ವಿಷಯಕ್ಕೆ ಹೋಗು

ಗ್ನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಗ್ನು' ಯೋಜನೆಯ ಅಧಿಕೃತ ಲಾಂಛನ

ಗ್ನು (GNU) ಎಂಬುದು ಸ್ವತಂತ್ರ ತಂತ್ರಾಂಶದ ಪ್ರವರ್ತನೆಯ ಮುಂಚೂಣಿಯಲ್ಲಿರುವ ಸಂಘಟನೆ. ವಸ್ತುತಃ 'ಗ್ನು' ಎನ್ನುವುದು, GNU's Not Unix ಎಂಬುದರ ಆವರ್ತಕ ಸಂಕ್ಷಿಪ್ತ ರೂಪ (Recursive Acronym). ಗಣಕಯಂತ್ರಗಳಿಗೆ, ಪೂರ್ಣ ಪ್ರಮಾಣದ ಯುನಿಕ್ಸ್ ಆಧಾರಿತವಾದ, ಮುಕ್ತ ನಿರ್ವಹಣಾ ಸಾಧನವೊಂದನ್ನು ತಯಾರುಗೊಳಿಸುವ ಮಹತ್ತರ ಉದ್ದೇಶವನ್ನು ಹೊತ್ತು, 1984 ನೆಯ ಇಸ್ವಿಯಲ್ಲಿ ಈ ಸಂಘಟನೆಗೆ ನಾಂದಿಯನ್ನು ಹಾಡಲಾಯಿತು. ಮುಕ್ತ ತಂತ್ರಾಂಶದ ಹರಿಕಾರನೆಂದೇ ಗುರುತಿಸಲಾಗುವ ರಿಚರ್ಡ್ ಸ್ಟಾಲ್ ಮನ್, ಈ ಸಂಘಟನೆಯ ಆದ್ಯ ಪ್ರವರ್ತಕ. ತಂತ್ರಾಂಶವನ್ನು ಸಂಪೂರ್ಣವಾಗಿ ಮುಕ್ತವನ್ನಾಗಿಸುವ ಮಹದುದ್ದೇಶದಿಂದ ಆರಂಭಿಸಲಾದ ಈ ಸಂಘಟನೆಯ ಕಾರ್ಯಗಳೂ, ತತ್ತ್ವಗಳೂ, ಜಾಗತಿಕ ತಂತ್ರಾಂಶ ರಂಗದಲ್ಲಿ ಕ್ರಾಂತಿಯನ್ನೇ ಉಂಟುಮಾಡಿವೆ. ಇಂದು ಬೃಹತ್ತಾಗಿ ಬೆಳೆದಿರುವ ಈ ವಿಶ್ವವ್ಯಾಪೀ ಸಂಘಟನೆಯ ಕಾರ್ಯಫಲವೇ ಗ್ನು/ಲಿನಕ್ಸ್ ಕಾರ್ಯನಿರ್ವಹಣ ಸಾಧನ. ಸಾಮಾನ್ಯವಾಗಿ ಇದನ್ನು ಕೇವಲ 'ಲಿನಕ್ಸ್' ಎಂದೇ ಸಂಬೋಧಿಸುವ ಪ್ರಕ್ರಿಯೆ ಬಳಕೆಯಲ್ಲಿದೆ.

ಗ್ನು ಇತಿಹಾಸ

[ಬದಲಾಯಿಸಿ]

ರಿಚರ್ಡ್ ಸ್ಟಾಲ್ ಮನ್ ೧೯೭೧-೭೩ ನೆಯ ಇಸ್ವಿಯ ಅವಧಿಯಲ್ಲಿ ಅಮೆರಿಕೆಯ ಎಂ.ಐ.ಟಿ ಪ್ರಯೋಗಾಲಯವೊಂದರಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು. ತನ್ನ ಕಾರ್ಯಾವಧಿಯಲ್ಲಿ ಅನೇಕ ತಂತ್ರಾಂಶಕ್ಕೆ ಸಂಬಂಧಪಟ್ಟ ಸಮುದಾಯಗಳ ಭಾಗಿಯಾಗಿದ್ದರು. ಈ ಎಲ್ಲ ಸಮುದಾಯಗಳೂ ಪರಸ್ಪರ ವಿನಿಮಯದಿಂದ, ಹಂಚಿಕೆಯಿಂದ ತಂತ್ರಾಂಶಗಳನ್ನು ಬಳಸಿಕೊಳ್ಳುತಿದ್ದವು. ತಂತ್ರಾಂಶಗಳೂ, ಅವುಗಳ ಹಿಂದಿನ ಬೌದ್ಧಿಕ ಯೋಜನೆಗಳೂ ಅತ್ಯಂತ ಮುಕ್ತವಾಗಿ ವಿನಿಮಯಗೊಳ್ಳುತ್ತಿದ್ದವು.

ಆದರೆ ೧೯೮೧ ರ ವೇಳೆಗೆ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿತ್ತು. ಅಂದಿನ ಪ್ರಖ್ಯಾತ ಗಣಕ ಯಂತ್ರ ತಯಾರಕರೆಲ್ಲ, ಈ ಯಂತ್ರಗಳು ಕಾರ್ಯ ನಿರ್ವಹಿಸಲು ಅಗತ್ಯವಿರುವ ತಂತ್ರಾಂಶಗಳನ್ನೆಲ್ಲ ತಮ್ಮದೇ ಸ್ವಾಮ್ಯದಲ್ಲಿ ಬಿಡುಗಡೆ ಮಾಡತೊಡಗಿದವು. ಈ ತಂತ್ರಾಂಶಗಳನ್ನು ಖರೀದಿಸುವ ಮುನ್ನ, ಪ್ರತಿಯೊಬ್ಬ ಗ್ರಾಹಕನೂ ಅವುಗಳನ್ನು ಗೋಪ್ಯವಾಗಿಡುವ ಒಪ್ಪಂದಗಳಿಗೆ ಸಹಿ ಮಾಡಬೇಕಾದಿದ್ದಿತು. ಹೀಗಾಗಿ ಸಮುದಾಯದ ಸದಸ್ಯರ ನಡುವಿನ ಮುಕ್ತ ವಿನಿಮಯವಂತೂ ಪೂರ್ತಿಯಾಗಿ ಕುಸಿದುಹೋಗತೊಡಗಿತು.

ಅದೇ ಸಮಯದಲ್ಲಿ ಸ್ಟಾಲ್ ಮನ್ ಕಾರ್ಯ ನಿರ್ವಹಿಸುತ್ತಿದ್ದ ಕಡೆ, ಗಣಕ ಯಂತ್ರವೊಂದಕ್ಕೆ ಸಂಯೋಜಿತವಾದ ಮುದ್ರಣ ಯಂತ್ರವೊಂದು ತಂತ್ರಾಂಶದ ಕಾರಣದಿಂದಾಗಿ ಅನೇಕ ನಿರ್ಬಂಧನೆಗಳನ್ನು ಒಡ್ಡುತ್ತಿತ್ತು. ಅವುಗಳನ್ನು ಮೀರಿ ಅದನ್ನು ಉತ್ತಮಪಡಿಸಲು ಸ್ಟಾಲ್ ಮನ್ ಅವರು ಯಂತ್ರದ ಮಾರಾಟಗಾರರಲ್ಲಿ ಪ್ರಸ್ತಾವನೆಯನ್ನಿಟ್ಟರು. ಆದರೆ ತಂತ್ರಾಂಶದ ಆಕರ ಸಂಕೇತವನ್ನು (Source Code) ಸ್ಟಾಲ್ ಮನ್ ಅವರೊಂದಿಗೆ ವಿನಿಮಯಗೊಳಿಸಲು ಸಾರಾಸಗಟಾಗಿ ನಿರಾಕರಿಸಿದರು. ಈ ಘಟನೆಯಿಂದ ಸಂಪೂರ್ಣವಾಗಿ ಬೇಸತ್ತ ಸ್ಟಾಲ್ ಮನ್ ಅವರು, ತಂತ್ರಾಂಶದ ಜಗತ್ತಿನಲ್ಲಿ ಹಿಂದಿದ್ದ ಮುಕ್ತತೆಯನ್ನು ಪುನರಾವರ್ತಿಸಲು ಪಣ ತೊಟ್ಟರು. ತಮ್ಮದೇ ಆದ ತಂತ್ರಾಂಶವನ್ನು ಸಿದ್ಧ ಪಡಿಸಿ, ಅದನ್ನು ಜಾಗತಿಕ ತಂತ್ರಾಂಶ ಸಮುದಾಯಕ್ಕೆ ಮುಕ್ತವಾಗಿ ಬಿಡುಗಡೆ ಮಾಡುವುದೊಂದೇ ಇದಕ್ಕೆ ಸರಿಯಾದ ಮಾರ್ಗವೆಂದು ಕಂಡುಕೊಂಡರು.

1984ನೆಯ ಜನವರಿಯಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟು, ತಮ್ಮದೇ ಆದ ಕಾರ್ಯ ನಿರ್ವಹಣಾ ತಂತ್ರಾಂಶವೊಂದನ್ನು ಸಿದ್ಧ ಪಡಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಜಿಸಿಸಿ ಎಂದೇ ಇಂದು ಪ್ರಖ್ಯಾತವಾಗಿರುವ ಸಂಕಲಕವೊದನ್ನು (Compiler), ಮೊಟ್ಟ ಮೊದಲಿಗೆ ಸಿದ್ಧ ಪಡಿಸಲು ತೊಡಗಿದರು. ತದನಂತರ ಕ್ರಮೇಣವಾಗಿ ಈ ಪ್ರಯತ್ನವು ಸಂಘನೆಯೊಂದರ ರೂಪ ತಾಳಿತು. ಅನೇಕ ಸದಸ್ಯರು ಸ್ವಯಂ ಪ್ರೇರಿತರಾಗಿ ಈ ಪ್ರಯತ್ನಕ್ಕೆ ತಮ್ಮ ದೇಣಿಗೆಯನ್ನು ನೀಡಲು ಪ್ರಾರಂಭಿಸಿದರು. ಕಾರ್ಯು ನಿರ್ವಹಣಾ ತಂತ್ರಾಂಶದ ಭಾಗವಾದ ಅನೇಕ ಉಪ ತಂತ್ರಾಂಶಗಳು ಸಿದ್ಧಗೊಂಡವು. ಕಾರ್ಯು ನಿರ್ವಹಣಾ ತಂತ್ರಾಂಶದ ಪ್ರಮುಖ ಅಂಶವಾದ ಕರ್ನೆಲ್ ಭಾಗವನ್ನು 1991 ರ ಸುಮಾರಿಗೆ ಲೈನಸ್ ಟೋರ್ವಾಲ್ಡ್ಸ್ಎಂಬಾತನು ಸಿದ್ಧಪಡಿಸಿದ್ದನು. ಈ ಕರ್ನೆಲ್ ನೊಂದಿಗೆ ಗ್ನುವಿನ ತಂತ್ರಾಂಶವನ್ನು ಸೇರಿಸಿದಾಗ, ಯುನಿಕ್ಸ್ ಆಧಾರಿತವಾದ ಪೂರ್ಣ ಪ್ರಮಾಣದ ಮುಕ್ತ ಕಾರ್ಯನಿರ್ವಹಣ ಸಾಧನವೊಂದು ತಯಾರಾಯಿತು. ಈ ತಂತ್ರಾಂಶಗಳ ಸಂಕಲನವೇ ಇಂದು ಅತ್ಯಂತ ಪ್ರಸಿದ್ಧವಾಗಿರುವ ಲಿನಕ್ಸ್ ಅಥವಾ ಗ್ನು/ಲಿನಕ್ಸ್.