ಚೋಮನ ದುಡಿ
ಚೋಮನ ದುಡಿ ಶಿವರಾಮ ಕಾರಂತರು ಬರೆದಿರುವ ಒಂದು ಕಾದಂಬರಿ.
ಪುಸ್ತಕದ ವಿವರಣೆ
ಬದಲಾಯಿಸಿಚೋಮನ ದುಡಿ ಪುಸ್ತಕವನ್ನು ೧೯೩೧ರಲ್ಲಿ ಎಸ್.ಬಿ.ಎಸ್ ಪ್ರಕಾಶಕರು ,ಬೆಂಗಳೂರು ಅವರು ಮೊದಲ ಬಾರಿಗೆ ಪ್ರಕಟಿಸಿದರು. ಅಕ್ಷರ ಜೋಡಣೆಯನ್ನು ದಿವ್ಯ ಪ್ರಿಂಟ್ರಾನಿಕ್ಸ್ ,ಬೆಂಗಳೂರು ಅವರು ಮಾಡಿದ್ದಾರೆ. ಈ ಪುಸ್ತಕವು ೧೧೨ ಪುಟಗಳನ್ನು ಹೊಂದಿದ್ದು ಇದರ ಬೆಲೆ ರೂ.೪೫. ಈ ಪುಸ್ತಕದ ಹಕ್ಕುಗಳು ಶ್ರೀಮತಿ ಬಿ ಮಾಲಿನಿ ಮಲ್ಯ ಅವರಿಗೆ ಸೇರಿದೆ.[೧]
ಮುನ್ನುಡಿ
ಬದಲಾಯಿಸಿ- ಸ್ವಾತಂತ್ರ್ಯಪೂರ್ವ ಕಾಲದ ದಲಿತ ವರ್ಗದ ಬವಣೆಯ ಬಾಳಿನ ಚಿತ್ರಣ ಈ ಕಾದಂಬರಿಯ ಕಥಾವಸ್ತು. ಬದಲಾಗುತ್ತಿರುವ ದೇಶ ಕಾಲಗಳಲ್ಲಿ ಬದಲಾಗದೆ ಇರುವುದೆಂದರೆ ಕಥಾನಾಯಕ ಚೋಮನ ಕಷ್ಟಜೀವನ. ಈತನ ಪ್ರೀತಿಯ ವಸ್ತು ಎಂದರೆ ದುಡಿ, ಅದೊಂದೇ ಅವನ ಸಂಪತ್ತು.
- ಸಮಾಜದ ಕಟ್ಟು ಕಟ್ಟಳೆಗಳಿಂದಾಗಿ ಈತ ಜೀವನದಲ್ಲಿ ಬಾರಿ ನೋವನ್ನು ಅನುಭವಿಸು ತ್ತಾನೆ. ಇವರು ಬಹಳ ಬಡ ಕುಟುಂಬ ಹಾಗೂ ಕೆಳಜಾತಿಗೆ ಸೇರಿದವರು. ಕೊನೆಗೊಮ್ಮೆ ತನ್ನ ಧರ್ಮವನ್ನು ತೊರೆಯುವ ನಿರ್ಧಾರಕ್ಕೆ ಚೋಮ ಬರುತ್ತಾನೆ. ಆದರೆ ಆತನ ಮನಸ್ಸು ಅದಕ್ಕೆ ಒಪ್ಪುವುದಿಲ್ಲ.
- ಕಡು ಬಡತನದಲ್ಲಿ ಜೀವನ ಸಾಗಿಸುತಿದ್ದ ಈತ, ಧಣಿಗಳ ಸಾಲ ತೀರಿಸಲು ತನ್ನ ಮಗನನ್ನೂ, ಮುಂದೆ ಮಗಳನ್ನು ದೂರದ ಊರಿಗೆ ಕಾಫಿ ತೋಟದ ಕೆಲಸಕ್ಕೆ ಕಳುಹಿಸುತ್ತಾನೆ. ಅಲ್ಲಿ ಮಗಳು ಬೆಳ್ಳಿ ಒಡೆಯನ ಕೈಸೆರೆಯಾದುದನ್ನು ಕಂಡ ಚೋಮ ವಿಹ್ವಲನಾಗಿ, ಕೊನೆಗೆ ಸಾಲವೂ ತೀರದೆ ಮಕ್ಕಳನ್ನು ಕಾಣದೆ ದುಡಿ ಬಾರಿಸುತ್ತಲೇ, ಏಕಾಂಗಿಯಾಗಿ ಸಮಾಜದ ಕ್ರೌರ್ಯಕ್ಕೆ ಬಲಿಪಶುವಾಗಿ ಮರಣವನ್ನು ಹೊಂದುತ್ತಾನೆ.
ಕಥೆಯ ಸಾರಾಂಶ
ಬದಲಾಯಿಸಿ- ಚೋಮ ಮತ್ತು ಅವನ ಕುಟುಂಬ ಭೋಗನ ಹಳ್ಳಿಯಲ್ಲಿ ನೆಲೆಸಿರುತ್ತಾರೆ. ಅವನ ಮಕ್ಕಳು ಚನಿಯ, ಗುರುವ, ಕಾಳ, ನೀಲ ಮತ್ತು ಬೆಳ್ಳಿ.. ಚೋಮನಿಗೆ ಬಹಳ ಇಷ್ಟವಾದ ವಸ್ತುಗಳು ಎರಡು, ಒಂದು ದುಡಿ ಮತ್ತೊಂದು ಸೇಂದಿ(ಹೆಂಡ). ಇವೆರಡೂ ಇಲ್ಲದೆ ಅವನಿಗೆ ಜೀವನ ನಡೆಸಲು ಬಹಳ ಕಷ್ಟ.
- ಅವನು ಜೀವನದಲ್ಲಿ ನೊಂದಾಗ ದುಡಿಯನ್ನು ಬಾರಿಸಿ ತನ್ನ ನೋವನ್ನು ನೀಗಿಕೊಳ್ಳುವನು. ಚೋಮನ ಹೆಂಡತಿ ಈಗಾಗಲೆ ತೀರಿಕೊಂಡಿರುತ್ತಾಳೆ. ಚೋಮ ಸಂಕಪ್ಪಯ್ಯನವರ ಬಳಿ ಕೆಲಸ ಮಾಡುತ್ತಿರುವುದಾಗಿಯೂ ಹಾಗೂ ಮಕ್ಕಳು ಹೊರೆ-ಸೊಪ್ಪನ್ನು ತರುವುದರಿಂದಾಗಿಯೂ ಅವರಿಗೆ ಎರಡು ಪಾವು ಅಕ್ಕಿ ಮತ್ತು ಐದು ಪಾವು ಭತ್ತ ದೊರೆಯುತ್ತಿರುತ್ತದೆ.
- ಮನೆಯಲ್ಲಿ ಬಾಡು ಎಂಬ ನಾಯಿಯೂ ಇರುತ್ತದೆ. ಹೀಗೆ ಎಲ್ಲ ಕಷ್ಟಗಳ ನಡುವೆ ಅವರು ಜೀವನ ನಡೆಸುತ್ತಿರುತ್ತಾರೆ. ಮನುಷ್ಯನಿಗೆ ಆಸೆ ಅನ್ನುವುದು ಸಹಜ. ಚೋಮನಿಗೂ ಹೀಗೊಂದು ಆಸೆ ಇತ್ತು. ಅದು ಆತ ಬೇಸಾಯಗಾರನಾಗಬೇಕೆಂದು.
- ಅವನ ಬಳಿ ಎರಡು ಎತ್ತುಗಳೂ ಸಹ ಇದ್ದವು. ಆದರೆ ಕಡು ಬಡತನದಿಂದಾಗಿ ಅವನ ಬಳಿ ಬೇಸಾಯಕ್ಕಾಗಿ ಇದ್ದ ತುಂಡು ಭೂಮಿಯನ್ನು ಸಂಕಪ್ಪಯ್ಯನ ಬಳಿ ಅಡ ಇಟ್ಟಿರುತ್ತಾನೆ. ಸಾಲ ತೀರಿಸಿ ಭೂಮಿಯನ್ನು ಮತ್ತೆ ಪಡೆಯಲು ಸಂಕಪ್ಪ ಯ್ಯನ ಬಳಿಯೇ ಜೀತಗಾರನಾಗಿ ಸೇರಿಕೊಂಡಿರುತ್ತಾನೆ.
- ಆ ದಿನಗಳಲ್ಲಿ ಕೀಳು ಜಾತಿಗೆ ಸೇರಿದವರು ವ್ಯವಸಾಯ ಮಾಡುವುದನ್ನು ನಿಷೇಧಿಸಿದ್ದರು. ಆದರೆ ಅವನಿಗಿದ್ದ ಬಲವಾದ ಆಸೆಯಿಂದ ಹಲವಾರು ಕಷ್ಟಗಳ ನಡುವೆಯೂ ಜೀವನ ನಡೆಸುತ್ತಿದ್ದ. ಚೋಮ ಬಹಳ ವರ್ಷಗಳ ಹಿಂದೆ ಕಾಫಿ ತೋಟದಲ್ಲಿ ಕೆಲಸ ಮಾಡಲು ಹೋಗಿರುತ್ತಾನೆ.
- ಆಗ ಆತ ಮಾಡಿದ್ದ ೪-೫.ರೂ ಸಲ ಈಗ ೨೦.ರೂ ಆಗಿದೆ ಎಂದು ಅದಕ್ಕಾಗಿ ಅವನನ್ನು ಅರಸುತ್ತಾ ತೋಟದ ದೊರೆಗಳು ಕಳುಹಿಸಿ ಕೊಟ್ಟಿದ್ದ ಮನ್ವೇಲ ಸಾಹೇಬ ಬರುತ್ತಾನೆ. ತೋಟಗಳಲ್ಲಿ ಕೆಲಸ ಮಾಡುವುದು ಸುಲಭವಲ್ಲ, ಎಷ್ಟೇ ಬೆವರು ಸುರಿಸಿದರೂ ಅವರ ಕೈಗೆ ಹಣ ಬರುವುದು ಆಣೆಗಳ ರೂಪದಲ್ಲಿ ಮಾತ್ರ.
- ಅದಕ್ಕಾಗಿ ಅವರು ಮಾಡುವ ಸಾಲ ಎಂದಿಗೂ ತೀರುವಂತಿಲ್ಲ. ಹೀಗಿರುವಾಗ ವಿಧಿ ಇಲ್ಲದೆ ತನ್ನ ಇಬ್ಬರು ಮಕ್ಕಳಾದ ಚನಿಯ ಮತ್ತು ಗುರುವನನ್ನು ತೋಟದ ಕೆಲಸಕ್ಕೆಂದು ಕಳುಹಿಸಿ ಕೊಡಲು ನಿರ್ಣಯಿಸುತ್ತಾನೆ. ಅವರು ಅಲ್ಲಿಗೆ ಹೋಗಲು ಬಹಳಷ್ಟು ತೊಂದರೆಗಳ್ನ್ನು ಅನುಭವಿಸಬೇಕಾಗುತ್ತದೆ.
- ಅಲ್ಲಿಗೆ ಹೋಗಿಯೂ ಸಹ ಅವರು ನಾನಾ ವಿಧವಾದ ಕಷ್ಟಗಳನ್ನು ಅನುಭವಿಸುತ್ತಾರೆ. ಇತ್ತ ಚೋಮ ಮತ್ತು ಇತರರಿಗೂ ಅವರನ್ನು ಬಿಟ್ಟು ಇರುವ ಮನಸ್ಸಿಲ್ಲ. ಅಲ್ಲಿಗೆ ಹೋದ ಅವರು ತಮ್ಮ ಸಹ ಆಳುಗಳ ಜೊತೆ ಸೇರಿ ಅವರ ಅಪ್ಪನಂತೆಯೆ ಹೆಂಡ ಕುಡಿಯುವುದನ್ನೂ ಕಲಿಯುತ್ತಾರೆ.
- ಹೆಂಡಕ್ಕೆ ದಾಸರಾಗಿ ಅವರು ದುಡಿಯುವ ಹಣವನ್ನು ಅದಕ್ಕಾಗಿ ಸುರಿಯಲು ಪ್ರಾರಂಭಿಸುವರು. ಹೀಗಾಗಿ ಅಪ್ಪನ ಸಾಲ ತೀರಿಸಲು ಹೋಗಿ ಇನ್ನೂ ಹೆಚ್ಚಿನ ಸಲ ಮಾಡುವಂತಾಯಿತು. ಇದೆಲ್ಲ ಸಾಲದಂತೆ ಗುರುವ ಅಲ್ಲಿ ಮಾರಿ ಎಂಬ ಹುಡುಗಿಯನ್ನು ಇಷ್ಟ ಪಡುತ್ತಾನೆ. ಆ ಹುಡುಗಿ ಇಗರ್ಜಿಯವಳು.
- ಆದರೆ ಇತ್ತ ಚೋಮ ತನ್ನ ಮಕ್ಕಳು ತನ್ನ ಸಾಲ ತೀರಿಸಲು ಹೋಗಿದ್ದಾರೆ, ಅವರನ್ನು ಒಂದು ಮನೆಯವರನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಿರುತ್ತಾನೆ. ಕಾಫಿ ತೋಟದಲ್ಲಿ ನಡೆಯುತ್ತಿರುವ ವಿಷಯವನ್ನು ತಿಳಿಯದ ಚೋಮ ಧನಿಗಳ ಬಳಿ ಕೆಲಸಕ್ಕೆ ಹೋಗುವಾಗ ತನಗೊಂದು ಸಣ್ಣ ಭೂಮಿಯನ್ನು ಕೊಡುವಂತೆ ಕೇಳಿಕೊಳ್ಳುತ್ತಾನೆ.
- ಆದರೆ ಧಣಿಗಳು ಒಪ್ಪಿದರೂ, ಧಣಿಗಳ ವಯಸ್ಸಾದ ತಾಯಿ ಅದಕ್ಕೆ ಒಪ್ಪುವುದಿಲ್ಲ. ಅವರಿಗೆ ಕೊಡುವ ಮನಸ್ಸಿದ್ದರೂ ಅವರ ತಾಯಿಯ ಮನಸ್ಸನ್ನು ನೋಯಿಸಲು ಇಷ್ಟ ಪಡದೆ ಚೋಮನಿಗೆ ಭೂಮಿ ಕೊಡಲು ನಿರಾಕರಿಸಿ ಬಿಡುತ್ತಾನೆ. ಅವರ ಪ್ರಕಾರ ಕೆಳ ವರ್ಗದ ಜನರು ವ್ಯವಸಾಯ ಮಾಡುವಂತಿಲ್ಲ. ಅದು ಹಿಂದಿನಿಂದಲೂ ಬಂದಿರುವ ಆಚಾರವಂತೆ.
- ಕೀಳು ವರ್ಗದವರು ವ್ಯವಸಾಯ ಮಾಡಿದರೆ ಮೇಲ್ವರ್ಗದವರಿಗೆ ಅವಮಾನವಲ್ಲವೇ? ಎಂಬುದು ಆಕೆಯ ವಾದವಾಗಿತ್ತು. ಹೀಗಾಗಿ ಸಂಕಪ್ಪಯ್ಯನವರಿಗೆ ಇಷ್ಟವಿದ್ದರೂ ತಾಯಿಯ ಮಾತು ಮೀರುವಂತಿರಲ್ಲಿಲ್ಲ. ಇದನ್ನೆಲ್ಲಾ ಕೇಳಿದ ಚೋಮನ ಮನಸ್ಸ್ಸು ನೋವಿನಿಂದ ತುಂಬಿತ್ತು. ಆ ದಿನವೆಲ್ಲಾ ತನ್ನ ಧಣಿಯ ಹೊಲವನ್ನು ಎತ್ತುಗಳನ್ನು ಹೊಡೆಯುತ್ತಾ ಸಮ ಮಾಡುತ್ತಾನೆ.
- ಇಷ್ಟು ಹೊತ್ತಿಗಾಗಲೆ ಗುರುವ ಮಾರಿಯ ಪ್ರೇಮಲೋಕದಲ್ಲಿ ತೇಲಿಯಾಡುತಿದ್ದ. ವರ್ಷಕ್ಕೊಮ್ಮೆ ಬರುವ ಜಾತ್ರೆಗಾಗಿ ಹುಡುಗರಿಬ್ಬರೂ ವಾಪಸ್ ಊರಿಗೆ ತೆರಳ ಬೇಕಿತ್ತು. ಆದರೆ ಗುರುವ ಮಾರಿಯವರ ಕುಟುಂಬದೊಂದಿಗೆ ಪರಾರಿಯಾದ ಕಾರಣ, ಚನಿಯನು ಮಾತ್ರ ಊರಿಗೆ ಹೊರಟು ಬಂದ.
- ಎಲ್ಲರೂ ಜಾತ್ರೆಯ ಸಂಭ್ರಮದಲ್ಲಿದ್ದರೆ ಚೋಮನ ಮನಸ್ಸಿನಲ್ಲಿ ಕಾರ್ಕತ್ತಲೇ ಮೂಡಿತ್ತು. ಅವರ್ಯಾರಿಗೂ ಜಾತ್ರೆಯ ಸಂತಸವಿರಲಿಲ್ಲ. ಇದ್ದ ಕಷ್ಟಗಳು ಸಾಲದೆಂಬಂತೆ, ಚನಿಯನು ಆ ಬೆಟ್ಟ ಪ್ರದೇಶದಲ್ಲಿದ್ದೂ, ಅನಾರೋಗ್ಯಕ್ಕೆ ಒಳಗಾಗ ಬೇಕಾಯಿತು. ಬೆಳ್ಳಿಯು ಎಷ್ಟೇ ಪ್ರಯತ್ನಿಸಿದರೂ ಅವಳಿಂದ ಅದು ಸಾಧ್ಯವಾಗಲಿಲ್ಲ.
- ಕೊನೆಗೂ ಚನಿಯನು ಅನಾರೋಗ್ಯದ ಕಾರಣದಿಂದಾಗಿ ಸಾಯುವ ಪರಿಸ್ಥಿತಿ ಬಂತು. ಒಂದೇ ಸಮನೆ ದುಃಖದ ಮಹಾಪೂರವನ್ನೇ ಚೋಮನ ಕುಟುಂಬ ಅನುಭವಿಸಬೇಕಾಯಿತು. ಒಂದೇ ಕಾಲದಲ್ಲಿ ಎರಡೂ ಮಕ್ಕಳನ್ನು ಕಳೆದುಕೊಂಡ ಚೋಮನು ದುಡಿಯನ್ನು ಬಾರಿಸುವುದನ್ನಲ್ಲದೆ ಬೇರೆ ಏನನ್ನೂ ಮಾಡಲು ಸಾಧ್ಯವಾಗಲ್ಲಿಲ್ಲ.
- ಹೀಗಿರುವಾಗಲೇ ಧನಿಗಳು ಚೋಮನನ್ನು ಮಳೆಗಾಲ ಬಂದಿದೆ ನನಗೆ ನಿನ್ನ ಎತ್ತುಗಳನ್ನು ಮಾರಿಬಿಡು ಎಂದರು. ಇದರಿಂದ ಮತ್ತಷ್ಟು ಸಿಟ್ಟಿಗೇರಿದ ಚೋಮ ಚೆನ್ನಾಗಿ ಹೆಂಡವನ್ನು ಕುಡಿದು ತಾನು ದುಡಿ ಬಾರಿಸುತ್ತಾ ತನ್ನ ಸಣ್ಣದಾದ ಎರಡೂ ಮಕ್ಕಳನ್ನೂ ಅದರ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಹೊಡೆದು ಬಡೆಯತ್ತಾನೆ. ಆಗ ಬೆಳ್ಳಿ ಅವರನ್ನು ರಕ್ಷಿಸುತ್ತಾಳೆ.
- ಚೋಮನ ಸಿಟ್ಟು ಇನ್ನೂ ಕಡಿಮೆ ಆಗುವುದಿಲ್ಲ. ಕೊನೆಗೆ ತನಗೆ ಆ ಎತ್ತುಗಳಿಂದ ವ್ಯವಸಾಯ ಮಾಡಲು ಸಾಧ್ಯವಿಲ್ಲವೆಂದು, ಅದು ಪರರಿಗೂ ದೊರಕಬಾರದೆಂದು ಆ ಎತ್ತುಗಳ ಕಾಲು ಮುರಿಯುತ್ತಾನೆ. ನಂತರ ಬೆಳ್ಳಿ ಧಣಿಗಳ ಬಳಿ ಮಾತನಾಡಿ ಅಪ್ಪನಿಗೆ ಬುದ್ಧಿ ಕಲಿಸುವಂತೆ ನಿರ್ಣಯಿಸುತ್ತಾಳೆ.
- ಹಾಗೆಂದು ಯೋಚಿಸಿ ಮನೆಗೆ ತೆರಳಿದ ಬೆಳ್ಳಿಗೆ ಆಶ್ಚರ್ಯವೆಂದರೆ ಅವರ ಮನೆಗೆ ನೆಂಟರು ಬಂದಿದ್ದರು. ಅವಳು ಹಲವು ದಿನಗಳಿಂದ ಕೂಡಿಟ್ಟಿದ್ದ ಗೆಣಸು ಅಕ್ಕಿ ಎಲ್ಲವೂ ಖಾಲಿಯಾಗ ತೊಡಗಿತು. ಚೋಮನು ಎಲ್ಲವನ್ನೂ ಮರೆತು ಅವರೊಂದಿಗೆ ಸಂತಸದಿಂದ ಕಾಲಕಳೆಯತ್ತಾನೆ. ಅವರೊಂದಿಗೆ ಬೇಟೆಗೆ ಹೋಗಿ ಮೊಲಗಳನ್ನು ತಂದು ತಿಂದು,ಕುಡಿದು ಕುಪ್ಪಳಿಸುತ್ತಾರೆ.
- ಯಾರದೋ ಮನೆಯಲ್ಲಿ ಎಮ್ಮೆ ಸತ್ತರೆ ಅದನ್ನೂ ತಿಂದು, ಮನೆಯ ಮುಂದೆ ಬೆಂಕಿಯನ್ನು ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಾರೆ. ಕೆಲವು ದಿನಗಳ ನಂತರ ಅವರೂ ಹೊರಟರು. ಆದರೆ ಈಗ ಚೋಮನ ಎದುರಿನಲ್ಲಿದ್ದ ಮತ್ತೊಂದು ಸವಾಲೆಂದರೆ ಮತ್ತೆ ಮನ್ವೇಲನು ಬಂದಾಗ ಅವನೊಂದಿಗೆ ಯಾರನ್ನಾದರು ಕರೆದುಕೊಂಡು ಹೋಗುತ್ತಾನೆ.
- ಆದರೆ ಹೋಗಲಿಕ್ಕೆ ಯಾರಿದ್ದಾರೆ? ಎಂಬುದು. ಕೊನೆಗೆ ಮುದಿ ತಂದೆಯನ್ನು ಕಷ್ಟಗಳ ಪಾಲು ಮಾಡಲು ಇಷ್ಟವಿಲ್ಲದೆ ಕೊನೆಗೆ ಬೆಳ್ಳಿಯೇ ಮನ್ವೇಲನ ಕೂಡ ಹೊರಡುವಂತೆ ನಿಶ್ಚಯ ವಾಯಿತು. ಇಷ್ಟವಿಲ್ಲದ ಮನಸ್ಸು ಹಾಗೂ ಮನ್ವೇಲನ ಒತ್ತಡದಿಂದಾಗಿ ಚೋಮನೂ ಅವಳನ್ನು ಕಣ್ಣೀರಿನಿಂದ ಬೀಳ್ಕೊಡಬೇಕಾಗಿ ಬಂತು.
- ಕೊನೆಗೆ ಬೆಳ್ಳಿಯ ತೋಟದ ಯಾತ್ರೆ ಸಾಗಿತು. ಅವಳಿಗೂ ಆ ಕಷ್ಟವನ್ನು ಅನುಭವಿಸುವ ಪರಿಸ್ಥಿತಿ ಬಂತು. ಅವಳೊಂದಿಗೆ ನೀಲನೂ ಹೊರಟಿದ್ದ. ಅಲ್ಲಿ ಅವರಿಗೆ ಉಳಿಯಲು ವ್ಯವಸ್ಥೆ ಆಯಿತು. ನೀಲನು ಅನಾರೋಗ್ಯಕ್ಕೆ ಒಳಗಾದ ಕಾರಣ ಅವಳಿಗೆ ಬರುತ್ತಿದ್ದ ಹಣವನ್ನು ಅವನ ಔಷಧಿಯನ್ನು ಖರೀದಿಸಲು ಸಾಲುತಿತ್ತೇ ಹೊರೆತು ಸಾಲ ತೀರಿಸಲು ಆಗುತ್ತಿರಲಿಲ್ಲ.
- ಹೀಗಾಗಿ ಮನ್ವೇಲನ ಒತ್ತಡದ ಮೇರೆಗೆ ಅವನ ಮನೆಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಳು. ಆದರೆ ಅಲ್ಲಿ ನಡೆದದ್ದೆ ಬೇರೆಯದ್ದೊಂದು ವಿಷಯ. ಹೆಂಡತಿ ಮನೆಯಲ್ಲಿಲ್ಲದ ಕಾರಣ ಅವನಲ್ಲಿನ ಕಾಮ ಪ್ರೇರಣೆ ಹಾಗೂ ಕಾಯದ ದೌರ್ಬಲ್ಯ ಅವಳನ್ನು ಆತನ ಕಾಮದ ದಾಸಿಯನ್ನಾಗಿ ಮಾಡಿತು.
- ಅವರಿಬ್ಬರ ನಡುವಿನ ಸಂಬಂಧ ಎಲ್ಲರಿಗೂ ತಿಳಿಯಲಾರಂಭವಾಯಿತು. ಅವಳ ಮೇಲೆ ದೊರೆಗಳಿಗೂ ಆಸೆಯಾಯಿತು. ಕೊನೆಗೆ ಮನ್ವೇಲನು ಅವಳನ್ನು ಅವನ ಬಳಿಯೂ ಕಳುಹಿಸಿ ಕೊಟ್ಟನು. ಹಣದ ಆಸೆ ಅವಳನ್ನು ಈ ರೀತಿಯ ಕೆಲಸವನ್ನೂ ಮಾಡದೆ ಬಿಡಲಿಲ್ಲ. ಕೊನೆಗೆ ಮನ್ವೇಲನು ಅವಳನ್ನು ಅಲ್ಲಿಂದ ಪಾರು ಮಾಡುವನು.
- ಅವಳು ವಾಪಸ್ಸ್ಸು ಮನೆಗೆ ತೆರಳಿದ ಕಾರಣ ಚೋಮನಿಗೆ ಹಿಡಿಸಲಾರದಷ್ಟು ಸಂತೋಷ. ನನ್ನ ಗಂಡು ಮಕ್ಕಳು ಮಾಡಲಾರದ ಕೆಲಸ ತನ್ನ ಮಗಳು ಮಾಡಿದ್ದಾಳೆಂದು ಅವನ ಸಂಭ್ರಮ. ಆದರೆ ಪಾಪ ಚೋಮನಿಗೆ ತನ್ನ ಮಗಳು ಆತನ ಸಾಲ ತೀರಿಸಿದ ಬಗೆ ತಿಳಿಯದು. ಮತ್ತೆ ಊರಿನ ಜಾತ್ರೆ ಬಂದೇ ಬಂತು.
- ಬೆಳ್ಳಿ ತನಗೆ ಮನ್ವೇಲನು ಕೊಟ್ಟಿರುವ ಸೀರೆ ಉಟ್ಟು ಜಾತ್ರೆಗೆ ಹೋಗುತ್ತಾಳೆ. ಆದರೆ ಅಲ್ಲಿ ಮನ್ವೇಲನೂ ಬಂದಿರುವುದನ್ನು ಕಂಡು ಭಯದಿಂದ ಮನೆಗೆ ತೆರಳಿದಳು. ಅತ್ತ ಚೋಮ ತನ್ನ ಮಗಳಿಗೆ ತಕ್ಕ ವರನನ್ನು ಹುಡುಕುತ್ತಿದ್ದನು. ನಂತರ ಆ ಸಂತಸದಲ್ಲಿಯೇ ಗೆಳೆಯರೊಡನೆ ಕುಣಿದು ಹರ್ಷಿಸುತ್ತಿದ್ದ.
- ಮರುದಿನ ತನ್ನ ಮಕ್ಕಳಿಗೆ ಸ್ನಾನ ಮಾಡಿಸಲೆಂದು ಕೆರೆಯ ಬಳಿ ಹೋದಾಗ ಅಲ್ಲಿ ನೀಲ ನೀರಿನಲ್ಲಿ ಮುಳುಗಿ ಹೋಗುತ್ತಿರುತ್ತಾನೆ. ಚೋಮ ಆ ಸಮಯದಲ್ಲಿ ಅಲ್ಲಿ ಇರುವುದಿಲ್ಲ. ಕಾಳ ಇನ್ನೂ ಚಿಕ್ಕವ, ಆದರೆ ಅಲ್ಲಿಯ ದಡೆಯ ಮೇಲಿನ ಜನರು ಅವನನ್ನು ಕಾಪಾಡಬಹುದಾಗಿತ್ತು.
- ಆದರೆ ಅವರು ಮೇಲ್ವರ್ಗದವರು ಹಾಗು ನೀಲ ಕೆಳ ವರ್ಗದವನು ಎಂಬ ಒಂದೇ ಒಂದು ಕಾರಣ ಅವರನ್ನು ನೀಲನನ್ನು ಮೂಟ್ಟಬಾರದೆಂದು ಕಟ್ಟು ಹಾಕಿತ್ತು. ಇಲ್ಲದಿದ್ದಲ್ಲಿ ನೀಲ ಉಳಿಯುತ್ತಿದ್ದ. ಹೀಗೆ ಚೋಮನಿಗೆ ಒಂದರ ನಂತರ ಮತ್ತೊಂದು ಹೃದಯ ಹಿಂಡುವ ಕಷ್ಟಗಳು ಕಾದಿರುತ್ತಿದ್ದವು.
- ಮರುದಿನ ಮನ್ವೇಲನು ಅವರ ಮನೆಗೆ ಬರುತ್ತಾನೆ. ಆತ ಅವರ ಕ್ಷೇಮ ಸಮಾಚಾರ ತಿಳಿದು ಗುರುವನ ಬಗ್ಗೆ ತಿಳಿಸುತ್ತಾನೆ. ಜೀವನದಲ್ಲಿ ಎಲ್ಲವನ್ನು ಕಳೆದು ಕೊಂಡು ಸಾಧಿಸುವುದಾದರೂ ಏನು? ಹೋಗಿ ನಿನ್ನ ಮಗನನ್ನು ವಾಪಸ್ಸು ಕರೆತಾ ಎಂದು ಆತನಿಗೆ ಮನ್ವೇಲನು ಸಲಹೆ ನೀಡುತ್ತಾನೆ.
- ಅದರಿಂದಾಗಿ ತಾನೂ ಮತ ಪರಿವರ್ತಿಸಿ ಕೊಳ್ಳುವುದಾಗಿ ನಿರ್ಧರಿಸುತ್ತಾನೆ. ನಾಳೆ ಬೆಳಿಗ್ಗೆ ತನ್ನ ಮಗನ ಬಳಿ ಹೋಗುವುದಾಗಿ ಅವನನ್ನು ಕರೆತರುವುದಾಗಿ ಚರ್ಚಿಸಿರುತ್ತಾರೆ. ಬೆಳಗ್ಗೆ ನಿರ್ಧಿಸಿದಂತೆಯೇ ಚೋಮನು ಗುರುವನ ಬಳಿ ಹೋದಾಗ ಅವರ ಮನೆಗೆ ಮನ್ವೇಲನು ಬರುತ್ತಾನೆ.
- ಮನೆಯಲ್ಲಿ ಬೆಳ್ಳಿಯು ಒಬ್ಬಳೇ ಇರುವ ಕಾರಣ ಅವರ ಹಿಂದಿನ ಕಾಮ ಪ್ರೇರಣೆ ಅವರನ್ನು ಮತ್ತೆ ಸಲುಗೆಯಿಂದ ಮಾತನಾಡಲು ಆಸ್ಪದ ನೀಡುತ್ತದೆ. ಇತ್ತ ಚೋಮನು ಹೋಗುವ ದಾರಿಯಲ್ಲಿ ತನ್ನ ಮನೆ ದೇವರನ್ನು ಕಂಡು ಯಾಕೋ ಮತ ಪರಿವರ್ತನೆ ತಪ್ಪು ಎಂದನಿಸಿ ಮನೆಗೆ ಬಂದು ನೋಡಿದರೆ ಚಾಪೆಯ ಮೇಲೆ ಅವರಿಬ್ಬರೂ.
- ಚೋಮನಿಗೆ ಆಗ ಎಲ್ಲವೂ ಅರ್ಥವಾಯಿತು. ತನ್ನ ಮಗಳು ಆತನ ಸಾಲ ತೀರಿಸಿದ ಬಗೆ! ಆಗಿನ ಚೋಮನ ಆವೇಶ ಅಷ್ಟಿಷ್ಟಲ್ಲ. ಅಸಹಾಯಕತೆಯಿಂದ ಹುಚ್ಚನಂತೆ ವರ್ತಿಸುತ್ತಾನೆ. ಅವರನ್ನು ಹೊರಗೆ ಹಾಕಿ ತನಗೆ ಮಕ್ಕಳೇ ಇಲ್ಲ ಎಂದು ಉಣ್ಣದೆ, ತಿನ್ನದೆ ದುಡಿಯನ್ನು ಕೈಗೆ ತೆಗೆದುಕೊಂಡು ಅದನ್ನು ಬಾರಿಸುತ್ತಾ ಮೂಲೆಯಲ್ಲಿ ಕೂರುವನು. ಅತ್ತ ಅವನು ವ್ಯವಸಾಯಗಾರನೂ ಆಗಲಿಲ್ಲ. ಇತ್ತ ತನ್ನ ಎಲ್ಲಾ ಮಕ್ಕಳನ್ನೂ ಕಳೆದು ಕೊಂಡ ದುಃಖದಲ್ಲಿ ದುಡಿಯನ್ನು ಬಾರಿಸುತ್ತಲೇ ಸಾವಿಗೆ ಶರಣಾಗುತ್ತಾನೆ.
ಮುಕ್ತಾಯ
ಬದಲಾಯಿಸಿಹೀಗೆ ಈ ಒಟ್ಟು ಕಥೆಯಲ್ಲಿ ಚೋಮ, ಅವನ ಕನಸು, ಕುಟುಂಬ, ಅವನು ಜೀವನದಲ್ಲಿ ಪ್ರತಿಯೊಂದು ಹಂತದಲ್ಲಿಯೂ ಮೇಲ್ವರ್ಗದವರ ಕಾರಣದಿಂದ ಎದುರಿಸಬೇಕಾದಂತ ಕಷ್ಟಗಳನ್ನು ಕುರಿತು ನಮಗೆ ತಿಳಿಸುತ್ತದೆ. ತನ್ನ ಒಂದೇ ಒಂದು ಆಸೆಯೂ ತೀರಿಸಿಕೊಳ್ಳಲು ಚೋಮನ ಕೈಲಿ ಸಾಧ್ಯವಾಗುವುದಿಲ್ಲ. ಸಂಕಪ್ಪಯ್ಯ,ಅವರ ತಾಯಿ, ದಡದ ಮೇಲಿದ್ದ ಮೇಲ್ವರ್ಗದವರು, ಮನ್ವೇಲ, ಆತನ ಮಕ್ಕಳನ್ನು ಒಳಗೊಂಡು ಹೀಗೆ ಎಲ್ಲರೂ ಚೋಮನ ಜೀವನದಲ್ಲಿ ಕತ್ತಲೆಯನ್ನು ಉಳಿಸಿದ ಬಗೆಯನ್ನು ಕಾರಂತರು ಬರೆದಿರುವ ಈ ಕಾದಂಬರಿಯಲ್ಲಿ ನಾವು ಕಾಣಬಹುದಾಗಿದೆ.
ಚಲನಚಿತ್ರವಾಗಿ
ಬದಲಾಯಿಸಿಚೋಮನ ದುಡಿ ಕಾದಂಬರಿಯು ಚಲನಚಿತ್ರವಾಗಿಯೂ ಮೂಡಿ ಬಂದಿದೆ. ಚೋಮನ ಪಾತ್ರವನ್ನು ಹಿರಿಯ ನಟ ಶ್ರೀ ವಾಸುದೇವರಾವ್ ಅವರು ನಿರ್ವಹಿಸಿದ್ದಾರೆ.[೨]
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2012-10-05. Retrieved 2014-02-02.
- ↑ http://www.primewire.ag/watch-88436-Chomana-Dudi[ಶಾಶ್ವತವಾಗಿ ಮಡಿದ ಕೊಂಡಿ]