ಊರ್ಟ್ ಮೋಡ
ಗೋಚರ
ಊರ್ಟ್ ಮೋಡ, (ಪರ್ಯಾಯವಾಗಿ ಎಪಿಕ್-ಊರ್ಟ್ ಮೋಡ) - ಇದು ಸೂರ್ಯನಿಂದ ಸುಮಾರು ೫೦,೦೦೦-೧೦೦,೦೦೦ ಖ.ಮಾ ದೂರದಲ್ಲಿ ಸ್ಥಿತವಾಗಿರುವ ಧೂಮಕೇತುಗಳಿಂದ ಕೂಡಿದ ಗೋಳಾಕಾರದ ಊಹೆಯಾ ಧಾರಿತ ಮೋಡ. ಈ ದೂರವು ಸೂರ್ಯನಿಂದ ಪ್ಲುಟೊವರೆಗಿನ ದೂರದ ೨೦೦೦ ಪಟ್ಟು ಮತ್ತು ಸೂರ್ಯನಿಂದ ಅತಿ ಹತ್ತಿರದ ನಕ್ಷತ್ರವಾದ ಪ್ರಾಕ್ಸಿಮಾ ಸೆಂಟಾರಿ ವರೆಗಿನ ದೂರದ ಸುಮಾರು ಕಾಲು ಭಾಗದಷ್ಟಿದೆ.
ಪರಿಚಯ
[ಬದಲಾಯಿಸಿ]- ಊರ್ಟ್ ಮೋಡವು ಅಸ್ತಿತ್ವದಲ್ಲಿದ್ದರೆ, ಅದರ ಒಳ ತಟ್ಟೆಯು ಕೈಪರ್ ಪಟ್ಟಿಯ ಕ್ರಾಂತಿವೃತ್ತದಲ್ಲಿರುತ್ತದೆ. ಈ ರೀತಿಯ ಯಾವುದೇ ಮೋಡವನ್ನು ಇದುವರೆಗೆ ನೇರವಾಗಿ ವೀಕ್ಷಿಸಲಾಗಿಲ್ಲವಾದರೂ, ಧೂಮಕೇತು ಕಕ್ಷೆಗಳ ವಿಶ್ಲೇಷಣೆಯ ಆಧಾರದ ಮೇಲೆ, ಈ ಮೋಡವು ಸೌರಮಂಡಲದೊಳಗೆ ಬರುವ ಬಹುತೇಕ ಅಥವಾ ಎಲ್ಲಾ ಧೂಮಕೇತುಗಳ ಮೂಲವೆಂದು ಖಗೋಳಶಾಸ್ತ್ರಜ್ಞರು ನಂಬುತ್ತಾರೆ (ಕೆಲವು ಅಲ್ಪಾವಧಿ ಧೂಮಕೇತುಗಳು ಕೈಪರ್ ಪಟ್ಟಿಯಿಂದ ಉದ್ಭವವಾಗಿ ಬರುತ್ತವೆ).
- ಊರ್ಟ್ ಮೋಡದ ಒಳ ಭಾಗದಲ್ಲಿ ಹಿಲ್ಸ್ ಮೋಡವೆಂಬ ಹೆಚ್ಚು ಸಾಂದ್ರತೆಯ ಮೋಡವೊಂದು ಇದೆಯೆಂಬ ವಾದವಿದೆ;[೧] ಇದು ೨೦-೩೦ ೦೦೦ ಖ.ಮಾ.ದಲ್ಲಿ ಸ್ಪಷ್ಟ ಹೊರ ತುದಿಯನ್ನು ಮತ್ತು ೫೦ ರಿಂದ ೩೦೦೦ ಖ.ಮಾ.ದಲ್ಲಿ ಅಸ್ಪಷ್ಟ ಒಳ ತುದಿಯನ್ನೂ ಹೊಂದಿದ್ದು, ಉಳಿದ ಊರ್ಟ್ ಮೋಡಕ್ಕಿಂತ ೧೦೦ ಪಟ್ಟು ಹೆಚ್ಚು ಸಾಂದ್ರವಾಗಿರುತ್ತದೆ.[೨]
- ಸೌರಮಂಡಲದ ಹೊರತುದಿಯಲ್ಲಿ ಪರಿಭ್ರಮಿಸುತ್ತಿರುವ ಒಂದು ಮೋಡದಿಂದ ಧೂಮಕೇತುಗಳು ಉದ್ಭವವಾಗುತ್ತವೆಂದು ೧೯೩೨ರಲ್ಲಿ ಎಸ್ಟೋನಿಯಾದ ಖಗೋಳಶಾಸ್ತ್ರಜ್ಞನಾದ ಅರ್ನ್‌ಸ್ಟ್ ಎಪಿಕ್ ಪ್ರತಿಪಾದಿಸಿದನು.[೩] ೧೯೫೦ರಲ್ಲಿ ಡಚ್ ಖಗೋಳಶಾಸ್ತ್ರಜ್ಞನಾದ ಯಾನ್ ಹೆಂಡ್ರಿಕ್ ಊರ್ಟ್ನು ಸಂದಿಗ್ಧತೆಯಂತೆ ಕಾಣುವ ಒಂದು ವಿಷಯವನ್ನು ಬಗೆಹರಿಸಿ ವಿವರಿಸಲು ಈ ಕಲ್ಪನೆಯನ್ನು ಪುನಃ ಬೆಳಕಿಗೆ ತಂದು ಪ್ರತಿಪಾದಿಸಿದನು[೪]: ಧೂಮಕೇತುಗಳು ಒಳ ಸೌರಮಂಡಲದ ಮೂಲಕ ಹಲವು ಬಾರಿ ಹಾದುಹೋದ ಮೇಲೆ ನಶಿಸಿ ಹೋಗುತ್ತವೆ.
- ಹೀಗಿರಬೇಕಾದರೆ, ನಾವು ನೋಡುವ ಧೂಮಕೇತುಗಳು ಕೋಟ್ಯಾಂತರ ವರ್ಷಗಳ ಹಿಂದೆಯೇ ಹುಟ್ಟಿದ್ದಿದ್ದರೆ (ಸೌರಮಂಡಲದ ಉಗಮದ ಸಮಯದಲ್ಲಿ), ಈ ಧೂಮಕೇತುಗಳೆಲ್ಲಾ ಇಷ್ಟು ಹೊತ್ತಿಗೆ ನಶಿಸಿರುತ್ತಿದ್ದವು. ಊಹೆಯ ಪ್ರಕಾರ, ಊರ್ಟ್ ಮೋಡವು ಕೋಟಿಗಟ್ಟಲೆ ಧೂಮಕೇತು ಕೋಶಗಳನ್ನು ಹೊಂದಿದೆ. ಮೋಡವು ಸೂರ್ಯನಿಂದ ಬಹಳ ದೂರವಿದ್ದು ಅಲ್ಲಿ ಸೌರ ವಿಕಿರಣವು ದುರ್ಬಲವಾಗಿರುವುದರಿಂದ, ಈ ಕೋಶಗಳು ದೀರ್ಘಕಾಲದವರೆಗೆ ಸ್ಥಿರವಾಗಿರುತ್ತವೆ. ಈ ಮೋಡವು ನಿರಂತರವಾಗಿ ಧೂಮಕೇತುಗಳನ್ನು ಸರಬರಾಜು ಮಾಡುತ್ತ, ಅವು ನಶಿಸಿಹೋದಂತೆ ಹೊಸ ಧೂಮಕೇತುಗಳನ್ನು ಉತ್ಪಾದಿಸುತ್ತಿರುತ್ತದೆ. ಅವಶ್ಯ ಸಂಖ್ಯೆಯ ಧೂಮಕೇತುಗಳನ್ನು ಸರಬರಾಜು ಮಾಡಲು, ಊರ್ಟ್ ಮೋಡದಲ್ಲಿನ ಒಟ್ಟು ಧೂಮಕೇತು ದ್ರವ್ಯರಾಶಿಯು ಸಾಕಷ್ಟು ಹೆಚ್ಚೇ ಇರಬೇಕೆಂದು ನಂಬಲಾಗಿದೆ. ಈ ದ್ರವ್ಯರಾಶಿಯ ಅಂದಾಜುಗಳು ಭೂಮಿಯ ದ್ರವ್ಯರಾಶಿಯ ೫ರಿಂದ ೧೦೦ಪಟ್ಟಿನ ವ್ಯಾಪ್ತಿಯಲ್ಲಿವೆ.
ಉಗಮ
[ಬದಲಾಯಿಸಿ]- ಸುಮಾರು ೪೬೦ ಕೋಟಿ ವರ್ಷಗಳ ಹಿಂದೆ ಕುಸಿದು ಸೂರ್ಯ ಮತ್ತು ಗ್ರಹಗಳನ್ನು ರೂಪಿಸಿದ ಸೌರ ನೀಹಾರಿಕೆಯ ಅವಶೇಷವೇ ಈ ಊರ್ಟ್ ಮೋಡ ಎಂದು ನಂಬಲಾಗಿದೆ. ಮೋಡವು ಸೌರ ಮಂಡಲದೊಂದಿಗೆ ಸಡಿಲವಾಗಿ ಹೊಂದಿಕೊಂಡಿದೆ. ಮೋಡದ ರೂಪುಗೊಳ್ಳುವಿಕೆಯ ಬಗೆಗಿರುವ ಸಮ್ಮತ ವಾದದ ಪ್ರಕಾರ, ಊರ್ಟ್ ಮೋಡವು ಮೊದಲು ಸೂರ್ಯನಿಗೆ ಹತ್ತಿರದಲ್ಲೇ ರೂಪುಗೊಂಡಿತು.
- ಗ್ರಹಗಳು ಮತ್ತು ಕ್ಷುದ್ರಗ್ರಹಗಳನ್ನು ರೂಪಿಸಿದ ಪ್ರಕ್ರಿಯೆಯೇ ಊರ್ಟ್ ಮೋಡವನ್ನೂ ರೂಪಿಸಿತು. ಆದರೆ, ಗುರು ಗ್ರಹದಂಥ ಯುವ ಅನಿಲ ದೈತ್ಯದ ಜೊತೆಯ ಒಡನಾಟಗಳಿಂದ ಈ ಮೋಡದ ಕಾಯಗಳು ವಿಪರೀತವಾದ ದೀರ್ಘವೃತ್ತೀಯ ಅಥವಾ ಪರವಲೀಯ ಕಕ್ಷೆಗಳಿಗೆ ಎಸೆಯಲ್ಪಟ್ಟವು. ಈ ಪ್ರಕ್ರಿಯೆಯು ಕಾಯಗಳನ್ನು ಕ್ರಾಂತಿವೃತ್ತದ ಸಮತಳದಿಂದಲೂ ಆಚೆಗೆ ಚದರಿಸಿತು. ಇದು ಮೋಡದ ಗೋಳಾಕಾರದ ವಿತರಣೆಯನ್ನು ವಿವರಿಸುತ್ತದೆ.
- ಈ ಕಕ್ಷೆಗಳ ಹೊರಭಾಗಗಳಲ್ಲಿರುವಾಗ ಹತ್ತಿರದ ನಕ್ಷತ್ರಗಳ ಗುರುತ್ವದೊಂದಿಗಿನ ಒಡನಾಟಗಳು ಇವುಗಳ ಕಕ್ಷೆಗಳನ್ನು ಕ್ರಮೇಣ ಸ್ವಲ್ಪ ವೃತ್ತಾಕಾರಕ್ಕೆ ಮಾರ್ಪಡಿಸಿದವು. ಬೇರೆ ನಕ್ಷತ್ರಗಳೂ ತಮ್ಮದೇ ಆದ ಊರ್ಟ್ ಮೋಡಗಳನ್ನು ಹೊಂದಿರಬಹುದೆಂದು ಯೋಚಿಸಲಾಗಿದೆ. ನಿಕಟದ ಎರಡು ನಕ್ಷತ್ರಗಳ ಊರ್ಟ್ ಮೋಡಗಳು ಕೆಲವೊಮ್ಮೆ ಪರಸ್ಪರ ಒಂದರಮೇಲೊಂದು ಹರಡಿ ಧೂಮಕೇತುಗಳ ಕಕ್ಷೆಗಳಲ್ಲಿ ಕ್ಷೋಭೆಗಳನ್ನು ಉಂಟುಮಾಡಬಹುದು. ಆಗ, ಆ ನಕ್ಷತ್ರಗಳ ಒಳ ಗ್ರಹಮಂಡಲದಲ್ಲಿನ ಧೂಮಕೇತುಗಳ ಸಂಖ್ಯೆಯು ಹೆಚ್ಚಾಗಬಹುದು.
ನಕ್ಷತ್ರ ಕ್ಷೋಭೆಗಳು ಮತ್ತು ನೆಮೆಸಿಸ್ ಸಿದ್ಧಾಂತ
[ಬದಲಾಯಿಸಿ]- ಮುಂದಿನ ೧ ಕೋಟಿ ವರ್ಷಗಳಲ್ಲಿ ಊರ್ಟ್ ಮೋಡದಲ್ಲಿ ಕ್ಷೋಭೆಯುಂಟು ಮಾಡುವ ಅತಿ ಹೆಚ್ಚಿನ ಸಾಧ್ಯತೆಯಿರುವುದು ಗ್ಲೀಸ್ ೭೧೦ ನಕ್ಷತ್ರಕ್ಕೆ. ಆದರೆ ಇಲ್ಲಿಯವರೆಗೆ ಕಾಣಬರದ ಸೂರ್ಯನ ಜೋಡಿ ನಕ್ಷತ್ರವೊಂದು ಊರ್ಟ್ ಮೋಡದಿಂದಾಚೆ ದೀರ್ಘವೃತ್ತೀಯ ಕಕ್ಷೆಯಲ್ಲಿದೆ ಎಂದು ಭೌತವಿಜ್ಞಾನಿ ರಿಚರ್ಡ್ ಎ. ಮ್ಯುಲರ್ ಮತ್ತಿತರರು ಒಂದು ಆಧಾರ ನಿಯಮದಂತೆ ಹೇಳಿದ್ದಾರೆ. ನೆಮೆಸಿಸ್ ಎಂದು ಕರೆಯಲಾಗುವ ಈ ನಕ್ಷತ್ರವು ಸುಮಾರು ೨.೬ ಕೋಟಿ ವರ್ಷಗಳಿಗೊಮ್ಮೆ ಊರ್ಟ್ ಮೋಡದ ಮೂಲಕ ಹಾದುಹೋಗಿ ಒಳ ಸೌರಮಂಡಲದತ್ತ ಹಲವಾರು ಧೂಮಕೇತುಗಳನ್ನು ಕಳುಹಿಸುತ್ತದೆ ಎಂಬ ವಾದವಿದೆ. ಈ ವಾದಕ್ಕೆ ಹಲವಾರು ಬೆಂಬಲಿಗರಿದ್ದರೂ, ಇಲ್ಲಿಯವರೆಗೆ ನೆಮೆಸಿಸ್‌ನ ಅಸ್ತಿತ್ವದ ಯಾವುದೇ ನೇರ ಪುರಾವೆಗಳು ದೊರಕಿಲ್ಲ.
ಊರ್ಟ್ ಮೋಡದ ಕಾಯಗಳು
[ಬದಲಾಯಿಸಿ]ಇದುವರೆಗೆ, ಕೇವಲ ಮೂರು ಸಂಭವನೀಯ ಊರ್ಟ್ ಮೋಡದ ಕಾಯಗಳನ್ನು ಕಂಡುಹಿಡಿಯಲಾಗಿದೆ: ೯೦೩೭೭ ಸೆಡ್ನ, 2000 OO67 ಮತ್ತು 2000 CR105. ಸುಮಾರು ೭೬ರಿಂದ ೯೨೮ ಖ.ಮಾ. ವ್ಯಾಪ್ತಿಯ ಕಕ್ಷೆಯನ್ನು ಹೊಂದಿರುವ ೯೦೩೭೭ ಸೆಡ್ನ ಮುಂಚೆ ತಿಳಿದಿದ್ದಕ್ಕಿಂತ ಇನ್ನೂ ಹತ್ತಿರದಲ್ಲಿದ್ದು, "ಒಳ" ಊರ್ಟ್ ಮೋಡಕ್ಕೆ ಸೇರಿದ್ದಿರಬಹುದು. ಈ ಸೆಡ್ನ ನಿಜವಾಗಿಯೂ ಊರ್ಟ್ ಮೋಡಕ್ಕೆ ಸೇರಿದ್ದೇ ಆದರೆ, ಊರ್ಟ್ ಮೋಡವು ಮುಂಚಿನ ತಿಳುವಳಿಕೆಗಿಂತ ಹೆಚ್ಚು ಸಾಂದ್ರವೂ ಮತ್ತು ಸೂರ್ಯನಿಗೆ ಹೆಚ್ಚು ನಿಕಟವೂ ಆಗಿದೆಯೆಂದಾಗಬಹುದು.
- ಸೂರ್ಯಗ್ರಹವು ಮೊದಲು ಒಂದು ಸಾಂದ್ರವಾದ ನಕ್ಷತ್ರ ಸಮೂಹದ ಭಾಗವಾಗಿ ರೂಪುಗೊಂಡಿತೆಂಬ ವಾದಕ್ಕೆ ಇದನ್ನು ಒಂದು ಸಂಭವನೀಯ ಸಾಕ್ಷಿಯಂತೆ ಪ್ರತಿಪಾದಿಸಲಾಗಿದೆ[ಸಾಕ್ಷ್ಯಾಧಾರ ಬೇಕಾಗಿದೆ]; ಊರ್ಟ್ ಮೋಡದ ಉಗಮದ ಸಮಯದಲ್ಲಿ ಕಾಯಗಳು ಹೆಚ್ಚು ನಿಕಟದಲ್ಲಿದ್ದಾಗ, ಅನಿಲ ದೈತ್ಯಗಳಿಂದ ಸೆಳೆದು ಎಸೆಯಲ್ಪಟ್ಟ ಕಾಯಗಳು ಸೂರ್ಯನಿಗೆ ಹೆಚ್ಚು ಹತ್ತಿರದಲ್ಲಿರುತ್ತಿದ್ದವು. ಪ್ರಸ್ತುತದಲ್ಲಂತೂ ೯೦೩೭೭ ಸೆಡ್ನವನ್ನು ಒಂದು ನೆಪ್ಚೂನ್-ಅತೀತ ಕಾಯವೆಂದು ಪರಿಗಣಿಸಲಾಗಿದೆ; ಇದು ಊರ್ಟ್ ಮೋಡದ ಭಾವಿತ ಸ್ಥಾನದಷ್ಟು ದೂರವಿಲ್ಲದೆ, ಕೈಪರ್ ಪಾಟಿಗಿಂತ ಹೆಚ್ಚು ದೂರವಿದೆ.
- ಕೆಲವು ಖಗೋಳಶಾಸ್ತ್ರಜ್ಞರು 2000 CR105 ಮತ್ತು 2000 OO67 ಕಾಯಗಳನ್ನು ಊರ್ಟ್ ಮೋಡದ ಕಾಯಗಳೆಂದು ಪರಿಗಣಿಸುತ್ತಾರೆ. 2000 CR105 ಕಾಯವು ೪೫ ಖ.ಮಾ. ಪುರರವಿ, ೪೧೫ ಖ.ಮಾ. ಅಪರವಿ ಮತ್ತು ೩,೨೪೧ ವರ್ಷಗಳ ಪರಿಭ್ರಮಣೆ ಅವಧಿಯನ್ನು ಹೊಂದಿದ್ದರೆ, 2000 OO67 ಕಾಯವು ೨೧ ಖ.ಮಾ. ಪುರರವಿ, ೧,೦೦೦ ಖ.ಮಾ. ಅಪರವಿ, ಮತ್ತು ೧೨,೭೦೫ ವರ್ಷಗಳ ಪರಿಭ್ರಮಣೆ ಅವಧಿಯನ್ನು ಹೊಂದಿದೆ.
ಸಂಖ್ಯೆ | ಹೆಸರು | ಸಮಭಾಜಕದಲ್ಲಿ ವ್ಯಾಸ (ಕಿ.ಮೀ.) |
ಪುರರವಿ (ಖ.ಮಾ.) | ಅಪರವಿ (ಖ.ಮಾ.) | ಆವಿಷ್ಕಾರದ ದಿನಾಂಕ | ಆವಿಷ್ಕಾರಕ | Diameter method |
---|---|---|---|---|---|---|---|
೯೦೩೭೭ | ಸೆಡ್ನ | ೧೧೮೦ - ೧೮೦೦ ಕಿ.ಮೀ. | ೭೬ (±೭) | ೯೭೫ | ೨೦೦೩ | ಮೈಕಲ್ ಇ. ಬ್ರೌನ್, ಚ್ಯಾಡ್ ಟ್ರುಹಿಲೊ, ಡೇವಿಡ್ ಎಲ್. ರಬೀನೊವಿಟ್ಸ್ | ಶಾಖ |
— | 2000 CR105 | ೨೬೫ ಕಿ.ಮೀ. | ೪೪.೩ | ೩೯೭ | ೨೦೦೦ | ಲೊವೆಲ್ ವೀಕ್ಷಣಾಲಯ | ??? |
೮೭೨೬೯ | 2000 OO67 | ೨೮ - ೮೭ ಕಿ.ಮೀ. | ೨೦.೮ | ೧೦೦೫.೫ | ೨೦೦೦ | ಸೆರೋ ಟೊಟೋಲೋ ದೂರದರ್ಶಕ | ??? |
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Hills, J. G. (1981). harvard. edu/cgi-bin/nph-bib_query?bibcode=1981AJ.....86.1730H&db_key=AST&data_type=HTML&format=&high=44b52c369025824 "Comet showers and the steady-state infall of comets from the Oort cloud". Astronomical Journal. 86: 1730–1740. doi:10.1086/113058.
{{cite journal}}
: Check|url=
value (help); Unknown parameter|month=
ignored (help)[permanent dead link] - ↑ Planetary Sciences: American and Soviet Research, Proceedings from the U.S.-U.S.S.R. Workshop on Planetary Sciences, 1991, p. 251[permanent dead link]
- ↑ Ernst Julius Epik, E., Note on Stellar Perturbations of Nearby Parabolic Orbits, Proceedings of the American Academy of Arts and Sciences, Vol. 67, pp. 169-182 (1932)
- ↑ Oort, J. H., The structure of the cloud of comets surrounding the Solar System and a hypothesis concerning its origin, Bull. Astron. Inst. Neth., 11, p. 91-110 (1950) Text at Harvard server (PDF)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Representation, Southwest Research Institute
- The Kuiper Belt and The Oort Cloud
- The effect of perturbations by the Alpha Cen A/B system on the Oort Cloud
ನಮ್ಮ ಸೌರವ್ಯೂಹ |
ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಕ್ಷುದ್ರಗ್ರಹ ಹೊನಲು |
ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ |
ವರ್ಗಗಳು:
- Pages using the JsonConfig extension
- CS1 errors: unsupported parameter
- CS1 errors: URL
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- ಖಗೋಳಶಾಸ್ತ್ರ
- ನಮ್ಮ ಸೌರಮಂಡಲ