ವಿಲಿಯಮ್ ಹೆನ್ರಿ ಫಾಕ್ಸ್‌ ಟಾಲ್ಬಟ್

ಗಣಿತಜ್ಞ

ವಿಲಿಯಮ್ ಹೆನ್ರಿ ಫಾಕ್ಸ್‌ ಟಾಲ್ಬಟ್ (1800-1877). ಇಂಗ್ಲೆಂಡಿನ ಭೌತವಿಜ್ಞಾನಿ. ಛಾಯಾಚಿತ್ರಣಕ್ಕೆ ಉಪಯುಕ್ತವಾದ ಅನೇಕ ಕಾರ್ಯ ವಿಧಾನಗಳ ಬಗ್ಗೆ ದೀರ್ಘವಾದ ಸಂಶೋಧನೆ ನಡೆಸಿ ಆಧುನಿಕ ಛಾಯಾಚಿತ್ರಣ ತಂತ್ರಕ್ಕೆ ನಾಂದಿ ಹಾಕಿದಾತ.

ಜನನ ಇಂಗ್ಲೆಂಡಿನ ವಿಲ್ಟೆಷೈರ್ ಪ್ರಾಂತ್ಯದ ಚಿಪ್ಪೆನ್ ಹಾಮ್, ಲ್ಯಾಕಾಕ್ ಅಬ್ಬೆ ಎಂಬಲ್ಲಿ (11-2-1800). ಮೊದಲ ವಿದ್ಯಾಭ್ಯಾಸ ಹಾರೋನಲ್ಲಿ. ಕೇಂಬ್ರಿಜಿನ ಟ್ರಿನಿಟಿ ಕಾಲೇಜಿನಿಂದ ಎಂ.ಎ. ಪದವಿಯನ್ನು ಪಡೆದ (1825). 1822ರಲ್ಲೇ ಈತನ ಸಂಶೋಧನಾತ್ಮಕ ಲೇಖನವೊಂದು ಅನಲ್ಸ್ ಮ್ಯಾಥಮ್ಯಾಟೀಕ್ಸ್ ಎಂಬ ಪ್ರಬುದ್ಧ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮುಂದೆ ಬೆಳಕಿನ ರಾಸಾಯನಿಕ ಕ್ರಿಯೆಯ ಬಗ್ಗೆ ಆಸಕ್ತನಾಗಿ ಎಡಿನ್‍ಬರೋವಿನ ವಿಜ್ಞಾನಪತ್ರಿಕೆಯಲ್ಲಿ ಈ ವಿಷಯದ ಬಗ್ಗೆ ಬರೆವಣಿಗೆಯನ್ನು ಪ್ರಕಟಿಸಿದ (1826). ಸ್ವಲ್ಪಕಾಲ ಪಾರ್ಲಿಮೆಂಟ್ ಸದಸ್ಯನೂ ಆಗಿದ್ದ (1833-34). ಆದರೆ ವಿಜ್ಞಾನಸಂಶೋಧನೆಯನ್ನು ಮುಂದುವರಿಸುವ ಸಲುವಾಗಿ ರಾಜಕೀಯವನ್ನು ತ್ಯಜಿಸಿದ.

ಮರಣ 1877ರ ಸೆಪ್ಟೆಂಬರ್ 17ರಂದು, ಇಂಗ್ಲೆಂಡಿನಲ್ಲಿ.

ಪ್ರಕೃತಿದೃಶ್ಯದ ಬಿಂಬವನ್ನು ಮಸೂರದ ನೆರವಿನಿಂದ ಕಪ್ಪುಪೆಟ್ಟಿಗೆಯ ಹಿಂದಿರುವ ಒಂದು ಗಾಜಿನ ಫಲಕದ ಮೇಲೆ ಮೂಡುವಂತೆ ಮಾಡುವ ಕ್ಯಾಮೆರಾ ಅಬ್ಸ್ಕ್ಯುರಾ ಎಂಬ ಉಪಕರಣ ಆಗಿನ ಕಾಲದಲ್ಲಿ ಬಹಳವಾಗಿ ಬಳಕೆಯಲ್ಲಿತ್ತು. ಗಾಜಿನ ಫಲಕದ ಮೇಲಿಟ್ಟ ಕಾಗದದ ಮೇಲೆ ಈ ಬಿಂಬದಿಂದ ಚಿತ್ರವನ್ನು ಬರೆಯುತ್ತಿದ್ದರು. ಗಾಜಿನ ಫಲಕದ ಮೇಲೆ ಮೂಡುವ ಬಿಂಬವನ್ನೇ ಶಾಶ್ವತಗೊಳಿಸುವ ಸಾಧ್ಯತೆಯ ಬಗ್ಗೆ ಟಾಲ್‍ಬಟ್ ಯೋಚಿಸಲಾರಂಭಿಸಿದ. ತಾಮಸ್ ವೆಡ್ಜ್‍ವುಡ್ ಎಂಬಾತ ದ್ಯುತಿಸಂವೇದನಶೀಲ (ಫೋಟೋಸೆನ್ಸಿಟಿವ್) ಕಾಗದದ ಮೇಲೆ ಸ್ವಲ್ಪ ವೇಳೆಯವರೆಗೂ ಸೂರ್ಯನ ಚಿತ್ರವನ್ನು ಮೂಡಿಸಲು ಸಾಧ್ಯವೆಂದು 1802ರಲ್ಲೇ ತೋರಿಸಿದ್ದ. ಟಾಲ್‍ಬಟ್ ಇದರ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಕಾಲದಲ್ಲಿ ಫ್ರಾನ್ಸಿನಲೂಯಿ ಡ ಗೇರೇ ಎಂಬಾತ ಸೂರ್ಯನ ಬೆಳಕಿನಲ್ಲಿದ್ದ ವಸ್ತುಗಳು ಛಾಯಾ ಚಿತ್ರಣವನ್ನು ಮಾಡಲು ಸಮರ್ಥನಾದ. ಇಂಥ ಚಿತ್ರಗಳನ್ನು ತೆಗೆಯಲು ಸಾಧ್ಯವೆಂದು ಅದಾಗಲೇ ಮನಗಂಡಿದ್ದ ಟಾಲ್‍ಬಟ್ ದ್ಯುತಿಜನಕವಾದ (ಫೋಟೋಜೆನಿಕ್) ಚಿತ್ರಣಕಲೆ ಅಥವಾ ಸ್ವಾಭಾವಿಕ ವಸ್ತುಗಳು ಕಲಾಕಾರನ ಕುಂಚದ ಸಹಾಯವಿಲ್ಲದೆ ಮೂಡಿಬರುವಂತೆ ಮಾಡುವ ವಿಧಾನದ ಬಗ್ಗೆ ವಿನ್ಯಾಸ ಎಂಬ ಲೇಖನವನ್ನು ರಾಯಲ್ ಸೊಸೈಟಿಯ ಮೂಲಕ ಪ್ರಕಟಿಸಿದ. ಬಹಳ ಹೊತ್ತು ಒಡ್ಡಿದ (ಎಕ್ಸ್‍ಪೋಸ್) ಬಳಿಕ ಕಪ್ಪುಹಿನ್ನೆಲೆಯ ಮೇಲೆ ಬಿಳಿಯ ಬಿಂಬವನ್ನು ಮೂಡಿಸುವ ವಿಧಾನವನ್ನು ಇದರಲ್ಲಿ ವಿವರಿಸಿದ. ಇಂಥ ಋಣಚಿತ್ರದಿಂದ ಧನಚಿತ್ರವನ್ನು ಮುದ್ರಿಸುವ ವಿಧಾನವನ್ನು ಕೂಡ ಟಾಲ್‍ಬಟ್ ಪ್ರಾರಂಭಿಸಿದ. ಬೆಳ್ಳಿಯ ಅಯೊಡೈಡ್ ಮತ್ತು ಬೆಳ್ಳಿಯ ನೈಟ್ರೇಟುಗಳನ್ನು ಉಪಯೋಗಿಸಿ ದ್ಯುತಿಸಂವೇದನ ಶೀಲ ಕಾಗದದ ಮೇಲೆ ಬಲು ತ್ವರಿತವಾಗಿ ಬಿಂಬಗಳು ಮೂಡುವಂತೆ ಮಾಡಿದ. ಸುಪ್ತವಾಗಿ ಮೂಡಿದ್ದ ಈ ಬಿಂಬವನ್ನು ಗಾಲಿಕ್ ಆಮ್ಲದ ಉಪಯೋಗದಿಂದ ಗೋಚರವಾಗುವಂತೆ ಮಾಡುವುದನ್ನೂ ಶೋಧಿಸಿದ. ಈ ವಿಧಾನಕ್ಕೆ ಕಾಲೋಟೈಪ್ ಎಂದು ನಾಮಕರಿಸಿದ. ಇದು ಆಧುನಿಕ ಛಾಯಾಚಿತ್ರಣಕ್ಕೆ ನಾಂದಿ ಹಾಕಿಕೊಟ್ಟಿತು. ಟಾಲ್‍ಬಟ್‍ನ ಗೌರವಾರ್ಥವಾಗಿ ಇದನ್ನು ಟಾಲ್ಬೋಟೈಪ್ ಎಂದು ಹೆಸರಿಸಲಾಗಿದೆ. ಫ್ರೆಡರಿಕ್ ಸ್ಕಾಟ್ ಆರ್ಚರ್ ಶೋಧಿಸಿದ್ದ ಕಲೋಡಿಯಾನ್ ವಿಧಾನವನ್ನು ಉಪಯೋಗಿಸಿಕೊಂಡು ಕ್ಷಣಮಾತ್ರದಲ್ಲೇ ಚಿತ್ರವನ್ನು ಹಿಡಿಯಲು ಸಾಧ್ಯವಾಗುವಂಥ ಹೊಸಬಗೆಯನ್ನು ಟಾಲ್‍ಬಟ್ 1851ರಲ್ಲಿ ಸಂಶೋಧಿಸಿದ. ಛಾಯಾಗ್ರಹಣದ ಮೂಲಕ ಲೋಹಫಲಕದ ಮೇಲೆ ಚಿತ್ರಗಳನ್ನು ಕೆತ್ತುವ ಫೋಟೊಗ್ರಾವೊರ್ ವಿಧಾನವನ್ನು ಮರುವರ್ಷ ಶೋಧಿಸಿದ. 1854ರ ವೇಳೆಗೆ ಛಾಯಾಚಿತ್ರಗಳಿಗೆ ಅಲ್ಬುಮೆನ್ (ಮೊಟ್ಟೆಯೊಳಗಿರುವ ಬಿಳಿಯ ವಸ್ತು) ಉಪಯೋಗಿಸಿ ಹೊಳಪು ಬರುವಂತೆ ಮಾಡುವ ವಿಧಾನವನ್ನು ಆವಿಷ್ಕರಿಸಿದ.

ಟಾಲ್‍ಬಟ್‍ನ ಪ್ರತಿಭೆ ಬಹುಮುಖವಾದದ್ದು. ಈತ ಕೆಲಸಮಾಡಿದ ಇತರ ಕ್ಷೇತ್ರಗಳೆಂದರೆ ಅನುಕಲಕಲನಶಾಸ್ತ್ರ, ದೂರದರ್ಶಕ ಯಂತ್ರದ ಮಾರ್ಪಾಟು ಇತ್ಯಾದಿ. ಸಾಹಿತ್ಯ ಮತ್ತು ಪ್ರಾಚೀನ ವಿಷಯಗಳ ಶೋಧನೆಯಲ್ಲಿಯೂ ಈತನಿಗೆ ಅಪಾರಾಸಕ್ತಿ ಇತ್ತು. ಅಸ್ಸೀರಿಯ ದೇಶದ ಚರಿತ್ರೆಯ ಬಗ್ಗೆ ಆಳವಾಗಿ ಸಂಶೋಧನೆ ನಡೆಸಿ ಆ ದೇಶದ ನಿನವದ ಶಾಸನಗಳ ಬೆಣೆಲಿಪಿಯನ್ನು (ಕ್ಯುನೀಫಾರಮ್) ಪರಿಷ್ಕರಿಸಿದವರಲ್ಲಿ ಮೊದಲಿಗನಾದ.

ಪ್ರಶಸ್ತಿ, ಗೌರವಗಳು

ಬದಲಾಯಿಸಿ

ಟಾಲ್‍ಬಟ್‍ನಿಗೆ ಲಭಿಸಿದ ಪ್ರಶಸ್ತಿ ಪರಂಪರೆಗಳಲ್ಲಿ ಮುಖ್ಯವಾದವೆಂದರೆ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿ (1822) ಮತ್ತು ರಾಯಲ್ ಸೊಸೈಟಿ (1831) ಫೆಲೋ ಪದವಿ. 1838ರಲ್ಲಿ ರಾಯಲ್ ಪದಕವನ್ನೂ 1842ರಲ್ಲಿ ರಮ್ ಫರ್ಡ್ ಪದಕವನ್ನೂ ಪಡೆದ.