ವಿಷಯಕ್ಕೆ ಹೋಗು

ದುರ್ಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದುರ್ಗಾದೇವಿ
ಜಗದಂಬೆ
ಶಕ್ತಿದೇವತೆ
ದುರ್ಗಾದೇವಿ
ಇತರ ಹೆಸರುಗಳುದುರ್ಗೆ
ಮಹಿಷಾಸುರಮರ್ಧಿನಿ
ಮಾರಿಕಾಂಬಾ
ಭವಾನಿ
ಆದಿಶಕ್ತಿ
ಚಾಮುಂಡೇಶ್ವರಿ
ಸಂಲಗ್ನತೆಪಾರ್ವತಿ
ನೆಲೆಮಣಿದ್ವಿಪ
ಮಂತ್ರಓಂ ಶ್ರೀ ದುರ್ಗಾದೇವಿಯೇ ನಮಃ
ಸಂಗಾತಿಶಿವ
ವಾಹನಹುಲಿ
ಗ್ರಂಥಗಳುದೇವಿ ಮಹಾತ್ಮೆ
ಜಾನಪದ
ದೇವಿ ಭಗವತಾ ಪುರಾಣ
ಹಬ್ಬಗಳುನವರಾತ್ರಿ, ವಿಜಯದಶಮಿ, ದುರ್ಗಾಪೂಜೆ,


ದುರ್ಗೆ ಅಥವಾ ದುರ್ಗಾ, ದೇವಿಯ ಅತ್ಯಂತ ಪ್ರಸಿದ್ಧ ಅವತಾರ ಮತ್ತು ಹಿಂದೂ ದೇವತಾಸಂಗ್ರಹದಲ್ಲಿ ಶಕ್ತಿ ದೇವತೆಯ ಮುಖ್ಯ ರೂಪಗಳ ಪೈಕಿ ಒಬ್ಬಳು. ದುರ್ಗೆಯ ಪ್ರಾಚೀನ ರೂಪವು ಹಿಮಾಲಯ ಹಾಗು ವಿಂಧ್ಯದ ನಿವಾಸಿಗಳಿಂದ ಆರಾಧಿಸಲ್ಪಟ್ಟ ಒಬ್ಬ ಪರ್ವತ ದೇವಿ, ಅಲೆಮಾರಿ ಅಭೀರ ಕುರುಬನಿಂದ ಆರಾಧಿಸಲ್ಪಟ್ಟ ಒಬ್ಬ ದೇವಿ, ಒಬ್ಬ ಸ್ತ್ರೀಯಾಗಿ ಕಲ್ಪಿಸಲ್ಪಟ್ಟ ಸಸ್ಯ ಆತ್ಮ, ಮತ್ತು ಒಬ್ಬ ಯುದ್ಧ ದೇವತೆಯ ಸಮನ್ವಯದ ಪರಿಣಾಮ. ಅವಳ ಭಕ್ತರು ನಾಗರಿಕತೆಯಲ್ಲಿ ಮುಂದುವರೆದಂತೆ, ಪ್ರಾಚೀನ ಯುದ್ಧ ದೇವತೆಯು ಎಲ್ಲವನ್ನು ಧ್ವಂಸಮಾಡುವ ಕಾಳಿಯ ವ್ಯಕ್ತಿರೂಪವಾಗಿ, ಸಸ್ಯ ಆತ್ಮವು ಆದಿ ಶಕ್ತಿ ಮತ್ತು ಸಂಸಾರದಿಂದ ಮುಕ್ತಿಕೊಡುವ ಸಂರಕ್ಷಕಿಯಾಗಿ ರೂಪಾಂತರಗೊಂಡಳು ಮತ್ತು ಅವಳು ಕ್ರಮೇಣ ಬ್ರಾಹ್ಮಣಿಕ ಪುರಾಣ ಹಾಗು ತತ್ವಶಾಸ್ತ್ರದ ಪಂಕ್ತಿಯಲ್ಲಿ ತರಲಾಯಿತು.ಉತ್ತರ ಭಾರತದಲ್ಲಿ ದುರ್ಗೆ‍ಯನ್ನು ಹೆಚ್ಚಾಗಿ ಪ್ರಾರ್ಥಿಸುವರು.ನವರಾತ್ರಿ ದಿನಗಳಲ್ಲಿ ಈ ದೇವತೆಗೆ ವಿವಿಧ ರೀತಿಯ ಅಲಂಕಾರ ಮಾಡಿ ಪೂಜಿಸುವರು.ಈ ದೇವಿಯು ಧೈರ್ಯ ಹಾಗು ಶೌರ್ಯದ ಸಂಕೇತ."ದುರ್ಗೆ ದೇವತೆ" ಅಥವಾ "ಆದಿ ಪರಶಕ್ತಿ" ಹಿಂದೂ ದೇವಾನು-ದೇವತೆಯರಲ್ಲಿ ಒಬ್ಬರು. ಅವಳು ಯುದ್ಧದ ಅದಿದೇವತೆ, ಪಾರ್ವತಿಯ ಯೋಧ ರೂಪ. ಪುರಾಣದಲ್ಲಿ ದುರ್ಗೆಯನ್ನು ಶಾಂತಿ, ಸಮೃದ್ಧಿ ಮತ್ತು ಧರ್ಮವನ್ನು ಬೆದರಿಸುವ ದುಷ್ಟ ಮತ್ತು ರಾಕ್ಷಸ ಶಕ್ತಿಗಳನ್ನು ಸಂಹರಿಸಲು, ಲೋಕಕಲ್ಯಾಣಕ್ಕಾಗಿ ಅವತಾರವೆತ್ತಳು. ದುರ್ಗಾ ಕೂಡ ರಕ್ಷಣಾತ್ಮಕ ಮಾತೃ ದೇವತೆಯ ಉಗ್ರ ರೂಪವಾಗಿದ್ದು, ತುಳಿತಕ್ಕೊಳಗಾದವರ ವಿಮೋಚನೆಗಾಗಿ ದುಷ್ಟರ ವಿರುದ್ಧ ತನ್ನ ದೈವಿಕ ಕೋಪವನ್ನು ಬಿಚ್ಚಿಡುತ್ತಾಳೆ ಮತ್ತು ಸೃಷ್ಟಿಯನ್ನು ಸಶಕ್ತಗೊಳಿಸಲು ವಿನಾಶವನ್ನು ಉಂಟುಮಾಡುತ್ತಾಳೆ. ದುರ್ಗೆಯು ಸಿಂಹ ಅಥವಾ ಹುಲಿಯ ಮೇಲೆ ಸವಾರಿ ಮಾಡುವ ದೇವತೆಯಾಗಿ ಚಿತ್ರಿಸಲಾಗಿದ್ದು, ಅನೇಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾಳೆ.[][]

ಅವಳು ಹಿಂದೂ ಧರ್ಮದ ಶಕ್ತಿ ಸಂಪ್ರದಾಯದಲ್ಲಿ ಕೇಂದ್ರ ದೇವತೆಯಾಗಿದ್ದಾಳೆ; ಅಲ್ಲಿ ಅವಳು ಬ್ರಾಹ್ಮಣ ಎಂಬ ಅಂತಿಮ ವಾಸ್ತವತೆಯ ಪರಿಕಲ್ಪನೆಯೊಂದಿಗೆ ಸಮನಾಗಿರುತ್ತಾಳೆ. ದೇವಿ ಮಹಾತ್ಮ್ಯ, ಶಕ್ತಿ ಸಿದ್ಧಾಂತದ ಪ್ರಮುಖ ಪಠ್ಯಗಳಲ್ಲಿ ಒಂದು.

ತಾನೆ ಬ್ರಹ್ಮಾಂಡದ ಸೃಷ್ಟಿಕರ್ತೆ ಎಂದು ಘೋಷಿಸಿದ ದುರ್ಗೆಯನ್ನು, ಚಂಡಿ ಪಥ ಎಂದು ಕರೆಯುತ್ತಾರೆ. ಭಾರತದ ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ಅಸ್ಸಾಂ ಮತ್ತು ಬಿಹಾರ,ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಆಕೆಗೆ ಗಮನಾರ್ಹವಾದ ಅನುಸರಣೆಯಿದೆ. ವಸಂತ ಮತ್ತು ಶರತ್ಕಾಲದ ಸುಗ್ಗಿಯ ನಂತರ ದುರ್ಗಾವನ್ನು ಪೂಜಿಸಲಾಗುತ್ತದೆ, ವಿಶೇಷವಾಗಿ ನವರಾತ್ರಿ ಹಬ್ಬದ ಸಮಯದಲ್ಲಿ.[]

ಶ್ರೀ ದುರ್ಗಾ ಪರಮೇಶ್ವರೀ

[ಬದಲಾಯಿಸಿ]

ಪರಬ್ರಹ್ಮರೂಪಿಣಿಯಾದ ಆದಿಪರಾಶಕ್ತಿ ಶಾಕ್ತೇಯರ ಪರಬ್ರಹ್ಮ. ಶಕ್ತಿದೇವತೆ. ಇವಳಿಲ್ಲದೆ ಎಲ್ಲವೂ ಚೈತನ್ಯಶೂನ್ಯ. ಜಡವಾಗಿ ಪರಿಣಮಿಸುತ್ತದೆ. ಶ್ರೀಮದ್ದೇವೀ ಭಾಗವತ, ದೇವೀ ಪುರಾಣ, ದೇವಿಮಹಾತ್ಮೆ, ದೇವೀ ಉಪನಿಷತ್ತು, ವೇದ-ಪುರಾಣೇತಿಹಾಸ, ಶೃತಿ-ಸ್ಮೃತಿಗಳು ದೇವಿಯ ಬಗೆಗಿನ, ಅವಳ ಶಕ್ತಿಯ ಬಗೆಗಿನ ವರ್ಣನೆಯನ್ನು ಮಾಡುತ್ತದೆ. ಇವಳೇ ಅಂತಿಮ ಅದ್ವೈತ ಪರಬ್ರಹ್ಮ. ಇವಳಿಂದಲೇ ಹರಿ-ಹರ-ಬ್ರಹ್ಮರು ಉದಯ. ಇವಳಿಂದಲೇ ಸೃಷ್ಠಿಯ ಅಂತ್ಯ. ಸೃಷ್ಠಿಯ ಆದಿಯಲ್ಲಿ ಉದಿಸಿದ ಇವಳನ್ನು ಆದಿಶಕ್ತಿ ಎಂದರೆ, ಪರಬ್ರಹ್ಮರೂಪಿಯಾಗಿ ಎಲ್ಲರಲ್ಲೂ ಚೈತನ್ಯಕಾರಕಳಾದ ಕಾರಣ ಪರಾಶಕ್ತಿ.

ಶಕ್ತಿಯಿಲ್ಲದೇ ಎಲ್ಲವೂ ಜಡ, ಪ್ರತಿಯೊಂದು ಕಾರ್ಯ‍ದ ಕಾರಣವೂ ಶಕ್ತಿಯೇ. ಬ್ರಹ್ಮನ ಸೃಷ್ಠಿ,ಹರಿಯ ಪಾಲನೆ, ಹರನ ಸಂಹಾರ ಈ ಎಲ್ಲಾವು ಶಕ್ತಿಯಿಂದಲೇ ನಡೆಯುವುದು ಮತ್ತು ಇವಳನ್ನೇ ದುರ್ಗಾ ಎಂದು ಕರೆಯುವುದು. ಇವಳನ್ನೇ ಪರಮೇಶ್ವರೀ, ಪರಶಿವೆ, ಮಹಾಮಾಯಾ, ಆದಿಮಾಯೇ, ಯೋಗಮಾಯೇ, ಯೋಗನಿದ್ರಾ ಎಂದು ಕರೆಯುವುದು. ಉದಾ: ಒಬ್ಬ ವ್ಯಕ್ತಿಗೆ ಏನನ್ನಾದರೂ ಮಾಡಲು ಅಸಾದ್ಯವಾದಾಗ ಅವನನ್ನು ಶಕ್ತಿಹೀನನೆಂದು ಹೇಳುತ್ತಾರೆ, ಅದರ ಬದಲಿಗೆ ಬ್ರಹ್ಮಹೀನ, ವಿಷ್ಣುಹೀನ ಅಥವಾ ರುದ್ರಹೀನನೆಂದು ಹೇಳುವುದಿಲ್ಲ. ಇದೇ ಮೂಲಶಕ್ತಿಯ ಸಂಕ್ಷೇಪ ನಿರೂಪಣೆ.

ಇನ್ನು ಶಕ್ತಿದೇವತೆ ತಾಮಸ-ರಾಜಸ-ಸಾತ್ತ್ವಿಕ ಎಂಬ ಮೂರು ರೂಪದಲ್ಲಿ ಕಂಗೊಳಿಸುತ್ತಾಳೆ. ಹಿಂದೆ ಸೃಷ್ಠಿಯ ಪ್ರಾರಂಭದಲ್ಲಿ ಪರಾಶಕ್ತಿ ಹರಿ-ಹರ-ಬ್ರಹ್ಮರನ್ನು ಸೃಷ್ಠಿಸಿ ಸೃಷ್ಠಿ-ಸ್ಥಿತಿ-ಲಯ ಕಾರ್ಯದಲ್ಲಿ  ನೇಮಿಸುತ್ತಾಳೆ. ಮುಂದೇ ಮಹಾವಿಷ್ಣು ಬೃಗುನಂದನೇ ಮಹಾಲಕ್ಷ್ಮೀಯನ್ನು, ಬ್ರಹ್ಮನು ಸುತೆ ಸರಸ್ವತಿಯನ್ನು ವಿವಾಹವಾಗುತ್ತಾನೆ. ಶಿವನು ವಿರಾಗಿಯಾಗಿ ಉಳಿದು ಬಿಡುತ್ತಾನೆ. ಇದನ್ನು ಕಂಡು ಹರಿ-ಬ್ರಹ್ಮರು ಪರಾಶಕ್ತಿಯನ್ನು ಕುರಿತು ಪ್ರಾರ್ಥಿಸಿದಾಗ ಮುಂದೆ ನಾನೇ ಜನಿಸಿ ಶಿವನನ್ನು ವರಿಸುವೆನೆಂದು ವರವಿಯುತ್ತಾಳೆ. ಮಾತ್ರವಲ್ಲದೆ ಶ್ರೀಹರಿಯಲ್ಲಿ ಮುಂದೆ ನಾನು ಜನಿಸಿದಾಗ ನಾನು ಅಗ್ನಿಯಲ್ಲಿ ಆಹುತಿಯಾಗುವ ಸಂದರ್ಭ ಬರುತ್ತದೆ. ಆ ಸಮಯದಲ್ಲಿ ನೀನು ಶಿವನ ಶಿರದಮೇಲಿನ ನನ್ನ ಶರೀರವನ್ನು ಈ ಸುದರ್ಶನದಿಂದ ತುಂಡರಿಸಿಬಿಡು ಎಂದು ಆಜ್ಞೆ ಮಾಡುತ್ತಾಳೆ. ಆದಿಮಾಯೇಯ ಜನ್ಮವನ್ನು ಅರಿತ ಬ್ರಹ್ಮದೇವರು ದಕ್ಷಾಪ್ರಜಾಪತಿಗೆ ಪರಾಶಕ್ತಿಯನ್ನು ಕುರಿತು ತಪಸ್ಸು ಮಾಡಿ ಮಗಳಾಗಿ ಪಡೆಯುವಂತೆ ಆಜ್ಞೆ ಮಾಡುತ್ತಾರೆ. ಇದರಿಂದ ದಕ್ಷಪ್ರಜಾಪತಿ ಪರಾಶಕ್ತಿಯನ್ನು ತಪಸ್ಸಿನಿಂದ ಒಲಿಸಿಕೊಂಡು ಪರಾಶಕ್ತಿಯನ್ನು ತನ್ನ ಸುತೆ ದಾಕ್ಷಾಯಿಣಿಯ ರೂಪದಲ್ಲಿ ಪಡೆಯುತ್ತಾನೆ. ಆದರೇ ದೇವಿಯ ವರದಂತೆ ಮುಂದೆ ಎಂದಾದರೂ ನನ್ನ (ದೇವಿಯ) ಅನಾದಾರವಾದಾಗ ನಿನ್ನನ್ನು ತ್ಯಜಿಸಿ ನಭದಲ್ಲಿ ಅದೃಶ್ಯಳಾಗುವೆ ಎಂಬ ವಾಣಿಯನ್ನು ನೀಡಿದ್ದಳಂತೆ.

ದಾಕ್ಷಾಯಿಣಿ ಜನ್ಮವಾಗಿರುವುದೇ ಶಿವನಿಗಾಗಿ. ಆದರೇ ದಕ್ಷನು ಕಾಲಕಳೆದಂತೆ ಶಿವ ದ್ವೇಷಿಯಾದ. ಇದಕ್ಕೂ ಕಾರಣವಿದೆ. ಹಿಂದೆ ದೂರ್ವಾಸರು ಶಿವಪೂಜೆಯನ್ನು ಮಾಡಿ ಶಿವನಿಗೆ ಆಭೂಷಿತವಾದ ಕೊರಳ ಹಾರವನ್ನು ಮಾರ್ಗಮದ್ಯದಲ್ಲಿ ಹಾದುಹೋಗುವಾಗ ದಕ್ಷನನ್ನು ಕಂಡು ಪ್ರೀತಿಯಿಂದ ಈ ಶಿವ ಪ್ರಸಾದವನ್ನು ಸ್ವೀಕರಿಸು ಎಂದು ಅವನಿಗೆ ನೀಡಿದರು. ಅದನ್ನು ದಕ್ಷನು ಮರೆತು ತನ್ನ ವಿಲಾಸಮಂಚದಲ್ಲಿ ಇಟ್ಟುಬಿಟ್ಟನಂತೆ. ಇದರ ದೋಷದಿಂದ ದಕ್ಷನಲ್ಲಿ ಮನೋವಿಕಾರ ಉಂಟಾಗಿ ಶಿವದ್ವೇಷಿಯಾದ. ಇದರ ನಂತರ ತ್ರಿಮೂರ್ತಿಗಳ ಸಭೆಯಲ್ಲಿ ಶಿವನು ತನಗೆ ಎದ್ದು ನಿಂತು ಗೌರವ ನೀಡಲಿಲ್ಲ ಎಂಬ ಅಹಂಕಾರದಿಂದ ದ್ವೇಷವನ್ನು ಇನ್ನೂ ಹೆಚ್ಚಾಗಿಸಿಕೊಂಡ. ಇದನ್ನೇ ಅವಿದ್ಯೆ ಎನ್ನುವುದು.

ಪರಶಿವೆಯ ಸಂಕಲ್ಪದಂತೆ ಮುಂದೆ ಶಿವನನ್ನು ದಾಕ್ಷಾಯಿಣಿ ವರಿಸಿಯೇ ಬಿಡುತ್ತಾಳೆ. ಇದರಿಂದ ದಕ್ಷನು ಕುಪಿತಗೊಳ್ಳುತ್ತಾನೆ. ಹಿಂದೆ ಪರಾಶಕ್ತಿಯಾಡಿದ ಮಾತುಗಳೆಲ್ಲವನ್ನು ಅಹಂಕಾರಯುತನಾಗಿ ತಳ್ಳಿಹಾಕಿದ ದಕ್ಷ ತನ್ನ ಅಂತ್ಯವನ್ನು ತಾನೇ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಂಡ. ಶಿವನಿಲ್ಲ ಪೂಜೆಯನ್ನು ಆಯೋಜಿಸಿ ಶಿವನಿಂದನೆ ಮಾಡುವುದರ ಜೊತೆಗೆ ಪರಾಶಕ್ತಿಯ ನಿಂದನೆ ಮಾಡಿ ತನ್ನ ಮಾತನ್ನು ಮುರಿದು ಶಿವೆ ನಭದಲ್ಲಿ ಲೀನವಾಗಿ ದಾಕ್ಷಾಯಿಣಿಯ ಛಾಯೆ ಅಗ್ನಿಯಲ್ಲಿ ಬೆರೆತು ಮಹಾಸತೀಯಾಗಿ ಮೆರೆಯುತ್ತಾಳೆ. ಶಿವ ಸುತ ವೀರಭದ್ರ ಮದೋನ್ಮತ್ತನಾದ ದಕ್ಷನ ರುಂಡವನ್ನು ಕಡಿದು ಅಗ್ನಿಯಲ್ಲಿ ಸುಟ್ಟು ಅಹಂಕಾರವನ್ನು ಅಳಿಸಿ ಬಿಡುತ್ತಾನೆ. ಶಿವನು ದಾಕ್ಷಾಯಿಣಿಯ ದೇಹವನ್ನು ಶಿರದ ಮೇಲೆ ಹೊತ್ತು ತಾಂಡವ ಆಡುವ ಸಂದರ್ಭದಲ್ಲಿ ದೇವಿ ಮೊದಲೇ ತಿಳಿಸಿದಂತೆ ಶ್ರೀಹರಿ ದಾಕ್ಷಾಯಣಿಯ ದೇಹವನ್ನು ಸುದರ್ಶನದಿಂದ ತುಂಡರಿಸಿ ಬಿಡುತ್ತಾನೆ. ಪರಾಶಕ್ತಿಯ ದೇಹದ ಅಂಗಾಂಗಳು ಬಿದ್ದ ಸ್ಥಳಗಳೇ ಮುಂದೆ ಪ್ರಥ್ವಿಯಲ್ಲಿ 108 ಶಕ್ತಿಪೀಠ ಎಂದು ಪ್ರಸಿದ್ಧಿಯನ್ನು ಪಡೆಯುತ್ತದೆ.

ಮುಂದೇ ಶಿವನು ಸತೀ ವಿಹೀನನಾಗಿ ಕಾಮಾಖ್ಯ ಶಕ್ತಿಪೀಠದಲ್ಲಿ ದೇವಿಯನ್ನು ಕುರಿತು ತಪಸ್ಸು ಮಾಡಿ ಪುನಃ ಪರಾಶಕ್ತಿಯನ್ನು ಪಾರ್ವತೀ ರೂಪದಲ್ಲಿ ಪಡೆಯುತ್ತಾನೆ. ಪರಾಶಕ್ತಿ ದುರ್ಗೆಯೇ ಪುನಃ ಪರ್ವತರಾಜ ಹಿಮವಂತ ಮತ್ತು ಮೇನೆಯ ಗರ್ಭದಲ್ಲಿ ಅಂಶ (ಗಂಗಾ) ಮತ್ತು ಪೂರ್ಣಾಂಶಳಾಗಿ (ಪಾರ್ವತಿ) ಅವತಾರ ಮಾಡುತ್ತಾಳೆ. ಪುನರಪಿ ಪಾರ್ವತೀ ಶಕ್ತಿಗೆ ಶಕ್ತಿದೇವತೆಯಾಗಿ ಜಗತ್ತಿನಲ್ಲಿ ಜಗನ್ಮಾತೆಯಾಗಿ ಕಂಗೊಳಿಸುತ್ತಾಳೆ. ಪರಾಶಕ್ತಿಯ ತಾಮಸ-ರಾಜಸ-ಸಾತ್ತ್ವೀಕ ರೂಪಗಳೇ ಮಹಾಕಾಳಿ-ಮಹಾಲಕ್ಷ್ಮೀ-ಮಹಾಸರಸ್ವತಿ. ಯುದ್ದೋನ್ಮಾಧಿನಿ ಶಿವೆಯಾದ ದುರ್ಗೆ ಶಕ್ತಿದೇವತೆಯಾದರೆ, ಸರ್ವಸಂಪದವನ್ನು ನೀಡಿ ಸುಖ-ಶಾಂತಿಯನ್ನು ನೆಮ್ಮದಿಯನ್ನು ಕರುಣಿಸುವುದು ವಿಷ್ಣುಪ್ರಿಯೆ ಮಹಾಲಕ್ಷ್ಮೀ, ಇನ್ನು ಅವಿದ್ಯೆ ನಾಶಮಾಡಿ ಪರಮ ಜ್ಞಾನ ನೀಡುವವಳು ಆದಿವಿದ್ಯಾ ಸರಸ್ವತೀ.

ಪರಾಶಕ್ತಿ ದೇವಿ ತನ್ನ ಮೊದಲ ಅವತಾರದಲ್ಲಿ ವಿಷ್ಣುವಿನ ಯೋಗಮಾಯೇಯಾಗಿ ಮುಂದೆ ಮಧು-ಕೈಟಭರ ವಧೆ ಮಾಡಿಸುತ್ತಾಳೆ. ಮುಂದೆ ಚಂಡ-ಮುಂಡ, ಮಹಿಷಾಸುರ, ಶುಂಭ-ನಿಶುಂಭ, ಬಿಡಾಲ ಇನ್ನಿತ್ಯಾದಿ ರಾಕ್ಷಸರನ್ನು ಕೊಂದು ದುರ್ಗತಿನಾಶಿನಿ ದುರ್ಗಾ ಎಂಬ ನಾಮ ವಿಶೇಷಣದಿಂದ ಪರಾಶಕ್ತಿ ಪಾರ್ವತಿ ಪ್ರಸಿದ್ಧಳಾಗುತ್ತಾಳೆ. ಮುಂದೆ ಶ್ರೀಹರಿಯ ಸಹೋದರಿಯಾಗಿ ನಂದನ ಮನೆಯಲ್ಲಿ ಯೋಗಮಾಯೇಯಾಗಿ ಅವರಾತ ತಾಳುತ್ತಾಳೆ. ದುರ್ಗೆ ತನ್ನ ಸಂಕರ್ಷಣ ಶಕ್ತಿಯಿಂದ ದೇವಕಿಯ ಗರ್ಭವನ್ನು ರೋಹಿಣಿಯಲ್ಲಿ ಸನ್ನಿಹಿತಗೊಳಿಸುತ್ತಾಳೆ. ನಂತರ ರಕ್ತದಂತ ಎಂಬ ಅವತಾರ ತಾಳಿ ರಕ್ತದಂತಾಸುರ ವಧೆ ಮಾಡುತ್ತಾಳೆ. ಮುಂದೇ ಕ್ಷೇಮವರ್ಧಿನಿ ಎಂಬ ಹೆಸರಿನಿಂದ ಬರಗಾಲವನ್ನು ನೀಗಿ ಅನ್ನಪೂರ್ಣಾಂಬಿಕೆಯಾಗುತ್ತಾಳೆ. ನಂತರ ದುರ್ಗಾಸುರನೆಂಬ ದುರುಳನ್ನು ಸಂಹರಿಸಿ ಪುನಃ ದುರ್ಗಾಪರಮೇಶ್ವರೀ ಎಂಬ ದಿವ್ಯನಾಮವನ್ನು ಧಾರಣೆ ಮಾಡುತ್ತಾಳೆ. ಬರಗಾಲ ಸಂದರ್ಭದಲ್ಲಿ ಇವಳೇ ಶಾಕಾಂಭರಿ ಅಥವಾ ಬನಶಂಕರಿ (ವನದುರ್ಗಾ) ಎಂಬ ವಿಶೇಷಣದಿಂದ ಪ್ರಸಿದ್ಧಳಾಗುತ್ತಾಳೆ. ಅರುಣಾಸುರನೆಂಬ ದಾನವನನ್ನು ಭ್ರಾಮರಿ ರೂಪದಿಂದ ಕೊಂದು ಭ್ರಮರಾಂಬಿಕೆಯೆಂಬ ನಾಮದಿಂದ ಶ್ರೀಶೈಲದಲ್ಲಿ ನೆಲೆಸುತ್ತಾಳೆ. ಇನ್ನು ದುರ್ಗತಿನಾಶಿನಿ ದುರ್ಗೆಯ ಬಗ್ಗೆ ವಿರ್ಣಿಸುತ್ತಾ ಹೋದರೆ ಯುಗಗಳೇ ಸಾಲದು.

ಇಂಥಹ ತ್ರಿಗುಣಾತ್ಮಿಕೆಯಾದ ಪರಾಶಕ್ತಿ ಪಾರ್ವತಿಯನ್ನು ದುರ್ಗೆಯೆಂದು, ರಾಜರಾಜೇಶ್ವರೀ, ಭುವನೇಶ್ವರೀ ಎಂದು ಕೊಂಡಾಡಿ ಭಜಿಸಿ, ಶಕ್ತಿದೇವತೆಯಾಗಿ ನಾಡಿನೆಲ್ಲೆಡೆ ಆರಾಧಿಸುವ ಸಂಪ್ರದಾಯ ಬೆಳೆದು ಬಂದಿತು. ದುರ್ಗೆ ಶಾಕ್ತರಿಗೂ, ಶೈವರಿಗೂ, ವೈಷ್ಠವರಿಗೂ ಅತ್ಯಂತ ಪ್ರಿಯಳು. ಇವಳೇ ವಿಸ್ತ್ರತವಾಗಿ ಶಕ್ತಿದುರ್ಗೆ, ಶಿವದುರ್ಗೆ, ವಿಷ್ಣುದುರ್ಗೆ ಎಂಬಿತ್ಯಾದಿ ಮತಭೇದಗಳಿಂದ ಗುರುತಿಸಲ್ಪಟ್ಟು ಜಗತ್ತಿನೆಲ್ಲೆಡೆ ಆರಾಧನೆಗೊಳ್ಳುವ ಮಾತೃರೂಪಿಣಿಯಾಗಿದ್ದಾಳೆ. ನಮ್ಮ ನಾಡ ದೇವತೆ ಚಾಮುಂಡೇಶ್ವರಿಯೂ ಮಹಿಷಮರ್ದಿನಿಯಾದ ದುರ್ಗೆ. ಇವಳು ವಿಶ್ವವಿಖ್ಯಾತಿ. ಇನ್ನು ಕನ್ನಡ ನಾಡಿನ ಅಧಿದೇವತೆ ಭುವನೇಶ್ವರಿಯೂ ಪಾರ್ವತಿಯ ರೂಪಗಳೇ.

ಇನ್ನು ಕೊಲ್ಲೂರು ಮೂಕಾಂಬಿಕಾ, ಕೇರಳ ಚೊಟ್ಟಾನಿಕ್ಕರ ಭಗವತಿ, ಗುಹಾವಾಟಿಯ ಕಾಮಾಖ್ಯ, ಮೈಸೂರು ಚಾಮುಂಡಿ, ಶ್ರೀಶೈಲ ಭ್ರಮರಾಂಬಿಕಾ, ಮಲ್ಲ ನಿವಾಸಿನಿ ಶ್ರೀ ದುರ್ಗಾಪರಮೇಶ್ವರೀ, ಕಟೀಲು ಶ್ರೀ ದುರ್ಗಾಪರಮೇಶ್ವರೀ, ಕಂಚಿಯ ಕಾಮಾಕ್ಷಿ, ಮದುರೆಯ ಮೀನಾಕ್ಷಿ ಇವೆಲ್ಲವೂ ಪರಾಶಕ್ತಿ ದುರ್ಗೆಯ ಶಕ್ತಿಪೀಠದ ಮಹತ್ವ ಹೊಂದಿರುವ ಮಹಾಕ್ಷೇತ್ರಗಳು.

9 ಅವತಾರಗಳು

[ಬದಲಾಯಿಸಿ]

ಉಲ್ಲೇಖನ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]