ರೇಡಿಯೊ ಚಿಕಿತ್ಸೆ
ರೇಡಿಯೊ ಚಿಕಿತ್ಸೆಯು ವಿಕಿರಣಾಕರಗಳ ಬಳಕೆಯಿಂದ ಮಾಡುವ ರೋಗಚಿಕಿತ್ಸೆ (ರೇಡಿಯೊ ತೆರಪಿ). ವ್ಯಾವಹಾರಿಕವಾಗಿ, ದೇಹದ ನಿರ್ದಿಷ್ಟ ಭಾಗವನ್ನು ಅಯಾನೀಕರಿಸುವ ವಿಕಿರಣಕ್ಕೆ ಅಥವಾ ಊತಕಗಳ ಆಳಕ್ಕೆ ಇಳಿಯಬಲ್ಲ ಕಿರಣಗಳಿಗೆ ಒಡ್ಡಿ ರೋಗಯುಕ್ತ ಕೋಶಗಳನ್ನು ನಾಶಮಾಡುವ ಚಿಕಿತ್ಸೆ ಇದು. ವಿಕಿರಣಪಟು ಸಮಸ್ಥಾನಿಗಳು ಅಥವಾ ಕೃತಕವಾಗಿ ಉತ್ಪಾದಿಸಿದ ಎಕ್ಸ್‌ಕಿರಣಗಳು ವಿಕಿರಣದ ಆಕರಗಳು. ಕೆಲವು ಬಗೆಯ ಕ್ಯಾನ್ಸರ್‌ಗಳನ್ನು ಗುಣಪಡಿಸಲು, ಶಸ್ತ್ರಕ್ರಿಯಾನಂತರ ಕ್ಯಾನ್ಸರ್ ಮರುಕಳಿಸುವುದನ್ನು ತಡೆಗಟ್ಟಲು ಮತ್ತು ಕ್ಯಾನ್ಸರ್ ಲಕ್ಷಣಗಳನ್ನು ನಿವಾರಿಸಲು ಈ ಚಿಕಿತ್ಸೆಯ ಬಳಕೆ ಉಂಟು. ರೇಡಿಯೊಚಿಕಿತ್ಸೆಯಲ್ಲಿ ಎರಡು ಬಗೆ: ಬಾಹ್ಯ ಅಥವಾ ದೂರ ಮತ್ತು ಆಂತರಿಕ.
ರೇಡಿಯೊ ಚಿಕಿತ್ಸೆಯು ಮಾರಣಾಂತಿಕವಲ್ಲದ ಸನ್ನಿವೇಶಗಳಲ್ಲಿ ಹಲವು ಅನ್ವಯಗಳನ್ನು ಹೊಂದಿದೆ. ಉದಾಹರಣೆಗೆ ಟ್ರೈಜೆಮಿನಲ್ ನ್ಯೂರಾಲ್ಜಿಯಾ, ಕಿವಿಕುಹರದ ನರಗೆಡ್ಡೆ, ತೀವ್ರತರದ ಥೈರಾಯ್ಡ್ ನೇತ್ರರೋಗ, ಟೆರಿಜಿಯಮ್, ವರ್ಣದ್ರವ್ಯವುಳ್ಳ ವಿಲೊನಾಡ್ಯುಲಾರ್ ಸಿನೋವೈಟಿಸ್‍ನ ಚಿಕಿತ್ಸೆಯಲ್ಲಿ ಮತ್ತು ಕೆಲಾಯ್ಡ್ ಗುರುತಿನ ಬೆಳವಣಿಗೆ, ನಾಳೀಯ ರೆಸ್ಟೆನೋಸಿಸ್ ಹಾಗೂ ವಿಷಮಸ್ಥಾನಿಕ ಅಸ್ಥೀಭವನದ ತಡೆಗಟ್ಟುವಿಕೆಯಲ್ಲಿ.[೧][೨][೩][೪]
ಚಿಕಿತ್ಸೆಯ ಉದ್ದೇಶಗಳು
[ಬದಲಾಯಿಸಿ]ಕ್ಯಾನ್ಸರ್ ಕೋಶಗಳನ್ನು ನಾಶಗೊಳಿಸುವುದು ಈ ಚಿಕಿತ್ಸೆಯ ಪ್ರಧಾನ ಉದ್ದೇಶ. ವಾಸ್ತವವಾಗಿ ಕ್ಯಾನ್ಸರ್ ಗಂತಿಯ ನಾಶದಿಂದ ರೋಗವನ್ನು ನಿರ್ಮೂಲಿಸುವ ಪ್ರಯತ್ನವಿದು. ಶಸ್ತ್ರಕ್ರಿಯೆ ಅಥವಾ ರಾಸಾಯನಿಕ ಚಿಕಿತ್ಸೆಗೆ ಮುನ್ನ ಅಥವಾ ಅನಂತರ ಈ ಚಿಕಿತ್ಸೆ ಮಾಡಬಹುದು. ಕೆಲವೊಮ್ಮೆ ರಾಸಾಯನಿಕ ಮತ್ತು ರೇಡಿಯೊ ಚಿಕಿತ್ಸೆಗಳೆರಡನ್ನೂ ನೀಡುವುದುಂಟು. ಕ್ಯಾನ್ಸರ್ ವಾಸಿಯಾಗುವ ಹಂತ ಮೀರಿದ್ದರೂ ನೋವು ಮುಂತಾದ ಬಾಧೆ ಕಡಿಮೆ ಮಾಡಲು ಈ ಚಿಕಿತ್ಸೆ ಉಪಯುಕ್ತ. ಲ್ಯೂಕೀಮಿಯ ರೋಗಚಿಕಿತ್ಸೆಗಾಗಿ ಕಾಂಡ ಕೋಶ (ಸ್ಟೆಮ್ ಸೆಲ್) ಮತ್ತು ಅಸ್ಥಿಮಜ್ಜೆ ನಾಟಿ ಮಾಡಿಸಿಕೊಂಡ ರೋಗಿಗಳ ಸಂಪೂರ್ಣ ದೇಹವನ್ನು ವಿಕಿರಣಕ್ಕೆ ಒಡ್ಡುವುದೂ ಉಂಟು.
ಚಿಕಿತ್ಸೆಯ ಬಗೆಗಳು
[ಬದಲಾಯಿಸಿ]ಹೊರರೋಗಿಯಾಗಿ ಬಾಹ್ಯ ರೇಡಿಯೊ ಚಿಕಿತ್ಸೆ ಪಡೆಯಬಹುದೇ ಎಂಬುದು ರೋಗಿಯ ಸ್ಥಿತಿ ಮತ್ತು ಒಟ್ಟಾರೆ ಚಿಕಿತ್ಸಾ ಕ್ರಮವನ್ನು ಅವಲಂಬಿಸಿದೆ. ಆಂತರಿಕ ರೇಡಿಯೊಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾಗಬೇಕಾದದ್ದು ಅನಿವಾರ್ಯ. ಬಾಹ್ಯ ರೇಡಿಯೊಚಿಕಿತ್ಸಾ ಕ್ರಮದಲ್ಲಿ ಚಿಕಿತ್ಸೆ ಸಾಮಾನ್ಯವಾಗಿ 10-15 ಮಿನಿಟ್ ಅವಧಿಯ ಕಿರು ದೈನಿಕಚಿಕಿತ್ಸಾ ಶ್ರೇಣಿಯಾಗಿರುತ್ತದೆ. ಎಷ್ಟು ದಿನ ಚಿಕಿತ್ಸೆ ನೀಡಬೇಕೆಂಬುದು ರೋಗಿಯ ಸಾಮಾನ್ಯ ಆರೋಗ್ಯ ಸ್ಥಿತಿ, ಕ್ಯಾನ್ಸರಿನ ಪ್ರಭೇದ, ಚಿಕಿತ್ಸೆಗೆ ಒಳಪಡಿಸಬೇಕಾದ ದೇಹಭಾಗ ಮತ್ತು ಒಟ್ಟಾರೆ ಚಿಕಿತ್ಸೆಯ ಸ್ವರೂಪ ಇವನ್ನು ಆಧರಿಸಿದೆ.
ಬಾಹ್ಯ ಚಿಕಿತ್ಸೆ
[ಬದಲಾಯಿಸಿ]ಚಿಕಿತ್ಸೆಯ ತಾಂತ್ರಿಕ ವಿವರಗಳು: ಸಮಕೇಂದ್ರಿಕ ಆವರ್ತನೆಗೆಂದೇ (ಐಸೊಸೆಂಟ್ರಿಕ್ ರೊಟೇಷನ್) ವಿನ್ಯಾಸಗೊಳಿಸಲಾದ ಛದ್ಮಕ (ಸಿಮ್ಯುಲೇಟರ್) ಎಂಬ ವಿಶಿಷ್ಟ ಉಪಕರಣ ಬಳಸಿ ವಿಕಿರಣ ಉದ್ದೇಶಿತ ಸ್ಥಳಕ್ಕೆ ಮಾತ್ರ ಬೀಳುವುದನ್ನು ಖಚಿತಪಡಿಸಿಕೊಂಡ ಬಳಿಕ ಚಿಕಿತ್ಸೆ ಆರಂಭ. ಬಹುತೇಕ ಸಂದರ್ಭಗಳಲ್ಲಿ ಗಂತಿಯ ವಿಕಿರಣನಕ್ಕೆ (ಇರ‍್ರೇಡಿಯೇಶನ್) ಫೋಟಾನ್ ದೂಲದ ಬಳಕೆ ಇದೆ. ಕ್ಯಾನ್ಸರಿನ ಸ್ವರೂಪ ಮತ್ತು ಚಿಕಿತ್ಸಾವಿಧಾನಕ್ಕೆ ತಕ್ಕುದಾದ ವೋಲ್ಟೇಜ್ ಆಕರದ ಬಳಕೆಯೂ ಉಂಟು. ವಿಕಿರಣ ಕಿರಣೋತ್ಪಾದಕಗಳಾಗಿ ಕೋಬಾಲ್ಟ್ ಯಂತ್ರ ಮತ್ತು ರೇಖೀಯ ವೇಗೋತ್ಕರ್ಷಕಗಳ ವ್ಯಾಪಕ ಬಳಕೆ ಇದೆ. ರೇಡಿಯಮ್, ರೇಡಾನ್, ವಿಕಿರಣಪಟು ಸಮಸ್ಥಾನಿಗಳು (ಉದಾ: ಸೀಸಿಯಮ್, ಕೋಬಾಲ್ಟ್, ಚಿನ್ನ, ಇರಿಡಿಯಮ್, ಟ್ಯಾಂಟಲಮ್ ಲೋಹಗಳ ವಿಕಿರಣಪಟು ಸಮಸ್ಥಾನಿಗಳು) ಮುಂತಾದವುಗಳ ಪೈಕಿ ಯುಕ್ತವಾದದ್ದು ವಿಕಿರಣಾಕರ.[೫][೬]
ಪಾರ್ಶ್ವ ಪರಿಣಾಮಗಳು: ಕ್ಯಾನ್ಸರ್ ಕೋಶಗಳನ್ನು ರೇಡಿಯೊಚಿಕಿತ್ಸೆ ನಾಶಪಡಿಸುವುದರ ಜೊತೆಗೆ ಆಸುಪಾಸಿನ ಸಾಧಾರಣ ಕೋಶಗಳ (ನಾರ್ಮಲ್ ಸೆಲ್ಸ್) ಮೇಲೂ ಚಿಕಿತ್ಸೆಯ ಪಾರ್ಶ್ವ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಇವುಗಳ ತೀವ್ರತೆ ಮತ್ತು ಸ್ವರೂಪದಲ್ಲಿ ವ್ಯಷ್ಟಿವ್ಯತ್ಯಾಸಗಳುಂಟು. ಕೆಲವು ಚಿಕಿತ್ಸೆಯು ಪೂರ್ಣಗೊಂಡೊಡನೆ ಮಾಯವಾಗುತ್ತವೆ, ಕೆಲವು ಚಿಕಿತ್ಸಾನಂತರವೂ ಕೆಲವಾರಗಳ ಕಾಲ ಮುಂದುವರಿಯುತ್ತವೆ. ಆಯಾಸ, ಹಸಿವಾಗದಿರುವಿಕೆ, ತೂಕ ಇಳಿಕೆ, ರಕ್ತದ ಘಟಕ ಕೋಶಗಳ ಕೊರತೆ ಮತ್ತು ತತ್ಪರಿಣಾಮವಾಗಿ ದೇಹತಾಪ ಏರಿಕೆ ಅಥವಾ ಚಳಿ, ಚಿಕಿತ್ಸೆಗೊಳಪಟ್ಟ ದೇಹಭಾಗದ ಚರ್ಮದಲ್ಲಿ ನವೆ, ಚರ್ಮ ಕಪ್ಪಾಗುವಿಕೆ, ಬಿಸಿಲು ಅಥವಾ ಶೀತಗಾಳಿಗೆ ಅತಿಸಂವೇದಿತ್ವ ಇವು ಸಾಮಾನ್ಯ ಪಾರ್ಶ್ವಪರಿಣಾಮಗಳು. ಚಿಕಿತ್ಸೆಗೊಳಗಾದ ಭಾಗವನ್ನಾಧರಿಸಿದ ಪಾರ್ಶ್ವಪರಿಣಾಮಗಳೂ ಇವೆ. ಉದಾ: ತಲೆ ಅಥವಾ ಕುತ್ತಿಗೆ - ದಂತಸಂಬಂಧಿತ ತೊಂದರೆಗಳು; ಎದೆ - ಆಹಾರ ನುಂಗಲು ಹಾಗೂ ಉಸಿರಾಡಲು ಕಷ್ಟವಾಗುವುದು, ವಾಂತಿ, ತೂಕ ಇಳಿಕೆ; ಜಠರ ಅಥವಾ ವಸ್ತಿಕುಹರ - ಅತಿಸಾರ, ಗುದನಾಳದಲ್ಲಿ ತೊಂದರೆ, ಓಕರಿಕೆ ಅಥವಾ ವಾಂತಿ, ಹಸಿವಾಗದಿರುವುದು, ತೂಕ ಇಳಿಕೆ, ಮೂತ್ರ ವಿಸರ್ಜಿಸುವಾಗ ನೋವು.
ಬಾಹ್ಯ ಚಿಕಿತ್ಸೆಯ ನೂತನ ತಂತ್ರಗಳು
[ಬದಲಾಯಿಸಿ]ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಿ ಪಾರ್ಶ್ವಪರಿಣಾಮಗಳನ್ನು ಕಡಿಮೆ ಮಾಡಲು ಬಾಹ್ಯ ರೇಡಿಯೊಚಿಕಿತ್ಸೆಯಲ್ಲಿ ನೂತನ ತಂತ್ರಗಳನ್ನು ಪರೀಕ್ಷಿಸಲಾಗುತ್ತಿದೆ. ಅವುಗಳ ಪೈಕಿ ಪ್ರಧಾನವಾದವುಗಳ ಸಂಕ್ಷಿಪ್ತ ವಿವರಣೆ ಮಾತ್ರ ಮುಂದೆ ನೀಡಿದೆ.
ಅನುರೂಪ್ಯ (ಕನ್‌ಫಾರ್ಮಲ್) ರೇಡಿಯೊಚಿಕಿತ್ಸೆ
[ಬದಲಾಯಿಸಿ]ಪ್ರಸಾಮಾನ್ಯ ರೇಡಿಯೊಚಿಕಿತ್ಸೆಯಲ್ಲಿ ಉಪಯೋಗಿಸುವ ರೇಖೀಯ ವೇಗೋತ್ಕರ್ಷಕದಿಂದ ಹೊಮ್ಮುವ ಎಕ್ಸ್-ಕಿರಣ ದೂಲದ ಹಾದಿಯಲ್ಲಿ ಲೋಹದ ಇಟ್ಟಿಗೆಗಳನ್ನಿಟ್ಟು ಅದರ ಆಕಾರ ಕ್ಯಾನ್ಸರ್ ಗಂತಿಯದ್ದನ್ನು ಹೋಲುವಂತೆ ಮಾಡುವ ಪ್ರಯತ್ನ ಇದು. ತತ್ಪರಿಣಾಮವಾಗಿ ಗಂತಿಯ ಮೇಲೆ ಮಾತ್ರ ಉಚ್ಚ ಗುಟ್ಟಿಪ್ರಮಾಣದ (ಡೋಸೇಜ್) ವಿಕಿರಣ ಬೀಳುತ್ತದೆ. ಆಸುಪಾಸಿನ ಪ್ರಸಾಮಾನ್ಯ ಕೋಶಗಳಿಗೆ ಆಗುವ ಹಾನಿಯ ಪ್ರಮಾಣ ಕಡಿಮೆ ಆಗುತ್ತದೆ. ಈ ಉದ್ದೇಶಕ್ಕಾಗಿಯೇ ಬಹು-ಪತ್ರ ಸಮಾಂತರಣಕ (ಮಲ್ಟಿಲೀಫ್ ಕಾಲಿಮೇಟರ್) ಎಂಬ ಉಪಕರಣವನ್ನು ರೂಪಿಸಲಾಗಿದೆ. ಕೊಂಚ ಸರಿಸಬಹುದಾದ ಲೋಹದ ಹಾಳೆಗಳುಳ್ಳ ರೇಖೀಯ ವೇಗೋತ್ಕರ್ಷಕವಿದು.
ತೀವ್ರತೆ ಮಾಡ್ಯುಲಿತ (ಇಂಟೆನ್ಸಿಟಿ ಮಾಡ್ಯುಲೇಟೆಡ್) ರೇಡಿಯೊಚಿಕಿತ್ಸೆ
[ಬದಲಾಯಿಸಿ]ಬಹು-ಪತ್ರ ಸಮಾಂತರಣಕವನ್ನೇ ಉಪಯೋಗಿಸುವ ಚಿಕಿತ್ಸಾಕ್ರಮ ಇದಾಗಿದ್ದರೂ ಚಿಕಿತ್ಸಾವಧಿಯಲ್ಲಿ ಲೋಹಹಾಳೆಗಳನ್ನು ಯುಕ್ತರೀತಿಯಲ್ಲಿ ಸರಿಸಿ ಗಂತಿಯ ಎಲ್ಲ ಭಾಗಗಳಿಗೆ ಲಭಿಸುವ ವಿಕಿರಣದ ಗುಟ್ಟಿಪ್ರಮಾಣ ಸ್ಥಿರವಾಗಿರುವಂತೆ ಮಾಡಲಾಗುತ್ತದೆ.
ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಚಿಕಿತ್ಸೆ
[ಬದಲಾಯಿಸಿ]ಸಾಮಾನ್ಯವಾಗಿ ಮಿದುಳು ಗಂತಿ ನಾಶಪಡಿಸಲು ಬಳಸುವ ಈ ಚಿಕಿತ್ಸಾ ವಿಧಾನದಲ್ಲಿ ವಿಭಿನ್ನಕೋನಗಳಿಂದ ಪ್ರಯೋಗಿಸುವ ವಿಕಿರಣ ದೂಲಗಳು ಗಂತಿಯ ಮೇಲೆ ಕೇಂದ್ರೀಕೃತವಾಗುತ್ತವೆ. ಆಸುಪಾಸಿನ ಕೋಶಗಳಿಗೆ ಹಾನಿಯಾಗದಂತೆ ಮಾಡುವ ಪ್ರಯತ್ನ ಇದು.
ಸ್ಟೀರಿಯೊಟ್ಯಾಕ್ಟಿಕ್ ರೇಡಿಯೊಶಸ್ತ್ರಕ್ರಿಯೆ ಅಥವಾ ಗ್ಯಾಮ ಚೂರಿ
[ಬದಲಾಯಿಸಿ]ಸಾಮಾನ್ಯವಾಗಿ ಮಿದುಳು ಗಂತಿ ನಾಶಪಡಿಸಲು ಬಳಸುವ ಈ ಚಿಕಿತ್ಸಾ ವಿಧಾನದಲ್ಲಿ ನೂರಾರು ವಿಭಿನ್ನಕೋನಗಳಿಂದ ಪ್ರಯೋಗಿಸುವ ಗ್ಯಾಮ ವಿಕಿರಣ ದೂಲಗಳು ಗಂತಿಯ ನಿರ್ದಿಷ್ಟ ಸ್ಥಳದಲ್ಲಿ ಬಲು ನಿಖರವಾಗಿ ಕೇಂದ್ರೀಕೃತವಾಗುತ್ತವೆ.
ಆಂತರಿಕ ರೇಡಿಯೊಚಿಕಿತ್ಸೆ
[ಬದಲಾಯಿಸಿ]ತಲೆ ಹಾಗೂ ಕುತ್ತಿಗೆ, ಗರ್ಭಾಶಯ ಕಂಠ (ಸರ್ವಿಕ್ಸ್),[೭] ಗರ್ಭಾಶಯ, ಪ್ರಾಸ್ಟೇಟ್ ಗ್ರಂಥಿ,[೮] ಚರ್ಮಸಂಬಂಧೀ ಕ್ಯಾನ್ಸರ್‌ಗಳಿಗೆ ಸಾಮಾನ್ಯವಾಗಿ ಆಂತರಿಕ ರೇಡಿಯೊಚಿಕಿತ್ಸೆ ಉಪಯುಕ್ತ.[೯] ಯುಕ್ತ ವಿಕಿರಣಪಟು ಘನವಸ್ತುವನ್ನು ಗಂತಿಯ ಸಮೀಪದಲ್ಲಿ ಅಥವಾ ಒಳಗೆ ಇಡುವುದು; ವಿಕರಣಪಟು ದ್ರವವನ್ನು ಕುಡಿಸುವುದು ಅಥವಾ ಅಭಿಧಮನಿಯೊಳಕ್ಕೆ ಚುಚ್ಚಿಹೋಗಿಸುವುದು - ಇವೆರಡರಲ್ಲಿ ಯುಕ್ತವಾದ ತಂತ್ರಮುಖೇನ ಚಿಕಿತ್ಸೆ ಮಾಡುವುದು ಈ ವಿಧಾನದ ವೈಶಿಷ್ಟ್ಯ. ಮೊದಲನೆಯ ತಂತ್ರಕ್ಕೆ ಹ್ರಸ್ವಚಿಕಿತ್ಸೆ (ಬ್ರ್ಯಾಕಿತೆರಪಿ) ಎಂದೂ ಎರಡನೆಯದಕ್ಕೆ ರೇಡಿಯೊಸಮಸ್ಥಾನಿ ಚಿಕಿತ್ಸೆ (ರೇಡಿಯೊಐಸೊಟೋಪ್ ಟ್ರೀಟ್‌ಮೆಂಟ್) ಎಂದೂ ಹೆಸರು. ಇತರರನ್ನು ಅನಾವಶ್ಯಕವಾಗಿ ವಿಕಿರಣಕ್ಕೆ ಒಡ್ಡುವುದನ್ನು ತಪ್ಪಿಸಲೋಸುಗ ಈ ಚಿಕಿತ್ಸಾ ವಿಧಾನಗಳಲ್ಲಿ ಅನೇಕ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
ಪ್ರಮುಖ ತಂತ್ರಗಳು
[ಬದಲಾಯಿಸಿ]ಆಂತರಿಕ ರೇಡಿಯೊಚಿಕಿತ್ಸೆಯ ಪ್ರಮುಖ ತಂತ್ರಗಳ ಸಂಕ್ಷಿಪ್ತ ವಿವರಣೆಗಳು ಮುಂದೆ ಇವೆ.
ಸೀಸಿಯಮ್ ಒಳಸೇರಿಸುವಿಕೆ (ಇನ್ಸರ್ಶನ್): ಗರ್ಭಾಶಯ ಕಂಠ, ಗರ್ಭಾಶಯ ಮತ್ತು ಯೋನಿ ಕ್ಯಾನ್ಸರ್ ಚಿಕಿತ್ಸೆಗೆ ಈ ತಂತ್ರದ ಬಳಕೆ ಇದೆ. ಸೀಸಿಯಮ್-137 ಸಾಮಾನ್ಯವಾಗಿ ಬಳಸುವ ವಿಕಿರಣಾಕರ. ಗಂತಿಯ ಸಂಪರ್ಕದಲ್ಲಿ ವಿಕಿರಣಾಕರವನ್ನಿಡುವ ಸಲುವಾಗಿ ಅಪ್ಲಿಕೇಟರ್ ಎಂಬ ಸಾಧನವನ್ನು ಯೋನಿಯ ಮೂಲಕ ತೂರಿಸಿ ಅದರ ಮೂಲಕ ಅಗತ್ಯವಾದಾಗ ಯುಕ್ತ ಪ್ರಮಾಣದ ಸೀಸಿಯಮ್-137ನ್ನು ಪ್ರಯೋಗಿಸಲಾಗುತ್ತದೆ. ಮೂತ್ರವಿಸರ್ಜನೆಗೆ ಅಡಚಣೆಯಾಗದಂತೆ ತೂರುನಳಿಕೆಯನ್ನೂ ಅಳವಡಿಸಲಾಗುತ್ತದೆ. ಅಪ್ಲಿಕೇಟರ್ ಒಳಕ್ಕೆ ಸೀಸಿಯಮ್ ಹೋಗಿಸಲು ವಿಶಿಷ್ಟ ಯಂತ್ರಗಳ ಉಪಯೋಗವುಂಟು.
ಸೀಸಿಯಮ್ ಅಥವಾ ಇರಿಡಿಯಮ್ ನಾಟಿ (ಇಂಪ್ಲೇಂಟ್): ಬಾಯಿ, ತುಟಿ ಮತ್ತು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಈ ತಂತ್ರದ ಬಳಕೆ ಇದೆ. ಪ್ರಾಸ್ಟೇಟ್ ಗ್ರಂಥಿಯ ಚಿಕ್ಕ ಗಂತಿಗಳ ಚಿಕಿತ್ಸೆಗೂ ಬಳಸುವುದುಂಟು. ಬಲು ಸೂಕ್ಮವಾದ ಸೂಜಿ ಅಥವಾ ಕೊಳವೆ ಮುಖೇನ ವಿಕಿರಣಾಕರವನ್ನು ಗಂತಿಗಳಲ್ಲಿ ನಾಟಿ ಮಾಡಲಾಗುತ್ತದೆ.
ವಿಕಿರಣಪಟು ಸಮಸ್ಥಾನಿಗಳು: ಬಾಯಿಯ ಮೂಲಕ ಅಥವಾ ಅಂತಃಅಭಿಧಮನಿ ಚುಚ್ಚುಮದ್ದು ಮುಖೇನ ದ್ರವರೂಪದಲ್ಲಿ ಇವುಗಳ ನೀಡಿಕೆ. ಉದಾ: ಥೈರಾಯ್ಡ್ ಗ್ರಂಥಿಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೇಡಿಯೊಅಯೊಡೀನ್ ಪಾನೀಯ; ದ್ವಿತೀಯಕ ಅಸ್ಥಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ನೀಡುವ ಚುಚ್ಚುಮದ್ದು.
ಈ ನಮೂನೆಯ ರೇಡಿಯೊಚಿಕಿತ್ಸೆಯಲ್ಲಿಯೂ ಪಾರ್ಶ್ವ ಪರಿಣಾಮಗಳಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ Yerramilli D, Xu AJ, Gillespie EF, Shepherd AF, Beal K, Gomez D, et al. (2020-07-01). "Palliative Radiation Therapy for Oncologic Emergencies in the Setting of COVID-19: Approaches to Balancing Risks and Benefits". Advances in Radiation Oncology (in English). 5 (4): 589–594. doi:10.1016/j.adro.2020.04.001. PMC 7194647. PMID 32363243.
{{cite journal}}
: CS1 maint: unrecognized language (link) - ↑ Rades D, Stalpers LJ, Veninga T, Schulte R, Hoskin PJ, Obralic N, et al. (May 2005). "Evaluation of five radiation schedules and prognostic factors for metastatic spinal cord compression". Journal of Clinical Oncology. 23 (15): 3366–3375. doi:10.1200/JCO.2005.04.754. PMID 15908648.
- ↑ Rades D, Panzner A, Rudat V, Karstens JH, Schild SE (November 2011). "Dose escalation of radiotherapy for metastatic spinal cord compression (MSCC) in patients with relatively favorable survival prognosis". Strahlentherapie und Onkologie. 187 (11): 729–735. doi:10.1007/s00066-011-2266-y. PMID 22037654. S2CID 19991034.
- ↑ Rades D, Šegedin B, Conde-Moreno AJ, Garcia R, Perpar A, Metz M, et al. (February 2016). "Radiotherapy With 4 Gy × 5 Versus 3 Gy × 10 for Metastatic Epidural Spinal Cord Compression: Final Results of the SCORE-2 Trial (ARO 2009/01)". Journal of Clinical Oncology. 34 (6): 597–602. doi:10.1200/JCO.2015.64.0862. PMID 26729431.
- ↑ Hill R, Healy B, Holloway L, Kuncic Z, Thwaites D, Baldock C (March 2014). "Advances in kilovoltage x-ray beam dosimetry". Physics in Medicine and Biology. 59 (6): R183–R231. Bibcode:2014PMB....59R.183H. doi:10.1088/0031-9155/59/6/R183. PMID 24584183. S2CID 18082594.
- ↑ Thwaites DI, Tuohy JB (July 2006). "Back to the future: the history and development of the clinical linear accelerator". Physics in Medicine and Biology. 51 (13): R343–R362. Bibcode:2006PMB....51R.343T. doi:10.1088/0031-9155/51/13/R20. PMID 16790912. S2CID 7672187.
- ↑ Gerbaulet A, et al. (2005). "Cervix carcinoma". In Gerbaulet A, Pötter R, Mazeron J, Limbergen EV (eds.). The GEC ESTRO handbook of brachytherapy. Belgium: ACCO.
- ↑ Ash D, et al. (2005). "Prostate cancer". In Gerbaulet A, Pötter R, Mazeron J, Limbergen EV (eds.). The GEC ESTRO handbook of brachytherapy. Belgium: ACCO.
- ↑ Gerbaulet A, et al. (2005). "General aspects". In Gerbaulet A, Pötter R, Mazeron J, Limbergen EV (eds.). The GEC ESTRO handbook of brachytherapy. Belgium: ACCO.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Information
- Human Health Campus The official website of the International Atomic Energy Agency dedicated to Professionals in Radiation Medicine. This site is managed by the Division of Human Health, Department of Nuclear Sciences and Applications
- RT Answers – ASTRO: patient information site Archived 2019-07-31 ವೇಬ್ಯಾಕ್ ಮೆಷಿನ್ ನಲ್ಲಿ.
- The Radiation Therapy Oncology Group: an organisation for radiation oncology research
- RadiologyInfo Archived 2023-12-11 ವೇಬ್ಯಾಕ್ ಮೆಷಿನ್ ನಲ್ಲಿ. -The radiology information resource for patients: Radiation Therapy
- Source of cancer stem cells' resistance to radiation explained on YouTube.
- Biologically equivalent dose calculator
- Radiobiology Treatment Gap Compensator Calculator
- About the profession
- PROS (Paediatric Radiation Oncology Society)
- American Society for Radiation Oncology
- European Society for Therapeutic Radiology and Oncology
- Who does what in Radiation Oncology? – Responsibilities of the various personnel within Radiation Oncology in the United States
- Accidents and QA
- Verification of dose calculations in radiation therapy
- Radiation Safety in External Beam Radiotherapy (IAEA)