ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೂಲ್, ಜಾರ್ಜ್

ವಿಕಿಸೋರ್ಸ್ದಿಂದ

ಬೂಲ್, ಜಾರ್ಜ್ 1815-64. ಇಂಗ್ಲಿಷ್ ಗಣಿತ ಮತ್ತು ತರ್ಕವಿದ. 1815 ನವೆಂಬರ್ 2 ರಂದು ಜನನ. ಲಿಂಕನ್; 1864 ಡಿಸೆಂಬರ್ 8ರಂದು ಮರಣ, ಕಾರ್ಕ್, ಐರ್ಲೆಂಡ್. ಈತನ ತಂದೆ ಜಾನ್ ಬೂಲ್ ವೃತ್ತಿಯಿಂದ ಮೋಚಿ; ಪ್ರವೃತ್ತಿಯಿಂದ ಗಣಿತವಿದ ಮತ್ತು ದೃಗುಪಕರಣಗಳ ನಿರ್ಮಾಪಕ. ಅಷ್ಟೇನೂ ವ್ಯವಹಾರ ಚತುರನಲ್ಲದ ಜಾನ್ ತನ್ನ ನಿಶಿತಮತಿ ಪುತ್ರ ಜಾರ್ಜ್‍ನಿಗೆ ಸಾಂಪ್ರದಾಯಿಕ ಶಾಲಾ ಶಿಕ್ಷಣ ಒದಗಿಸಲಾರದವನಾದ. ಜಾರ್ಜ್ ಸ್ವಂತ ಪ್ರಯತ್ನದಿಂದಲೇ ಓದಿ ಹದಿನಾರರ ಹರೆಯದಲ್ಲಿ ಖಾಸಗಿ ಶಾಲೆಯಲ್ಲಿ ಅಧ್ಯಾಪಕನಾಗಿ ಸೇರಿ ವೃತ್ತಿ ಜೀವನ ಆರಂಭಿಸಿದ. 1849ರಲ್ಲಿ ಕ್ವೀನ್ ಕಾಲೇಜ್ ಕಾರ್ಕ್‍ನಲ್ಲಿ ಗಣಿತ ಪ್ರಾಧ್ಯಾಪಕನಾಗಿ ನೇಮಕಗೊಂಡಾಗ ಬದುಕಿಗೆ ಭದ್ರನೆಲೆ ಒದಗಿತು.

ಬೂಲಿಯನ್ ಬೀಜಗಣಿತ ಎಂಬುದಾಗಿ ಈತನ ಹೆಸರಿನಿಂದ ಪ್ರಖ್ಯಾತವಾಗಿರುವ ಗಣಿತ ವಿಭಾಗದ ಆವಿಷ್ಕರ್ತೃ ಈತ. ತಾರ್ಕಿಕ ಪರಿಕರ್ಮಗಳಿಗೆ ಪ್ರತೀಕಗಳ ಗಣವನ್ನು ಅನ್ವಯಿಸಬಹುದೆಂದೂ ಇವನ್ನು ಎಚ್ಚರಿಕೆಯಿಂದ ಆಯ್ದು ಬೀಜಗಣಿತದಲ್ಲಿಯ ಪರಿಕರ್ಮಗಳ ಜೊತೆ ಹೊಂದಿಸಬಹುದೆಂದೂ ಈತ ತೋರಿಸಿದ. ಪ್ರತೀಕಾತ್ಮಕ ತರ್ಕಶಾಸ್ತ್ರ ಎಂದೇ ಈ ವಿಜ್ಞಾನ ವಿಭಾಗ ಮುಂದೆ ಪ್ರಸಿದ್ಧವಾಯಿತು. (ನೋಡಿ- ಬೂಲಿಯನ್-ಬೀಜಗಣಿತ)