ಆಲ್ಡಿಹೈಡುಗಳು
ಆಲ್ಡಿಹೈಡುಗಳು ಕೀಟೋನ್‍ಗಳಿಗೆ ಸಂಬಂಧಿಸಿದ ಕಾರ್ಬೊನಿಲ್ (C=0) ಪುಂಜವನ್ನುಳ್ಳ ಸಾವಯವ ಸಂಯಕ್ತಗಳು. ಇವನ್ನು R−CH=O ಎಂಬ ಸಾಮಾನ್ಯ ಅಣುಸೂತ್ರದಿಂದ ನಿರೂಪಿಸಬಹುದು.[೧] ಈ ಸಂಯುಕ್ತಗಳಲ್ಲಿ R ಹೈಡ್ರೊಜನ್, ಆಲ್ಕೈಲ್, ಅರೈಲ್, ಹೋಮೋಸೈಕ್ಲಿಕ್ ಅಥವಾ ಹೆಟೆರೋಸೈಕ್ಲಿಕ್ ಪುಂಜವಾಗಿರಬಹುದು. ಹೆಟೆರೋಸೈಕ್ಲಿಕ್ ಪುಂಜದ ಆಲ್ಡಿಹೈಡುಗಳಲ್ಲಿ ಕಾರ್ಬೊನಿಲ್ ಪುಂಜಕ್ಕೆ ಕೂಡಿಕೊಂಡಿರುವ ಅಣು ಕಾರ್ಬನ್ನೇ ಆಗಿರಬೇಕು. ಈ ಗುಂಪಿನ ಅತಿ ಸರಳ ಸಂಯುಕ್ತವಾದ ಫಾರ್ಮಾಲ್ಡಿಹೈಡಿನಲ್ಲಿ R ಹೈಡ್ರೊಜನ್ ಆಗಿದೆ. ಪಾಲಿಮರ್ ಮತ್ತು ಸುಗಂಧ ಉತ್ಪನ್ನಗಳಿಗಾಗಿ ಆಲ್ಡಿಹೈಡುಗಳು ಬಲು ಜನಜೀವನಕ್ಕೆ ಉಪಯೋಗಕಾರಿಗಳಾಗಿವೆ.
ತಯಾರಿಕೆ
[ಬದಲಾಯಿಸಿ]ಆಲ್ಡಿಹೈಡುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುವ ಹಲವು ಮುಖ್ಯ ವಿಧಾನಗಳು ಉಂಟು.
ಉತ್ಕರ್ಷಣದಿಂದ
[ಬದಲಾಯಿಸಿ]ಮೊದಲ ವರ್ಗದ (ಪ್ರೈಮರಿ) ಆಲ್ಕೊಹಾಲ್‍ಗಳ ಉತ್ಕರ್ಷಣದಿಂದ (ಆಕ್ಸಿಡೇಷನ್). ಈ ಸಮೀಕರಣದಲ್ಲಿ ತೋರಿಸಿರುವಂತೆ ಆಲ್ಡಿಹೈಡುಗಳ ಉತ್ಪತ್ತಿಯಾಗುತ್ತದೆ.[೨]
ಈ ಉತ್ಕರ್ಷಣವನ್ನು ಸಾಧಿಸಲು ಪ್ಲಾಟಿನಂ, ಪೆಲ್ಲೆಡಿಯಂ, ತಾಮ್ರ ಮೊದಲಾದ ವೇಗವರ್ಧಕ ಲೋಹಗಳ ಸಂಪರ್ಕದಲ್ಲಿ ಆಕ್ಸಿಜನ್ನನ್ನಾಗಲೀ, ಕ್ರೋಮಿಯಂ ಟ್ರೈಆಕ್ಸೈಡ್, ಮ್ಯಾಂಗನೀಸ್ ಡೈಆಕ್ಸೈಡ್ ಅಥವಾ ಸಲ್ಫ್ಯೂರಿಕ್ ಆಮ್ಲದಂಥ ರಾಸಾಯನಿಕ ಉತ್ಕರ್ಷಣಕಾರಿಗಳನ್ನಾಗಲೀ ಉಪಯೋಗಿಸಬಹುದು. ಕೈಗಾರಿಕೋದ್ಯಮಗಳಲ್ಲಿ ಆಕ್ಸಿಜನ್ನನ್ನೂ ಪ್ರಯೋಗಶಾಲೆಗಳಲ್ಲಿ ಸಾಮಾನ್ಯವಾಗಿ ರಾಸಾಯನಿಕ ಉತ್ಕರ್ಷಣಕಾರಿಗಳನ್ನೂ ಬಳಸುತ್ತಾರೆ. ಇಂಥ ಕ್ರಿಯೆಗಳಲ್ಲಿ ಉತ್ಕರ್ಷಣ ಮಿತಿಮೀರಿ ಮುಂದುವರಿದು ಅಲ್ಡಿಹೈಡುಗಳು ಆಮ್ಲಗಳಾಗಿ ಪರಿವರ್ತಿತವಾಗದಂತೆ ಜಾಗರೂಕತೆ ವಹಿಸುವುದು ಅವಶ್ಯಕ.
ಆಕ್ಸಿಜನ್ನನ್ನಾಗಲೀ ಅದನ್ನೊದಗಿಸುವ ರಾಸಾಯನಿಕ ಉತ್ಕರ್ಷಣಕಾರಿಗಳನ್ನಾಗಲೀ ಉಪಯೋಗಿಸದೆ ಹೈಡ್ರೊಜನ್ ಪರಿಹರಣಕ್ರಿಯೆಯನ್ನು (ಡೀಹೈಡ್ರೋಜಿನೇಷನ್) ವೇಗವರ್ಧಕಗಳ ನೆರವಿನಿಂದ ಸಾಧಿಸಿ ಆಲ್ಡಿಹೈಡುಗಳನ್ನು ತಯಾರಿಸಬಹುದು.[೩]
ಅಪಕರ್ಷಣದಿಂದ
[ಬದಲಾಯಿಸಿ]ಆಮ್ಲಕ್ಲೋರೈಡುಗಳನ್ನು ವಿಶಿಷ್ಟ ರೀತಿಯಲ್ಲಿ ತಯಾರಿಸಿದ ಪೆಲ್ಲೆಡಿಯಂ ವೇಗವರ್ಧಕದ ನೆರವಿನಿಂದ ಅಪಕರ್ಷಣಕ್ಕೆ (ರಿಡಕ್ಷನ್) ಒಳಪಡಿಸಿ ಈ ಕೆಳಗೆ ತೋರಿಸಿರುವ ಸಮೀಕರಣಕ್ಕನುಗುಣವಾಗಿ ಆಲ್ಡಿಹೈಡುಗಳನ್ನು ತಯಾರಿಸಬಹುದು.
ಉಷ್ಣಕ್ರಿಯೆಯಿಂದ
[ಬದಲಾಯಿಸಿ]ಸಾವಯವ ಆಮ್ಲಗಳ ಕ್ಯಾಲ್ಸಿಯಂ ಲವಣವೊಂದನ್ನು ಕ್ಯಾಲ್ಸಿಯಂ ಫಾರ್ಮೇಟ್‍ನೊಡನೆ ಬೆರೆಸಿ ಸತುವಿನೊಡನೆ ಉಷ್ಣಕ್ರಿಯೆಗೆ (ಪೈರೊಲಿಸಿಸ್) ಒಳಪಡಿಸಿದಾಗ ಆಲ್ಡಿಹೈಡ್ ಸೃಷ್ಟಿಯಾಗುತ್ತದೆ. ಸತು ಈ ಕ್ರಿಯೆಯಲ್ಲಿ ವೇಗವರ್ಧಕ. ನಡೆಯುವ ಕ್ರಿಯೆಯನ್ನು ಮುಂದಿನ ಸಮೀಕರಣದಿಂದ ನಿರೂಪಿಸಬಹುದು.
ಗ್ರಿನ್ಯಾರ್ ಸಂಯುಕ್ತ ಮೂಲಕ ತಯಾರಿಕೆ
[ಬದಲಾಯಿಸಿ]ಗ್ರಿನ್ಯಾರ್ ಸಂಯುಕ್ತಗಳನ್ನು ಆರ್ಥೋಫಾರ್ಮಿಕ್ ಎಸ್ಟರಿನೊಡನೆ ಸಂಯೋಗಕ್ಕೆ ಒಳಪಡಿಸಿದಾಗ ಉತ್ಪತ್ತಿಯಾಗುವ ಮಧ್ಯವರ್ತಿಯ (ಇಂಟರ್ಮಿಡಿಯೆಟ್) ಮೇಲೆ ನೀರಿನ ಕ್ರಿಯೆ ನಡೆದರೆ ಆಲ್ಡಿಹೈಡ್‍ಗಳ ಉತ್ಪತ್ತಿಯಾಗುತ್ತದೆ. ಈ ಬಗೆಯ ಸಂಯೋಜನೆಯನ್ನು ಮುಂದಿನ ಸಮೀಕರಣಗಳಿಂದ ನಿರೂಪಿಸಬಹುದು.
ಆಲ್ಕೇನ್‍ಗಳಿಂದ
[ಬದಲಾಯಿಸಿ]-CH=CH ಪುಂಜವನ್ನುಳ್ಳ ಆಲ್ಕೇನ್‍ಗಳನ್ನು ಓಜೊನಿನೊಡನೆ ಕ್ರಿಯೆಗೆ ಒಳಪಡಿಸಿದಾಗ ಉತ್ಪತ್ತಿಯಾಗುವ ಓಜೋನೈಡ್‍ಗಳನ್ನು ಹೈಡ್ರೊಜನ್ನಿನಿಂದ ಅಪಕರ್ಷಿಸಿ ಆಲ್ಡಿಹೈಡ್‍ಗಳನ್ನು ತಯಾರಿಸಬಹುದು. ಈ ಬಗೆಯ ಕ್ರಿಯೆಯಲ್ಲಿ —CH=CR2 ಪುಂಜವನ್ನುಳ್ಳ ಆಲ್ಕೀನ್‍ಗಳನ್ನು ಉಪಯೋಗಿಸಿದಾಗ ಆಲ್ಡಿಹೈಡ್ ಮತ್ತು ಕೀಟೋನ್‍ಗಳ ಉತ್ಪತ್ತಿಯಾಗುತ್ತದೆ. ಓಜೋನೈಡ್‍ಗಳ ಮೂಲಕ ಈ ಬಗೆಯ ಆಲ್ಡಿಹೈಡ್ ಸಂಯೋಜನೆಯನ್ನು ಮುಂದೆ ತೋರಿಸಿರುವ ಸಮೀಕರಣದಿಂದ ನಿರೂಪಿಸಬಹುದು.
ಗ್ಲೈಕಾಲ್‍ಗಳಿಂದ
[ಬದಲಾಯಿಸಿ]α - β - ಗ್ಲೈಕಾಲ್‍ಗಳನ್ನು ಪರ್‌ಅಯೋಡಿಕ್ ಆಮ್ಲ ಅಥವಾ ಲೆಡ್ ಟೆಟ್ರಅಸಿಟೇಟ್ ಉಪಯೋಗಿಸಿ ಉತ್ಕರ್ಷಿಸಿದಾಗ ಆಲ್ಡಿಹೈಡ್‍ಗಳ ಸೃಷ್ಟಿಯಾಗುತ್ತದೆ.
ಇನ್ನು ಮುಂದೆ ವಿವರಿಸುವ ಎರಡು ವಿಧಾನಗಳನ್ನು ಆರೋಮ್ಯಾಟಿಕ್ ಆಲ್ಡಿಹೈಡ್‍ಗಳನ್ನು ತಯಾರಿಸಲು ಮಾತ್ರ ಉಪಯೋಗಿಸಬಹುದು.
ಟಾಲ್ಯೂಯೀನ್‍ನಿಂದ
[ಬದಲಾಯಿಸಿ]ಆರೋಮ್ಯಾಟಿಕ್ ಪರಮಾಣುವಲಯಕ್ಕೆ (ಆರೊಮ್ಯಾಟಿಕ್ ರಿಂಗ್) ಕೂಡಿಕೊಂಡಿರುವ ಮೀಥೈಲ್ ಪುಂಜವನ್ನು ಕ್ರೋಮಿಯಂ ಟ್ರೈಆಕ್ಸೈಡಿನ ನೆರವಿನಿಂದ ಉತ್ಕರ್ಷಿಸಿ ಬೆಂಜಾಲ್ ಡೈಅಸಿಟೇಟ್‍ಗಳನ್ನು ತಯಾರಿಸಬಹುದು. ಈ ಬೆಂಜಾಲ್ ಡೈಅಸಿಟೇಟ್‍ಗಳ ಮೇಲೆ ನೀರಿನ ಕ್ರಿಯೆ ನಡೆದಾಗ ಬೆಂಜಾಲ್ಡಿಹೈಡ್‍ಗಳ ಸೃಷ್ಟಿ ಆಗುತ್ತದೆ. ಈ ವಿಧಾನವನ್ನು ಅನೇಕ ಪಲ್ಲಟಿತ (ಸಬ್‍ಸ್ಟಿಟ್ಯೂಟೆಡ್) ಬೆಂಜಾಲ್ಡಿಹೈಡ್‍ಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.
ಕ್ಲೋರಿನ್ ಅನಿಲದ ಉತ್ಕರ್ಷಣೆಯಿಂದ
[ಬದಲಾಯಿಸಿ]ಆರೋಮ್ಯಾಟಿಕ್ ಆಲ್ಡಿಹೈಡುಗಳ ತಯಾರಿಕೆಗಾಗಿರುವ ಮತ್ತೊಂದು ವಿಧಾನದಲ್ಲೂ ಪರಮಾಣುವಲಯಕ್ಕೆ ಕೂಡಿರುವ ಮೀಥೈಲ್ ಪುಂಜವನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಈ ಕ್ರಿಯೆಯಲ್ಲಿ ಕ್ಲೋರಿನ್ ಅನಿಲವನ್ನು ಉತ್ಕರ್ಷಣಕಾರಿಯಾಗಿ ಉಪಯೋಗಿಸಿ, ಉತ್ಪತ್ತಿಯಾಗುವ ಡೈಕ್ಲೋರೊಮಧ್ಯವರ್ತಿಯನ್ನು ನೀರಿನೊಡನೆ ಕ್ರಿಯೆಗೆ ಒಳಪಡಿಸಿದಾಗ ಆಲ್ಡಿಹೈಡಿನ ಸೃಷ್ಟಿಯಾಗುತ್ತದೆ. ಈ ಉತ್ಕರ್ಷಣ ಅನಿರ್ಬಂಧ ರ‍್ಯಾಡಿಕಲ್‌ಗಳನ್ನು ಮಧ್ಯವರ್ತಿಯಾಗುಳ್ಳ ಕ್ರಿಯೆಯಾದುದರಿಂದ ರ‍್ಯಾಡಿಕಲ್‌ಗಳ ಉತ್ಪತ್ತಿಗೆ ಬೆಳಕು ಅಥವಾ ೧೩೫೦-೧೭೫೦ ಸೆ. ಉಷ್ಣತೆ ಅಗತ್ಯ. ಈ ಸಂಯೋಜನೆಯ ಪೂರ್ಣಕ್ರಿಯೆಯನ್ನು ಕೆಳಗೆ ತೋರಿಸಿರುವ ಸಮೀಕರಣದಿಂದ ಉದಾಹರಿಸಬಹುದು.
C6H5CH3 + 2Cl2 → C6H5CHCl2 + 2HCl
C6H5CHCl2 + H2O → C6H5C=HO + 2HCl
ಮೀಥೈಲ್‌ಪುಂಜದ ಮೂರು ಹೈಡ್ರೊಜನ್ ಪರಮಾಣುಗಳೂ ಕ್ಲೋರಿನ್ ಪರಮಾಣುಗಳಿಂದ ಪಲ್ಲಟಿತವಾದಾಗ ಡೈಕ್ಲೋರೊಸಂಯುಕ್ತಗಳಿಗೆ ಬದಲಾಗಿ ಟ್ರೈಕ್ಲೋರೊಸಂಯುಕ್ತಗಳ ಉತ್ಪತ್ತಿಯಾಗುತ್ತದೆ. ಇಂಥ ಟ್ರೈಕ್ಲೋರೊಸಂಯುಕ್ತ ಮತ್ತು ನೀರಿನ ಅಣುಗಳ ಸಂಯೋಗದಿಂದ ಆಲ್ಡಿಹೈಡ್ ಬದಲು ಆಮ್ಲದ ಉತ್ಪತ್ತಿಯಾಗುತ್ತದೆ.
C6H5CCl3 + 2H2O → C6H5COOH + 3HCl
ಟ್ರೈಕ್ಲೋರೊ ಸಂಯುಕ್ತ
ಈ ಉಪಉತ್ಪನ್ನ ಆಮ್ಲಗಳಿಗೂ ಬೆಲೆಯಿರುವುದರಿಂದ ಬಲು ಬೇಡಿಕೆ ಉಂಟು.
ಆಲ್ಡಿಹೈಡ್‍ಗಳ ರಾಸಾಯನಿಕ ಕ್ರಿಯೆಗಳು
[ಬದಲಾಯಿಸಿ]ಬಹುಸಂಖ್ಯೆಯ ಆಲ್ಡಿಹೈಡುಗಳು ಬಲು ಸುಲಭವಾಗಿ ಉತ್ಕರ್ಷಣೆಗೆ ಒಳಪಟ್ಟು ಆಮ್ಲಗಳಾಗಿ ಪರಿವರ್ತಿತವಾಗುತ್ತವೆ. ಆದ್ದರಿಂದ ಇವುಗಳ ತಯಾರಿಕೆ, ಸಂಗ್ರಹ ಮತ್ತು ಶೇಖರಣೆಗಳಲ್ಲಿ ಜಾಗರೂಕತೆ ಅವಶ್ಯಕ.[೪]
ಆಲ್ಡಿಹೈಡುಗಳ ರಾಸಾಯನಿಕ ಕ್ರಿಯೆಗಳಿಗೆ ಮುಖ್ಯಕಾರಣ ಕಾರ್ಬೊನಿಲ್ ಪುಂಜ. ಅನೇಕ ಆಲ್ಡಿಹೈಡ್ ಕ್ರಿಯೆಗಳನ್ನು ಕಾರ್ಬೊನಿಲ್ ಪುಂಜಕ್ಕೆ ಆಗುವ ಸೇರ್ಪಡೆಗಳೆಂದು ಪರಿಗಣಿಸಬಹುದು. ಆಲ್ಡಿಹೈಡುಗಳು ಭಾಗವಹಿಸುವ ಹಲವು ಮುಖ್ಯ ರಾಸಾಯನಿಕ ಕ್ರಿಯೆಗಳನ್ನು ಈ ಕೆಳಗೆ ವಿವರಿಸಲಾಗಿದೆ.
1. ಆಲ್ಡಿಹೈಡ್ ಅಣುಗಳ ಕಾರ್ಬೊನಿಲ್ ಪುಂಜಗಳಿಗೆ ಹೈಡ್ರೊಜನ್ ಪರಮಾಣುಗಳು ಸೇರ್ಪಡೆಗೊಂಡರೆ ಪ್ರಥಮ ವರ್ಗದ ಆಲ್ಕೊಹಾಲುಗಳ ಉತ್ಪತ್ತಿಯಾಗುತ್ತದೆ. ಈ ಬಗೆಯ ಜಲಜನಕೀಕರಣ (ಹೈಡ್ರೊಜಿನೇಷನ್) ಅಥವಾ ಅಪಕರ್ಷಣವನ್ನು ವೇಗವರ್ಧಕಗಳ ಸಂಪರ್ಕದಲ್ಲಿ ಹೈಡ್ರೊಜನ್ನನ್ನು ಉಪಯೋಗಿಸಿಯಾಗಲೀ ಇತರ ರಾಸಾಯನಿಕ ಅಪಕರ್ಷಣಕಾರಿಗಳನ್ನು ಉಪಯೋಗಿಸಿಯಾಗಲೀ ಸಾಧಿಸಬಹುದು. ಒಟ್ಟಿನಲ್ಲಿ ಆಗುವ ಕ್ರಿಯೆಯನ್ನು ಮುಂದಿನ ಸಮೀಕರಣ ನಿರೂಪಿಸುತ್ತದೆ.
RCHO + H2 → RCH2OH
ಈ ಬಗೆಯ ಕ್ರಿಯೆಗಾಗಿ ಉಪಯೋಗಿಸುವ ರಾಸಾಯನಿಕ ಅಪಕರ್ಷಣಕಾರಿಗಳಲ್ಲಿ ಅಲ್ಯೂಮಿನಿಯಂ ಆಲ್ಕಾಕ್ಸೈಡುಗಳು ಮುಖ್ಯವಾದುವು. ಇವುಗಳನ್ನು ಉಪಯೋಗಿಸುವ ಓಪೆನಾವರ್ ಅಪಕರ್ಷಣವನ್ನು ಮುಂದಿನ ಸಮೀಕರಣಗಳಿಂದ ನಿರೂಪಿಸಬಹುದು.
R-CHO + Al(OCH2R')3 → RCH2O-Al(OCH2R')2 + R'CHO
RCH2O-Al(OCH2R')2 + H2O → RCH2OH + Al(OH)3 + 2R'CH2OH
2. ಆಲ್ಡಿಹೈಡುಗಳು ಆಲ್ಕೊಹಾಲ್ ಮತ್ತು ಆಮ್ಲಗಳ ನಡುವಣ ಉತ್ಕರ್ಷಣಸ್ಥಿತಿಯನ್ನು (ಆಕ್ಸಿಡೇಷನ್ ಸ್ಟೇಟ್) ಪಡೆದಿರುವ ಸಂಯುಕ್ತಗಳು. ಆದ್ದರಿಂದ ಇವುಗಳ ಅಪಕರ್ಷಣದಿಂದ ಆಲ್ಕೊಹಾಲುಗಳು ಲಭಿಸಿದರೆ ಉತ್ಕರ್ಷಣದಿಂದ ಆಮ್ಲಗಳು ಲಭಿಸುತ್ತವೆ. ಈ ಬಗೆಯ ಉತ್ಕರ್ಷಣ ಯಾವ ನೆರವೂ ಇಲ್ಲದೆ ಬಲು ಸುಲಭವಾಗಿ ಗಾಳಿಯಲ್ಲಿರುವ ಆಕ್ಸಿಜನ್ನಿನಿಂದಲೇ ಆಗುತ್ತದೆ.
ಆದ್ದರಿಂದಲೇ ಆಲ್ಡಿಹೈಡುಗಳನ್ನು ಶೇಖರಿಸಿಡುವಾಗ ಗಾಳಿಯ ಸಂಪರ್ಕವಿಲ್ಲದಂತೆ ನೋಡಿಕೊಳ್ಳುವುದು ಅಗತ್ಯ. ತನ್ನಷ್ಟಕ್ಕೆ ತಾನೇ ಆಗುವ ಈ ಬಗೆಯ ಉತ್ಕರ್ಷಣದ ಹೆಸರು ಸ್ವಯಂಉತ್ಕರ್ಷಣ (ಆಟೊಆಕ್ಸಿಡೇಷನ್).
ಅಮೋನಿಯದಲ್ಲಿ ವಿಲೀನ ಮಾಡಿದ ಸಿಲ್ವರ್ ನೈಟ್ರೇಟ್ ಮತ್ತು ಫೇಲಿಂಗ್ಸ್ ದ್ರಾವಣಗಳನ್ನು (ವಿಲೀನಗೊಂಡಿರುವ ಕ್ಯೂಪ್ರಸ್ ಆಕ್ಸೈಡ್) ರಾಸಾಯನಿಕ ಉತ್ಕರ್ಷಣಕಾರಿಗಳಾಗಿ ಉಪಯೋಗಿಸಬಹುದು. ಈ ಕ್ರಿಯೆಗಳನ್ನು ಸಂಯೋಜನೆಗಳಲ್ಲಿ ಅಷ್ಟಾಗಿ ಉಪಯೋಗಿಸದಿದ್ದರೂ ಆಲ್ಡಿಹೈಡುಗಳ ಇರುವಿಕೆ ಮತ್ತು ಅನನ್ಯತೆಗಳನ್ನು ಸಾಧಿಸಲು ಉಪಯೋಗಿಸಲಾಗುತ್ತದೆ.
3. ಹೈಡ್ರೊಜನ್ ಸಯನೈಡ್ ಮತ್ತು ಬೈಸಲ್ಫೈಟುಗಳು ಆಲ್ಡಿಹೈಡ್ ಕಾರ್ಬೊನಿಲ್ ಪುಂಜಕ್ಕೆ ಸೇರ್ಪಡೆಗೊಂಡು ಸಯನೊಹೈಡ್ರಿನ್ ಮತ್ತು ಬೈಸಲ್ಫೈಟ್ ಸಂಯುಕ್ತಗಳೆಂಬ ಸೇರ್ಪಡೆ ಸಂಯುಕ್ತಗಳ ಉತ್ಪತ್ತಿಗೆ ಕಾರಣವಾಗುತ್ತವೆ.
ಇವು ಬಲು ಸಡಿಲ ಬಂಧಗಳನ್ನುಳ್ಳ ಸಂಯುಕ್ತಗಳು. ಇವುಗಳಿಂದ ಆಲ್ಡಿಹೈಡುಗಳ ಪುನರುತ್ಪತ್ತಿ ಬಲು ಸುಲಭ. ಆದ್ದರಿಂದ ಬೈಸಲ್ಫೈಟ್ ಸಂಯುಕ್ತಗಳಲ್ಲಿ
OH RCHO + HCN → R-CH CN SO3Na RCHO + NaHSO3 → R-CH OH
ಆಲ್ಡಿಹೈಡುಗಳ ಶುದ್ಧೀಕರಣಕ್ಕಾಗಿ ಉಪಯೋಗಿಸಬಹುದು. ಸಯನೊಹೈಡ್ರಿನ್ನುಗಳನ್ನು ಹಲವು ಆಮ್ಲಗಳ ಸಂಯೋಜನೆಗಳಲ್ಲಿ ಮಧ್ಯವರ್ತಿಗಳಾಗಿ ಉಪಯೋಗಿಸಲಾಗುತ್ತದೆ.
4. ಆಲ್ಕೊಹಾಲ್ ಮತ್ತು ಆಲ್ಡಿಹೈಡುಗಳು ಸಂಯೋಜಿಸಿದಾಗ ಅಸಿಟಾಲ್ ಅಥವಾ ಹೆಮಿಅಸಿಟಾಲ್‍ಗಳ ಉತ್ಪತ್ತಿಯಾಗುತ್ತದೆ.[೫]
ಅನೇಕ ರಾಸಾಯನಿಕ ಸಂಯೋಜನೆಗಳಲ್ಲಿ ಆಲ್ಡಿಹೈಡ್ ಕಾರ್ಬೊನಿಲ್ ಪುಂಜ ಇತರ ರಾಸಾಯನಿಕ ಸಂಯುಕ್ತಗಳೊಡನೆ ಕ್ರಿಯೆಗೆ ಒಳಪಡದಂತೆ ರಕ್ಷಿಸಲು, ಆಲ್ಡಿಹೈಡುಗಳನ್ನು ಅಸಿಟಾಲುಗಳಾಗಿ ಪರಿವರ್ತಿಸಿ, ಸಂಯೋಜನೆಯ ಕ್ರಿಯೆಗಳು ಮುಗಿದ ಅನಂತರ ಅಸಿಟಾಲುಗಳನ್ನು ಆಲ್ಡಿಹೈಡುಗಳಾಗಿ ಪುನಃ ಪರಿವರ್ತಿಸಲಾಗುತ್ತದೆ. ಆಲ್ಕೊಹಾಲ್ ಪ್ರಮಾಣ ಕಡಿಮೆ ಇದ್ದಾಗ ಅಸಿಟಾಲುಗಳ ಬದಲು ಹೆಮಿಅಸಿಟಾಲುಗಳ ಸೃಷ್ಟಿಯಾಗುತ್ತದೆ. ಹೆಮಿಅಸಿಟಾಲುಗಳನ್ನು ಡೈಕ್ರೊಮೇಟಿನಂಥ ಉತ್ಕರ್ಷಣಕಾರಿಗಳ ನೆರವಿನಿಂದ ಎಸ್ಟರುಗಳಾಗಿ ಪರಿವರ್ತಿಸಬಹುದು.
OH OR'
5. ಅಮೋನಿಯ ಅನಿಲದೊಡನೆ ಆಲ್ಡಿಹೈಡುಗಳು ಕೂಡಿ ಆಲ್ಡಿಹೈಡ್ ಅಮೋನಿಯಗಳೆಂಬ ಸೇರ್ಪಡೆ ಸಂಯುಕ್ತಗಳ ಸೃಷ್ಟಿಯಾಗುತ್ತದೆ. ಬಲುಮಟ್ಟಿಗೆ ಈ ಬಗೆಯ ಸೇರ್ಪಡೆ ಸಂಯುಕ್ತಗಳು ಅಸ್ಥಿರ. ಇವುಗಳಿಂದ ಆಲಿಹೈಡುಗಳನ್ನು
H RCHO + NH3 → RC-OH NH2
ಸುಲಭವಾಗಿ ಪುನರುತ್ಪತ್ತಿ ಮಾಡಬಹುದು. ಆದ್ದರಿಂದ ಆಲ್ಡಿಹೈಡುಗಳ ಶುದ್ಧೀಕರಣಕ್ಕಾಗಿ ಈ ಕ್ರಿಯೆಯನ್ನು ಉಪಯೋಗಿಸಲಾಗುತ್ತದೆ. ಅಮೈನುಗಳೊಡನೆಯೂ ಆಲ್ಡಿಹೈಡುಗಳು ಸೇರ್ಪಡೆ ಸಂಯುಕ್ತಗಳನ್ನು ನೀಡುತ್ತವೆ. ಫಾರ್ಮಾಲ್ಡಿಹೈಡಿನಿಂದ ಉತ್ಪತ್ತಿಯಾಗುವ ಈ ಬಗೆಯ ಎರಡು ತೆರದ ಅಮೈನೋಮೆಥನಾಲುಗಳನ್ನು ಮುಂದೆ ತೋರಿಸಿದೆ.
6. ಅಮೈನೊ ಪುಂಜವನ್ನುಳ್ಳ ಹೈಡ್ರಾಕ್ಸಿಲಮೈನ್, ಸೆಮಿಕಾರ್ಬಜೈಡ್ ಮತ್ತು ಅನೇಕ ಹೈಡ್ರಜೀನ್‌ಗಳೊಡನೆ ಆಲ್ಡಿಹೈಡ್ ಕಾರ್ಬೊನಿಲ್ ಪುಂಜದ ಕ್ರಿಯೆ
H H H-C-OH ಮತ್ತು H-C-OH NHR NR2
ನಡೆದಾಗ ಕ್ರಮವಾಗಿ ಆಕ್ಸಿಮ್, ಸೆಮಿಕಾರ್ಬಜೊನ್ ಮತ್ತು ಹೈಡ್ರಜೈ಼ಡುಗಳೆಂಬ ವಿವಿಧ ಸಂಯುಕ್ತಗಳ ಉತ್ಪತ್ತಿಯಾಗುತ್ತದೆ. ಈ ಕ್ರಿಯೆಗಳನ್ನು ಮುಂದೆ ತೋರಿಸಿರುವ ಸಮೀಕರಣಗಳಿಂದ ನಿರೂಪಿಸಬಹುದು.
a) R-CHO + H2NOH → RCH=N-OH + H2O
ಹೈಡ್ರಾಕ್ಸಿಲಮೈನ್ ಆಕ್ಸೀಮ್
b) R-CHO + H2N.CO.NH.NH2 → RCH=N.NH.CO.NH2 + H2O
ಸೆಮಿಕಾರ್ಬಜ಼ೈಡ್ ಸೆಮಿಕಾರ್ಬಜ಼ೋನ್
c) R-CHO + H2N.NHR → RCH=N-NHR + H2O
ಪಲ್ಲಟಿತ ಪಲ್ಲಟಿತ ಹೈಡ್ರಜ಼ೀನ್ ಹೈಡ್ರಜ಼ೋನ್
ಮೇಲೆ ತೋರಿಸಿರುವ ಈ ಕ್ರಿಯೆಗಳನ್ನು ಆಲ್ಡಿಹೈಡ್ ಮತ್ತು ಕೀಟೋನುಗಳ ಅನನ್ಯತೆಯನ್ನು ಸಾಧಿಸಲು ವಿಶೇಷವಾಗಿ ಉಪಯೋಗಿಸಲಾಗುತ್ತದೆ.
7. ಆಲ್ಡಿಹೈಡುಗಳು ಅನೇಕ ಬಹ್ವಂಗಗಳ (ಪಾಲಿಮರ್ಸ್) ತಯಾರಿಕೆಗಳಲ್ಲಿ ಮುಖ್ಯ ಮೂಲವಸ್ತುಗಳು. ಇವುಗಳಿಂದ ಅನೇಕ ಬಗೆಯ ಪ್ಲಾಸ್ಟಿಕ್ ಮತ್ತು ಕೃತಕ ಅಂಟುಗಳನ್ನು ತಯಾರಿಸಬಹುದು. ಹಲವಾರು ಆಲ್ಡಿಹೈಡ್ ಅಣುಗಳು ಪರಸ್ಪರ ತಮ್ಮಲ್ಲೇ ಸಂಯೋಗ ಹೊಂದಿ ಬಹ್ವಂಗಗಳನ್ನು ಉತ್ಪತ್ತಿ ಮಾಡಬಲ್ಲವು. ಫಾರ್ಮಾಲ್ಡಿಹೈಡಿನಿಂದ ಉತ್ಪತ್ತಿಯಾಗುವ ಪ್ಯಾರಫಾರ್ಮಾಲ್ಡಿಹೈಡ್ ಮತ್ತು ಅಸಿಟಾಲ್ಡಿಹೈಡಿನಿಂದ ಉತ್ಪತ್ತಿಯಾಗುವ ಫಾರ್ಮಾಲ್ಡಿಹೈಡ್ ಮತ್ತು ಮೆಟಾಲ್ಡಿಹೈಡುಗಳು ಇಂಥ ಬಹ್ವಂಗಗಳು.
ಹೈಡ್ರೊಜನ್ನನ್ನು ಹೊಂದಿರುವ ಆಲ್ಫಕಾರ್ಬನ್ ಇರುವ (ಕಾರ್ಬೊನಿಲ್ ಪುಂಜದ ಪಕ್ಕದಲ್ಲಿರುವ ಕಾರ್ಬನ್ ಅಣು ಆಲ್ಫಕಾರ್ಬನ್) ಆಲ್ಡಿಹೈಡ್ ಅಣುಗಳಲ್ಲಿ ಎರಡು ಪಟುಕೇಂದ್ರಗಳಿವೆ (ಆಕ್ಟಿವ್ ಸೆಂಟರ್ಸ್). ಆದ್ದರಿಂದ ಎರಡು ಆಲ್ಡಿಹೈಡ್ ಅಣುಗಳು ಕೂಡಿ ದ್ವಯಾಣುಗಳ (ಡೈಮರ್) ಸೃಷ್ಟಿ ಸುಲಭವಾಗಿ ಆಗುತ್ತದೆ. ಈ ಬಗೆಯ ಕ್ರಿಯೆಯಿಂದ ಉತ್ಪತ್ತಿಯಾಗುವ ದ್ವಯಾಣುಗಳನ್ನು ಆಲ್ಡಾಲುಗಳೆಂದೂ ಕ್ರಿಯೆಯನ್ನು ಆಲ್ಡಾಲ್ ಸಂಘನನ (ಕಂಡೆನ್ಸೇಷನ್) ಎಂದೂ ಕರೆಯಲಾಗುತ್ತದೆ.[೬]
CH3CHO + CH3CHO → CH3-CH-CH2-CHO | OH
ಆಲ್ಡಾಲ್ ಸಂಘನನ ಕ್ರಿಯೆಗೆ ಎರಡನೆಯ ಅಣು ಆಲ್ಡಿಹೈಡ್ ಅಣುವೇ ಆಗಿರಬೇಕಾಗಿಲ್ಲ; ಹೈಡ್ರೊಜನ್ ಅಣುವೊಂದನ್ನಾದರೂ ಪಡೆದಿರುವ ಆಲ್ಫಕಾರ್ಬನ್ ಇರುವ ಯಾವ ಕಾರ್ಬೊನಿಲ್ ಸಂಯುಕ್ತವಾದರೂ ಸರಿ. ಎಸ್ಟರುಗಳನ್ನು ಆಲ್ಡಿಹೈಡುಗಳೊಡನೆ ಇಂಥ ಸಂಘನನ ಕ್ರಿಯೆಗಳಲ್ಲಿ ಉಪಯೋಗಿಸಿ ಅನೇಕ ಸಂಯೋಜನೆಗಳನ್ನು ಸಾಧಿಸಬಹುದು; ಮತ್ತು ಹೀಗೆ ಉತ್ಪತ್ತಿಯಾದ ಅಣುಗಳಿಂದ ನೀರಿನ ಅಣುವೊಂದು ಬೇರ್ಪಟ್ಟಾಗ ಹೊಸ ಅಪರ್ಯಾಪ್ತ ಸಂಯುಕ್ತಗಳ ಸೃಷ್ಟಿಯಾಗುತ್ತದೆ.
ಇದೇ ರೀತಿ ಆಲ್ಡಾಲ್ ಅಣುಗಳೂ ನೀರಿನ ಅಣುಗಳನ್ನು ಕಳೆದುಕೊಂಡು ಅಪರ್ಯಾಪ್ತ ಆಲ್ಡಿಹೈಡುಗಳಾಗಬಹುದು.
R' R'
| |
R-CH-CH-CHO R-CH=C-CHO
|
OH
ಆಲ್ಡಾಲ್ ಅಪರ್ಯಾಪ್ತ ಆಲ್ಡಿಹೈಡ್
ಪಟು ಮೆಥಿಲೀನ್ ಪುಂಜಗಳನ್ನುಳ್ಳ ಆಮ್ಲ ಅಥವಾ ಆಮ್ಲದ ಅನ್‌ಹೈಡ್ರೈಡುಗಳೊಡನೆ ಆಗುವ ಆಲ್ಡಿಹೈಡಿನ ಸಂಘನನ ಕ್ರಿಯೆಗೆ ಪರ್ಕಿನ್ ಕ್ರಿಯೆ ಎಂದು ಹೆಸರು. ಈ ಕ್ರಿಯೆ ಸಿನಾಮಿಕ್ ಮತ್ತು ಪಲ್ಲಟಿತ ಸಿನಾಮಿಕ್ ಆಮ್ಲಗಳ ತಯಾರಿಕೆಗಳಲ್ಲಿ ಬಲು ಉಪಯೋಗಕ್ಕೆ ಬರುತ್ತದೆ.
ಆಲ್ಡಿಹೈಡುಗಳು ಫಿನಾಲ್‌ಗಳೊಡನೆ ಸಂಘನನ ಕ್ರಿಯೆಗಳಲ್ಲಿ ಭಾಗವಹಿಸಿದಾಗ ಕ್ರಿಯೆ ನಿರಂತರ ನಡೆದು ಅನೇಕ ಆಲ್ಡಿಹೈಡ್ ಮತ್ತು ಫಿನಾಲ್ ಅಣುಗಳ ಅಂಶಗಳಿಂದ ಕೂಡಿದ ಬೃಹದಣು (ಜಯಂಟ್ ಮಾಲಿಕ್ಯೂಲ್) ಅಥವಾ ಬಹ್ವಂಗಗಳ ಸೃಷ್ಟಿಯಾಗುತ್ತದೆ. ಈ ಬಗೆಯ ಹಲವು ಫಿನಾಲ್-ಆಲ್ಡಿಹೈಡ್ ಬೃಹದಣು ಸಂಯುಕ್ತಗಳನ್ನು ಕೈಗಾರಿಕೋದ್ಯಮಗಳಲ್ಲಿ ಅಂಟುಗಳಾಗಿ ಉಪಯೋಗಿಸಬಹುದು. ಇನ್ನೂ ಅನೇಕ ಬೃಹದಣು ಸಂಯುಕ್ತಗಳು ಪ್ಲಾಸ್ಟಿಕ್‌ಗಳು. ಫಿನಾಲ್ ಮತ್ತು ಫಾರ್ಮಾಲ್ಡಿಹೈಡುಗಳು ಕೂಡಿ ಉತ್ಪತ್ತಿಯಾಗುವ ಬೃಹದಣುವಿನ ರಚನೆಯನ್ನು ಮುಂದೆ ಸ್ಥೂಲವಾಗಿ ತೋರಿಸಲಾಗಿದೆ.
ಫಿನಾಲುಗಳಿಗೆ ಬದಲಾಗಿ ಹಲವು ನೈಟ್ರೊಜನ್ ಸಂಯುಕ್ತಗಳನ್ನೂ ಈ ಬಗೆಯ ಪಾಲಿಮರುಗಳ ತಯಾರಿಕೆಗಳಲ್ಲಿ ಉಪಯೋಗಿಸಬಹುದು. ಯೂರಿಯ-ಫಾರ್ಮಾಲ್ಡಿಹೈಡ್ ಪ್ಲಾಸ್ಟಿಕ್ ಇಂಥ ಬಹ್ವಂಗಗಳ ಒಂದು ಉದಾಹರಣೆ.
8. ಕೆಲವು ಆಲ್ಡಿಹೈಡುಗಳು ಪ್ರತ್ಯಾಮ್ಲಗಳ ಸನ್ನಿಧಿಯಲ್ಲಿ ಅಸಮಾಣುಜನ್ಯಕ್ರಿಯೆಗೆ (ಡಿಸ್‍ಪ್ರಪೋರ್ಷನೇಷನ್) ಒಳಪಟ್ಟು ಏಕಕಾಲ ಉತ್ಕರ್ಷಣ-ಅಪಕರ್ಷಣಗಳಿಂದ ಆಲ್ಕೊಹಾಲ್ ಮತ್ತು ಆಮ್ಲಗಳನ್ನು ಸೃಷ್ಟಿಸುತ್ತವೆ. ಈ ಬಗೆಯ ಕ್ರಿಯೆಯಲ್ಲಿ ಅರ್ಧಭಾಗ ಅಣುಗಳು ಅಪಕರ್ಷಣಕ್ಕೊಳಗಾದರೆ ಉಳಿದರ್ಧ ಅಣುಗಳು ಉತ್ಕರ್ಷಣ ಹೊಂದುತ್ತವೆ. ಆರೋಮ್ಯಾಟಿಕ್ ಆಲ್ಡಿಹೈಡುಗಳೆಲ್ಲವೂ ಇಂಥ
ಅಸಮಾಣುಜನ್ಯಕ್ರಿಯೆಗೆ ಒಳಗಾಗಬಲ್ಲವು. ಕ್ಯಾನಿಜಾರೋ ಕ್ರಿಯೆಯೆಂದು ಹೆಸರು ಪಡೆದಿರುವ ಈ ಕ್ರಿಯೆಯನ್ನು ಆರೋಮ್ಯಾಟಿಕ್ ಆಮ್ಲಗಳನ್ನು ತಯಾರಿಸಲು ಉಪಯೋಗಿಸಲಾಗುತ್ತದೆ. ಇಂಥ ಏಕಕಾಲ ಉತ್ಕರ್ಷಣ-ಅಪಕರ್ಷಣ ಕ್ರಿಯೆಗಳು ಪ್ರಾಣಿ ಶರೀರಗಳ ಹಲವು ಅಂಗಾಂಗಗಳಲ್ಲಿ ನಡೆಯುತ್ತಿರುತ್ತವೆಂದು ನಂಬಲಾಗಿದೆ.
9. ಆರ್ಗಾನೊ ಲಿಥಿಯಂ ಅಥವಾ ಗ್ರಿನಾರ್ಡ್ ಸಂಯುಕ್ತಗಳಂಥ ಆರ್ಗಾನೊ ಲೋಹಸಂಯುಕ್ತಗಳೊಡನೆ ಆಲ್ಡಿಹೈಡುಗಳು ರಾಸಾಯನಿಕ ಕ್ರಿಯೆಗಳಲ್ಲಿ ಭಾಗವಹಿಸಿದಾಗ ಉತ್ಪತ್ತಿಯಾಗುವ ಆರ್ಗಾನೊ ಲೋಹಸಂಯುಕ್ತಗಳಿಂದ ಎರಡನೆಯ ವರ್ಗದ ಆಲ್ಕೊಹಾಲುಗಳನ್ನು ತಯಾರಿಸಬಹುದು.
ಪ್ರಮುಖ ಆಲ್ಡಿಹೈಡುಗಳು ಮತ್ತು ಉಪಯೋಗಗಳು
[ಬದಲಾಯಿಸಿ]ಫಾರ್ಮಾಲ್ಡಿಹೈಡ್: HCHO ಎಂಬ ಅಣುಸೂತ್ರವನ್ನುಳ್ಳ ಫಾರ್ಮಾಲ್ಡಿಹೈಡ್ ಆಲ್ಡಿಹೈಡುಗಳಲ್ಲಿ ಅತಿ ಸರಳ ಸಂಯುಕ್ತ. ಪ್ರಕೃತಿದತ್ತ ವಸ್ತುಗಳಾದ ಮರ, ಕಲ್ಲಿದ್ದಲು ಮೊದಲಾದುವುಗಳ ಅಪೂರ್ಣ ದಹನದಲ್ಲಿ ಫಾರ್ಮಾಲ್ಡಿಹೈಡ್ ಉತ್ಪತ್ತಿಯಾಗುತ್ತದೆ. ಮೀಥೈಲ್ ಆಲ್ಕೊಹಾಲಿನ ಉತ್ಕರ್ಷಣದಿಂದ ಫಾರ್ಮಾಲ್ಡಿಹೈಡನ್ನು ಅಧಿಕ ಪ್ರಮಾಣದಲ್ಲಿ ತಯಾರಿಸಲಾಗುತ್ತಿದೆ.[೭] ಗಾಳಿಯಲ್ಲಿರುವ ಆಕ್ಸಿಜನ್ನನ್ನು ವೇಗವರ್ಧಕಗಳ ಸನ್ನಿಧಿಯಲ್ಲಿ ಉಪಯೋಗಿಸಿ ಈ ಉತ್ಕರ್ಷಣವನ್ನು ಸಾಧಿಸಲಾಗುತ್ತದೆ.
CH3OH + O → HCHO + H2O
ಸಾಮಾನ್ಯ ವಾತಾವರಣದ ಉಷ್ಣತೆಯಲ್ಲಿ ಫಾರ್ಮಾಲ್ಡಿಹೈಡ್ ಅನಿಲವಾಗಿರುವುದರಿಂದ ಈ ಸಂಯುಕ್ತವನ್ನು ಸಾಮಾನ್ಯವಾಗಿ ನೀರಿನಲ್ಲಿ ವಿಲೀನಮಾಡಿ ದ್ರಾವಣವನ್ನು ಬೇಕಾದೆಡೆಗಳಲ್ಲಿ ಉಪಯೋಗಿಸಲಾಗುತ್ತದೆ. ಈ ನೀರಿನ ದ್ರಾವಣದ ಹೆಸರು ಫಾರ್ಮಲಿನ್. ಇದನ್ನು ಅಧಿಕ ಪ್ರಮಾಣದಲ್ಲಿ ಜೀವವಿಜ್ಞಾನಿಗಳು ಕ್ರಿಮಿಗಳ ಮತ್ತು ಪ್ರಾಣಿಗಳ ಶವಗಳನ್ನು ಕೆಡದಂತಿಡಲು ಉಪಯೋಗಿಸುತ್ತಾರೆ.
ಹಿಂದೆ ತಿಳಿಸಿರುವ ಫಾರ್ಮಾಲ್ಡಿಹೈಡಿನ ತ್ರಯಾಣುವಾದ (ಟ್ರೈಮರ್) ಪ್ಯಾರಫಾರ್ಮಾಲ್ಡಿಹೈಡ್ ಒಂದು ಘನವಸ್ತು. ಇದನ್ನು ಉಷ್ಣಕ್ಕೆ ಒಳಪಡಿಸಿದಾಗ ಫಾರ್ಮಾಲ್ಡಿಹೈಡ್ ಬಿಡುಗಡೆಯಾಗುತ್ತದೆ. ಶುದ್ಧ ಫಾರ್ಮಾಲ್ಡಿಹೈಡಿನ ಅವಶ್ಯಕತೆಯಿದ್ದು ನೀರಿನ ದ್ರಾವಣವನ್ನು ಉಪಯೋಗಿಸುವ ಸಾಧ್ಯತೆ ಇಲ್ಲದಾಗ ಈ ತ್ರಯಾಣುವನ್ನು ಫಾರ್ಮಾಲ್ಡಿಹೈಡಿನ ಆಕರವಾಗಿ ಬಳಸಬಹುದು. ಅಮೋನಿಯದೊಡನೆ ಫಾರ್ಮಾಲ್ಡಿಹೈಡ್ ಸಂಯೋಗಿಸಿದಾಗ ಯೂರೋಟ್ರೋಪಿನ್ ಎಂಬ ನವೀನ ಸಂಯುಕ್ತ ಉತ್ಪತ್ತಿಯಾಗುತ್ತದೆ.
ಯೂರೋಟ್ರೋಪಿನನ್ನು ವೈದ್ಯಕೀಯ ರಂಗದಲ್ಲಿ ದೇಹಾಂತರ್ಗತ ಕ್ರಿಮಿನಾಶಕ (ಇಂಟರ್ನಲ್ ಡಿಸ್‍ಇನ್‍ಫೆಕ್ಟೆಂಟ್) ಆಗಿಯೂ ಹಲವು ಸಾಂಕ್ರಾಮಿಕ ರೋಗಗಳಿಗೆ ಔಷಧವಾಗಿಯೂ ಉಪಯೋಗಿಸಲಾಗುತ್ತಿದೆ.
ಅಸಿಟಾಲ್ಡಿಹೈಡ್: ಆಲ್ಕೈಲ್ ಆಲ್ಡಿಹೈಡುಗಳ ಶ್ರೇಣಿಯಲ್ಲಿ ಎರಡನೆಯದಾದ ಅಸಿಟಾಲ್ಡಿಹೈಡ್ ಒಂದು ದ್ರವವಸ್ತು. ಇದನ್ನು ಬೆಳ್ಳಿಯ ಕನ್ನಡಿಗಳ ತಯಾರಿಕೆಯಲ್ಲೂ ಅಸಿಟಿಕ್ ಆಮ್ಲದ ತಯಾರಿಕೆಯಲ್ಲೂ ಉಪಯೋಗಿಸುತ್ತಾರೆ.
ಎರಡರಿಂದ ಹನ್ನೆರಡು ಕಾರ್ಬನ್ ಪರಮಾಣುಗಳನ್ನುಳ್ಳ ಸರಳ ಆಲ್ಡಿಹೈಡುಗಳು ದ್ರವವಸ್ತುಗಳು. ಇನ್ನುಳಿದ ಹೆಚ್ಚು ಕಾರ್ಬನ್ ಪರಮಾಣುಗಳನ್ನುಳ್ಳ ಆಲ್ಡಿಹೈಡುಗಳು ಘನವಸ್ತುಗಳು. ಅಲ್ಪ ಸಂಖ್ಯೆಯಲ್ಲಿ ಕಾರ್ಬನ್ ಪರಮಾಣುಗಳನ್ನುಳ್ಳ ಆಲ್ಡಿಹೈಡುಗಳ ವಾಸನೆ ತೀಕ್ಷ್ಣವಾಗಿದ್ದು ಅಷ್ಟೇನೂ ಸಹ್ಯವಾದುದಲ್ಲ. ಆದರೆ ಹೆಚ್ಚು ಅಣುಭಾರವಿರುವ ಆಲ್ಡಿಹೈಡುಗಳ ವಾಸನೆ ಮಧುರ. 8-14 ಕಾರ್ಬನ್ ಪರಮಾಣುಗಳನ್ನುಳ್ಳ ಆಲ್ಡಿಹೈಡುಗಳನ್ನು ಸುಗಂಧದ ಉದ್ದಿಮೆಯಲ್ಲಿ ಉಪಯೋಗಿಸಲಾಗುತ್ತದೆ. ಓಯ್ನೆಂಥಾಲ್ ಎಂಬ ಹೆಸರಿನ 7 ಕಾರ್ಬನ್ ಪರಮಾಣುಗಳಿರುವ ಆಲ್ಡಿಹೈಡನ್ನು ಅನೇಕ ಸುಗಂಧದ್ರವ್ಯಗಳಲ್ಲಿ ಬಳಸಲಾಗುತ್ತಿದೆ. ಸಿಟ್ರೊನೆಲ್ಲ ತೈಲ, ಗುಲಾಬಿ ತೈಲ ಮೊದಲಾದ ಸುಗಂಧತೈಲಗಳ ಸುವಾಸನೆಗೆ ಅವುಗಳಲ್ಲಿರುವ ಕ್ಯಾಪ್ರಿಲಿಕ್ ಮತ್ತು ಪೆಲಾರ್ಗೋನಿಕ್ ಆಲ್ಡಿಹೈಡುಗಳೇ ಕಾರಣ. ಪ್ರಕೃತಿಯಲ್ಲಿ ದೊರೆಯುವ ಆಲ್ಡಿಹೈಡುಗಳನ್ನು ಮಾತ್ರವಲ್ಲದೆ ಕೃತಕವಾಗಿ ತಯಾರಿಸಿದ ಅನೇಕ ಆಲ್ಡಿಹೈಡುಗಳನ್ನು ಸುಗಂಧದ್ರವ್ಯ ಉದ್ದಿಮೆಯಲ್ಲಿ ಉಪಯೋಗಿಸುತ್ತಿದ್ದಾರೆ. ಗ್ಲಿಸರಾಲಿನಿಂದ ತಯಾರಿಸಬಹುದಾದ ಅಕ್ರೊಲಿನ್ ಎಂಬ ಅಪರ್ಯಾಪ್ತ ಆಲ್ಡಿಹೈಡ್ ಬಹು ಪಟುವಾದ ಸಂಯುಕ್ತ. ಅಕ್ರೊಲಿನ್ ಮತ್ತು ಅದೇ ಶ್ರೇಣಿಗೆ ಸೇರಿದ ಇತರ ಆಲ್ಡಿಹೈಡುಗಳನ್ನು ಅನೇಕ ಸಾವಯವ ಸಂಯೋಜನೆಗಳಲ್ಲಿ ಉಪಯೋಗಿಸಲಾಗುತ್ತದೆ. ನಿಂಬೆಯ ಹಣ್ಣಿನ ವಾಸನೆಗೆ ಕಾರಣವಾದ ಸಿಟ್ರೊನೆಲ್ಲಾಲ್ ಮತ್ತು ಸಿಟ್ರಾಲ್ ಎಂಬ ಆಲ್ಡಿಹೈಡುಗಳು ನಿಂಬೆಹಣ್ಣಿನ ಸಿಪ್ಪೆಯಲ್ಲಿ ಮಾತ್ರವಲ್ಲದೆ ಲೆಮನ್‍ಗ್ರಾಸ್ ತೈಲ, ನೀಲಗಿರಿ ತೈಲ, ಸಿಟ್ರೋನೆಲ್ಲ ತೈಲ ಮತ್ತು ವರ್ಬೀನ ತೈಲವೇ ಮೊದಲಾದ ಅನೇಕ ತೈಲಗಳಲ್ಲಿ ಇವೆ. ಸಿಟ್ರಾಲನ್ನು ನೇರವಾಗಿ ಸುಗಂಧ ದ್ರವ್ಯವಾಗಿ ಬಳಸುವುದು ಮಾತ್ರವಲ್ಲದೆ ಅಯನೋನುಗಳೆಂಬ ನೇರಿಳೆ ಬಣ್ಣದ ಪರಿಮಳಗಳ ತಯಾರಿಕೆಯಲ್ಲೂ ಉಪಯೋಗಿಸಲಾಗುತ್ತಿದೆ. ತ್ರಿಬಂಧ (ಟ್ರಿಪಲ್ ಬಾಂಡ್) ಇರುವ ಆಲ್ಡಿಹೈಡುಗಳನ್ನೂ ತಯಾರಿಸಲಾಗಿದೆ. ಈ ಬಗೆಯ ಆಲ್ಡಿಹೈಡುಗಳಲ್ಲಿ ಮುಖ್ಯವಾದ ಪ್ರೊಪಾರ್ಗಿಲ್ ಆಲ್ಡಿಹೈಡ್ (CH≡C-CHO) ಮತ್ತು ಅದೇ ಶ್ರೇಣಿಯ ಇತರ ಆಲ್ಡಿಹೈಡುಗಳು ಅನೇಕ ಸಾವಯವ ಸಂಯೋಜನೆಗಳಲ್ಲಿ ಉಪಯೋಗಕ್ಕೆ ಬರುತ್ತವೆ. [೮]
ಉಲ್ಲೇಖಗಳು
[ಬದಲಾಯಿಸಿ]- ↑ IUPAC Gold Book, aldehydes.
- ↑ https://www2.chemistry.msu.edu/faculty/reusch/VirtTxtJml/aldket1.htm
- ↑ https://www2.chemistry.msu.edu/faculty/reusch/VirtTxtJml/aldket1.htm
- ↑ https://www.chemicalsafetyfacts.org/aldehydes/
- ↑ https://chem.libretexts.org/Bookshelves/Organic_Chemistry/Supplemental_Modules_(Organic_Chemistry)/Aldehydes_and_Ketones/Reactivity_of_Aldehydes_and_Ketones/Addition_of_Alcohols_to_form_Hemiacetals_and_Acetals
- ↑ https://www.chemistryscl.com/reactions/aldol-condensation/main.html
- ↑ Reuss, G.; Disteldorf, W.; Gamer, A. O. and Hilt, A. (2005) "Formaldehyde" in Ullmann's Encyclopedia of Industrial Chemistry. Wiley-VCH, Weinheim. doi:10.1002/14356007.a11_619.
- ↑ https://www.britannica.com/science/aldehyde/Uses-of-aldehydes