ಭಗತ್ ಸಿಂಗ್
ಭಾರತದ ಸ್ವಾತಂತ್ರ್ಯ ಹೋರಾಟಗಾರ
ಭಗತ್ ಸಿಂಗ್1907 ರಿಂದ 1931 ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ. ಪಂಜಾಬಿನ ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ ಜನಿಸಿದರು.
ಕ್ರಾಂತಿಕಾರಿ ಭಗತ್ ಸಿಂಗ್ | |
---|---|
ಜನನ | ಜರನ್ವಾಲ ತೆಹ್ಸಿಲ್, ಪಂಜಾಬ್, ಬ್ರಿಟಿಷ್ ಭಾರತ | ೨೮ ಸೆಪ್ಟೆಂಬರ್ ೧೯೦೭
ಮರಣ | 23 March 1931 ಲಾಹೋರ್, ಪಂಜಾಬ್, ಬ್ರಿಟಿಷ್ ಭಾರತ | (aged 23)
ರಾಷ್ಟ್ರೀಯತೆ | ಭಾರತೀಯ |
Organization(s) | ನೌಜವಾನ್ ಭಾರತ್ ಸಭಾ,ಕೀರ್ತಿ ಕಿಸಾನ್ ಪಾರ್ಟಿ, ಹಿಂದೂಸ್ತಾನ್ ಸಮಾಜವಾದಿ ಗಣತಂತ್ರವಾದಿ ಸಂಘ |
ಚಳುವಳಿ | ಭಾರತದ ಸ್ವಾತಂತ್ರ್ಯ ಚಳುವಳಿ |
- ಜನನ ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ. ಅವರ ತಾಯಿ ಶ್ರೀಮತಿ ವಿದ್ಯಾವತಿ ಮತ್ತು ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ವೃತ್ತಿ ಮಾಡುತ್ತಿದ್ದ ತಂದೆ ಕಿಶನ್ ಸಿಂಗ್. ಭಗತ್ ಮೇಲೆ ಅತೀವ ಪ್ರಭಾವವನ್ನು ಬೀರಿದ್ದವರೆಂದರೆ ಅವರ ಚಿಕ್ಕಪ್ಪ ಅಜಿತ್ ಸಿಂಗ್.
- ಈಗಾಗಲೇ ಅಜಿತ್ ಸಿಂಗರು ಉಗ್ರ ಭಾಷಣಕಾರರಾಗಿದ್ದು ರೈತರ ನಡುವೆ ಹಲವಾರು ಚಳುವಳಿಗಳನ್ನು ಸಂಘಟಿಸಿ ಬ್ರಿಟೀಷರು ಬಂಧನಕ್ಕೀಡು ಮಾಡಲು ಬಲೆ ನೇಯ್ದಿದ್ದರೂ ಸಿಗದೆ ಅವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಇದರೊಂದಿಗೆ ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟೀಷರು ನಡೆಸಿದ ಮಾರಣಹೋಮದಿಂದುಂಟಾದ ರಕ್ತದ ಕೆಂಪು ಕಲೆ, ಅವರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಬ್ಬಿಸಿ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು.
- ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್ ಸಿಂಗ್ ಸರಭ್ ರವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು. "ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ - ಸ್ವಾತಂತ್ರ್ಯ. ಅದೊಂದೇ ನನ್ನ ಕನಸು" ಎಂಬ ಸರಭ್‌ರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಉದ್ದೀಪನ ಹಚ್ಚಿದ್ದವು. ಇದು ಭಗತ್‌ರನ್ನು ಮೈನವಿರೇಳಿಸಿ ಸಾವಿಗೇ ಸವಾಲು ಹಾಕುವಂತಹ ಗುಣವನ್ನು ಮೈಗೂಡುವಂತೆ ಮಾಡಿತ್ತು.
ಹಿಂದೂಸ್ತಾನ್ ಗಣತಂತ್ರ ಸಂಘಟನೆ
ಬದಲಾಯಿಸಿ- ವಿದ್ಯಾರ್ಥಿ ಜೀವನದಲ್ಲಿ ಅವರು ೧೯೨೧ ರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಭಾವನೆಗಳನ್ನು ಪ್ರಚೋದಿಸುತ್ತಿದ್ದರಿಂದ ಬ್ರಿಟೀಷರು ನಿಷೇಧಿಸಿದ್ದ ರಾಷ್ಟ್ರೀಯ ನಾಟಕ ಕೂಟದ ಸಕ್ರಿಯ ಕಾರ್ಯಕರ್ತನಾಗಿದ್ದುಕೊಂಡೇ ತಾನೂ ಸಹ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಮನೆಯಲ್ಲಿ ಮದುವೆ ಒತ್ತಾಯ ಹೆಚ್ಚಾದಾಗ ಮನೆ ಬಿಟ್ಟು ವಿಧ್ಯಾಭ್ಯಾಸ ತೊರೆದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳಲು 1924 ರಲ್ಲಿ ಕಾನ್ಪುರಕ್ಕೆ ತೆರೆಳಿದರು.
- ಕಾನ್ಪುರದಲ್ಲಿ ಚಂದ್ರಶೇಖರ್ ಆಜಾದ್, ಬಿ.ಕೆ. ದತ್, ಜೆ.ಸಿ.ಚಟರ್ಜಿ, ಬಿಜೊಯ್ ಕ
ಮಾರ್ ಸಿನ್ಹಾ ರಂಥಹ ಕಾರ್ಯಕಾರಿಗಳ ಸಂಪರ್ಕ ಪಡೆದರು. ಈ ಸಮ್ಮಿಲನ ಗಾಳಿ ಮತ್ತು ಬೆಂಕಿ ಒಂದೂಗೂಡಿದಂತಾಗಿ ಸಮರ ಶೀಲ ಹೋರಾಟ ನಡೆಸಲು ಭದ್ರವಾದ ಬುನಾದಿ ಹಾಕಿದವು. ಆ ಸಂದರ್ಭದಲ್ಲಿ ಕ್ರಾಂತಿಕಾರಿ ಸಂಘಟನೆಯೆಂಬ ಹೆಗ್ಗಳಿಕೆಯಿಂದ ಕೆಲಸ ಮಾಡುತ್ತಿದ್ದ ಹಿಂದೂಸ್ತಾನ್ ಗಣತಂತ್ರವಾದಿ ಸಂಘಟನೆಯ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದರು.
- ವಸಾಹತುಶಾಹಿ ಪ್ರಭುತ್ವವನ್ನು ಶಸ್ತ್ರಸಜ್ಜಿತ ಕ್ರಾಂತಿಯ ಮೂಲಕ ಕಿತ್ತೊಗೆಯಲು ಸಚಿಂದ್ರ ನಾಥ ಸನ್ಯಾಲ್, ಜೋಗೇಶ್ ಚಂದ್ರ ಚಟರ್ಜಿ ಮತ್ತು ರಾಮಪ್ರಸಾದ್ ಬಿಸ್ಮಿಲ್ರವರ ನಾಯಕತ್ವದಡಿ 1924 ರ ಅಕ್ಟೋಬರ್ ನಲ್ಲಿ ಹಿಂದೂಸ್ತಾನ್ ಗಣತಂತ್ರ ಸಂಘಟನೆಯನ್ನು ಸ್ಥಾಪಿಸಲಾಗಿತ್ತು.
- ಕಾರ್ಯಾಚರಣೆಯ ದಿನ ತಾವು ನಿಲ್ಲಬೇಕಾದ ಆಯಕಟ್ಟಿನ ಜಾಗವನ್ನು ಇಬ್ಬರೂ ಕ್ರಾಂತಿಕಾರಿಗಳು ನೋಡಿಕೊಂಡರು.
- ಭಗತ್ ನನ್ನು ತಾನಿನ್ನೆಂದೂ ನೋಡಲಾರೆನೇನೋ ಎಂಬ ಭಾರವಾದ ಹೃದಯದಿಂದ ಚಂದ್ರಶೇಖರ್ ಆಜಾದ್ರು ಇವರನ್ನು ಬೀಳ್ಕೊಟ್ಟರು. ಈವೆರಡೂ ಕಾಯಿದೆಗಳು ಅಂಗೀಕಾರಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲವಾದ್ದರಿಂದ ಚರ್ಚೆಯ ನಡುವೆ ಭಗತ್ & ಬಿ.ಕೆ. ದತ್ ಎದ್ದುನಿಂತು ಬಾಂಬೊಂದನ್ನು ಸಭೆಯತ್ತ ಎಸೆದರು. 'ಇಂಕ್ವಿಲಾಬ್-ಜಿಂದಾಬಾದ್', 'ಬ್ರಿಟೀಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ' ಎಂಬ ಘೋಷಣೆಗಳನ್ನು ಕೂಗುತ್ತಾ ಕರಪತ್ರ ತೂರಿದರು.
- ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿದ್ದರೂ ಅದಕ್ಕಾಗಿ ಯಾವುದೇ ಪ್ರಯತ್ನ ಮಾಡದೆ ಇಬ್ಬರೂ ಮಂಜುಗಡೆಯಂತೆ ದಸ್ತಗಿರಿಯಾಗಲು ನಿಂತಾಗ ಕೆಲವು ಸಮಯದ ನಂತರವಷ್ಟೇ ಪೋಲೀಸರು ಎಚ್ಚೆತ್ತು ಅವರನ್ನು ಬಂಧಿಸಲನುವಾದರು. ನ್ಯಾಯಾಲಯವನ್ನು ಪ್ರಚಾರ ಮಾಧ್ಯಮವನ್ನಾಗಿ ಭಗತ್ ಸಂಪೂರ್ಣವಾಗಿ ಬಳಸಿಕೊಂಡು ಕಿವುಡಾಗಿದ್ದ ಬ್ರಿಟೀಷ್ ಪ್ರಭುತ್ವ ಕಿವಿ ನಿಮಿರುವಂತೆ ಮಾಡುವದಷ್ಟೆ ಅವರ ಮತ್ತು ಸಂಘಟನೆಯ ಮುಖ್ಯ ಧ್ಯೇಯವಾಗಿತ್ತು.
- ಅಸೆಂಬ್ಲಿಯಲ್ಲಿ ಬಾಂಬು ದಾಳಿಯಾದ ತಕ್ಷಣವೆ ಪ್ರಗತಿಪರ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಕಾಂಗ್ರೆಸ್ ಸದಸ್ಯ ಚಮನ್ಲಾಲ್ ಇದನ್ನು ಖಂಡಿಸಿ ಬಾಂಬ್ ಎಸೆಯುವುದು ಹುಚ್ಚುತನ ಎಂದದಕ್ಕೆ, ಮೊದಲ ಭೇಟಿಯಲ್ಲಿಯೇ ಭಗತ್ಸಿಂಗ್ರವರು ತನ್ನ ಲಾಯರಾಗಿದ್ದ ಮತ್ತೊಬ್ಬ ಕಾಂಗ್ರೆಸ್ ಸದಸ್ಯ ತರುಣ್ ಅಸಫ್ ಆಲಿಗೆ ಹೇಳಿದ್ದು: 'ನಾವು ಹುಚ್ಚರಲ್ಲ ಎಂಬುದನ್ನು ದಯಮಾಡಿ ಚಮನ್ಲಾಲ್ಗೆ ಮನದಟ್ಟು ಮಾಡಿ. ನಾವು ಸ್ಥಿತಿಗತಿಗಳ, ಆಶೋತ್ತರಗಳ ಗಂಭೀರ ವಿದ್ಯಾಥರ್ಿಗಳು ಎಂಬುದನ್ನು ವಿನಮ್ರವಾಗಿ ತಿಳಿಸುತ್ತೇವೆ'.
- ಭಗತ್ ಸಿಂಗರು ಅಪರಾಧಕ್ಕೆ ಶಿಕ್ಷೆ ವಿಧಿಸಿದ ನಂತರ ಅವರನ್ನು ಕೆಲಕಾಲ ಮಿಯಾನ್ವಾಲಿ ಜೈಲಿನಲ್ಲಿಟ್ಟಿದ್ದು ನಂತರ ಲಾಹೋರ್ ಸೆಂಟ್ರಲ್ ಜೈಲಿಗೆ ರವಾನಿಸಲಾಯಿತು. ಸ್ಯಾಂಡರ್ಸ ಹತ್ಯೆ, ಲಾಹೋರ್ ಪಿತೂರಿ ಮೊಕದ್ದಮೆ ಹೀಗೆ ಹಲವು ಅಪರಾದಗಳ ಸರಣಿ ಪಟ್ಟಿಯನ್ನು ಅವರ ಸುತ್ತಲೂ ಬ್ರಿಟೀಷರು ಹೆಣೆಯಲಾರಂಭಿಸಿದರು. ಅಪ್ರತಿಮ ವೀರರು ಎಲ್ಲಿದ್ದರೂ ಆಸ್ಟೋಟಿಸುತ್ತಾರೆ, ಶತ್ರುಪಾಳೆಯವನ್ನು ಛಿದ್ರಗೊಳಿಸಿತ್ತಾರೆ, ಅವರನ್ನು ಪದೇ ಪದೇ ಘಾಸಿಗೊಳಿಸಿ ಧೂಳಿಪಟಮಾಡುತ್ತಾರೆ.
- ಅಂತೆಯೇ ರಾಜಕೀಯ ಬಂಧಿಗಳಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ಕಿರುಕುಳವನ್ನು ಪ್ರತ್ಯಕ್ಷ ಕಂಡ ಭಗತ್ ಸಿಂಗ್ , ಉತ್ತಮ ಸೌಲಭ್ಯಗಳಿಗಾಗಿ ಉಪವಾಸ ಸತ್ಯಾಗ್ರಹ ಹೂಡಿ ಬಂಧಿಗಳಿಗೆ ಸ್ವಲ್ಪ ಮಟ್ಟಿಗೆ ಉತ್ತಮ ಆಹಾರ ಮತ್ತು ಓದಲು ಬೇಕಾದ ಸೌಲಭ್ಯ ಒದಗಿಸುವಲ್ಲಿ ಸತ್ಯಾಗ್ರಹವು ಯಶಸ್ವಿಯಾಯಿತು. ಚಂದ್ರಶೇಖರ ಅಜಾದ್ ನಾಯಕತ್ವದಲ್ಲಿ ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸಂಘಟನೆಯು ಭಗತ್ರನ್ನು ಜೈಲಿನಿಂದ ಅಪಹರಿಸಿ ಬಿಡಿಸಿಕೊಂಡು ಬರಲು ಯೋಜಿಸಿದ ಯಾವ ತಂತ್ರಗಳೂ ಫಲಿಸದೆ ಕಾರ್ಯಕರ್ತರು ಕಂಗೆಟ್ಟರು.
- ಜೈಲಿನಲ್ಲಿ ಬಂಧಿಯಾಗಿದ್ದ ದಿನಗಳಲ್ಲಿ ಹಲವು ಪುಸ್ತಕಗಳನ್ನು ತರುವಂತೆ ಸಹಚರರಲ್ಲಿ ದುಂಬಾಲು ಬೀಳುತ್ತಿದ್ದರು. ಅವರು ಓದಿ ಮುಗಿಸಿದ ಕೆಲವು ಅತಿ ಮುಖ್ಯ ಪುಸ್ತಕಗಳೆಂದರೆ, 'ಜನತೆ ಏಕೆ ಹೋರಾಡುತ್ತದೆ?', 'ಎರಡನೆ ಅಂತರಾಷ್ಟ್ರೀಯದ ಪತನ', 'ಎಡಪಂಥೀಯ ಸಮತಾವಾದ', 'ಫ್ರಾನ್ಸಿನಲ್ಲಿ ಅಂತರ್ಯುದ್ಧ', 'ಚಾರಿತ್ರಿಕ ಭೌತವಾದದ ಸಿದ್ದಾಂತ', 'ರೈತಾಪಿ ಜನರ ಏಳಿಗೆ ಮತ್ತು ಋಣಬಾಧೆ', ಇತ್ಯಾದಿ. ಅವರು ಚಿಂದಿ ಬಟ್ಟೆಯಲ್ಲಿದ್ದರೂ ಸಹ ಪುಸ್ತಕಗಳ ಜೋಳಿಗೆ ಅವರ ಕಂಕುಳಲ್ಲಿ ಸದಾ ಜೋತಾಡುತ್ತಿತ್ತು.
- ಬಂಡೆಕಲ್ಲುಗಳನ್ನೇ ಪುಡಿಗಟ್ಟುವಷ್ಟು ತೀಕ್ಷ್ಣ ಶಕ್ತಿ ಹೊಂದಿದ್ದ ಭಗತ್ಸಿಂಗ್ ಸೆರೆಮನೆಯ ಸಂಕಷ್ಟ, ಯಾತನೆಗಳಿಂದಾಗಿ ಕೊನೆಕೊನೆಗೆ ಬಸವಳಿದು ಕೃಷವಾಗಿದ್ದ ದೇಹ ಎಂಥಹವರಲ್ಲೂ ಕಣ್ಣೀರು ಹರಿಸುವಂತಿತ್ತು. ಆದರೆ ಅವರ ಕಣ್ಣುಗಳಲ್ಲಿನ ತೇಜಸ್ಸಿನ ಪ್ರಖರತೆ ಮತ್ತಷ್ಟು ಮಗಧಷ್ಟು ಇಮ್ಮಡಿಗೊಳ್ಳುತ್ತಿತ್ತು. ಸೆರೆಮನೆಯಲ್ಲಿದ್ದಷ್ಟೂ ದಿನವೂ 'ಕಾಕೋರಿ ದಿನೋತ್ಸವ', 'ಲೆನಿನ್ ದಿನೋತ್ಸವ', ಹೀಗೆ ಮುಂತಾದ ಕ್ರಾಂತಿಕಾರಿ ಉತ್ಸವಗಳನ್ನು ಆಚರಿಸುತ್ತಾ ಖುಷಿ ಪಡುತ್ತಿದ್ದರು.
- ಸಂಪೂರ್ಣ ಮಾರ್ಕ್ಸ್ ವಾದಿಗಳಾಗಿ ಪರಿವರ್ತಿತರಾಗದಿದ್ದರೂ ಮಾರ್ಕ್ಸ್ ವಾದವನ್ನು ಇಂಚಿಂಚೂ ಅಭ್ಯಸಿಸುತ್ತಾ ವಿಷಯದಿಂದ ವಿಷಯವನ್ನು ಗ್ರಹಿಸುವ ಪ್ರಕ್ರಿಯೆಯ ಹಾದಿಯಲ್ಲಿದ್ದರು. ಅವರು ಅಧ್ಯಯನದ ಮೂಲಕ ಸಿದ್ದಾಂತವನ್ನು ಒಂದು ಅಸ್ತ್ರವಾಗಿ ವಿರೋಧಿಗಳ ಕಪಟತೆಯನ್ನು ಛಿದ್ರಗೊಳಿಸಲು ಕ್ರಿಯೆಯಾಗಿ ಬಳಸುತ್ತಿದ್ದರು. ಲಾಹೋರ್ ಉಚ್ಚ ನ್ಯಾಯಾಲಯದಲ್ಲಿ ಭಗತ್ ಸಿಂಗ್ ನುಡಿದ ಮಾತುಗಳು ಅವರ ಪ್ರಖರ ಪಾಂಡಿತ್ಯಕ್ಕೆ ಹಿಡಿದ ಕನ್ನಡಿಯಂತಿವೆ: 'ಕ್ರಾಂತಿಯ ಖಡ್ಗವನ್ನು ವಿಚಾರದ ಸಾಣೆಕಲ್ಲಿನ ಮೇಲೆ ಹರಿತಗೊಳಿಸಲಾಗುತ್ತದೆ'.
- ಗಾಂಧೀಜಿಯವರ ಬಗ್ಗೆ ಅವರಿಗೆ ಗೌರವವಿದ್ದರೂ ಸೈದ್ದಾಂತಿಕ ನಿಲುಮೆಯ ಕುರಿತು ಅವರು ಈ ರೀತಿ ನುಡಿದಿದ್ದಾರೆ: 'ಗಾಂಧೀಜಿಯು ಒಬ್ಬ ಉದಾರ ಹೃದಯದ ಪರೋಪಕರಿ ಮನುಷ್ಯ. ನಮಗೆ ಅಗತ್ಯವಿರುವುದು ಪರೋಪಕಾರವಲ್ಲ, ಆದರೆ ಚಲನಾತ್ಮಕ ವೈಜ್ಞಾನಿಕ ಸಾಮಾಜಿಕ ಶಕ್ತಿ'. ೧೯೨೯ ರಲ್ಲಿ ಅವರನ್ನು ಬಂಧಿಸುವ ಹೊತ್ತಿಗಾಗಲೇ ಅವರು ಭಯೋತ್ಪಾದಕ ಮತ್ತು ವ್ಯಕ್ತಿಗತವಾದ ವೀರೋಚಿತ ಕಾರ್ಯಗಳಲ್ಲಿ ನಂಬಿಕೆ ಕಳೆದುಕೊಂಡು "ಕ್ರಾಂತಿಯೊಂದು ಸಮೂಹಕ್ಕಾಗಿ ಸಮೂಹ ನಡೆಸುವ ಕ್ರಿಯೆ" ಎಂಬ ದೃಢ ನಿಲುಮೆಗೆ ಬಂದಿದ್ದರು. ಇದಕ್ಕೆ ಪೂರಕವಾಗಿಯೇನೋ ಎಂಬಂತೆ ಅವರನ್ನು ಗಲ್ಲಿಗೇರಿಸುವ ಸ್ವಲ್ಪ ಮುಂಚಿತವಾಗಿ "ನಿಜವಾದ ಕ್ರಾಂತಿಕಾರಿ ಸೇನೆಯು ಹಳ್ಳಿ ಮತ್ತು ಕಾರ್ಖಾನೆಗಳಲ್ಲಿವೆ" ಎಂದಿದ್ದರು.
- ಭಗತ್ ಸಿಂಗ್ ಒಬ್ಬ ಮಾರ್ಕ್ಸ್ ವಾದಿ ಯಾಗಿದ್ದರು ಹಾಗೂ ಅಂದಿನ ಹಿಂದು ಮಹ ಸಭಾ ಮತ್ತು ಮುಸ್ಲಿಂ ಲೀಗ್ ನ ವಿರೋಧಿಯಾಗಿದ್ದರು
ಕ್ರಾಂತಿಕಾರಿಯ ಸಾವಿನ ಘಳಿಗೆಗಳು
ಬದಲಾಯಿಸಿ- ಭಗತ್ ಸಿಂಗ್ ರವರ ಕೊನೆಯ ದಿನಗಳಲ್ಲಿ ಸಂಘಟನೆಯ ಬಹುತೇಕ ಮಂದಿ ಸೆರೆಮನೆಯಲ್ಲಿ ನ್ಯಾಯಾಲಯದ ಕುರಿತು ಚರ್ಚಿಸುತ್ತಿದ್ದಾಗ ರಾಜಗುರು ಮತ್ತು ಭಗತ್ಸಿಂಗ್ರಿಬ್ಬರೂ ಗಲ್ಲಿಗೇರುವುದು ಖಚಿತವೆಂದು ತಿಳಿದಿದ್ದರಿಂದ ಅವರನ್ನು ಹೊರತುಪಡಿಸಿ ತಮಾಷೆಗಾಗಿ ಒಬ್ಬರ ಮೇಲೊಬ್ಬರು ಗಲ್ಲು ಶಿಕ್ಷೆ ವಿಧಿಸಿಕೊಂಡು ನಗೆಯಾಡುತ್ತಿದ್ದರು.'ರಾಜಗುರು ಮತ್ತು ನನಗೆ ಏಕೆ ಶಿಕ್ಷೆ ವಿಧಿಸಲಿಲ್ಲ? ನಮ್ಮನ್ನು ಬಿಡುಗಡೆಗೊಳಿಸುತ್ತೀರೇನು?' ಎಂದು ನಗುತ್ತಾ ಕೇಳಿದ ಭಗತ್ ಸಿಂಗ್ ಮಾತುಗಳು ಅವರಲ್ಲಿ ಕಂಪನ ಸೃಷ್ಟಿಸಿದವು.
- ಯಾರಲ್ಲಿಯೂ ಉತ್ತರವಿಲ್ಲದೆ ನಿಶ್ಯಬ್ಧ, ನಿರ್ಲಿಪ್ತತೆ ಆವರಿಸಿದವು. ಮತ್ತಷ್ಟು ಛೇಡಿಸುವ ಧ್ವನಿಯಲ್ಲಿ 'ವಾಸ್ತವವನ್ನು ಗುರುತಿಸಲು ಭಯವೇ?' ಎಂದು ಭಗತ್ ನುಡಿದಾಗ ಇನ್ನಷ್ಟು ನಿಶ್ಯಬ್ಧ ಮನೆಮಾಡಿ ಸೂತಕದ ವಾತಾವರಣ ಉಂಟಾಯಿತು. ನಿಶ್ಯಬ್ಧ ಮತ್ತು ಮೌನವನ್ನು ತನ್ನ ನಗುವಿನಿಂದ ಭೇಧಿಸುತ್ತಾ ಹೇಳಿದ:"ನಾವು ಸಾಯೋವರೆಗೆ ಕುತ್ತಿಗೆಗೆ ಕುಣಿಕೆ ಬೀರಿ ನಮ್ಮನ್ನು ನೇತು ಹಾಕುವುದು ನಿಜ, ಕಾಮ್ರೇಡ್ಸ್. ಇದು ನನಗೂ ಗೊತ್ತು. ನಿಮಗೂ ಗೊತ್ತು. ಮತ್ತೇಕೆ ಅದರತ್ತ ಕಣ್ಣು ಮುಚ್ಚಿಕೊಳ್ಳಬೇಕು?
- ರಾಷ್ಟ್ರಾಭಿಮಾನಕ್ಕಾಗಿ ಸಿಗುವ ಅತ್ಯುನ್ನತ ಬಹುಮಾನ ಅದು. ಅದು ನನಗೇ ಸಿಗುತ್ತಿರುವುದರಿಂದ ನನಗೆ ಹೆಮ್ಮೆಯೇ. ನನ್ನ ಬಾಹ್ಯ ದೇಹವನ್ನು ನಾಶಗೊಳಿಸಿ ಈ ರಾಷ್ಟ್ರದಲ್ಲಿ ಅವರು ಸುರಕ್ಷಿತವಾಗಿರಬಹುದೆಂದು ಭಾವಿಸಿದ್ದಾರೆ. ಅದು ತಪ್ಪು ಕಲ್ಪನೆಯಷ್ಟೆ. ಅವರು ನನ್ನನ್ನು ಕೊಲ್ಲಬಹುದಾದರೂ, ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ವಿಚಾರಗಳಿಗೆ ಸಾವಿಲ್ಲ, ಸಿದ್ದಾಂತಗಳಿಗೆ ಅಳಿವಿಲ್ಲ. ಅವರು ನನ್ನ ದೇಹವನ್ನು ಪುಡಿಗಟ್ಟಹುದು. ಆದರೆ ನನ್ನ ಚೈತನ್ಯವನ್ನು ಪುಡಿಗಟ್ಟಲಾರರು.
- ಬ್ರಿಟೀಷರು ಈ ನೆಲದಿಂದ ಕಂಬಿ ಕೀಳುವವರೆಗೂ ನನ್ನ ವಿಚಾರಗಳು ಅವರನ್ನು ಅನಿಷ್ಟದಂತೆ ಬೆಂಬಿಡದೆ ಕಾಡುತ್ತವೆ". "ಇದು ಒಂದೆಡೆಯ ಚಿತ್ರಣವಷ್ಟೆ. ಮತ್ತೊಂದೆಡೆಯದ್ದು ಮತ್ತಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಬ್ರಿಟೀಷ್ ಗುಲಾಮಕೋರರಿಗೆ ಜೀವಂತ ಭಗತ್ ಸಿಂಗ್ ಗಿಂತ ಸತ್ತ ಭಗತ್ ಸಿಂಗ್ ಹೆಚ್ಚು ಅಪಾಯಕಾರಿ. ನನ್ನನ್ನು ನೇಣಿಗೇರಿಸಿದ ನಂತರ, ನನ್ನ ಕ್ರಾಂತಿಕಾರಿ ವಿಚಾರಗಳ ಸುವಾಸನೆಯು ನಮ್ಮ ಸುಂದರನಾಡಿನ ವಾತಾವರಣದಲ್ಲಿ ಪಸರಿಸುತ್ತದೆ.
- ಅವು ಯುವಜನರನ್ನು ಪ್ರೇರೇಪಿಸಿ ಸ್ವಾತಂತ್ರ್ಯ ಮತ್ತು ಕ್ರಾಂತಿಗಾಗಿ ಅವರನ್ನು ಹುಚ್ಚರನ್ನಾಗಿಸಿ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ವಿನಾಶದಂಚಿಗೆ ತಳ್ಳುತ್ತವೆ. ಇದು ನನ್ನ ಖಚಿತಾಭಿಪ್ರಾಯ. ರಾಷ್ಟ್ರಕ್ಕಾಗಿ ನಾನು ಸಲ್ಲಿಸಿದ ಸೇವೆ ಮತ್ತು ನನ್ನ ಜನತೆಗಾಗಿ ತೋರಿದ ಪ್ರೀತಿಗಳಿಗೆ ನೀಡುವ ಅತ್ಯುನ್ನತ ಬಹುಮಾನವನ್ನು ನಾನು ಪಡೆಯುವ ದಿನವನ್ನು ಅತಿ ಕಾತುರತೆಯಿಂದ, ಸಂಭ್ರಮ ಸಡಗರದಿಂದ ಇದಿರು ನೋಡುತ್ತಿದ್ದೇನೆ".
ಭಗತ್ ಸಿಂಗ್ ರು ಜೈಲಿನಲ್ಲಿ ಕಳೆದ ಕೊನೆಯ ದಿನಗಳಂದು ಅವರ ತಾಯಿಯ ದಿಟ್ಟತನದ ನುಡಿಗಳು ನಿಜಕ್ಕೂ ಆಪ್ಯಾಯಮಾನ: "ನಿನ್ನ ನಿಲುಮೆಯನ್ನು ಎಂದಿಗೂ ಬದಲಿಸಬೇಡ. ಪ್ರಪಂಚವೇ ಮರೆಯಲಾಗದ ಸಾವು ಎಂದಿಗೂ ಅತ್ಯುತ್ತಮವಾದದ್ದು. 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆಯನ್ನು ಕೊನೆಯವರೆಗೂ ಕೂಗುತ್ತಿರು. ಯಾವ ತಾಯಿಗೂ ಲಭಿಸದ ಹೆಮ್ಮೆ ನನಗುಂಟಾಗಿದೆ".
- ಜೈಲಿನ ವಾರ್ಡನ್ ಚರತ್ ರವರು ಭಗತ್ ಸಿಂಗ್ ಓದಲು ಬಯಸಿದ ಎಲ್ಲ ಪುಸ್ತಕಗಳನ್ನೂ ಜೈಲಿನ ಸೆಲ್ಲಿನೊಳಕ್ಕೆ ಕದ್ದು ತಂದುಕೊಡುತ್ತಿದ್ದರೂ ಭಗತ್ ಸಿಂಗ್ ಓದುವ ವೇಗಕ್ಕೆ ತಕ್ಕಂತೆ ಪುಸ್ತಕಗಳನ್ನೂ ಪೂರೈಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಸಾವಿನ ಕರೆಗಂಟೆಯಂತೆ ಸೈನಿಕ ನೊಬ್ಬ ನೇಣುಗಂಬಕ್ಕೆ ಎಳೆದೊಯ್ಯಲು ಬಂದಾಗಲೂ ಲೆನಿನ್ ಕುರಿತ ಪುಸ್ತಕವನ್ನೋದುತ್ತಿದ್ದ ಭಗತ್ಸಿಂಗ್ರು ಸ್ವಲ್ಪವೂ ವಿಚಲಿತರಾಗದೆ ಪುಸ್ತಕ 'ಮುಗಿಸಿದ ನಂತರ ಬಂದರಾಗುತ್ತದಲ್ಲವೇನು?' ಎಂದು ಸೈನಿಕನಿಗೆ ಗಂಭೀರವಾಗಿಯೇ ಕೇಳಿದುದು ನಿಜಕ್ಕೂ ಮೈನವಿರೇಳಿಸುತ್ತದೆ.
- ಗಲ್ಲಿಗೇರಿಸುವ ದಿನ ಸಹ ಎದೆಗುಂದದೆ ಖುಷಿಯಿಂದಿದ್ದರು. ಗಲ್ಲು ಸ್ಥಳದ ಪ್ಲಾಟ್ಫಾರಂ ಮೇಲೆ ನಿಂತು ಹಗ್ಗಕ್ಕೆ ಮುತ್ತಿಕ್ಕುತ್ತಾ "ಇಂಕ್ವಿಲಾಬ್ ಜಿಂದಾಬಾದ್" ಘೋಷಣೆ ಮಾಡುತ್ತಾ ಸುಖ್ದೇವ್, ಭಗತ್ ಮತ್ತು ರಾಜಗುರು ಕುಣಿಕೆ ಬೀರಿಕೊಂಡರು. ಅಂದು ಸೆರೆಮನೆಯಲ್ಲಿ ಶ್ಮಶಾನಮೌನ ಆವರಿಸಿ, ಯಾರೊಬ್ಬರೂ ಆಹಾರ ಮುಟ್ಟಲಿಲ್ಲ. ಅವರನ್ನು ಗಲ್ಲಿಗೇರಿಸಿದ ವಿಷಯ ತಿಳಿಯದ ಅವರ ಸಂಬಂಧಿಕರು ಸಂಧಿಸಲು ಬಂದಾಗ ಗದ್ಗದಿತರಾದರು.
- ಸಟ್ಲೆಜ್ ನದಿತೀರದಲ್ಲಿ ಕ್ರಾಂತಿಕಾರಿಗಳ ದೇಹವನ್ನು ರಹಸ್ಯವಾಗಿ ಸುಡುತ್ತಿರುವ ವಿಷಯ ತಿಳಿದು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸತೊಡಗಿದರು. ಅಲ್ಲಿ ದೊರೆತದ್ದು ಅರೆಬರೆ ಸುಟ್ಟ ಕ್ರಾಂತಿಕಾರಿಗಳ ದೇಹದ ಬೂದಿಯಷ್ಟೆ. ಬ್ರಿಟಿಷರು ಭಗತ್ ಸಿಂಗ್ ನ್ನು ಕೊಂದದ್ದು ಅವರ ಸಾಮ್ರಾಜ್ಯಶಾಹಿ ಭೂಪಟಕ್ಕೆ ತಾವೇ ಚೂರಿಯಿಂದ ತಿವಿದುಕೊಂಡಂತಾಯಿತಷ್ಟೆ. ಭಗತ್ರನ್ನು ರಕ್ಷಿಸಲು ಗಾಂಧೀಜಿ ನಡೆಸಿದ ಪ್ರಯತ್ನಗಳನ್ನು ಪ್ರಶ್ನಿಸಿ ದೇಶದಾದ್ಯಂತ ಯುವಕರ ಪಡೆಯು ಅವರು ಸಿಕ್ಕಲ್ಲೆಲ್ಲ ಧಮಕಿ ಹಾಕತೊಡಗಿತು.
- ಅಂಥಹದೊಂದು ಸಂದರ್ಭದಲ್ಲಿ ಅವರು ನೀಡಿದ ಉತ್ತರ ಎಂಥಹವರಲ್ಲೂ ವೇದನೆ ಮೂಡಿಸದಿರದು: "ಭಗತ್ಸಿಂಗ್ರನ್ನು ರಕ್ಷಿಸಲು ನನಗಿಚ್ಚೆಯಿರಲಿಲ್ಲವೆಂಬುದು ಸತ್ಯಕ್ಕೆ ದೂರವಾದದ್ದು. ಆದರೆ ನೀವು ಭಗತ್ಸಿಂಗ್ ಎಸಗಿರುವ ತಪ್ಪನ್ನೂ ಅರ್ಥಮಾಡಿಕೊಳ್ಳಬೇಕು". ಆದರೆ ಹಿಂಸೆಯ ಕುರಿತೂ ಬೇಸತ್ತಿದ್ದ ಭಗತ್ಗೆ ಗಾಂಧಿಯ 'ಬೇಜವಾಬ್ದಾರಿ ಯುವಕರು' ಎಂಬ ವರ್ಣನೆ ಕಿರಿಕಿರಿ ಉಂಟು ಮಾಡಿತ್ತು.
- ಸ್ವಾತಂತ್ರ್ಯವನ್ನು ಬ್ರಿಟಿಷರಿಂದ ಕಿತ್ತುಕೊಳ್ಳಬೇಕೇ ಹೊರತು ಅದೇನೂ ಆಕಾಶದಿಂದ ಬೀಳುವುದಿಲ್ಲ ಅಥವಾ ಚಳುವಳಿಗಳನ್ನು ಹಿಂತೆಗೆದುಕೊಂಡು ಶಾಂತಿಯ ಹೋಮ ಮಾಡಿದರೆ ಬರುವುದಲ್ಲವೆಂದು ಭಗತ್ ರಿಗೆ ತಿಳಿದಿತ್ತು. ಕ್ರಾಂತಿಕಾರಿಗಳೆಂದರೆ ಕ್ರೌರ್ಯ, ಬೀಭತ್ಸತೆಗಳ ಮುಖವಾಡ ಹೊದ್ದವರೆಂದು ಭಾವಿಸುವವರು ಭಗತ್ರ ತೇಜಸ್ಸು ತುಂಬಿದ ಮುಖವನ್ನು ನೋಡಿದಲ್ಲಿ ಅವನೊಬ್ಬ ಅಸಾಧಾರಣ ಅದ್ಭುತವೇ ಸರಿಯೆನಿಸುತ್ತದೆ.
- ಭಗತ್ ಸಿಂಗ್ ಯಾವುದೇ ಕ್ಷಣದಲ್ಲೂ ಸಹ ಸಾಧಕನ ಮೂರ್ತಿವೆತ್ತ ಪ್ರತಿಮೆಯಂತಿದ್ದರು. ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೇ ಅಂತಿಮ ಧ್ಯೇಯವೆನ್ನುವ ಅವರ ಮಾತುಗಳು, ಅವರಲ್ಲಿಯ ಮಾನವತೆಯು ಹೆಬ್ಬಂಡೆಯೊಳಗೆ ಅರಳಿ ನಿಂತಿರುವ ಹೂವುಗಳಂತೆ ಸದಾ ರಾರಾಜಿಸುತ್ತಿತ್ತು. ಸದಾ ಕತ್ತಿಯ ಅಲುಗಿನ ಮೇಲೆಯೇ ನಡೆಯುತ್ತಿದ್ದ ಯುವಜನರ ಆಸ್ಫೋಟಕ ಧ್ವನಿ ಇನ್ನಿಲ್ಲದಂತಾದರೂ ಅಂಥಹ ಸಾವಿರಾರು ಪ್ರತಿಧ್ವನಿಗೆ ಕಾರಣವಾಗುವಲ್ಲಿ ಯಶಸ್ವಿಯಾದರು.
- ಅವರ ಸಾವು ಸ್ವಾತಂತ್ರ್ಯದ ಕಿಡಿಯನ್ನು ದೇಶಾದ್ಯಂತ ಮತ್ತಷ್ಟು ವ್ಯಾಪಿಸಿ ಯುವಜನರಲ್ಲಿ ವಿದ್ಯುತ್ ಸಂಚಲನ ಉಂಟುಮಾಡಿತು. ಭಗತ್ ಸಿಂಗ್ ಭವಿಷ್ಯವಾಣಿ ಸುಳ್ಳಾಗಲಿಲ್ಲ. ಅವರ ಹೆಸರು ಸಾವಿಗಳುಕದ ಧೈರ್ಯ, ತ್ಯಾಗ ಬಲಿದಾನ, ರಾಷ್ಟ್ರಾಭಿಮಾನ ಮತ್ತು ತದೇಕಚಿತ್ತತೆಯ ಹೋರಾಟಗಳ ಪ್ರತೀಕವಾಯಿತು. ಅವರ 'ಇಂಕ್ವಿಲಾಬ್ ಜಿಂದಾಬಾದ್ (ಕ್ರಾಂತಿ ಚಿರಾಯುವಾಗಲಿ)' ಘೋಷಣೆಯು ಇಡೀ ರಾಷ್ಟ್ರದ ಯುದ್ದದ ಕೂಗಾಗಿ ಮಾರ್ಪಟ್ಟು ಸಮಾಜವಾದಿ ಸಮಾಜ ನಿರ್ಮಾಣದ ಕನಸನ್ನು ವಿದ್ಯಾವಂತ ಯುವಜನರಲ್ಲಿ ಹಿಡಿದಿಟ್ಟಿತು.
- ೧೯೩೦-೩೨ ರಲ್ಲಿ ಎಲ್ಲ ಜನರು ಒಂದೇ ಮನುಷ್ಯನಂತೆ ನಿಂತರು. ಸೆರೆಮನೆವಾಸಗಳು, ಛಡಿಯೇಟುಗಳು, ಮತ್ತು ಲಾಠಿಯೇಟುಗಳು ಅವರ ಸ್ಫೂರ್ತಿಯನ್ನು ಕಂಗೆಡಿಸಲು ಸಾಧ್ಯವಾಗಲಿಲ್ಲ. ೧೯೪೫-೪೬ ರಲ್ಲಿ ನವಭಾರತ ಉದಯಿಸಿದ್ದನ್ನು ಇಡೀ ಪ್ರಪಂಚವೇ ಕಣ್ಣಾರೆ ಕಂಡಿತು. ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಜನರು, ಜಲಸೇನೆ, ಭೂಸೇನೆ, ವಾಯುಸೇನೆ, ಮತ್ತು ಪೊಲೀಸರು ಸಹ ಬಲವಾದ ಹೊಡೆತಗಳನ್ನನುಭವಿಸಿದರು.
- ೧೯೩೦ ರವರೆಗೆ ಕೆಲವೇ ಕೆಲವರಲ್ಲಿದ್ದ ತ್ಯಾಗ, ಬಲಿದಾನ ಮತ್ತು ಅರ್ಪಣಾ ಮನೋಭಾವನೆಗಳು ಸಮೂಹ ಪ್ರಕ್ರಿಯೆಯಾಗಿ ರಾಷ್ಟ್ರಾದ್ಯಂತ ದಂಗೆಯು ವ್ಯಾಪಿಸಿತು. ಭಗತ್ ಸಿಂಗ್ ಅವರಿಗೆ ಸ್ವಾತಂತ್ರ್ಯ ಸಿಗುವ ಕುರಿತು ಯಾವುದೇ ಅನುಮಾನವಿರಲಿಲ್ಲವಾದರೂ ಅವರು ಆತಂಕ ಗೊಂಡಿದದ್ದು ಬಿಳಿ ಸಾಹೇಬರು ಖಾಲಿ ಮಾಡಿದ ಆಸನದಲ್ಲಿ ಕಂದು ಸಾಹೇಬರು ಕುಳಿತುಕೊಳ್ಳುವರೆಂಬ ಭಯದಿಂದ. 'ಕೇವಲ ಯಜಮಾನರ ಬದಲಾವಣೆಯಿಂದ ಸ್ವಾತಂತ್ರ್ಯ ಬಂದಂತಾಗುವುದಿಲ್ಲ.
- ಪುರಾತನ ವ್ಯವಸ್ಥೆಯನ್ನು ನಾಶಮಾಡದೆ ಹೊಸ ಬದಲಾವಣೆಯನ್ನು ತರುವುದು ಸಾಧ್ಯವಿಲ್ಲ' ಎಂದು ಭಗತ್ ಸಿಂಗ್ ರವರಿಗೆ ಮನವರಿಕೆಯಾಗಿತ್ತು. ಆದರೆ ಪ್ರತಿಭಟನೆಯ ದಿವ್ಯ ಜ್ಯೋತಿ ಆರದಂತೆ ಉರಿಯಲು ತನ್ನಂಥವರು ಸಾಯಲೇಬೇಕೆಂದು ಭಗತ್ ನಂಬಿದ್ದ. ಮಾರ್ಚ್ ೨೩ ೧೯೩೧ ರಂದು ಇವರನ್ನು ಬ್ರಿಟಿಷ್ ಸರ್ಕಾರವು ಗಲ್ಲಿಗೇರಿಸಿತು. . ಭಗತ್ ಸಿಂಗ್ ಸಂಪೂರ್ಣ ನಾಸ್ತಿಕ ಮತ್ತು ಜಾತಿವಿರೋಧಿಯಾಗಿದ್ದರು ಸಾಯುವ ಕೆಲವೇ ನಿಮಿಷಗಳ ಮೊದಲು ಪ್ರಾರ್ಥನೆಯಂತೆ ಭಗತ್ ನುಡಿದ ಮಾತುಗಳು ಎಂಥವರನ್ನೂ ಕೆಚ್ಚೆದೆಯ ಉತ್ತುಂಗಕ್ಕೇರಿಸಬಲ್ಲವು. *'ಮೊದಲು ನಿಮ್ಮ ವೈಯುಕ್ತಿಕತೆಯನ್ನು ನುಚ್ಚುನೂರು ಮಾಡಿ, ವೈಯುಕ್ತಿಕ ಸುಖದ ಕನಸನ್ನು ಭಗ್ನಗೊಳಿಸಿ, ನಂತರ ಕೆಲಸ ಮಾಡಲು ತೊಡಗಿ. ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು. ಅದಕ್ಕೆ ಧೈರ್ಯ ಬೇಕು; ದೃಡ ನಿರ್ಧಾರ ಬೇಕು; ನಿರಂತರ ಪರಿಶ್ರಮ ಬೇಕು. ಯಾವ ಕಷ್ಟ ಕಾರ್ಪಣ್ಯಗಳೂ ನಿರಾಶೆಗೊಳಿಸುವುದಿಲ್ಲ. ಯಾವ ವೈಫಲ್ಯಗಳೂ, ನಿಮ್ಮನ್ನು ಕಂಗೆಡಿಸುವುದಿಲ್ಲ. ತ್ಯಾಗ ಮತ್ತು ನರಳಾಟಗಳ ಅಗ್ನಿದಿವ್ಯವನ್ನು ಹಾದು ನೀವು ವಿಜಯಶಾಲಿಗಳಾಗುತ್ತೀರಿ. ಈ ವೈಯುಕ್ತಿಕ ಗೆಲುವುಗಳು ಕ್ರಾಂತಿಯ ಬಹುದೊಡ್ಡ ಆಸ್ತಿ....'
ಆಕರ ಗ್ರಂಥಗಳು
ಬದಲಾಯಿಸಿ- ಭಗತ್ ಸಿಂಗ್ - ಡಾ: ಜಿ. ರಾಮಕೃಷ್ಣ, ನವ ಕರ್ನಾಟಕ ಪ್ರಕಾಶನ, ಬೆಂಗಳೂರು.
- ವಿ ಫಾಟ್ ಟುಗೆದರ್ ಫಾರ್ ಫ್ರೀಡಮ್ - ಸಂಪಾದಕರು: ರವಿ ದಯಾಳ್, ಆಕ್ಸ್ ಫರ್ಡ್ ಇಂಡಿಯಾ ಪೇಪರ್ ಬ್ಯಾಕ್ಸ್.
- ದಿ ರೆವಲ್ಯೂಷನರಿ ಮೂವ್ಮೆಂಟ್ - ಶಿವ ವರ್ಮಾ
- ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ಅವರ ಪುತ್ರ ಸಂಸದ ಪ್ರಹ್ಲಾದ ಈ ವರ್ಷ ಈ ಎಲ್ಲ ಅಂಶ ಇರುವ ಈ ಸಂಬಂಧ ಪ್ರಕರಣ ದಾಖಲಿಸಿದ ಗರಿಷ್ಠ ಮಟ್ಟದ ಯುವಜನ ಸಂಘ ಅಧ್ಯಕ್ಷ ಸ್ಥಾನದ ಘ
- ನಗರದ ನಮಸ್ಕಾರ ವಾಣಿಜ್ಯ ವಿಭಾಗದ ನಿರ್ದೇಶಕ ಸಿ ಮಹೇಂದ್ರ ನಾಯಕ ಮಹೇಂದ್ರ ನಾಯಕ ಮಹೇಂದ್ರ
- ಖಡ್ಗಮೃಗ ಅವರ ಪುತ್ರ ರಾಘವೇಂದ್ರ
- ಡಿಜಿಪಿ ಡಜಜಫಪಜೀಗೀ
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಭಗತ್ ಸಿಂಗ್ ಸಂಘಟನೆ Archived 2021-11-05 ವೇಬ್ಯಾಕ್ ಮೆಷಿನ್ ನಲ್ಲಿ.
- ಭಗತ್ ಸಿಂಗ್ ಬಗ್ಗೆ ಫ್ರೀ ಇಂಡಿಯಾ Archived 2010-05-30 ವೇಬ್ಯಾಕ್ ಮೆಷಿನ್ ನಲ್ಲಿ.
- ಭಗತ್ ಸಿಂಗ್ ಜೀವನ ಚರಿತ್ರೆ ಹಾಗು ಭಗತ್ ಸಿಂಗ್ ಬರೆದ ಪತ್ರಗಳು