ಮುರಿಗೆಪ್ಪ ಚನ್ನವೀರಪ್ಪ ಮೋದಿ

ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ (ಡಾ. ಎಂ ಸಿ ಮೋದಿ) (ಅಕ್ಟೋಬರ್ ೪, ೧೯೧೬ - ನವೆಂಬರ್ ೧೧, ೨೦೦೫) ಭಾರತದ ಪ್ರಖ್ಯಾತ ನೇತ್ರತಜ್ಞರಲ್ಲೊಬ್ಬರು.[] ನೇತ್ರ-ಚಿಕಿತ್ಸೆಯಲ್ಲಿ ಅವರ ಸಾಧನೆ ಅನನ್ಯವಾಗಿದೆ. ತಮ್ಮ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ವೃತ್ತಿ ಜೀವನದಲ್ಲಿ ಇವರು ಸುಮಾರು ೭ ಲಕ್ಷಕ್ಕಿಂತ ಹೆಚ್ಚು ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿ ಗಿನ್ನಿಸ್ ದಾಖಲೆ ಸ್ಥಾಪಿಸಿದ್ದಾರೆ. ಭಾರತ ಸರ್ಕಾರವು ಡಾ. ಮೋದಿಯವರನ್ನು ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಂದ ಸನ್ಮಾನಿಸಿದೆ.

ಡಾ. ಎಂ ಸಿ ಮೋದಿ
M. C. Modi
ಡಾ.ಎಂ. ಸಿ. ಮೋದಿ
ಜನನ
ಮುರಿಗೆಪ್ಪ ಚನ್ನವೀರಪ್ಪ ಮೋದಿ

೪ ಅಕ್ಟೋಬರ್ ೧೯೧೬
ಮರಣನವೆಂಬರ್ ೧೧,೨೦೦೫
ವೃತ್ತಿನೇತ್ರತಜ್ಞ

ಜನನ, ವಿದ್ಯಾಭ್ಯಾಸ, ವೃತ್ತಿ ಜೀವನ

ಬದಲಾಯಿಸಿ

ಮುರಿಗೆಪ್ಪ ಚನ್ನವೀರಪ್ಪ ಮೋದಿಯವರ ಜನ್ಮ ಅಕ್ಟೋಬರ್ ೪ ೧೯೧೬ರಲ್ಲಿ ಬಾಗಲಕೋಟೆಯ ಬೀಳಗಿ ಗ್ರಾಮದಲ್ಲಾಯಿತು.[] ತಂದೆ ಚನ್ನವೀರಪ್ಪ, ತಾಯಿ ದುಂಡಮ್ಮ. ಮೋದಿಯವರು ಜಮಖಂಡಿಯ ಪಿ ಬಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಬೆಳಗಾವಿ ಆಯುರ್ವೇದ ಕಾಲೇಜಿನಲ್ಲಿ ಓದಿ[] ಕೆಬಿ‌ಎಚ್‌ಬಿ ಕಣ್ಣಿನ ಆಸ್ಪತ್ರೆ ಹಾಗೂ ರಾಮವಾಡಿ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯ ಶಿಕ್ಷಣ ಪಡೆದರು. 1935ರಲ್ಲಿ ಮೋದಿಯವರು ಬೆಳಗಾವಿಯ ಕರ್ನಾಟಕ ಆಯುರ್ವೇದ ಕಾಲೇಜಿನಲ್ಲಿ ಐದು ವರ್ಷಗಳ ವೈದ್ಯಕೀಯ ಅಧ್ಯಯನ ಮಾಡಿ ಎಲ್.ಐ.ಎಂ. (ಲೈಸೆನ್ಸಿಯೇಟ್ ಇನ್ ಇಂಟೆಗ್ರೇಟೆಡ್ ಮೆಡಿಸಿನ್) ಪದವಿಯನ್ನು ಪಡೆದ ನಂತರ ಮುಂಬೈನ ಖಾನ್ ಬಹದ್ದೂರ್ ಹಜೀಬ್ ಬಚೌಲಿ ಆಸ್ಪತ್ರೆಯಲ್ಲಿ ಅಧ್ಯಯನ ಮಾಡಿದರು. ಆ ಸಂದರ್ಭದಲ್ಲಿ ಭಾರತದಲ್ಲಿ ದೃಷ್ಟಿದೋಷದ ಸಮಸ್ಯೆ ಇರುವವರು ಚಿಕಿತ್ಸೆಗಾಗಿ ಮುಂಬೈಗೆ ಬರುವಲ್ಲಿ ತಮ್ಮ ಅಡವು ಆಸ್ತಿಗಳನ್ನು ಮಾರಬೇಕಾಗಿ ಬರುತ್ತಿದ್ದ ಪ್ರಸಂಗಗಳನ್ನೂ ಅಂತಹವರ ಬಡತನದ ಪರಿಸ್ಥಿತಿಯನ್ನೂ ಕಣ್ಣಾರೆ ಕಂಡರು. ಬಡತನದ ನಡುವೆಯೂ ವಿದ್ಯಾರ್ಜನೆ ಮುಂದುವರೆಸಿದ ಮೋದಿಯವರು ಕೊಲಂಬಿಯಾ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.

`ಅಂಧರು ನನ್ನ ಬಳಿಗೆ ಬರಲು ಶಕ್ತರಲ್ಲ. ನಾನೇ ಅವರ ಬಳಿಗೆ ಹೋಗಬಾರದೇಕೆ?' ಎಂದು ಅವರಿಗೆ ಈ ಅವಧಿಯಲ್ಲಿ ಅನ್ನಿಸಿತು. ಆಗಿನ ಕಾಲಕ್ಕೆ ಖ್ಯಾತ ನೇತ್ರ ವೈದ್ಯರೆಂದು ಹೆಸರು ಪಡೆದ ಮೋದಿಯವರ ಪ್ರೊಫೆಸರ್ ಆಗಿದ್ದ ಡಾ. ಡಿ.ಎಸ್. ಸರ್‌ದೇಸಾಯ್ ಅವರು ಪಾಟ್ನಾ ಮತ್ತು ಗುಜರಾತಿನಲ್ಲಿ ಹಮ್ಮಿಕೊಂಡಿದ್ದ ನೇತ್ರ ಚಿಕಿತ್ಸೆಯ ಶಿಬಿರದಲ್ಲಿ ಭಾಗವಹಿಸಲು ಮೋದಿಯವರನ್ನು ಆಹ್ವಾನಿಸಿದರು. ಗುರುವಿನ ಜೊತೆ ಕೈಜೋಡಿಸಿ ಸ್ವತಂತ್ರವಾಗಿ ಮೋದಿಯವರು 20 ಮಂದಿಯ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಅಲ್ಲಿ ಕೈಗೊಂಡರು. ಗ್ರಾಮೀಣ ಜನತೆಗೆ ಸೇವೆ ಮಾಡಲು ಅವರಿಗೆ ಇದು ಮತ್ತಷ್ಟು ಪ್ರೇರಕ ಶಕ್ತಿಯನ್ನು ಕೊಟ್ಟಿತು. ಇದರ ಹಿಂದೆಯೇ ಧಾರವಾಡ ಜಿಲ್ಲೆಯ ನರಗಲ್ ಹಳ್ಳಿಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಯ ಶಿಬಿರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸ್ಥಳೀಯರಿಗೆ ಆಗ ಶಸ್ತ್ರ ಚಿಕಿತ್ಸೆಗೆ ತಮ್ಮನ್ನು ಒಡ್ಡಿಕೊಳ್ಳಲು ಇನ್ನೂ ಅಳುಕಿತ್ತು. ಇದನ್ನು ಮನಗಂಡ ಮೋದಿಯವರು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ರೋಗಿಗಳನ್ನುದ್ದೇಶಿಸಿ ಅದು ಅಪಾಯಕಾರಿಯಲ್ಲ ಎಂದು ಮನವರಿಕೆ ಮಾಡಿಕೊಡಲು ದೀರ್ಘ ಪ್ರವಚನವನ್ನೇ ನೀಡಿದರು. ಇದರಿಂದ ಪ್ರೇರಿತರಾಗಿ ಕಣ್ಣಿನ ರೋಗಿಗಳು ಶಸ್ತ್ರ ಚಿಕಿತ್ಸೆಗೆ ಮುಂದಾದರು. ಮುಂದಿನ ಎರಡೇ ಗಂಟೆಯಲ್ಲಿ 20 ಮಂದಿ ಯಶಸ್ವಿಯಾಗಿ ಚಿಕಿತ್ಸೆ ಮಾಡಿಸಿಕೊಂಡರು.

ಮುಂಬೈಯಲ್ಲಿ 1942ರಲ್ಲಿ ಖಾಸಗೀ ವೈದ್ಯವೃತ್ತಿಯನ್ನು ಆರಂಭಿಸಿದರು. ಬೆಳಗಾವಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ ನಂತರ ದಾವಣಗೆರೆಯಲ್ಲಿ ನೆಲೆಸಿದರು. ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರ ಭಾಷಣದಿಂದ ಪ್ರೇರಿತರಾಗಿ[] ಕೆಲವೇ ಸ್ವಯಂಸೇವಕರ ಜತೆ ಹಳ್ಳಿಗಳಿಗೆ ಹೋಗಿ ರೋಗಿಗಳಿಂದ ಹಣ ಪಡೆಯದೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು. ಭಾರತದಲ್ಲಿ ವ್ಯಾಪಕವಾಗಿ ಕಾಡುವ ಅಂಧತ್ವದ ನಿವಾರಣೆ ಇವರ ಬದುಕಿನ ಗುರಿಯಾಯಿತು. ಸಮಾಜದ ಒಳಿತಿಗಾಗಿ ದುಡಿಯಲು ತಮ್ಮನ್ನು ತಾವು ಅರ್ಪಿಸಿಕೊಂಡರು. ವೈಯಕ್ತಿಕ ಸುಖ ಸಂತೋಷ ತ್ಯಜಿಸಿ, ತಮ್ಮ ಪ್ರತಿಭೆ ಮತ್ತು ಪರಿಣತಿಯನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಕಣ್ಣಿಲ್ಲದವರಿಗೆ ಮೋದಿ ಬೆಳಕಾದರು.

ವೈದ್ಯಕೀಯ ವೃತ್ತಿಯಲ್ಲಿ ಮೋದಿಯವರ ಸಾಧನೆ ಅನುಪಮ ಮತ್ತು ಅದ್ವಿತೀಯ. ಅಂಧತ್ವ ನಿವಾರಣೆಗೆ ಇವರು ಹಮ್ಮಿಕೊಂಡ ಆಂದೋಲನದಲ್ಲಿ 1993ರವರೆಗೆ 6,10,564 ಜನರ ಕಣ್ಣುಗಳ ಶಸ್ತ್ರ ಚಿಕಿತ್ಸೆಯನ್ನೂ, 1,21,18,630ಕ್ಕೂ ಹೆಚ್ಚಿನ ರೋಗಿಗಳ ಕಣ್ಣು ತಪಾಸಣೆಯನ್ನು ಇವರು ಮಾಡಿದ್ದಾರೆ.

ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮಾಡುತ್ತಿದ್ದರು. ಕಣ್ಣಿನ ಪೊರೆ (ಕ್ಯಾಟರಾಕ್ಟ್) ತೆಗೆಯುವ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದ್ದ ಡಾ.ಮೋದಿಯವರು ಪ್ರತಿ ಗ್ರಾಮದಲ್ಲೂ ಶಾಲೆ, ಕಾಲೇಜುಗಳನ್ನು ತೆಗೆದುಕೊಂಡು ಅದನ್ನೇ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಿ ಸತತವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು. ರಷ್ಯಾ ಮತ್ತು ಅಮೇರಿಕ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲೂ ತಮ್ಮ ಸೇವೆ ಸಲ್ಲಿಸಿ ಗೌರವಗಳಿಗೆ ಪಾತ್ರರಾಗಿದ್ದರು. ದಾವಣಗೆರೆ, ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ಕಣ್ಣು ಚಿಕಿತ್ಸಾಲಯಗಳನ್ನು ಸ್ಥಾಪಿಸಿದ ಶ್ರೀಯುತರು ತಮ್ಮ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಸೇವೆ ಒದಗಿಸುತ್ತಿದ್ದರು. ಸಾಮೂಹಿಕ ನೇತ್ರ ಚಿಕಿತ್ಸೆ ಹಾಗೂ ಸಂಚಾರಿ ಘಟಕವನ್ನು ತೆರೆದ ಮೊದಲ ವೈದ್ಯ ಎಂಬ ಖ್ಯಾತಿಯನ್ನು ಗಳಿಸಿದ್ದ ಮೋದಿಯವರು ತಮ್ಮ ಸ್ವಂತ ಹಣವನ್ನು ವ್ಯಯಿಸಿ ಬಡಜನರ ಸೇವೆ ಮಾಡುತ್ತಿದ್ದರು.

ಕಣ್ಣಿನ ಆರೋಗ್ಯದ ಕುರಿತು ಅವರ ಮನಸ್ಸು ಎಷ್ಟು ತುಡಿಯುತ್ತಿತ್ತೆಂದರೆ, ರೈಲಿನಲ್ಲಿ ಪ್ರಯಾಣ ಮಾಡುವಾಗಲೂ ಅಲ್ಲಿನ ಪ್ರಯಾಣಿಕರ ಕಣ್ಣುಗಳನ್ನು ಉಚಿತವಾಗಿ ಪರೀಕ್ಷಿಸಿ ಸಲಹೆ ನೀಡುತ್ತಿದ್ದರು. ಡಾ. ಮೋದಿಯವರೇ ಹೇಳುತ್ತಿದ್ದ ಹಾಗೆ ಮೊದ ಮೊದಲು ರೋಗಿಗಳು ಇವರ ಶಿಬಿರಕ್ಕೆ ಬರಲು ಹಿಂಜರಿಯುತ್ತಿದ್ದರು. ಆಪರೇಷನ್‌ ಪದ ಕೇಳಿ ಶಿಬಿರಕ್ಕೆ ಬಂದವರಲ್ಲಿ ಕೆಲವರು ಓಡಿ ಹೋಗುತ್ತಿದ್ದರು. ಆದರೆ ಕ್ರಮೇಣ ಶಸ್ತ್ರ ಚಿಕಿತ್ಸೆಗೊಳಗಾಗಿ ದೃಷ್ಟಿಯನ್ನು ಮತ್ತೆ ಪಡೆದವರನ್ನು ಕಂಡು ಶಿಬಿರಕ್ಕೆ ಬರುವವರು ಹೆಚ್ಚಾದರು. ಅವರ ಸೇವೆಯನ್ನು ಗುರುತಿಸಿದ ಅಂದಿನ ಕರ್ನಾಟಕ ಸರ್ಕಾರ, ಏಕವ್ಯಕ್ತಿಯ ಯುದ್ಧ (one man's war) ಎಂಬ ಒಂದು ಕಿರು ದೃಶ್ಯ ದಾಖಲೆಯನ್ನು ಎಂ.ಎಸ್. ಸತ್ಯು ಅವರ ನಿರ್ದೇಶನದಲ್ಲಿ ತಯಾರಿಸಿತ್ತು, ಹೀಗೆ ಲಕ್ಷಗಟ್ಟಲೆ ಕುರುಡರಿಗೆ ದೃಷ್ಟಿ ನೀಡಿದ ಆ ಮಹಾನ್ ವ್ಯಕ್ತಿಯ ಜ್ಞಾಪಕಾರ್ಥ ದಾವಣಗೆರೆಯಲ್ಲಿ ಮತ್ತು ಬೆಂಗಳೂರಿನಲ್ಲಿ ಮೋದಿ ಕಣ್ಣಿನ ಆಸ್ಪತ್ರೆಗಳಿವೆ.

ತಮ್ಮ ಸುತ್ತ ತ್ಯಾಗಜೀವಿಗಳ ದೊಡ್ಡ ಗುಂಪನ್ನೇ ಬೆಳೆಸಿ, ಮಾನವೀಯ ಸೇವೆಗೆ ನಿಂತ ಮಹಾನ್ ವ್ಯಕ್ತಿ ಇವರು. ಇಂಥವರು ಕೂಡ ತಮ್ಮ ಬದುಕಿನಲ್ಲಿ ಕೆಲವೊಂದು ಕಹಿ ಪ್ರಸಂಗಗಳನ್ನು ಎದುರಿಸಬೇಕಾಯಿತು. ಆಧುನಿಕ ಶಸ್ತ್ರ ಚಿಕಿತ್ಸಾ ವೈದ್ಯರು, ಡಾ. ಮೋದಿಯವರು ಕಳಪೆ ಪರಿಸರದಲ್ಲಿ ಶಸ್ತ್ರ ಕ್ರಿಯೆಯನ್ನು ನಡೆಸುತ್ತಾರೆಂದು ದೂರಿದ್ದರು. ಜೊತೆಗೆ ಮೋದಿಯವರ ವೈದ್ಯಕೀಯ ಹಿನ್ನೆಲೆ ಕೇವಲ ಎಲ್.ಐ.ಎಮ್. ಎಂದೂ ಇತರ ವೈದ್ಯರಿಗಿರುವಂತೆ ಎಲ್.ಸಿ.ಪಿ.ಎಸ್.(ಲೈಸೆನ್ಸಿಯೇಟ್ ಆಫ್ ದಿ ಕಾಲೇಜ್ ಆಫ್ ಫಿಸಿಷಿಯನ್ಸ್ ಅಂಡ್ ಸರ್ಜನ್ಸ್) ಅಲ್ಲವೆಂದೂ ಅವರು ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲು ಅರ್ಹರಲ್ಲವೆಂದೂ ಆರೋಪಿಸಿದ್ದರು. ಕರ್ನಾಟಕ ಸರ್ಕಾರ ಇಂಥ ಆರೋಪಗಳನ್ನು ಸ್ವೀಕರಿಸಲು ಸಿದ್ಧವಿರಲಿಲ್ಲ. ಕಣ್ಣಿನ ಶಸ್ತ್ರ ಚಿಕಿತ್ಸೆಯ ಯಾವುದೇ ಪರಿಣತರಿಗಿಂತ ಇವರು ತ್ವರಿತವಾಗಿ ಚಿಕಿತ್ಸೆ ನಡೆಸುತ್ತಾರೆಂಬುದನ್ನೂ ಒಪ್ಪಿಕೊಂಡಿತು. ಮೋದಿಯವರ ವೃತ್ತಿಪರ ವೈಶಿಷ್ಟ್ಯವೆಂದರೆ ಮೋತಿಬಿಂದು ಶಸ್ತ್ರ ಚಿಕಿತ್ಸೆಗೆ ಇವರು ತೆಗೆದುಕೊಳ್ಳುತ್ತಿದ್ದ ಸಮಯ ಕೇವಲ 14 ಸೆಕೆಂಡುಗಳು ಅಷ್ಟೇ.

ಗಿನ್ನಿಸ್ ದಾಖಲೆ

ಬದಲಾಯಿಸಿ

ಮೋದಿಯವರು ತಿರುಪತಿಯಲ್ಲಿ ಒಂದೆ ದಿನದಲ್ಲಿ ೮೩೩ ಶಸ್ತ್ರ ಚಿಕಿತ್ಸೆ ಮಾಡಿ ವಿಶ್ವ ದಾಖಲೆ ಸ್ಥಾಪಿಸಿದರು.[] ಒಟ್ಟಾರೆ ೭ ಲಕ್ಷಕ್ಕೂ ಹೆಚ್ಚು ಕಣ್ಣಿನ ಶಸ್ತ್ರ ಚಿಕಿತ್ಸೆ ಕೂಡ ಒಂದು ವಿಶ್ವ ದಾಖಲೆ. ಈ ಹಿಂದೆ ಇಂಥ ದಾಖಲೆ ಕೆನಡದ ಆಂಟೇರಿಯೋದ ವೈದ್ಯ ಡಾ. ರಾಬರ್ಟ್ ಮ್ಯಾಕ್ಲ್ಯೂರ್ ಅವರ ಹೆಸರಿನಲ್ಲಿತ್ತು. ಈ ವೈದ್ಯ (1924-78) 20,424 ಶಸ್ತ್ರ ಚಿಕಿತ್ಸೆ ಮಾಡಿ ದಾಖಲೆ ಸ್ಥಾಪಿಸಿದ್ದ. ಡಾ. ಮೋದಿಯವರು ತಮ್ಮ ಜೀವಿತಾವಧಿಯಲ್ಲಿ ಕಣ್ಣಿನ ರೋಗಿಗಳನ್ನು ತಪಾಸಣೆ ಮಾಡಲು 46,120 ಹಳ್ಳಿಗಳನ್ನು ಸಂದರ್ಶಿಸಿದ್ದರು. ಇವುಗಳನ್ನು ಗಿನ್ನಿಸ್ ದಾಖಲೆಗಳ ಪುಸ್ತಕದಲ್ಲಿ ಸೇರಿಸಲಾಗಿದೆ. ಮೋದಿಯವರು ಎಲ್ಲಾ ಪ್ರಶಸ್ತಿ ಪುರಸ್ಕಾರಗಳಿಂದ ಬಂದ ಹಣವನ್ನು ಬಡವರಿಗಾಗಿ ವ್ಯಯಿಸಿದ್ದಾರೆ.

ಮೋದಿಯವರು ಕೆಲಕಾಲ ಕರ್ನಾಟಕ ವಿಧಾನ ಮಂಡಲದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಮೋದಿಯವರು ನವೆಂಬರ್ ೧೧ ೨೦೦೫ರಲ್ಲಿ, ತಮ್ಮ ೯೦ನೆ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ತಮ್ಮ ಕಣ್ಣುಗಳನ್ನು ಮರಣೋತ್ತರವಾಗಿ ದಾನಮಾಡಿದ್ದಾರೆ. ಅವರ ಪುತ್ರ ಡಾ. ಅಮರನಾಥ ಮೋದಿ ಸಹ ನೇತ್ರ ತಜ್ಞರಾಗಿದ್ದಾರೆ.

ಪ್ರಶಸ್ತಿಗಳು, ಸನ್ಮಾನಗಳು

ಬದಲಾಯಿಸಿ
  • ೧೯೫೬ ರಲ್ಲಿ ಪದ್ಮಶ್ರೀ ಕೇಂದ್ರ ಸರಕಾರ, ಇವರ ಸೇವೆ ಮತ್ತು ಸಾಧನೆಗಳನ್ನು ಶ್ಲಾಘಿಸಿ ನೀಡಿದ ಪ್ರಶಸ್ತಿ.
  • ೧೯೬೮ ರಲ್ಲಿ ಪದ್ಮಭೂಷಣ ಪ್ರಶಸ್ತಿ.[]
  • ಮೈಸೂರು, ಕರ್ನಾಟಕ ಮತ್ತು ಪುಣೆ ವಿಶ್ವವಿದ್ಯಾಲಯಗಳು ಶ್ರೀಯುತರಿಗೆ ಗೌರವ ಡಾಕ್ಟರೇಟ್ ನೀಡಿವೆ.
  • ನೈಟ್‌ ಆಫ್ ಬ್ಲೈಂಡ್, ಅಂಬಾಸೆಡರ್ ಆಫ್ ಗುಡ್ ವಿಲ್ ಮತ್ತು ಇತರ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳು ಅವರಿಗೆ ಸಂದಿವೆ.
  • ಕರ್ನಾಟಕ ಸರ್ಕಾರ ಡಾ. ಎಂ ಸಿ ಮೋದಿಯವರನ್ನು ರಾಜ್ಯೋತ್ಸವ ಪ್ರಶಸ್ತಿಯಿಂದ ಗೌರವಿಸಿದೆ.

ನಂತರದ ವರ್ಷಗಳು, ನಿಧನ

ಬದಲಾಯಿಸಿ

ಬಾಳಿನಂಚಿನಲ್ಲಿ ಡಾ. ಮೋದಿಯವರು ದಯಾಮರಣದ ಬಗ್ಗೆ ಪ್ರತಿಪಾದಿಸುತ್ತಿದ್ದರು. ತೀವ್ರ ಬೇನೆಯಿಂದ ನರಳುತ್ತಿರುವ, ಬದುಕುಳಿಯುವ ಸಾಧ್ಯತೆ ಇಲ್ಲದಿರುವ ರೋಗಿಗಳಿಗೆ ಸಾವಿನ ಹಕ್ಕೂ ಇರಬೇಕೆಂದು ಅವರು ಬಲವಾಗಿ ನಂಬಿದ್ದರು. ಆ ಕುರಿತು ಕರಪತ್ರಗಳನ್ನೂ ಕಿರು ಪುಸ್ತಕಗಳನ್ನೂ ರಚಿಸಿದ್ದರು. ಜೊತೆಗೆ ಸರ್ಕಾರದ ಮೇಲೆ ಒತ್ತಡವನ್ನೂ ಹಾಕಿದ್ದರು. 1990ರ ದಶಕದಲ್ಲಿ ಡಾ. ಮೋದಿಯವರನ್ನು ಕರ್ನಾಟಕ ಸರ್ಕಾರ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಆರಿಸಿತ್ತು.[]

ಡಾ.ಎಂ.ಸಿ.ಮೋದಿಯವರು ೨೦೦೫ ನವೆಂಬರ್ ೧೧ರಂದು ನಿಧನರಾದರು.[] ಡಾ. ಮೋದಿ ಸಾವಿನಲ್ಲೂ ಸಾರ್ಥಕತೆ ಪಡೆದವರು. ಅವರ ನಿಧನಾನಂತರ ಅವರ ಎರಡೂ ಕಣ್ಣುಗಳನ್ನು ಅವರ ಕುಟುಂಬದವರು ಅಂಧರಿಗೆ ದಾನ ಮಾಡಿದರು. `ಕಣ್ಣುಕೊಟ್ಟ ಅಣ್ಣ' ಎಂಬ ಬಿರುದು ಈ ದೃಷ್ಟಿಯಿಂದಲೂ ಸಾರ್ಥಕವಾಯಿತು. ಈಗ ಅವರ ಸಾಮಾಜಿಕ ಕಳಕಳಿಯನ್ನು ಅವರ ಪುತ್ರ ಡಾ. ಅಮರನಾಥ ಮತ್ತು ಸೊಸೆ ಡಾ. ಸುವರ್ಣ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ 1980ರಲ್ಲಿ ಮೋದಿಯವರೇ ಸ್ಥಾಪಿಸಿದ ಡಾ. ಮೋದಿ ಕಣ್ಣಿನ ಆಸ್ಪತ್ರೆ ಸುಸಜ್ಜಿತ ಸಲಕರಣೆಗಳಿಂದ ಅತ್ಯಾಧುನಿಕ ಕಣ್ಣಿನ ಆಸ್ಪತ್ರೆಯಾಗಿ ಬೆಳೆದಿದೆ. ಮೋದಿಯವರು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಬಡವರ ಬಗೆಗಿನ ಅನುಕಂಪ ಇವರಲ್ಲೂ ನೆಲೆಗೊಂಡು ಅಂಧರಿಗೆ ಈ ಸಂಸ್ಥೆ ಸದಾ ಮಿಡಿಯುತ್ತಿದೆ. ಮಧುಮೇಹಿಗಳಿಗೆ ಉಚಿತ ಕಣ್ಣಿನ ತಪಾಸಣೆಯನ್ನು ಈ ಸಂಸ್ಥೆ ಹಮ್ಮಿಕೊಂಡು ಪ್ರಶಂಸೆಗೆ ಪಾತ್ರವಾಗಿದೆ. ಮೋದಿಯವರ ಅನುಪಮ ಸೇವೆಯನ್ನು ಅಮೆರಿಕ, ರಷ್ಯ ಮುಂತಾದ ದೇಶಗಳು ಗೌರವಿಸಿದುವು. ಕರ್ನಾಟಕ ಸರ್ಕಾರ ಮೋದಿಯವರ ಬದುಕು, ಸಾಧನೆ ಕುರಿತಂತೆ ಒಂದು ಸಾಕ್ಷ್ಯ ಚಿತ್ರವನ್ನೂ ತಯಾರಿಸಿದೆ.

ಹೆಚ್ಚಿನ ಓದಿಗೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. A visionary's zeal Dr M.C. Modi on a one-man crusade against blindness in Karnataka Anita Pratap May 15, 1988
  2. KANNADA : 'VISWAVIKYATHA MAHANIYARU', PART-2-Prof. K. Bhyrappa
  3. "Dr Mc modi-one-man-crusade-against-blindness-in-karnataka". www.indiatoday.in. Retrieved 16 June 2017.
  4. Murali, T (26 September 2012). "Gifting sight to the poor". The Hindu. Retrieved 1 February 2017.
  5. "Man with a vision". Deccan Herald. 20 ಡಿಸೆಂಬರ್ 2005. Archived from the original on 12 ಫೆಬ್ರವರಿ 2012. Retrieved 24 ಜನವರಿ 2011.
  6. "Padma Awards" (PDF). Ministry of Home Affairs, Government of India. 2015. Archived from the original (PDF) on 19 ಅಕ್ಟೋಬರ್ 2017. Retrieved 21 July 2015.
  7. "Eye surgeon Modi dead". The Hindu. 12 November 2005. Archived from the original on 26 April 2015. Retrieved 8 May 2016.
  8. November 11, 2005 kannada.oneindia.com.'ಬೆಳಕು ತಂದ ಡಾ. ಎಂ.ಸಿ.ಮೋದಿ ಇನ್ನಿಲ್ಲ'

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: