ವಿಷಯಕ್ಕೆ ಹೋಗು

ಕರಿಗೇರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಣಗಿದ ಕರಿಗೇರು ಹಣ್ಣುಗಳು. ಮೇಲುಭಾಗದ್ದು ಒಣಗಿದ ಸುಕ್ಕುಸುಕ್ಕಾದ ಹಣ್ಣು, ಕೆಳಬಾಗದಲ್ಲಿರುವ ಕಪ್ಪುಬಣ್ಣದ ತ್ರಿಕೋನಾಕೃತಿಯದು ಬೀಜ

ಕರಿಗೇರು : ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಮರ, ಇದರ ಶಾಸ್ತ್ರೀಯ ನಾಮ ಸೆಮಿಕಾರ್ಪಸ್ ಅನಕಾರ್ಡಿಯಮ್ ಭಾರತ, ಈಸ್ಟ್‌ ಇಂಡೀಸ್ ದ್ವೀಪಗಳು, ಉತ್ತರ ಆಸ್ಟ್ರೇಲಿಯಗಳಲ್ಲಿ ಹರಡಿದೆ. ಇದು ಚಳಿಗಾಲದಲ್ಲಿ ಎಲೆ ಉದುರುವ ಮಧ್ಯಮ ಎತ್ತರದ ಮರ. ಎಲೆಗಳು ಸರಳ, ಪರ್ಯಾಯವಾಗಿ ಜೋಡಣೆಗೊಂಡಿವೆ. ಇವುಗಳ ಉದ್ದ 7'-24", ಅಗಲ 4"-12". ಅಂಡಾಕಾರವಾಗಿವೆ; ತುದಿ ಗುಂಡಗಿದೆ. ತೊಗಲಿನಂತೆ ಗುಡುಸಾಗಿರುವ ಇವುಗಳ ಮೇಲ್ಭಾಗ ತುಪ್ಪುಳರಹಿತ; ತಳಭಾಗದಲ್ಲಿ ಬೂದುಬಣ್ಣದ ತುಪ್ಪುಳವಿದೆ. ಅಲಗಿನ ಮೇಲೆ 15-25 ಜೋಡಿಗಳ ನಾಳವಿನ್ಯಾಸವಿದೆ ಹೂಗಳು ರೆಂಬೆಗಳ ತುದಿಗಳಲ್ಲಿರುವ ಸಂಕೀರ್ಣ ಪುಷ್ಪಗುಚ್ಛಗಳಲ್ಲಿ ಸಮಾವೇಶಗೊಂಡಿವೆ. ಹೂಗಳು ಹಸಿರು ಮಿಶ್ರಿತ ಬಿಳಿ ಬಣ್ಣದವೂ ಏಕಲಿಂಗಿಗಳು ಆಗಿವೆ. ಗಂಡು ಹೂಗಳು ಹೆಣ್ಣು ಹೂಗಳಿಗಿಂತ ಚಿಕ್ಕವು. ಎರಡು ಬಗೆಯ ಹೂಗಳಲ್ಲೂ ಈಟಿಯಾಕಾರದ ಬ್ರ್ಯಾಕ್ಟುಗಳೂ ಪುಷ್ಪ ಪತ್ರದ ಹೊರಭಾಗದಲ್ಲಿ ಕೂದಲುಗಳೂ ಇವೆ. ಪುಷ್ಪಪಾತ್ರೆ 3 ಹಾಲೆಗಳಿಂದಾಗಿದೆ. ಹೂದಳಗಳು 5. ಗಂಡು ಹೂಗಳಲ್ಲಿ ಕೇಸರಗಳಿಗೂ ಹೂದಳಗಳಿಗೂ ನಡುವೆ ದುಂಡಾಗಿರುವ ತಟ್ಟೆಯಿದೆಯಲ್ಲದೆ ಅಪುರ್ಣಾವಸ್ಥೆಯಲ್ಲಿರುವ ಅಂಡಾಶಯವೊಂದಿದೆ. ಹೆಣ್ಣುಹೂವಿನಲ್ಲಿ ಉಚ್ಛಸ್ಥಾನದ ಗುಂಡಗಿನ ಅಂಡಾಶಯವಿದೆ, ಮೂರು ಕಾರ್ಪೆಲುಗಳಿಂದಾದ ಇದರಲ್ಲಿ ಒಂದೇ ಅಂಡಕವಿದೆ. ಶಲಾಕೆಗಳು 3. ಹೆಣ್ಣು ಅಷ್ಟಿಫಲ ಮಾದರಿಯದು; ಅದರ ಆಕಾರ ದೀರ್ಘವೃತ್ತದಂತೆ. ನಯವಾಗಿಯೂ ಹೊಳಪುಳ್ಳದ್ದೂ ಆಗಿದೆ.

ಗುಡ್ಡೆಗೇರು ಮರ

[ಬದಲಾಯಿಸಿ]
Semecarpus anacardium- ಗುಡ್ಡೆಗೇರು ಮರದ ಎಲೆ; ಹಣ್ನು- ಬೀಜ; ಬೀಜವನ್ನು ಹಣ್ಣಿನ ಮೇಲುಭಾಗದಲ್ಲಿ ತೋರಿಸಿದೆ.

ಈ ಮರಗಳು ಪಶ್ಚಿಮಘಟ್ಟದಲ್ಲೂ ಮಲೆನಾಡಿನಲ್ಲೂ ಬೆಳೆಯುವುದು. ಇದಕ್ಕೆ ಕನ್ನಡದಲ್ಲಿ ಗುಡ್ಡೆಗೇರು ಎಂದು ಕರೆಯುವರು. ಎಲೆಗಳು ಗೇರುಹಣ್ಣಿನ ಮರದ ಎಲೆಗಳಂತೆಯೇ ಇರುತ್ತವೆ. ಹಣ್ಣು ಕೂಡಾ ಗೇರುಹಣ್ಣಿನಂತೆ ಬೀಜ ಹಣ್ಣಿನ ಕೆಳಗಡೆ ಹಣ್ಣಿನ ಹೊರಗೆ ಇರುತ್ತದೆ. ಆದರೆ ಇದು ಗೇರು ಮರದಷ್ಟು ಎತ್ತರ ಬೆಳೆಯುವುದಿಲ್ಲ. ಸುಮಾರು ೧೦- ೧೫ ಅಡಿ ಎತ್ತರ ಬೆಳೆಯಬಹುದು.

ಹಣ್ಣು

[ಬದಲಾಯಿಸಿ]
  • ಹಸಿರು ಬಣ್ನದ ಕಾಯಿ ಬಲಿತು ಹೆಬ್ಬೆಟ್ಟು ಗಾತ್ರದ ಹಣ್ಣಾದಾಗ ಕೆಂಪುಮಿಶ್ರಿತ ಹಳದಿಬಣ್ಣಕ್ಕೆ ತಿರುಗಿ ರಸಭರಿತವಾಗುತ್ತದೆ ಬಣ್ಣ ಹೊಂದುತ್ತದೆ ಅದನ್ನು ಕೊಯಿದು ಒಣಗಿಸಿದರೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ತಿನ್ನಲು ಯೋಗ್ಯ. ಹಣ್ಣಿನ ಕೆಳಗಿರುವ ಬೀಜ ಹಸಿರು ಬಣ್ಣದ್ದು ಕಾಲಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗಿ ಕಟುವಾದ ರಸಹೊಂದಿರುತ್ತದೆ. ಈ ಕಪ್ಪುರಸ ಬಹಳ ಟಾಕ್ಸಿಕ್ ಚರ್ಮಕ್ಕೆ ತಾಗಿದರೆ ಸುಟ್ಟು ಬೊಬ್ಬೆ ಬರುತ್ತದೆ. ಅಕ್ಷಕಾಂಡವನ್ನು-ಹಣ್ಣನ್ನು ಹುರಿದು ತಿನ್ನುವುದುಂಟು.[]
  • ಇಂಗ್ಲಿಷಿನಲ್ಲಿ ಈ ಮರಕ್ಕೆ ಮಾರ್ಕಿಂಗ್ ನಟ್ ಎಂಬ ಹೆಸರಿದೆ. ಬೀಜದಿಂದ ಒಂದು ಬಗೆಯ ಕಟುವಾದ ಸ್ಕಿಗ್ಧವಾದ ರಸವನ್ನು ತೆಗೆಯುತ್ತಾರೆ. ಬಣ್ಣವಿಲ್ಲದ ಅದು ಕಪ್ಪುಬಣ್ಣಕೆ ತಿರುಗುತ್ತದೆ. ಅಗಸರು ಇದನ್ನು ಹತ್ತಿ ಬಟ್ಟೆಗಳಿಗೆ ಗುರುತುಮಾಡಲು ಉಪಯೋಗಿಸುತ್ತಾರೆ. ಗುರುತು ಅಳಿಸುವುದಿಲ್ಲ. ಇದರ ಬೀಜದಿಂದ ಅಲ್ಲದೆ ಮರುಗೆಣ್ಣೆ ತಯಾರಿಕೆಯಲ್ಲೂ ಬಳಸುತ್ತಾರೆ. ಮರಕ್ಕೆ ಹಚ್ಚಿದರೆ ಹುಳುತಿನ್ನುವುದಿಲ್ಲ, ಮರ ಲಡ್ಡಾಗುವುದಿಲ್ಲ. ಅದರಿಂದ ದೋಣಿಗೆ ಹಚ್ಚುತ್ತಾರೆ.[]

ಹೆಚ್ಚಿನ ಮಾಹಿತಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
  2. [https://www.healthbenefitstimes.com/marking-nut/ Marking Nut Facts; Health benefits of Marking Nut]