ವಿದ್ಯೆ. ಮನುಷ್ಯತ್ವದಿಂದ ಮತ್ತೆ ಉತ್ತಮ ಸ್ಥಿತಿ ಏರಲು ಸಾಧ್ಯವಾಗುವ, ಮಾನವತ್ವವನ್ನು ಪಡೆಯಲು ಸಾಧ್ಯವಾಗುವ ಸಾಧನವಿದ್ದರೆ ಅದು ಲಲಿತಕಲೆಗಳು ಮಾತ್ರ ಎಂಬುದಾಗಿ ಹೇಳಬಹುದು.

ಸಮಾಜದಲ್ಲಿ ಪ್ರತಿಯೊಬ್ಬನೂ ಶಿಕ್ಷಣ ಅಥವಾ ವಿದ್ಯೆಯನ್ನು ಪಡೆಯಲೇಬೇಕು. ಯಾಕೆಂದರೆ ಬದುಕಿಗೆ ಇದು ಅನಿವಾರ್ಯ. ವಿದ್ಯೆಯಿಲ್ಲದ ಬದುಕು ಶೂನ್ಯವಾಗಬಲ್ಲದು. ಪ್ರತಿಯೊಬ್ಬರೂ ಪಡೆಯುವ ಸಾಧ್ಯವಾಗದ, ಆದರೆ ಪ್ರತಿಯೊಬ್ಬನೂ ತಿಳಿಯಲೇಬೇಕಾದ ಅಂತಃ ರಂಗದ ವಿದ್ಯೆಯನ್ನೇ ಕಲೆ ಎನ್ನಬಹುದು. ಬದುಕಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದಲ್ಲಿ ಗೌರವವನ್ನು ತಂದುಕೊಡಬಲ್ಲ ಕಲೆಗಳು ನಮ್ಮ ಬದುಕಿನಲ್ಲಿ ಬೆರೆತಾಗ ಬದುಕಿಗೆ ಮಾನ್ಯತೆ ಬರುತ್ತದೆ. ಜಡತ್ವದಿಂದ ತುಂಬಿದ ಬದುಕಿನ ನವಚೈತನ್ಯವನ್ನು ನೀಡಿ ಮನಸ್ಸನ್ನು ಮುದಗೊಳಿಸಿ ಲೌಕಿಕದಿಂದ ಪರಮಾರ್ಥಿಕದತ್ತ ಜೀವನವನ್ನು ಮುನ್ನಡೆಸಬಲ್ಲ ಅಲೌಕಿಕವಾಗಿ ಕಲೆಗಳಿಂದ ಮಾನವೀಯ ಮೌಲ್ಯಗಳು ಬೆಳೆಯಲು ಸಾಧ್ಯವಾಗುತ್ತದೆ.

“ಏನಾದರೂ ಆಗು, ಮೊದಲು ಮಾನವನಾಗು” ಎಂಬ ಕವಿವಾಣಿಯನ್ನು ಸಾರ್ಥಕಗೊಳಿಸಬೇಕಾದರೆ ಕಲೆಯ ಕಲಿಕೆಗೆ ನಮ್ಮ ಬದುಕು ತೆರೆಯಬೇಕು. ಹಾಲು ಜೇನು ಬೆರೆತಂತೆ ಸಾಮಾನ್ಯ ಶಿಕ್ಷಣ ಮತ್ತು ಕಲೆ ಒಂದಾಗಿ ಪ್ರತಿಯೊಬ್ಬನ ಬದುಕನ್ನೂ ಹಸನುಗೊಳಿಸಬೇಕಾಗಿದೆ. ಬೆಳಗಿಸಬೇಕಾಗಿದೆ.ಸಂಗೀತ, ನೃತ್ಯ, ಶಿಲ್ಪ, ಚಿತ್ರ, ವಾಸ್ತು, ಸಾಹಿತ್ಯ ಹಾಗೂ ನಾಟಕ ಇವುಗಳನ್ನು ಲಲಿತಕಲೆಗಳೆಂದು ಗುರುತಿಸಲಾಗಿದೆ. ಈ ಕಲೆಗಳಲ್ಲೂ ಅತ್ಯಂತ ಪ್ರೌಢವಾದ ಮತ್ತು ಶ್ರೇಷ್ಠವಾದ ಕಲೆಯೇ ನೃತ್ಯಕಲೆ. “ಅಂತಃಕರಣವನ್ನು ಪ್ರಚೋದಿಸುವ ಅತಿಸುಂದರವಾದ ನೃತ್ಯ ಜೀವನದ ಬರಿಯ ಪ್ರತಿಬಿಂಬ ಅಥವಾ ಆಕರ್ಷಣವಲ್ಲ, ಅದು ಜೀವನವೇ ಆಗಿದೆ ಎಂಬ ವಿದೇಶಿ ಸಾಹಿತಿಯೊಬ್ಬರ ಮಾತನ್ನೇ ಉಲ್ಲೇಖಿಸುವುದಾದರೆ ಜೀವನವನ್ನು ರೂಪಿಸುವಲ್ಲಿ ನೃತ್ಯದ ಮಹತ್ವ ಅರಿಯಬಹುದು.ತ್ರೇತಾಯುಗದ ಪ್ರಾರಂಭದಲ್ಲಿ ಜನ ಸಮೂಹವು ಕಾಮಲೋಭಗಳಿಗೆ ತುತ್ತಾಗಿ ಗ್ರಾಮ್ಯ ಧರ್ಮಗಳಲ್ಲಿ ಆಸಕ್ತರಾಗಿದ್ದಾಗ ಅವರನ್ನು ತಿದ್ದಿ ಧರ್ಮ ಮಾರ್ಗದಲ್ಲಿ ಪ್ರವೃತ್ತರಾಗುವಂತೆ ಮಾಡುವ ಉದ್ದೇಶದಿಂದಲೇ ಇಂದ್ರಾದಿಗಳ ಪ್ರಾರ್ಥನೆಯಂತೆ ಬ್ರಹ್ಮನಿಂದ ನೃತ್ಯದ ಸೃಷ್ಟಿಯಾಯಿತು. ಅಂದರೆ ಜನರನ್ನು ಸನ್ಮಾರ್ಗಕ್ಕೆ ಒಯ್ಯುವಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವುದೇ ನೃತ್ಯ ಕಲೆಯ ಸೃಷ್ಠಿಗೆ ಕಾರಣವೆಂಬುದು ಇಲ್ಲಿ ಮುಖ್ಯವಾಗುತ್ತದೆ.

ನೃತ್ಯ ಸ್ವರೂಪದ ಬಗ್ಗೆ ಗಮನಿಸೋಣ:

ಕ್ವಚಿದ್ಧರ್ಮಃ ಕ್ವಚಿತ್ಕ್ರೀಡಾ ಕ್ವಚಿದರ್ಥಃ ಕ್ವಚಿಚ್ಛಮಃ| ಕ್ವಚಿದ್ಧಾಸಂ ಕ್ವಚಿದ್ಯುದ್ಧಂ ಕ್ವಚಿತ್ಕಾಮಃ ಕ್ವಚಿದ್ವಧಃ||

ಧರ್ಮೋ ಧರ್ಮ ಪ್ರವೃತತಾನಾಂ ಕಾಮಂಃ ಕಾಮೋಪಸೇವಿನಾಂ| ನಿಗ್ರಹೋ ದುರ್ವಿನೀತಾನಾಂ ಮತ್ತಾನಂ ದಮನಕ್ರಿಯಾ||

ಕ್ಲೀಬಾನಾಂ ಧಾರ್ಷ್ಟ್ಯ ಜನನ ಮುತ್ಸಾಹ ಶ್ಯೂರ ಮಾನಿನಾಂ| ಅಬುಧಾನಾಂ ವಿಬೋಧಶ್ಚ ವೈದುಷ್ಯಂ ವಿದುಷಾಮುಪಿ||

ಈಶ್ವರಾಣಾಂ ವಿಲಾಸಶ್ಚ ಸ್ಥೈರ್ಯಂ ದುಃಖಾರ್ದಿತಸ್ಯಚ| ಅರ್ಥೋಪಜೀವಿನಾಮರ್ಥೋ ಧೃತಿರುದ್ವಿಗ್ನ ಚೇತಸಾಂ||

ಇಲ್ಲಿ ಕೆಲವೆಡೆಗಳಲ್ಲಿ ಧರ್ಮವೂ, ಕೆಲವೆಡೆಗಳಲ್ಲಿ ಕ್ರೀಡೆಯೂ, ಕೆಲವೆಡೆಗಳಲ್ಲಿ ರಾಜನೀತ್ಯರ್ಥ ನೀತಿಗಳೂ, ಕೆಲವೆಡೆಗಳಲ್ಲಿ ಶ್ರಮವೂ, ಕೆಲವೆಡೆಗಳಲ್ಲಿ ಹಾಸ್ಯವೂ ಮತ್ತೆ ಕೆಲವೆಡೆಗಳಲ್ಲಿ ಕಾಮವೂ ವಧೆಯೂ ಪ್ರತಿಪಾದಿತವಾಗಿದೆ.

ಇದರಲ್ಲಿ ಧರ್ಮಪರಾಯಣರಿಗೆ ಧರ್ಮವೂ, ಕಾಮೋಪಸೇವಿಗಳಿಗೆ ಕಾಮವೂ, ದುರ್ವಿನೀತರಿಗೆ ನಿಗ್ರಹವೂ, ಮತ್ತರಿಗೆ ದಮನ ಕ್ರಿಯೆಯೂ ಉಂಟು. ಇದು ನಪುಂಸಕರಿಗೆ ದಾರ್ಷ್ಟ್ಯವನ್ನು ತಮ್ಮನ್ನು ಶೂರರೆಂದು ತಿಳಿದುಕೊಂಡವರಿಗೆ ಉತ್ಸಾಹವನ್ನೂ, ಅಥೋಪಜೀವಿಗಳಿಗೆ ಅರ್ಥವನ್ನೂ ಉದ್ವಿಗ್ನ ಮನಸ್ಕರಿಗೆ ಧೈರ್ಯವನ್ನೂ ಒದಗಿಸಬಲ್ಲದು.

ಧರ್ಮ್ಯಂ ಯಶಸ್ಸಮಾಯುಷ್ಯಂ ಹಿತಂ ಬುದ್ದಿವಿವರ್ಧನಂ| ಲೋಕೋಪದೇಶ ಜನನಂ ನಾಟ್ಯಮೇತದ್ಭವಿಷ್ಯತಿ|| ನಾ.ಶೌ||

“ನಾಟ್ಯವು ಧರ್ಮ, ಕೀರ್ತಿ, ಆಯುಸ್ಸುಗಳನ್ನು ಹೆಚ್ಚಿಸುವುದು, ಹಿತಕಾರಿಯಾದುದು, ಬುದ್ಧಿವಿಕಾಸವನ್ನು ಮಾಡಬಲ್ಲದು, ಲೋಕಕ್ಕೆ ಉಪದೇಶಪ್ರದವಾದುದು” ಎಂಬ ಭರತವಾಕ್ಯವನ್ನು ಗಮನಿಸಿದಾಗ ಧರ್ಮದ ತಳಪಾಯದ ಮೇಲೆ ಜೀವನವನ್ನು ರೂಪಿಸುವ ಅಂಶವಿದೆ. ಜೊತೆಗೆ ಲೋಕಕ್ಕೇ ಉಪದೇಶ ನೀಡಬಲ್ಲ ಉನ್ನತ ಮೌಲ್ಯವೂ ಇಲ್ಲಿದೆ. ಅಲ್ಲದೆ

ನತಜ್ಞಾನಂ ನತಶಿಲ್ಪಂ ನಸಾವಿದ್ಯಾ ನಸಾಕಲಾ| ನಾಸೌಯೋಗೋ ನತತ್ಕರ್ಮ ನಾಟ್ಯೇಸ್ಮನ್ ಯನ್ನದೃಶ್ಯತೇ||ನಾ.ಶೌ||

“ನಾಟ್ಯದಲ್ಲಿ ಕಾಣಿಸಿಕೊಳ್ಳದ ಯಾವುದೇ ಜ್ಞಾನವಾಗಲೀ, ಶಿಲ್ಪವಾಗಲೀ, ವಿದ್ಯೆಯಾಗಲೀ, ಕಲೆಯಾಗಲೀ, ಯೋಗವಾಗಲೀ ಕ್ರಿಯೆಯಾಗಲಿ ಇಲ್ಲ”.

ಈ ಮೇಲಿನ ಎಲ್ಲಾ ಅಂಶಗಳನ್ನು ಅವಲೋಕಿಸಿದಾಗ ನೃತ್ಯದಲ್ಲಿ ಎಲ್ಲವು ಒಳಗೊಂಡಿರುವ ವಿಚಾರ ಸ್ಪಷ್ಟವಾಗುತ್ತದೆ. ಬಹಳಮುಖ್ಯವಾಗಿ ಜೀವನದಲ್ಲಿ ಏನಿರಬೇಕೋ! ಏನನ್ನು ಸಾಧಿಸಬೇಕೋ! ಅದೆಲ್ಲವನ್ನೂ ನೃತ್ಯದಿಂದ ಪಡೆಯಲು ಸಾಧ್ಯವೆಂದಿದೆ. ಆ ಜೀವನದ ಪರಿಪೂರ್ಣತೆಗಾಗಿ ನೃತ್ಯಕಲೆ ಪೂರಕವಾಗಬಲ್ಲದು ಎಂಬುದಂತು ಖಂಡಿತ.

ಶಿಕ್ಷಣ

ಶಿಕ್ಷಣದ ಉದ್ದೇಶ: ದೈಹಿಕ ಬೌದ್ಧಿಕ ಹಾಗೂ ನೈತಿಕವಾಗಿ ವ್ಯಕ್ತಿತ್ವದ ವಿಕಾಸದೊಂದಿಗೆ ಉತ್ತಮ ನಾಗರಿಕರನ್ನಾಗಿ ವಿದ್ಯಾರ್ಥಿಗಳನ್ನು ರೂಪಿಸುವುದೇ ಶಿಕ್ಷಣದ ಮೂಲ ಉದ್ದೇಶ. ಜೊತೆಗೆ ಅವನ ನಡುವಳಿಕೆಯನ್ನು ತಿದ್ದಿ, ಸುಸಂಸ್ಕೃತ ವ್ಯಕ್ತಿಯನ್ನಾಗಿ ಮಾಡುವುದರಲ್ಲಿ ಕೂಡಾ ಶಿಕ್ಷಣದಿಂದ ಸಾಧ್ಯವಾಗಬೇಕು. ಅದು ಸಾಧ್ಯವಾಗದೇ ಹೋದಾಗ ಶಿಕ್ಷಣ ಅಪೂರ್ಣವೆನಿಸುತ್ತದೆ. ಅರ್ಥಹೀನವಾಗುತ್ತದೆ.

ಶಿಕ್ಷಣ ಉದ್ದೇಶಗಳು ನೃತ್ಯಕಲೆಯಿಂದ ಹೇಗೆ ಸಾಧ್ಯವಾಗಬಲ್ಲದು ಎಂಬುದನ್ನು ನೋಡೋಣ.

ದೈಹಿಕವಾಗಿ

ನೃತ್ಯದ ಅಭ್ಯಾಸ ಪ್ರಾರಂಭವಾಗುವುದೇ ಅಡವುಗಳು, ಸರಳಯೋಗಾಭ್ಯಾಸದ ಮೂಲಕವಾಗಿ. ಇದು ಒಂದು ರೀತಿಯ ವ್ಯಾಯಾಮವೂ ಹೌದು. ಶಾಸ್ತ್ರೀಯತೆಯ ಅಂಶಗಳನ್ನೊಳಗೊಂಡ ಕ್ರೀಡೆಯೂ ಹೌದು. ದೇಹದ ಎಲ್ಲಾ ಅಂಗಗಳನ್ನು ಸಕ್ರಿಯಗೊಳಿಸಿ ಚುರುಕುಗೊಳಿಸಬಲ್ಲ ನೃತ್ಯದ ಹೆಜ್ಜೆಗಳ (ಅಡವುಗಳು) ಅಭ್ಯಾಸದಿಂದ ಉಸಿರಾಟದ ನಿಯಂತ್ರಣದಿಂದ ತೊಡಗಿ ಶರೀರದ ದೃಢತೆ, ನಿಲುವು, ಶ್ರಮವಿಲ್ಲದಿರುವಿಕೆ ಅಲ್ಲದೆ ಕೆಲವು ದೈಹಿಕ ನ್ಯೂನತೆಗಳನ್ನು ಕೂಡಾ ಸರಿಪಡಿಸಲು ಸಾಧ್ಯವಾಗಿ ದೇಹಕ್ಕೆ ಒಂದು ಆಕರ್ಷಕ ರೂಪ ಬರುವುದು. ಈ ಅಭ್ಯಾಸದ ನಂತರ ಬರುವ ನೃತ್ಯಾಭ್ಯಾಸದಲ್ಲೂ ಸತತವಾಗಿ ದೈಹಿಕ ಚಟುವಟಿಕೆ ಇರುವುದರಿಂದ ಮನೋರಂಜನೆಯೊಂದಿಗೆ ಕಲಿಕೆಯೂ ಆಗುವುದಲ್ಲದೆ ದೈಹಿಕ ಬೆಳವಣಿಗೆ ಅತ್ಯಂತ ಆಕರ್ಷಕವಾಗಿ ಆಗಲು ನೃತ್ಯ ಅತ್ಯಂತ ಸಹಕಾರಿಯಾಗಿದೆ.

ಬೌದ್ಧಿಕವಾಗಿ:

ನೃತ್ಯಾಭ್ಯಾಸವನ್ನು ಮುಂದುವರಿಸುತ್ತಾ ಹೋದಂತೆ ಒಂದು ಸಣ್ಣ ನೃತ್ಯವನ್ನು ಮಾಡಬೇಕಾದರೂ ಮನಸ್ಸು ಹಾಗೂ ಅಂಗಾಂಗಗಳ ಚಲನೆ ಏಕಮುಖವಾಗಿರಬೇಕಾಗುತ್ತದೆ. ಇಲ್ಲಿ ಗ್ರಹಿಕೆ ಇಲ್ಲದೆ ಅಭಿವ್ಯಕ್ತಿ ಸಾಧ್ಯವೇ ಇಲ್ಲ. ಕಲಿಕೆಯ ಎಲ್ಲಾ ಅಂಶಗಳೂ ಗ್ರಹಿಕೆಯಾಗಬೇಕು. ಏಕಾಗ್ರತೆ ಇರಲೇಬೇಕು. ಎಲ್ಲಿ ಏಕಾಗ್ರತೆ ಸಹಿತವಾದ ಕಲಿಕೆಯಾಗುತ್ತದೆಯೋ ಅಲ್ಲಿ ಬೌದ್ಧಿಕವಾಗಿ ಬೆಳೆದಂತೆಯೇ ಸರಿ.

ನಾಟ್ಯವೇದವನ್ನು ಸೃಷ್ಠಿಸಿದ ಬ್ರಹ್ಮ ಇದರ ಪ್ರದರ್ಶನವನ್ನು ಮಾಡುವಂತೆ ದೇವತೆಗಳಿಗೆ ಹೇಳುತ್ತಾನೆ. ಆ ಸಂದರ್ಭದಲ್ಲೂ ಇಂದ್ರ ಹೇಳುವ ಮಾತು ನೆನಪಿನಲ್ಲಿಟ್ಟುಕೊಳ್ಳುವುದರಲ್ಲಾಗಲೀ, ಅಭಿನಯಿಸುವುದರಲ್ಲಾಗಲೀ ದೇವತೆಗಳಿಗೆ ಸಾಮರ್ಥ್ಯವಿಲ್ಲ. ವೇದರಹಸ್ಯಜ್ಞರೂ, ನಿಯಮ ಪರಿಪಾಲನಾ ಸಾಮರ್ಥರೂ ಆದ ಋಷಿಗಳು ನಾಟ್ಯವೇದವನ್ನು ಗ್ರಹಿಸುವುದರಲ್ಲಿ, ನೆನಪಿನಲ್ಲಿಟ್ಟುಕೊಳ್ಳುವುದರಲ್ಲಿ ಅಭಿನಯಿಸುವುದರಲ್ಲಿ ಸಮರ್ಥರು ಎಂಬುದಾಗಿ ಅಂದರೆ ನೃತ್ಯದ ಪ್ರದರ್ಶನಕ್ಕೆ ಪರಿಶ್ರಮ, ಸಾಧನೆ, ಗ್ರಹಿಕೆ ಸಹಿತವಾದ ಅಭ್ಯಾಸದಿಂದ ಮಾತ್ರ ಸಾಧ್ಯವೆಂದಾಯಿತು. ಈ ರೀತಿಯಲ್ಲಿ ಬೌದ್ಧಿಕ ಸಾಮರ್ಥ್ಯವನ್ನು ಬೆಳೆಸಬಲ್ಲ ಈ ನೃತ್ಯದಿಂದ ಸಾಮಾನ್ಯ ಶಿಕ್ಷಣದ ಇತರ ಕಲಿಕೆಯೂ ಸುಲಭವಾಗಲು ಸಾಧ್ಯವೆಂಬುದರಲ್ಲಿ ಎರಡು ಮಾತಿಲ್ಲ.

ನೈತಿಕವಾಗಿ:

ಜೀವನ ಮೌಲ್ಯಗಳಲ್ಲಿ ಅತ್ಯಂತ ಪ್ರಮುಖವಾದುದು ನೈತಿಕತೆ. ಎಲ್ಲಿ ನೈತಿಕತೆಯ ಅಧಃಪತನವಾಗುತ್ತದೆಯೋ ಅಲ್ಲಿ ಮತ್ತೆ ಪಶುತ್ವ ಮೇಲೆ ಬರುತ್ತದೆ. ಇಂತಹ ನೈತಿಕತೆಯನ್ನು ಬೆಳೆಸುವಲ್ಲಿ ನೃತ್ಯಕಲೆಯ ಪಾತ್ರ ಬಹಳ ಪ್ರಮುಖವಾಗಿದೆ. “ವಿದ್ಯಾದದಾತಿ ವಿನಯ”. ಎಂತಹ ವಿದ್ಯಾವಂತನಾದರೂ ವಿನಯವೊಂದಿಲ್ಲದಿದ್ದರೆ ಆತ ಎಲ್ಲೂ ಶೋಭಿಸಲಾರ, ಬೆಳೆಯಲಾರರ, ನೃತ್ಯಾಭ್ಯಾಸದ ಪ್ರಾರಂಭದಲ್ಲೇ ಇದು ಕಡ್ಡಾಯ. ಭೂಮಿತಾಯಿಗೆ ನಮಸ್ಕರಿಸಿ, ದೇವತೆಗಳಿಗೆ ವಂದಿಸಿ, ಗುರುಹಿರಿಯರನ್ನು ಸ್ಮರಿಸಿ ನಮಸ್ಕಾರ ಮಾಡುವುದೇ ನೃತ್ಯದ ಮೊದಲ ಪಾಠ. ನಮ್ಮ ಸಂಪ್ರದಾಯಿಕ ಸಂಸ್ಕೃತಿಯ ಪ್ರತೀಕವಾದ ಪ್ರಥಮ ಹೆಜ್ಜೆ.

ಇದೇ ರೀತಿ ಮುಂದಿನ ಕಲಿಕೆಯ ಎಲ್ಲಾ ಹಂತಗಳಲ್ಲೂ ದೇವರಲ್ಲಿ ಭಕ್ತಿ, ಗುರುಹಿರಿಯರಲ್ಲಿ ಗೌರವ, ವಿಧೇಯತೆ, ವಿನಯ ಮುಂತಾದ ಮೌಲ್ಯಗಳು ಬೆಳೆದು ಬರುತ್ತವೆ. ಜೊತೆಗೆ ನಮ್ಮ ಧರ್ಮ, ಪುರಾಣ, ಸಂಸ್ಕೃತಿಗಳ ಅರಿವನ್ನುಂಟುಮಾಡಿ ಆಧ್ಯಾತ್ಮಿಕ ವಿಚಾರಗಳ ಜ್ಞಾನವನ್ನು ನೀಡುತ್ತದೆ. ಒಬ್ಬ ಸುಸಂಸ್ಕೃತ ವ್ಯಕ್ತಿಯಾಗಿ ರೂಪುಗೊಳ್ಳಲು ಬೇಕಾದ ಉನ್ನತ ಮೌಲ್ಯಗಳನ್ನು ನೃತ್ಯ ಶಿಕ್ಷಣದಿಂದ ಪಡೆಯಲು ಖಂಡಿತಾ ಸಾಧ್ಯವಾಗುತ್ತದೆ.

ಈ ರೀತಿಯಲ್ಲಿ ಮುಖ್ಯವಾಗಿ ದೈಹಿಕವಾಗಿ, ಬೌದ್ಧಿಕವಾಗಿ ಹಾಗೂ ನೈತಿಕವಾಗಿ ಬೆಳೆಯಲು ನೃತ್ಯದಲ್ಲಿ ವಿಫುಲವಾದ ಅವಕಾಶಗಳಿವೆ. ಸಾಮಾನ್ಯ ಶಿಕ್ಷಣದ ಮುಖ್ಯ ಉದ್ದೇಶ ಕೂಡಾ ಇದೇ ಆಗಿರುವುದರಿಂದ ಶಿಕ್ಷಣದಲ್ಲಿ ನೃತ್ಯ ಕಲೆ ಸೇರಿದಾಗ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವಾಗಬಲ್ಲದು.

1986ರ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ರಚಿಸಲಾದ ಪಠ್ಯವಸ್ತುವಿನಲ್ಲಿ “ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಸಮೃದ್ಧಗೊಳಿಸಲು, ಸುರಕ್ಷಿತವಾಗಿಡಲು, ಲಲಿತಕಲೆಗಳ ಶಿಕ್ಷಣಕ್ಕೆ ವಿಶಿಷ್ಟವಾದ ಸ್ಥಾನವನ್ನು ನೀಡಬೇಕು ಎಂಬುದಾಗಿ ಅಭಿಪ್ರಾಯಪಟ್ಟು

1. ವಿದ್ಯಾರ್ಥಿ/ನಿಯ ನಡತೆಯನ್ನು ರೂಪಿಸುವುದಕ್ಕಾಗಿ

2. ಸೌಂದರ್ಯರಾಧನೆಯನ್ನು ಪ್ರಚೋದಿಸಲು

3. ಶಿಸ್ತಿನ ಪಾಲನೆಯನ್ನು ಮೈಗೂಡಿಸಲು

ಕಲಾಶಿಕ್ಷಣವನ್ನು ಶಿಕ್ಷಣದ ಪಠ್ಯವಿಷಯದಲ್ಲಿ ಒಂದು ಪ್ರಧಾನವಾದ ಅಂಶವಾಗಿ ಪರಿವರ್ತಿಸಬೇಕು. ಜೀವನವನ್ನು ಆನಂದಗೊಳಿಸುವ ರಾಷ್ಟ್ರೀಯ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಭಾವೈಕ್ಯತೆಯನ್ನು ಪ್ರಚೋದಿಸುವ ಕಲೆಯ ಶಿಕ್ಷಣವಿಲ್ಲದೆ ಸಾಮಾನ್ಯ ಶಿಕ್ಷಣವು ಅಪೂರ್ಣವೆನಿಸುತ್ತದೆ” ಎಂದಿದೆ. ಅಲ್ಲದೆ ಪ್ರಾಥಮಿಕ ಒಂದನೇ ತರಗತಿಯಿಂದಲೇ ನೃತ್ಯಕಲೆಯ ಶಿಕ್ಷಣ ನೀಡಲು ಪಠ್ಯವಸ್ತುವಿನಲ್ಲಿ ವಿಷಯವನ್ನು ನಿಗದಿಪಡಿಸಿತ್ತು. ಆದರೆ ನೃತ್ಯ ಕಲೆಯ ಪರಿಣಾಮಕಾರಿಯಾದ ಬೊಧನೆಗೆ ಅವಕಾಶ ಲಭ್ಯವಾಗಲಿಲ್ಲ. ನೃತ್ಯ ಶಿಕ್ಷಕರ ನೇಮಕ ಶಾಲೆಗಳಿಗೆ ಆಗಲಿಲ್ಲ. ಒಟ್ಟಿನಲ್ಲಿ ಇಚ್ಚಿತ ಮೌಲ್ಯವನ್ನು ಸಾಧಿಸಲು ವಿಫಲವಾಯಿತು ಎನ್ನಬಹುದು.

ಇದರ ಪರಿಣಾಮವಾಗಿ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಇದೀಗ ಸಾಂಸ್ಕೃತಿಕ ಅವನತಿಯನ್ನು ಕಾಣಬೇಕಾಗಿದೆ. ಉದಾಹರಣೆಗಾಗಿ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭ ಮಕ್ಕಳ ಹಾಗೂ ಶಿಕ್ಷಕರ ಪ್ರತಿಭೆಯ ಪ್ರದರ್ಶನಕ್ಕೆ ಒಂದು ಉತ್ತಮ ವೇದಿಕೆ. ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೂ ವಿವಿಧ ಕಲಾಪ್ರಕಾರಗಳ ಪ್ರದರ್ಶನ.

ಈ ವೇದಿಕೆಯಲ್ಲಿ ಹೆಚ್ಚಿನ ಅವಕಾಶವನ್ನು ಪಡೆಯುವುದೇ ನೃತ್ಯ ಪ್ರದರ್ಶನ. ಆದರೆ ಈ ಪ್ರದರ್ಶನಗಳು ಇತ್ತೀಚೆಗೆ ತನ್ನ ಮೂಲ ಸ್ವರೂಪವನ್ನೇ ಮರೆತಂತೆ ಕಾಣುತ್ತಿದೆ. ಮುಖ್ಯವಾಗಿ ಹೆಚ್ಚಿನ ನೃತ್ಯಗಳನ್ನು ಕ್ಯಾಸೆಟ್ ಹಾಡುಗಳಿಗೆ ಸಂಯೋಜಿಸಲಾಗುತ್ತಿದೆ. ನಮ್ಮ ಸಂಸ್ಕೃತಿಗೆ ಒಪ್ಪದ ಉಡುಗೆ ತೊಟ್ಟು ವಿದೇಶಿ ಕುಣಿತದ ಅನುಕರಣಿಯೇ ಧಾರಾಳವಾಗಿ ಪ್ರದರ್ಶನಗೊಳ್ಳುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ ಸಂಸ್ಕೃತಿ ರಹಿತವಾದ ನೈತಿಕ ಮೌಲ್ಯವನ್ನೇ ಮೀರಿ ನಡೆಯುತ್ತಿದೆ ಎನ್ನಬೇಕು.

ಭಾವನೆಗಳು ಮುಗ್ಧವಾಗಿ ಅರಳಬೇಕಾದಲ್ಲಿ ಕೆರಳುವುದೇ ಅಧಿಕವಾಗುತ್ತದೆ. ಸಂಸ್ಕೃತಿಯನ್ನು ಉಳಿಸಬೇಕಾದ ಬೆಳೆಸಬೇಕಾದ ಶಿಕ್ಷಣ ಸಂಸ್ಥೆಗಳಲ್ಲಿ ಇದರ ಅರಿವೇ ಇಲ್ಲದ ಶಿಕ್ಷಕರಿಂದ ಸಂಸ್ಕೃತಿಯ ವಿಕೃತಿ ಸ್ವರೂಪವನ್ನು ಕಾಣುತ್ತಿದ್ದೇವೆ. ನೃತ್ಯಕಲೆಯ ಉನ್ನತ ಮೌಲ್ಯ, ಗೌರವಗಳನ್ನು ಉಳಿಸದೇ, ಬೆಳೆಸದೇ ಹೋದರೂ ಚಿಂತಿಲ್ಲ. ಆ ಕಲೆಯ ಅವನತಿಗೆ ಶಿಕ್ಷಣ ಮತ್ತು ಸಂಸ್ಥೆಗಳು ಕಾರಣವಾಗಬಾರದು. ಎಲ್ಲಾ ಸಂಸ್ಥೆಗಳಿಗೆ ಇದು ಅನ್ವಯವಲ್ಲ.

ಕೆಲವು ಶಿಕ್ಷಣ ಸಂಸ್ಥೆಗಳು ಕಲಾ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟು ಅತ್ಯಂತ ಮೌಲ್ಯಧಾರಿತ ಕಾರ್ಯಕ್ರಮಗಳನ್ನು ನೀಡುತ್ತಿರುವುದನ್ನು ಕೂಡಾ ಪ್ರಶಂಸಿಸಲೇಬೇಕು. ಅದರ ಹೊರತಾಗಿ ಈ ಅರಿವೇ ಇಲ್ಲದವರಿಗಾಗಿ ಸೂಕ್ತವಾದ ಮಾರ್ಗದರ್ಶನ ನೀಡುವ ಅಗತ್ಯವಿದೆ. ಸಮಗ್ರ ಪರಿಹಾರವೆಂದರೆ ನೃತ್ಯ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸುವುದು. ಶಿಕ್ಷಕರಿಗೆ ನೃತ್ಯಕಲೆಯನ್ನು ಸೂಕ್ತವಾದ ತರಬೇತಿಯನ್ನು ನೀಡುವುದು ಇದರಿಂದ

1. ಶಿಕ್ಷಕರಿಗೆ ನೃತ್ಯ ಕಲೆಯ ಬಗ್ಗೆ ಹೆಚ್ಚಿನ ಅರಿವು ಮತ್ತು ಗೌರವವುಂಟಾಗುತ್ತದೆ.

2. ಮಕ್ಕಳಿಗೆ ಸರಳವಾದ ನೃತ್ಯಗಳನ್ನು ಹೇಳಿಕೊಡಲು ಶಿಕ್ಷಕರು ಸಮರ್ಥರಾಗುತ್ತಾರೆ.

3. ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮೌಲ್ಯಧಾರಿತವಾಗಲು ಸಾಧ್ಯವಾಗುತ್ತದೆ.

4. ಶಿಕ್ಷಣದ ಮೂಲ ಉದ್ದೇಶಗಳನ್ನು ಸಾಧಿಸಲು ಅವಕಾಶ ದೊರೆಯುತ್ತದೆ.

5. ಸಂಸ್ಕೃತಿಯ ಅರಿವಿನೊಂದಿಗೆ ಸಹೃದಯವಂತ ವಿದ್ಯಾರ್ಥಿಗಳ ನಿರ್ಮಾಣಕ್ಕೆ ಅವಕಾಶವಾಗುತ್ತದೆ.

ಈ ಮೇಲಿನ ಅಂಶಗಳು ಸಾಮಾನ್ಯ ನೃತ್ಯಕಲಾ ಶಿಕ್ಷಣದಿಂದಲೂ ಪೂರಕವಾಗಿ ದೊರೆತಾಗ ಶಿಕ್ಷಣದ ಮೌಲ್ಯ ವೃದ್ಧಿಸುತ್ತದೆ.

ನಮ್ಮ ದೇಶಕ್ಕೆ ಒಂದು ಶ್ರೇಷ್ಠವಾದ ಇತಿಹಾಸವಿದೆ. ಭವ್ಯ ಸಂಸ್ಕೃತಿ ಇದೆ. ಉತ್ತಮ ನಾಗರೀಕತೆ ಇದೆ. ಇದನ್ನು ತಿಳಿದುಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವದ ವಿಕಸನ ಸಾಧ್ಯ. ಸುಸಂಸ್ಕೃತ ವ್ಯಕ್ತಿಯಾಗಲು ಸಾಧ್ಯ. ಹೀಗಾಗಲು ಕಲಾ ಸಂಪನ್ನವಾದ ಶಿಕ್ಷಣಬೇಕು.

ಭಾರತದೇಶ ವಿಶ್ವಮಾನ್ಯತೆಯನ್ನು ಪಡೆಯುವಲ್ಲಿ ಇಲ್ಲಿಯ ಕಲೆಗಳ ಪ್ರಭಾವ ಬಳಷ್ಟು ಇದೆ ಎಂಬುದನ್ನು ತಿಳಿಯಬೇಕು. ಕಲಾ ಪ್ರಕಾರಗಳು ನಮ್ಮ ದೇಶದ ಅಮೂಲ್ಯ ಸಂಪತ್ತು. ಇದರ ರಕ್ಷಣೆ ಮತ್ತು ಬೆಳವಣಿಗೆ ನಮ್ಮ ಜವಾಬ್ದಾರಿಯಾಗಿದೆ. ಉಳಿಸುವ ಪ್ರಯತ್ನವಂತು ಬಹಳವಾಗಿ ಇದೀಗ ಆಗಲೇಬೇಕಾಗಿದೆ. ಇಲ್ಲವಾದಲ್ಲಿ ಭವಿಷ್ಯದ ದಿನಗಳಲ್ಲಿ ನಮ್ಮ ಮುಂದಿನ ಮಕ್ಕಳು ಕೇವಲ ಯಂತ್ರಮಾನವರಾಗಿ ಮಾತ್ರ ಉಳಿಯಬಲ್ಲರು. ಸಹೃದಯ ಮಾನವರಾಗಿ ಉಳಿಯಲು ಸಾಧ್ಯವೇ ಇಲ್ಲ. ಬುದ್ಧಿವಂತರ ಸಂಖ್ಯೆ ವಿಪರೀತವಾಗಿ ಬೆಳೆದು ಹೃದಯವಂತರ ಸಂಖ್ಯೆ ತೀರಾ ಕಡಿಮೆಯಾಗಬಹುದು ಎಂದೆನಿಸುತ್ತಿದೆ. “ಸಾಕ್ಷರರು ವಿಪರೀತರಾದರೆ ರಾಕ್ಷಸರೇ ಆಗುತ್ತಾರೆ” ಎಂಬ ಭೀತಿಯೂ ಮುಂದೆ ನಮ್ಮನ್ನು ಕಾಡುವ ಸಾಧ್ಯತೆಯೂ ಇದೆ.

ನೃತ್ಯಕಲೆ ನಮ್ಮ ಹೃದಯದ ಭಾಷೆ. ಈ ಕಲೆಯಲ್ಲಿ ಎಲ್ಲಾ ಶಿಕ್ಷಣವೂ ಇದೆ. ಹಾಗಾಗಿ ಶಿಕ್ಷಣದಲ್ಲಿ ನೃತ್ಯಕಲೆ ಇರಲೇಬೇಕು. ಇದರಿಂದ ಹೃದಯವಂತ ಸುಸಂಸ್ಕೃತ ವ್ಯಕ್ತಿಗಳ ನಿರ್ಮಾಣ ಸಾಧ್ಯವಾಗಿ ಮಾನವರಾಗಿ ಈ ಸಮಾಜದಲ್ಲಿ ಬದುಕಬಹುದು.

ವಿದ್ಯೆ ನಮ್ಮನ್ನು ಬಾಹ್ಯವಾಗಿ ರೂಪಿಸಿ ಬದುಕನ್ನು ನೀಡುತ್ತದೆ. ಕಲೆ ನಮ್ಮ ಅಂತಃ ರಂಗವನ್ನು ಪ್ರಚೋದಿಸಿ ಹೃದಯವನ್ನು ಅರಳಿಸುತ್ತದೆ. ಬಾಹ್ಯ ಹಾಗೂ ಅಂತಃ ರಂಗದ ವೃದ್ಧಿಯಿಂದ ಜೀವನ ಸಮೃದ್ಧವಾಗುತ್ತದೆ. ಪ್ರಬುದ್ಧವಾಗುತ್ತದೆ. ಆ ಕಡೆಗೆ ಸಾಗುವ ನಮ್ಮದಾಗಲಿ. ಶಿಕ್ಷಣ ಮತ್ತು ನೃತ್ಯಕಲೆಯಿಂದ ಇದು ಸಾಧ್ಯವಾಗಲಿ.